ADVERTISEMENT

ಮ್ಯೂಚುವಲ್ ಫಂಡ್‌ ಹಣ ಯಾವ ಷೇರಿನಲ್ಲಿ ವಿನಿಯೋಗ ಆಗಿದೆ? ತಿಳಿದುಕೊಳ್ಳುವುದು ಹೇಗೆ?

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 23:50 IST
Last Updated 18 ಜೂನ್ 2025, 23:50 IST
<div class="paragraphs"><p>ಮ್ಯೂಚುವಲ್‌ ಫಂಡ್‌</p></div>

ಮ್ಯೂಚುವಲ್‌ ಫಂಡ್‌

   

ನೇರವಾಗಿ ಷೇರುಗಳನ್ನು ಖರೀದಿ ಮಾಡುವಲ್ಲಿ ಹಾಗೂ ಮ್ಯೂಚುವಲ್‌ ಫಂಡ್‌ಗಳ ಮೂಲಕ ಷೇರುಗಳಲ್ಲಿ ಹಣ ತೊಡಗಿಸುವಲ್ಲಿ ಒಂದು ಪ್ರಮುಖ ವ್ಯತ್ಯಾಸ ಇದೆ. ನೇರವಾಗಿ ಷೇರು ಖರೀದಿಸುವವರಿಗೆ ತಾವು ಯಾವ ಕಂಪನಿಯ ಎಷ್ಟು ಷೇರುಗಳನ್ನು ಹೊಂದಿದ್ದೇವೆ ಎಂಬುದು ಸ್ಪಷ್ಟವಾಗಿ ತಿಳಿದಿರುತ್ತದೆ. ಆದರೆ ಮ್ಯೂಚುವಲ್‌ ಫಂಡ್‌ಗಳ ಮೂಲಕ ಹೂಡಿಕೆ ಮಾಡುವವರಿಗೆ ಈ ಮಾಹಿತಿಯು ನೇರವಾಗಿ ಸಿಗುವುದಿಲ್ಲ.

ಮ್ಯೂಚುವಲ್‌ ಫಂಡ್‌ ಕಂಪನಿಗಳು ಪ್ರತಿ ತಿಂಗಳಿಗೆ ಒಮ್ಮೆ ತಮ್ಮ ಫಂಡ್‌ಗಳ ಪೋರ್ಟ್‌ಫೋಲಿಯೊ ಹೇಗಿದೆ ಎಂಬ ವಿವರವನ್ನು ಹೂಡಿಕೆದಾರರಿಗೆ ಇ–ಮೇಲ್‌ ಮೂಲಕ ತಿಳಿಸುತ್ತವೆ. ಆ ಮೂಲಕ ಹೂಡಿಕೆದಾರರು ತಮ್ಮ ಹಣವು ಯಾವ ಕಂಪನಿಯ ಷೇರುಗಳಲ್ಲಿ ಎಷ್ಟು ಪ್ರಮಾಣದಲ್ಲಿ ವಿನಿಯೋಗ ಆಗಿದೆ ಎಂಬುದನ್ನು ತಿಳಿಯಬಹುದು.

ADVERTISEMENT

ಆದರೆ, ಬೇರೆ ಬೇರೆ ಫಂಡ್‌ಗಳಲ್ಲಿ ಹಣ ತೊಡಗಿಸಿರುವವರಿಗೆ ಈ ಮಾಹಿತಿ ಕಲೆಹಾಕುವುದು ಒಂದಿಷ್ಟು ತ್ರಾಸದಾಯಕ ಕೆಲಸ. ಬೇರೆ ಬೇರೆ ಫಂಡ್‌ ಕಂಪನಿಗಳಿಂದ ಬರುವ ಇ–ಮೇಲ್ ಪರಿಶೀಲಿಸಿ, ಬೇರೆ ಬೇರೆ ಫಂಡ್‌ಗಳು ವಿವಿಧ ಕಂಪನಿಗಳ ಷೇರುಗಳನ್ನು ಎಷ್ಟು ಪ್ರಮಾಣದಲ್ಲಿ ಖರೀದಿಸಿವೆ ಎಂಬುದರ ವಿವರವನ್ನು ಪಡೆಯಬಹುದು. ಈ ಕೆಲಸವನ್ನು ಸುಲಭಗೊಳಿಸುವ ಕೆಲಸವನ್ನು ಮ್ಯೂಚುವಲ್‌ ಫಂಡ್‌ ಪೋರ್ಟ್‌ಫೋಲಿಯೊ ವಿಶ್ಲೇಷಣೆಯ ವರದಿಗಳನ್ನು ನೀಡುವ ವೇದಿಕೆಗಳು ಮಾಡುತ್ತಿವೆ.

ಹಿಂದಿನ ಸಂಚಿಕೆಯಲ್ಲಿ ತಿಳಿಸಿರುವಂತೆ, ಪೇಟಿಎಂ ಮತ್ತಿತರ ಆ್ಯಪ್‌ಗಳಲ್ಲಿನ ಈ ಸೌಲಭ್ಯವನ್ನು ಬಳಸಿ ತಮ್ಮ ಹಣವು ಯಾವ ಕಂಪನಿಗಳ ಷೇರುಗಳ ಖರೀದಿಗೆ ವಿನಿಯೋಗ ಆಗಿದೆ ಎಂಬುದರ ವಿವರ ಪಡೆಯಬಹುದು. ಉದಾಹರಣೆಗೆ ಹೂಡಿಕೆದಾರರೊಬ್ಬರು ಮೂರು ಫಂಡ್‌ಗಳಲ್ಲಿ ಹಣ ತೊಡಗಿಸಿದ್ದಾರೆ ಎಂದಾದರೆ, ಆ ಮೂರೂ ಫಂಡ್‌ಗಳ ಮೂಲಕ ಆಗಿರುವ ಹೂಡಿಕೆಯನ್ನು, ಹೂಡಿಕೆಯು ಯಾವ ಷೇರುಗಳಲ್ಲಿ ಎಷ್ಟು ಪ್ರಮಾಣದಲ್ಲಿ ಆಗಿದೆ ಎಂಬುದನ್ನು ಈ ಸೌಲಭ್ಯ ವಿವರವಾಗಿ ತಿಳಿಸುತ್ತದೆ.

ಉದಾಹರಣೆಯಾಗಿ ನೀಡಿರುವ ಹೂಡಿಕೆದಾರ ಇದುವರೆಗೆ ಒಟ್ಟು ₹10 ಲಕ್ಷವನ್ನು ವಿವಿಧ ಮ್ಯೂಚುವಲ್‌ ಫಂಡ್‌ಗಳ ಮೂಲಕ ತೊಡಗಿಸಿದ್ದಾನೆ ಎಂದಾದರೆ, ಆ ಮೊತ್ತದಲ್ಲಿ ನಿರ್ದಿಷ್ಟ ಕಂಪನಿಯ ಷೇರುಗಳ ಖರೀದಿಗೆ ವಿನಿಯೋಗ ಆದ ಹಣದ ಪ್ರಮಾಣ ಎಷ್ಟು ಎಂಬುದು ಗೊತ್ತಾಗುತ್ತದೆ.

ಅದೇ ಹೂಡಿಕೆದಾರ ನೇರವಾಗಿ ಷೇರುಗಳಲ್ಲಿ ಹಣ ತೊಡಗಿಸುವವ ಆಗಿದ್ದರೆ, ಈ ಮಾಹಿತಿ ಪಡೆಯುವುದರಿಂದ ಒಂದು ಪ್ರಯೋಜನ ಇದೆ. ತಾನು ಮ್ಯೂಚುವಲ್‌ ಫಂಡ್‌ ಮೂಲಕ ಮಾಡಿರುವ ಹೂಡಿಕೆಯು ನಿರ್ದಿಷ್ಟ ಕಂಪನಿಯೊಂದರಲ್ಲಿ ದೊಡ್ಡ ಪ್ರಮಾಣದಲ್ಲಿ ವಿನಿಯೋಗ ಆಗಿದ್ದರೆ, ಆ ಕಂಪನಿಯ ಷೇರುಗಳನ್ನು ನೇರವಾಗಿ ತಾನು ಇನ್ನಷ್ಟು ಖರೀದಿಸಬೇಕೇ ಬೇಡವೇ ಎಂಬುದನ್ನು ಆತ ನಿರ್ಧರಿಸಲು ಈ ಮಾಹಿತಿಯು ನೆರವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.