ಧನತ್ರಯೋದಶಿ ಹತ್ತಿರವಾಗುತ್ತಿದೆ. ಈ ಹೊತ್ತಿನಲ್ಲಿ ಚಿನ್ನ, ಬೆಳ್ಳಿ ಖರೀದಿಸುವುದು ಶುಭಕರ ಎಂಬ ನಂಬಿಕೆ ಇದೆ. ಚಿನ್ನ, ಬೆಳ್ಳಿ ದರ ಏರುತ್ತಿರುವಾಗ ಸಣ್ಣ ಹೂಡಿಕೆದಾರರು ಏನು ಮಾಡಬೇಕು? ಯಾವ ರೂಪದಲ್ಲಿ ಇವುಗಳನ್ನು ಖರೀದಿಸಬೇಕು? ಈ ಕುರಿತ ನೋಟವೊಂದು ಇಲ್ಲಿದೆ
ಭಾರತದ ಕುಟುಂಬಗಳು ತಮ್ಮಲ್ಲಿನ ಸಂಪತ್ತನ್ನು ಚಿನ್ನದ ಆಭರಣ, ನಾಣ್ಯ ಅಥವಾ ಬೆಳ್ಳಿಯ ಗಟ್ಟಿಗಳ ರೂಪದಲ್ಲಿ ಶತಮಾನಗಳಿಂದ ಸಂಗ್ರಹಿಸಿ ಇರಿಸಿಕೊಂಡಿವೆ. ಈ ಅಮೂಲ್ಯ ಲೋಹಗಳು ಆರ್ಥಿಕ ಸುರಕ್ಷತೆಯನ್ನು ಒದಗಿಸುತ್ತವೆ, ಸಂಪತ್ತನ್ನು ಈ ಲೋಹಗಳ ರೂಪದಲ್ಲಿ ಪರಿವರ್ತಿಸಿದಾಗ ಸಂಪತ್ತಿನ ಮೌಲ್ಯ ಕುಗ್ಗುವುದಿಲ್ಲ, ಕಷ್ಟ ಎದುರಾದಾಗ ಇವುಗಳನ್ನು ಬಳಸಿ ನಗದು ಹಣ ಪಡೆದುಕೊಳ್ಳುವುದು ಸುಲಭ ಎಂಬುದು ಸರ್ವವೇದ್ಯ.
ಅಮೂಲ್ಯ ಲೋಹಗಳ ಜೊತೆ ದೇಶದ ಜನ ಹೊಂದಿರುವ ಸಾಂಸ್ಕೃತಿಕ ನಂಟು ಶತಮಾನಗಳಿಂದ ಹಾಗೆಯೇ ಇದೆ. ಆದರೆ ಭೌತಿಕ ಸ್ವರೂಪದ ಚಿನ್ನದ ಮೇಲೆ ಹೂಡಿಕೆ ಮಾಡುವಲ್ಲಿ ಒಂದಿಷ್ಟು ಮಿತಿಗಳು, ಸವಾಲುಗಳು ಕೂಡ ಇವೆ. ಚಿನ್ನ ಹಾಗೂ ಬೆಳ್ಳಿಯನ್ನು ಸಂಗ್ರಹಿಸಿ ಇಟ್ಟುಕೊಳ್ಳುವಲ್ಲಿ, ಅವುಗಳ ಶುದ್ಧತೆಯನ್ನು ಪರೀಕ್ಷಿಸುವಲ್ಲಿ, ಅವುಗಳನ್ನು ಅಗತ್ಯ ಎದುರಾದಾಗ ನಗದೀಕರಿಸಿಕೊಳ್ಳುವಲ್ಲಿ ಸಮಸ್ಯೆಗಳು ಎದುರಾಗಬಹುದು. ಅಲ್ಲದೆ, ಅವುಗಳ ನಗದೀಕರಣದ ಸಂದರ್ಭದಲ್ಲಿ ಭಾವನೆಗಳು ಅಡ್ಡಿ ಉಂಟುಮಾಡಬಹುದು!
ಈಚಿನ ವರ್ಷಗಳಲ್ಲಿ ಚಿನ್ನದ ಇಟಿಎಫ್‌ಗಳು ಹಾಗೂ ಬೆಳ್ಳಿಯ ಇಟಿಎಫ್‌ಗಳು ಸಾಂಪ್ರದಾಯಿಕ ಆಸ್ತಿಗಳ ಆಧುನಿಕ ಅವತಾರಗಳ ರೂಪದಲ್ಲಿ ತಲೆಎತ್ತಿವೆ. ಅಮೂಲ್ಯ ಲೋಹಗಳ ಎಲ್ಲ ಒಳಿತುಗಳನ್ನು ಒಳಗೊಂಡಿರುವ ಇವು, ಪಾರದರ್ಶಕವಾದ, ನಗದೀಕರಣ ಸುಲಭವಾದ ಹಾಗೂ ಬಳಕೆಗೆ ಹೆಚ್ಚು ಅನುಕೂಲವಾದ ಹಣಕಾಸಿನ ಉತ್ಪನ್ನವಾಗಿ ಲಭ್ಯವಾಗಿವೆ. ಅಂದರೆ, ಈ ಅಮೂಲ್ಯ ಲೋಹಗಳ ಇಟಿಎಫ್‌ಗಳು ಹೆಚ್ಚು ಅನುಕೂಲಕರವಾದವು, ಲೋಹಗಳ ಮೇಲಿನ ನೇರ ಹೂಡಿಕೆಗೆ ಪರ್ಯಾಯವನ್ನು ಒದಗಿಸುವಂಥವು.
ಚಿನ್ನ: ಚಿನ್ನವು ಯಾವಾಗಲೂ ಸ್ಥಿರತೆಯನ್ನು ತರುವ ಲೋಹ. ಆರ್ಥಿಕ ಒತ್ತಡದ ಸಂದರ್ಭಗಳಲ್ಲಿ, ಜಾಗತಿಕ ಮಟ್ಟದಲ್ಲಿ ಸಂಘರ್ಷಗಳು ಉಂಟಾದಾಗ, ಬಡ್ಡಿ ದರವು ಇಳಿಕೆಯ ಹಾದಿಯಲ್ಲಿ ಇದ್ದಾಗ ಚಿನ್ನದ ಬೆಲೆಯು ಬಹಳ ಏರಿಕೆ ದಾಖಲಿಸಿದೆ. ವ್ಯಾಲ್ಯೂ ರಿಸರ್ಚ್ ಸಂಸ್ಥೆಯು ಸಿದ್ಧಪಡಿಸಿರುವ 2025ರ ಸೆಪ್ಟೆಂಬರ್ 18ರ ಅಂಕಿ–ಅಂಶಗಳ ಪ್ರಕಾರ ದೇಶಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಒಂದು ವರ್ಷದ ಅವಧಿಯಲ್ಲಿ ಶೇಕಡ 49.84ರಷ್ಟು ಹೆಚ್ಚಳ ಕಂಡಿದೆ. ಈ ವರ್ಷದಲ್ಲಿ ಜನವರಿ 1ರಿಂದ ಈಚೆಗೆ ಬೆಲೆಯು ಶೇ 43.98ರಷ್ಟು ಹೆಚ್ಚಾಗಿದೆ. ಅಂದರೆ ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆ ಹೆಚ್ಚಾದಾಗ ಚಿನ್ನವು ಸುರಕ್ಷಿತ ಹೂಡಿಕೆ ಎಂಬ ಭಾವನೆಯು ಇನ್ನಷ್ಟು ಬಲವಾಗಿದೆ ಎಂದು ಅರ್ಥ.
ಆದರೆ, ಜಾಗತಿಕ ಮಟ್ಟದಲ್ಲಿ ಸುಂಕ ಸಮರವು ನಡೆಯುತ್ತಿರುವ ಈ ಕಾಲಘಟ್ಟದಲ್ಲಿ, ಕಳೆದ ಒಂದು ವರ್ಷದ ಅವಧಿಯಲ್ಲಿ ದೇಶಿ ಷೇರುಪೇಟೆ ನೀಡಿರುವ ಗಳಿಕೆಯು ಏನೂ ಇಲ್ಲ (ಶೇ –0.39ರಷ್ಟು).
ಇಟಿಎಫ್‌ಗಳ ಮೂಲಕ ಹೂಡಿಕೆದಾರರು ತಮ್ಮ ಡಿಮ್ಯಾಟ್ ಖಾತೆಯಲ್ಲಿ ಚಿನ್ನವನ್ನು ಯಾವ ಅಡ್ಡಿಯೂ ಇಲ್ಲದೆ ಇರಿಸಿಕೊಳ್ಳಬಹುದು. ಅಲ್ಲದೆ, ವ್ಯವಸ್ಥಿತ ಹೂಡಿಕೆ ಯೋಜನೆಗಳ ಮೂಲಕ ಅವರು ಚಿನ್ನವನ್ನು ಸಣ್ಣ ಪ್ರಮಾಣದಲ್ಲಿ ಖರೀದಿಸುತ್ತಿರಬಹುದು. ಚಿನ್ನವನ್ನು ಆಭರಣದ ರೂಪದಲ್ಲಿ ಖರೀದಿಸಿದರೆ ಅದನ್ನು ಸುರಕ್ಷಿತವಾಗಿ ಇರಿಸಿಕೊಳ್ಳುವ ಸಮಸ್ಯೆ ಎದುರಾಗುತ್ತದೆ. ಚಿನ್ನವನ್ನು ನಾಣ್ಯಗಳ ರೂಪದಲ್ಲಿ ಖರೀದಿಸಿದರೆ ಅಗತ್ಯ ಸಂದರ್ಭದಲ್ಲಿ ಅವುಗಳ ನಗದೀಕರಣಕ್ಕೆ ತುಸು ಸಮಸ್ಯೆ ಎದುರಾಗಬಹುದು. ಆದರೆ ಚಿನ್ನವನ್ನು ಇಟಿಎಫ್ ರೂಪದಲ್ಲಿ ಖರೀದಿಸಿದಾಗ ಈ ಸಮಸ್ಯೆ ಇರುವುದಿಲ್ಲ.
ಬೆಳ್ಳಿ: ಚಿನ್ನಕ್ಕೆ ಹೋಲಿಸಿದರೆ ಬೆಳ್ಳಿಯ ಗುಣ ಬೇರೆಯದ್ದು. ಬೆಳ್ಳಿಯ ಬೆಲೆಯು ಹೆಚ್ಚು ಚಂಚಲವಾಗಿರುತ್ತದೆ. ಎಲೆಕ್ಟ್ರಾನಿಕ್ಸ್ ಉದ್ಯಮ ವಲಯದಿಂದ, ಸೌರಫಲಕ ಮತ್ತು ಪರಿಸರ ಪೂರಕ ಇಂಧನ ವಲಯದಿಂದ ಬರುವ ಬೇಡಿಕೆಯು ಇದರ ಬೆಲೆಯ ಮೇಲೆ ಪರಿಣಾಮ ಬೀರುತ್ತದೆ. ಅರ್ಥ ವ್ಯವಸ್ಥೆಯಲ್ಲಿ ನಗದು ಹರಿವನ್ನು ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ, ಆರ್ಥಿಕ ಬೆಳವಣಿಗೆಯ ಕಾಲಘಟ್ಟದಲ್ಲಿ ಬೆಳ್ಳಿಯ ಬೆಲೆ ಹೆಚ್ಚಳವು ಜಾಸ್ತಿ ಇರುತ್ತದೆ. ಕಳೆದ ಮೂರು ತಿಂಗಳಲ್ಲಿ ದೇಶದಲ್ಲಿ ಬೆಳ್ಳಿಯ ಬೆಲೆಯು ಶೇ 15.83ರಷ್ಟು ಏರಿಕೆ ಆಗಿದೆ. ಇದು, ಇದೇ ಅವಧಿಯಲ್ಲಿ ಚಿನ್ನದ ಬೆಲೆಯಲ್ಲಿ ಆಗಿರುವ ಏರಿಕೆಯ ಪ್ರಮಾಣಕ್ಕಿಂತ (ಶೇ 10.67ರಷ್ಟು) ಹೆಚ್ಚು. ಒಂದು ವರ್ಷದಲ್ಲಿ ಬೆಳ್ಳಿಯ ಬೆಲೆಯು ಶೇ 43.47ರಷ್ಟು ಹೆಚ್ಚಳ ಕಂಡಿದ್ದು, ಕೈಗಾರಿಕಾ ವಲಯದಲ್ಲಿನ ಬೆಳವಣಿಗೆಯ ಜೊತೆಗೆ ಇದರ ಬೆಲೆಯೂ ಹೆಚ್ಚಳವಾಗಿದೆ.
ಆದರೆ, ಬೆಳ್ಳಿಯ ಬೆಲೆಯಲ್ಲಿನ ಚಂಚಲತೆಯು ಅದನ್ನು ಭೌತಿಕವಾಗಿ ಇಟ್ಟುಕೊಳ್ಳುವುದನ್ನು ನಿರುತ್ತೇಜಿಸುವಂತೆ ಇರುತ್ತದೆ. ಬೆಳ್ಳಿಯ ಬೆಲೆಯಲ್ಲಿ ಬಹಳ ತೀವ್ರ ಪ್ರಮಾಣದಲ್ಲಿ ಏರಿಳಿತಗಳು ಆಗಬಹುದು. ಇಟಿಎಫ್ ರೂಪದಲ್ಲಿ ಬೆಳ್ಳಿಯನ್ನು ಖರೀದಿಸಿದರೆ ನಗದೀಕರಣ ಸುಲಭವಾಗುತ್ತದೆ.
ಇಟಿಎಫ್‌ಗಳು ಏಕೆ ಉತ್ತಮ?
1) ಸುಲಭ ನಗದೀಕರಣ, ಪಾರದರ್ಶಕತೆ: ಭೌತಿಕ ರೂಪದ ಚಿನ್ನವನ್ನು ಮಾರಾಟ ಮಾಡುವಾಗ ಒಂದಿಷ್ಟು ಮೌಲ್ಯ ಕೈತಪ್ಪಿಹೋಗುತ್ತದೆ. ಮೇಕಿಂಗ್ ವೆಚ್ಚ, ಶುದ್ಧತೆಯ ಪರಿಶೀಲನೆ ಹೆಸರಿನಲ್ಲಿ ತುಸು ಮೌಲ್ಯವನ್ನು ಬಿಟ್ಟುಕೊಡಬೇಕಾಗುತ್ತದೆ. ಬೆಳ್ಳಿಯ ಗಟ್ಟಿಗಳನ್ನು ನ್ಯಾಯಸಮ್ಮತ ಬೆಲೆಗೆ ಮಾರಾಟ ಮಾಡುವುದು ಇನ್ನಷ್ಟು ಕಷ್ಟಕರ ಆಗಿರಬಹುದು. ಆದರೆ, ಷೇರುಪೇಟೆಯಲ್ಲಿ ಖರೀದಿ–ಮಾರಾಟ ಆಗುವ ಇಟಿಎಫ್‌ಗಳನ್ನು ತಕ್ಷಣ ನಗದೀಕರಿಸಿಕೊಳ್ಳಬಹುದು.
2) ಕಡಿಮೆ ವೆಚ್ಚ: ಚಿನ್ನಾಭರಣ ಸಿದ್ಧಪಡಿಸುವಾಗ ಮೇಕಿಂಗ್ ವೆಚ್ಚ ಪಾವತಿಸಬೇಕು, ಅವುಗಳನ್ನು ಇರಿಸಿಕೊಳ್ಳಲು ಲಾಕರ್ ಸೌಲಭ್ಯ ಪಡೆದಲ್ಲಿ ಅದಕ್ಕೆ ಶುಲ್ಕ ನೀಡಬೇಕು, ನಾಣ್ಯಗಳು ಅಥವಾ ಗಟ್ಟಿಗಳನ್ನು ಮಾಡಿಸಿದರೆ ಅವುಗಳಿಗೆ ತಯಾರಿಕಾ ಶುಲ್ಕವನ್ನು ನೀಡಬೇಕಾಗುತ್ತದೆ. ಇಟಿಎಫ್‌ಗಳಿಗಾಗಿ ಸಣ್ಣ ಮೊತ್ತದ ನಿರ್ವಹಣಾ ಶುಲ್ಕವನ್ನು ನೀಡಬೇಕಾದರೂ, ಅವುಗಳಲ್ಲಿ ಇತರ ಗೋಪ್ಯ ಶುಲ್ಕಗಳು ಇರುವುದಿಲ್ಲ.
3) ಶುದ್ಧತೆ ಮತ್ತು ಭದ್ರತೆ: ಭೌತಿಕ ಸ್ವರೂಪದ ಚಿನ್ನ, ಬೆಳ್ಳಿಯನ್ನು ಖರೀದಿಸುವಾಗ ಅವುಗಳ ಪರಿಶುದ್ಧತೆಯ ಬಗ್ಗೆ ಒಂದಿಷ್ಟು ಚಿಂತೆ ಇದ್ದೇ ಇರುತ್ತದೆ. ಇಟಿಎಫ್‌ಗಳಲ್ಲಿ ಈ ಚಿಂತೆ ಇಲ್ಲ. ಅವುಗಳಿಗೆ ಬೆಲೆಯನ್ನು ತಂದುಕೊಡುವ ಉತ್ತಮ ಗುಣಮಟ್ಟದ ಭೌತಿಕ ಚಿನ್ನವನ್ನು ಸುರಕ್ಷಿತವಾಗಿ ಇರಿಸಲಾಗುತ್ತದೆ. ಇದರಿಂದಾಗಿ ಚಿನ್ನದ ಪರಿಶುದ್ಧತೆ ಕುರಿತ ಕಳವಳಕ್ಕೆ ಆಸ್ಪದ ಇರುವುದಿಲ್ಲ.
4) ತೆರಿಗೆ: ಅಮೂಲ್ಯ ಲೋಹಗಳನ್ನು ಮತ್ತೆ ಮತ್ತೆ ಖರೀದಿ, ಮಾರಾಟ ಮಾಡುತ್ತಿದ್ದರೆ ವೈಯಕ್ತಿಕ ಮಟ್ಟದಲ್ಲಿ ಅಲ್ಪಾವಧಿ ಬಂಡವಾಳ ವೃದ್ಧಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಹೂಡಿಕೆದಾರರು ತಮ್ಮ ಪೋರ್ಟ್‌ಫೋಲಿಯೊದಲ್ಲಿ ಬದಲಾವಣೆ ತರಲು ಹೀಗೆ ಖರೀದಿ, ಮಾರಾಟವನ್ನು ಮಾಡುತ್ತಿದ್ದಾಗ ಅವರ ಲಾಭದ ಪ್ರಮಾಣ ಕಡಿಮೆ ಆಗಬಹುದು ಎಂಬುದನ್ನು ಅಧ್ಯಯನಗಳು ತೋರಿಸಿಕೊಟ್ಟಿವೆ. ಫಂಡ್ ವ್ಯವಸ್ಥೆಯ ಭಾಗವಾಗಿ ಇಟಿಎಫ್‌ಗಳು ಇದ್ದಾಗ, ಆಂತರಿಕ ಮರುಹೊಂದಾಣಿಕೆಗೆ ತಕ್ಷಣಕ್ಕೆ ತೆರಿಗೆ ಬಾಧ್ಯತೆ ಇರುವುದಿಲ್ಲ.
5) ವೈವಿಧ್ಯತೆ: ಸಾಮಾನ್ಯ ಸಂದರ್ಭಗಳಲ್ಲಿ ಚಿನ್ನ ಹಾಗೂ ಬೆಳ್ಳಿಯ ಪೈಕಿ ಒಂದು ಲೋಹದ ಬೆಲೆಯು ಏರುಗತಿಯಲ್ಲಿ ಇದ್ದರೆ, ಇನ್ನೊಂದು ಲೋಹ ಬೆಲೆಯು ಅಷ್ಟೇನೂ ತೀವ್ರವಾಗಿ ಹೆಚ್ಚಾಗುವುದಿಲ್ಲ. ಆದರೆ ಕಳೆದ ಒಂದು ವರ್ಷದಲ್ಲಿ ಈ ರೀತಿ ಆಗಿಲ್ಲ, ಈ ಅವಧಿಯು ಒಂದು ಅಪವಾದ. ಈ ಒಂದು ವರ್ಷದಲ್ಲಿ ಎರಡೂ ಲೋಹಗಳ ಬೆಲೆಯು ಹೆಚ್ಚಳ ಕಂಡಿದೆ. ಆದರೆ ಇಂತಹ ಅವಧಿಗಳನ್ನು ಊಹಿಸುವುದು ಬಹಳ ಕಷ್ಟ, ಇಂತಹ ಅವಧಿಗಳು ಅಲ್ಪಾಯುಷ್ಯ ಹೊಂದಿರುತ್ತವೆ ಕೂಡ. ಯಾವಾಗ ಯಾವ ಲೋಹದ ಬೆಲೆ ಹೆಚ್ಚಾಗುತ್ತದೆ ಎಂಬುದನ್ನು ಅಂದಾಜು ಮಾಡುತ್ತ ಇರುವ ಬದಲು, ಇವೆರಡನ್ನೂ ಇಟಿಎಫ್ ರೂಪದಲ್ಲಿ ಇರಿಸಿಕೊಂಡರೆ, ಇವುಗಳನ್ನು ನಾಣ್ಯ ಹಾಗೂ ಗಟ್ಟಿಗಳ ರೂಪದಲ್ಲಿ ಲಾಕರ್‌ಗಳಲ್ಲಿ ಇರಿಸಿಕೊಳ್ಳುವುದಕ್ಕಿಂತಲೂ ಹೆಚ್ಚು ಸ್ಥಿರವಾದ ಹೂಡಿಕೆಯೊಂದನ್ನು ಹೊಂದಿದಂತಾಗುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ: ಅಮೂಲ್ಯ ಲೋಹಗಳಿಗೆ ಭಾರತದ ಮನೆಗಳಲ್ಲಿ ಯಾವತ್ತಿಗೂ ಒಂದು ಸ್ಥಾನ ಇದ್ದೇ ಇರುತ್ತದೆ. ಆದರೆ ಅವುಗಳನ್ನು ಯಾವ ರೂಪದಲ್ಲಿ ಇರಿಸಿಕೊಳ್ಳಬೇಕು ಎಂಬುದು ಮುಖ್ಯವಾಗುತ್ತದೆ. ಚಿನ್ನ ಹಾಗೂ ಬೆಳ್ಳಿಯನ್ನು ಭೌತಿಕ ರೂಪದಲ್ಲಿ ಇಟ್ಟುಕೊಳ್ಳುವುದು ತ್ರಾಸದ ಕೆಲಸ. ಕೆಲವು ಸಂದರ್ಭಗಳಲ್ಲಿ ಅದು ಅಷ್ಟು ಅನುಕೂಲಕರವೂ ಅಲ್ಲ. ಆದರೆ ಇಟಿಎಫ್‌ಗಳ ರೂಪದಲ್ಲಿ ಚಿನ್ನ ಹಾಗೂ ಬೆಳ್ಳಿಯನ್ನು ಇರಿಸಿಕೊಂಡರೆ, ಅವುಗಳ ಮೌಲ್ಯದ ಪ್ರಯೋಜನವು ಹೆಚ್ಚು ದಕ್ಷವಾಗಿ ಹಾಗೂ ಪಾರದರ್ಶಕ ಬಗೆಯಲ್ಲಿ ದಕ್ಕುತ್ತದೆ.
ಸಂಪ್ರದಾಯವನ್ನು ಇಷ್ಟಪಡುತ್ತ, ಆಧುನಿಕತೆಯನ್ನೂ ಬಯಸುವ ಹೂಡಿಕೆದಾರರಿಗೆ ಚಿನ್ನ ಹಾಗೂ ಬೆಳ್ಳಿಯ ಇಟಿಎಫ್‌ಗಳು ಬಹಳ ಸೂಕ್ತವಾದ ಆಯ್ಕೆಗಳು.
ಲೇಖಕ ಐಸಿಐಸಿಐ ಪ್ರುಡೆನ್ಶಿಯಲ್ ಎಎಂಸಿ ಕಂಪನಿ ಹೂಡಿಕೆ ಕಾರ್ಯತಂತ್ರದ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.