ADVERTISEMENT

ಪ್ರಶ್ನೋತ್ತರ | ಎನ್‌ಪಿಎಸ್ ಹೂಡಿಕೆ - ಯಾವುದು ಲಾಭದಾಯಕ?

ಪ್ರಮೋದ ಶ್ರೀಕಾಂತ ದೈತೋಟ
Published 25 ಅಕ್ಟೋಬರ್ 2022, 21:00 IST
Last Updated 25 ಅಕ್ಟೋಬರ್ 2022, 21:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪುರುಷೋತ್ತಮ ಭಟ್ ಪಿ.,ಬೆಂಗಳೂರು

ಪ್ರಶ್ನೆ: ನನ್ನ ಮಗ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಹೊಸದೊಂದು ಕಂಪನಿ ಅದನ್ನು ಖರೀದಿಸುತ್ತಿದೆ. ಎಲ್ಲ ಉದ್ಯೋಗಿಗಳು ಹೊಸ ಕಂಪನಿಗೆ ವರ್ಗಾವಣೆಯಾಗುತ್ತಿದ್ದು, ಕಂಪನಿಯ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್ ಸೇರುವ ಅವಕಾಶ ಇದೆ. ಇದಕ್ಕೂ ತಾವಾಗಿಯೇ ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡುವುದಕ್ಕೂ ಏನು ವ್ಯತ್ಯಾಸ? ಯಾವುದು ಲಾಭದಾಯಕ?

ಉತ್ತರ: ಯಾವುದೇ ವ್ಯಕ್ತಿ ತನ್ನ ವೃತ್ತಿ ಜೀವನದ ಬಳಿಕ ನಿವೃತ್ತಿ ಬದುಕು ಆರಂಭಿಸಬೇಕಿರುವುದು ಸಹಜ. ಇಂತಹ ಸಂದರ್ಭದಲ್ಲಿ ಬದುಕನ್ನು ಅರ್ಥಪೂರ್ಣವಾಗಿ ಸಾಗಿಸಲು ಒಂದಷ್ಟು ಮೊತ್ತ ಇದ್ದರೆ ಚೆನ್ನ. ಈ ಆಶಯದಿಂದ ಕೇಂದ್ರ ಸರ್ಕಾರವು ಇಪಿಎಫ್ ಯೋಜನೆಯಲ್ಲದೆ, ಕಾರ್ಪೊರೇಟ್ ಎನ್‌ಪಿಎಸ್ ಯೋಜನೆಯನ್ನೂ ಜಾರಿಗೆ ತಂದಿದೆ. ಇದರ ಅಡಿ, ಉದ್ಯೋಗಿಗಳ ಖಾತೆಯಲ್ಲಿ ಕಂಪನಿ ನಿಗದಿತ ಮೊತ್ತವನ್ನು ತೊಡಗಿಸುತ್ತದೆ. ಇಂತಹ ಪಾವತಿಗಳಿಗೆ, ಕಂಪನಿಗಳಿಗೆ ಮಾತ್ರವಲ್ಲದೆ, ಉದ್ಯೋಗಿಗಳಿಗೂ ತೆರಿಗೆ ಲಾಭವಿದೆ.

ADVERTISEMENT

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿಸಿಡಿ(2) ಅಡಿ, ಯಾವುದೇ ಮೊತ್ತವನ್ನು ಕೇಂದ್ರ ಸರ್ಕಾರದ ಪಿಂಚಣಿ ಯೋಜನೆಯಲ್ಲಿ ಕಂಪನಿಯು ಉದ್ಯೋಗಿಗಳ ಖಾತೆಯಲ್ಲಿ ತೊಡಗಿಸಿದಾಗ ಆ ಮೊತ್ತಕ್ಕೆ ಆದಾಯ ತೆರಿಗೆ ವಿನಾಯಿತಿ ಸಿಗುತ್ತದೆ. ಈ ಯೋಜನೆಯ ಪ್ರಯೋಜನ ಸರ್ಕಾರಿ ಉದ್ಯೋಗಿಗಳಿಗಷ್ಟೇ ಅಲ್ಲದೆ ಖಾಸಗಿ ವಲಯದ ನೌಕರರಿಗೂ, ಇತರ ತೆರಿಗೆದಾರರಿಗೂ ಲಭ್ಯವಿದೆ. ಖಾಸಗಿ ಕಂಪನಿ ಉದ್ಯೋಗಿಗಳಾಗಿದ್ದರೆ, ಇಂತಹ ಯೋಜನೆಯಲ್ಲಿ ತೊಡಗಿಸಿಕೊಂಡಾಗ ಅವರ ಮೂಲ ವೇತನ ಹಾಗೂ ತುಟ್ಟಿ ಭತ್ಯೆಯ ಶೇಕಡಾ 10ರಷ್ಟು ಮೊತ್ತವನ್ನು ವಿನಾಯಿತಿಗೆ ಪರಿಗಣಿಸಲಾಗುತ್ತದೆ. ಇದಕ್ಕೆ ಯಾವುದೇ ಮಿತಿ ಇಲ್ಲ. ಮೂಲ ವೇತನ ಹಾಗೂ ತುಟ್ಟಿ ಭತ್ಯೆ ವರ್ಧಿಸಿದಂತೆ, ಗರಿಷ್ಠ ವಿನಾಯಿತಿ ಮೊತ್ತವೂ ಹೆಚ್ಚುತ್ತ ಹೋಗುತ್ತದೆ.

ಸ್ವಇಚ್ಛೆಯಿಂದ ಎನ್‌ಪಿಎಸ್ ಖಾತೆ ಆರಂಭಿಸಿದ ಹೂಡಿಕೆದಾರರು ತಮ್ಮ ಬ್ಯಾಂಕ್ ಖಾತೆಯಿಂದ ನೇರ ಪಾವತಿ ಮಾಡುತ್ತಾರೆ. ಕಾರ್ಪೊರೇಟ್ ಎನ್‌ಪಿಎಸ್ ಯೋಜನೆಯಲ್ಲಾದರೆ ಕಂಪನಿಯು ಪಿಂಚಣಿ ನಿಧಿ ವ್ಯವಸ್ಥಾಪಕ ಪಾಲುದಾರ ಸಂಸ್ಥೆಗಳೊಡನೆ ನೇರವಾಗಿ ವ್ಯವಹರಿಸುತ್ತದೆ. ಸ್ವಂತವಾಗಿ ಮಾಡಿದ್ದರೂ, ಕಾರ್ಪೊರೇಟ್ ಎನ್‌ಪಿಎಸ್ ಹೂಡಿಕೆ ಆಗಿದ್ದರೂ, ಹಣವು ತಮ್ಮ ಆಯ್ಕೆಗೆ ಅನುಗುಣವಾಗಿ ವಿನಿಯೋಗ ಆಗುತ್ತದೆ. ನಿಮ್ಮ ಖಾತೆಯನ್ನು ಸಕ್ರಿಯವಾಗಿ ನಿರ್ವಹಿಸಲು ನೀವು ಬಯಸಿದರೆ, ಸಕ್ರಿಯ ಆಯ್ಕೆ ವರ್ಗವನ್ನು ಆಯ್ಕೆ ಮಾಡಬಹುದು. ಇಲ್ಲಿ ವೃತ್ತಿಪರ ನಿಧಿ ವ್ಯವಸ್ಥಾಪಕರು ನೆರವಾಗುತ್ತಾರೆ. ಇದಕ್ಕಾಗಿ ಈಕ್ವಿಟಿ, ಕಾರ್ಪೊರೇಟ್ ಅಥವಾ ಸರ್ಕಾರಿ ಸಾಲಪತ್ರಗಳಲ್ಲಿ ಹಣ ಎಷ್ಟು ಹಂಚಿಕೆ ಮಾಡಬೇಕು ಎನ್ನುವುದನ್ನು ಮೊದಲೇ ನಿರ್ಧರಿಸಿ. ಈಕ್ವಿಟಿ ವಿಭಾಗದಲ್ಲಿ ಹೆಚ್ಚಿನ ಪಾಲನ್ನು ವರ್ಗೀಕರಿಸುವ ಮೂಲಕ ಉತ್ತಮ ಲಾಭವನ್ನು ಎನ್‌ಪಿಎಸ್ ಯೋಜನೆಯಲ್ಲಿ ಪಡೆಯಬಹುದು. ದೀರ್ಘಾವಧಿಯಲ್ಲಿ ಎನ್‌ಪಿಎಸ್ ವಾರ್ಷಿಕವಾಗಿ ಶೇ 9ರಿಂದ ಶೇ 11ರವರೆಗೆ ಲಾಭಾಂಶ ನೀಡಬಲ್ಲದು.

****

ಎಂ.ಷಡಕ್ಷರ ಸ್ವಾಮಿ,ಕನಕಪುರ

ಪ್ರಶ್ನೆ: ನಾನು ಸರ್ಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ. ನಿವೃತ್ತಿ ವೇತನ ಪಡೆಯುತ್ತಿದ್ದೇನೆ, ಆದಾಯ ತೆರಿಗೆ ಪಾವತಿಸುತ್ತಿದ್ದೇನೆ ಹಾಗೂ ತೆರಿಗೆ ವಿವರ ಸಲ್ಲಿಸುತ್ತಿದ್ದೇನೆ. ಪ್ರಸ್ತುತ ನಾನು ನನ್ನ ತಂದೆಯವರಿಂದ ಬಂದ ಹೊಲವೊಂದನ್ನು ಮಾರಾಟ ಮಾಡಿದ್ದೇನೆ. ಮಾರಾಟದಿಂದ ಬಂದ ಹಣ ನನ್ನ ಬ್ಯಾಂಕ್ ಖಾತೆಗೆ ಜಮಾ ಆಗಿರುತ್ತದೆ. ನಾನು ಮುಂದಿನ ವರ್ಷ ವಾಸಕ್ಕೆ ಮನೆ ನಿರ್ಮಿಸಲು ಆ ಹಣ ಬಳಸುತ್ತೇನೆ. ಈ ಹಣವನ್ನು ತೆರಿಗೆ ಉಳಿಸುವ ದೃಷ್ಟಿಯಿಂದ ‘ಕ್ಯಾಪಿಟಲ್ ಗೈನ್ಸ್ ಅಕೌಂಟ್ ಸ್ಕೀಂ’ನಲ್ಲಿ ಹೂಡಿಕೆ ಮಾಡಬೇಕು ಎಂದು ಲೆಕ್ಕಪರಿಶೋಧಕರು ಹೇಳಿರುತ್ತಾರೆ. ಈ ಬಗ್ಗೆ ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಸೂಕ್ತ ಮಾಹಿತಿ ದೊರೆಯಲಿಲ್ಲ. ಹೀಗಾಗಿ ತೆರಿಗೆ, ಹೂಡಿಕೆ, ಸಿಗಬಹುದಾದ ತೆರಿಗೆ ವಿನಾಯಿತಿ ಬಗ್ಗೆ ತಿಳಿಸಿಕೊಡಿ.

ಉತ್ತರ: ನೀವು ಯಾವುದೇ ಜಮೀನು ಮಾರಾಟ ಮಾಡಿದಾಗ ಬಂಡವಾಳ ಲಾಭ ತೆರಿಗೆ ಅನ್ವಯವಾಗುತ್ತದೆ. ಕೃಷಿ ಜಮೀನಿಗೆ ಕೆಲವೊಮ್ಮೆ ತೆರಿಗೆ ಅನ್ವಯಿಸದೆಯೂ ಇರಬಹುದು. ಇದನ್ನು ಮೊದಲು ಖಚಿತಪಡಿಸಿಕೊಳ್ಳಿ. ಬಂಡವಾಳ ಲಾಭ ಖಾತೆ ಯೋಜನೆ 1988ರ ಅಡಿಯಲ್ಲಿ ಖಾತೆ ತೆರೆಯಲು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಬ್ಯಾಂಕಿಗೆ ಸಲ್ಲಿಸಬೇಕು. ಈ ಖಾತೆ ತೆರೆಯುವ ಸೌಲಭ್ಯ ಎಲ್ಲ ಬ್ಯಾಂಕ್‌ಗಳ ಶಾಖೆಗಳಲ್ಲಿ ಇಲ್ಲದಿರಬಹುದು. ಆದರೆ ನಿಮ್ಮ ಸಮೀಪದ ಯಾವುದೇ ದೊಡ್ಡ ಬ್ಯಾಂಕ್ ಶಾಖೆಗಳಲ್ಲಿ ಮತ್ತೆ ಈ ಬಗ್ಗೆ ವಿಚಾರಿಸಿ ಅಥವಾ ನಿಮ್ಮ ಅಗತ್ಯವನ್ನು ಬ್ಯಾಂಕಿನ ಗ್ರಾಹಕ ಸೇವಾ ಕೇಂದ್ರಕ್ಕೆ ಮನದಟ್ಟುಮಾಡಿಸಿ ಸೂಕ್ತ ಮಾಹಿತಿ ಪಡೆದುಕೊಳ್ಳಿ.

ತೆರಿಗೆ ವಿಚಾರ: ನೀವು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 54 ಎಫ್ ಅಡಿ ವಿನಾಯಿತಿ ಪಡೆಯಬಹುದು. ಸೆಕ್ಷನ್ 139(1) ಅಡಿಯಲ್ಲಿ ಆದಾಯ ತೆರಿಗೆ ವಿವರ ಸಲ್ಲಿಸುವ ದಿನಾಂಕಕ್ಕೆ ಮುಂಚಿತವಾಗಿ ಅಥವಾ ಮಾರಾಟವಾದ 6 ತಿಂಗಳೊಳಗಾಗಿ, ಬಂದ ಮೊತ್ತವನ್ನು ಬಂಡವಾಳ ಲಾಭ ಯೋಜನೆ ಅಡಿಯಲ್ಲಿ ಠೇವಣಿ ಮಾಡುವ ಮೂಲಕ ವಿನಾಯಿತಿ ಪಡೆಯಬಹುದು. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 54 ಎಫ್‌ ಅಡಿಯಲ್ಲಿ ವಿನಾಯಿತಿ ಪಡೆಯಲು, ಅರ್ಹ ಬಂಡವಾಳ ಆಸ್ತಿಗಳ ಮಾರಾಟದಿಂದ ಬರುವ ಆದಾಯವನ್ನು ಈ ಕೆಳಗಿನ ಯಾವುದೇ ವಿಧಾನಗಳಲ್ಲಿ ಬಳಸಬಹುದು - ಅ) ಮಾರಾಟದ ಮೊದಲು ಒಂದು ವರ್ಷದೊಳಗೆ ಹೊಸ ಮನೆಯನ್ನು ಖರೀದಿಸುವುದು ಆ) ಮಾರಾಟದ ನಂತರ ಎರಡು ವರ್ಷಗಳಲ್ಲಿ ಹೊಸ ಮನೆಯನ್ನು ಖರೀದಿಸುವುದು ಇ) ಮಾರಾಟದ ನಂತರ ಮೂರು ವರ್ಷಗಳಲ್ಲಿ ಹೊಸ ಮನೆಯನ್ನು ನಿರ್ಮಿಸುವುದು.

ನೀವು ಮೂರು ವರ್ಷಗಳೊಳಗೆ, ಖಾತೆಯಲ್ಲಿ ಇರಿಸಿದ ಹಣವನ್ನು ಮನೆ ನಿರ್ಮಿಸಲು ಉಪಯೋಗಿಸಿಕೊಳ್ಳಿ. ನಿಮ್ಮ ನಿರ್ಮಾಣದ ಖರ್ಚನ್ನು ನೇರವಾಗಿ ಗುತ್ತಿಗೆದಾರನ ಖಾತೆಗೆ ಜಮಾ ಮಾಡುವ ಅಗತ್ಯ ಕರಾರನ್ನೂ ಮಾಡಿಕೊಳ್ಳಿ. ಅದರಲ್ಲಿ ನಿಮ್ಮ ಮನೆ ನಿರ್ಮಾಣದ ಮೊತ್ತವನ್ನು ಸಮರ್ಪಕವಾಗಿ ದಾಖಲಿಸಿ. ಕೊಟ್ಟ ಹಣವನ್ನು ಬ್ಯಾಂಕ್ ಖಾತೆಯ ಮೂಲಕವೇ ಜಮಾ ಮಾಡಿ. ನೀವು ಈ ಖಾತೆಯನ್ನು ಮುಚ್ಚುವ ಸಂದರ್ಭದಲ್ಲಿ, ಆದಾಯತೆರಿಗೆ ಇಲಾಖೆಯಿಂದ ನಿರಾಕ್ಷೇಪಣಾ ಪತ್ರವನ್ನು ಬ್ಯಾಂಕಿಗೆ ನೀಡಬೇಕಾಗುತ್ತದೆ. ಇದಕ್ಕೆ ಪೂರಕವಾಗಿ ವೆಚ್ಚ, ಪಾವತಿ ದಾಖಲೆಗಳನ್ನು ಇಟ್ಟುಕೊಳ್ಳಿ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001
ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.