ADVERTISEMENT

ಮ್ಯೂಚುವಲ್‌ ಫಂಡ್‌: ಪೋರ್ಟ್‌ಫೋಲಿಯೊ ಕಟ್ಟುವ ಮುನ್ನ...

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 22:31 IST
Last Updated 4 ಫೆಬ್ರುವರಿ 2026, 22:31 IST
Pen on Pie chart and graphs business report with money, compass, calculator on desk of financial advisor. Accounting and Financial Planning Concept
Pen on Pie chart and graphs business report with money, compass, calculator on desk of financial advisor. Accounting and Financial Planning Concept   

ಸಂಪತ್ತು ಸೃಷ್ಟಿಸಬೇಕು ಎಂದಾದರೆ ಕಳೆದ ವರ್ಷ ಅತ್ಯುತ್ತಮ ಪ್ರಮಾಣದಲ್ಲಿ ಲಾಭ ತಂದುಕೊಟ್ಟ ಮ್ಯೂಚುವಲ್‌ ಫಂಡ್‌ನಲ್ಲಿ ಹಣ ಹೂಡಿಕೆ ಮಾಡುವುದರ ಆಚೆಗೂ ನೋಟ ಹರಿಸಬೇಕು. ಪೋರ್ಟ್‌ಫೋಲಿಯೊ ಸುಸ್ಥಿರವಾಗಿ ಇರಬೇಕು ಎಂದಾದರೆ ಫಂಡ್‌ನ ಮೂಲಭೂತ ಅಂಶಗಳನ್ನು ಸೂಕ್ಷ್ಮವಾಗಿ ಅವಲೋಕಿಸಬೇಕು. ಹಿಂದಿನ ವರ್ಷದಲ್ಲಿ ಬಹಳ ಉತ್ತಮವಾಗಿ ಲಾಭ ತಂದುಕೊಟ್ಟ ಫಂಡ್‌ ಆಯ್ಕೆ ಮಾಡುವುದು ಅಂದರೆ ‘ಅಲ್ಪಾವಧಿಯ ವೇಗದ ಓಟವೇ ಯಶಸ್ಸು; ದೀರ್ಘಾವಧಿಯ ಮ್ಯಾರಾಥಾನ್‌ ಓಟ ಯಶಸ್ಸು ಅಲ್ಲ’
ಎಂದಂತೆ ಆಗುತ್ತದೆ.

ಯೋಚಿಸಿ ಪೋರ್ಟ್‌ಫೋಲಿಯೊ ಕಟ್ಟಿದಾಗ, ಹಿಂದಿನ ವರ್ಷ ದೊರೆತ ಲಾಭ ಮಾತ್ರವೇ ಅಲ್ಲದೆ ಫಂಡ್‌ನ ಮೂಲಭೂತ ಅಂಶಗಳ ಮೇಲೆ, ಹೂಡಿಕೆಯ ಶೈಲಿಯ ಮೇಲೆ, ಯಾವೆಲ್ಲ ಕಡೆಗಳಲ್ಲಿ ಆ ಫಂಡ್‌ ಹಣ ತೊಡಗಿಸುತ್ತದೆ ಎಂಬುದರ ಮೇಲೆ ಗಮನ ಹರಿಸಿ, ಯೋಚಿಸಿ ಪೋರ್ಟ್‌ಫೋಲಿಯೊ ಕಟ್ಟಿದರೆ ಅದು ನಿಜವಾದ
ಸಂಪತ್ತು ಸೃಷ್ಟಿಗೆ ನೆರವಾಗುತ್ತದೆ. ಪ್ರತಿ ವ್ಯಕ್ತಿಯ ಹೂಡಿಕೆ ಪಯಣವೂ ಭಿನ್ನ. ಎಷ್ಟು ಕಾಲ ಆ ವ್ಯಕ್ತಿ ಹೂಡಿಕೆ ಮಾಡುತ್ತಿರುತ್ತಾನೆ, ಯಾವ ಬಗೆಯಲ್ಲಿ ಹೂಡಿಕೆ ಮಾಡುತ್ತಾನೆ, ಆತನ ಹಣಕಾಸಿನ ಗುರಿಗಳು ಏನು, ಆತ ಎಷ್ಟರಮಟ್ಟಿಗೆ ರಿಸ್ಕ್‌ ತೆಗೆದುಕೊಳ್ಳಬಲ್ಲ ಎಂಬುದನ್ನು ಆಧರಿಸಿ ಹೂಡಿಕೆಯ ಆ ಪಯಣ ಭಿನ್ನವಾಗಿರುತ್ತದೆ.

ಹೀಗಾಗಿ ಮಾರುಕಟ್ಟೆಯಲ್ಲಿ ಹೆಚ್ಚು ಆದ್ಯತೆ ಪಡೆದಿರುವ ಅಥವಾ ಹೆಚ್ಚು ಚಾಲ್ತಿಯಲ್ಲಿ ಇರುವ ಹೂಡಿಕೆ ಉತ್ಪನ್ನದ ಮೇಲೆ ಮಾತ್ರ ಹಣ ತೊಡಗಿಸುವುದರಿಂದ, ಹೂಡಿಕೆಯ ಮೂಲ ಉದ್ದೇಶವನ್ನು ಪೂರ್ಣವಾಗಿ ಸಾಧಿಸಲು ಆಗದೆ ಇರಬಹುದು. ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿ ಸಾಧ್ಯವಾಗಬೇಕು ಎಂದಾದರೆ ಹೂಡಿಕೆಯ ಪೋರ್ಟ್‌ಫೋಲಿಯೊ ಬಹಳ ವೈವಿಧ್ಯಮಯವಾಗಿ ಇರಬೇಕು. ಬೇರೆ ಬೇರೆ ಹೂಡಿಕೆ ಉತ್ಪನ್ನಗಳಲ್ಲಿ ಹಣವನ್ನು ತೊಡಗಿಸುವ ಪೋರ್ಟ್‌ಫೋಲಿಯೊ ಇದ್ದಾಗ ಬಂಡವಾಳ ಮಾರುಕಟ್ಟೆಯಲ್ಲಿ ಎದುರಾಗುವ ಯಾವುದೇ ಅನಿರೀಕ್ಷಿತ ಸಂದರ್ಭಗಳನ್ನು ಮೀರಿ ಮುಂದೆ ಸಾಗಲು ಆಗುತ್ತದೆ. ಅಲ್ಲದೆ, ಮಾರುಕಟ್ಟೆಯಲ್ಲಿನ ರಿಸ್ಕ್‌ ಹಾಗೂ ಲಾಭದ ಸಾಧ್ಯತೆಯ ನಡುವೆ ಉತ್ತಮ ಸಮತೋಲನವೊಂದನ್ನು ಸಾಧಿಸಲು ಅನುಕೂಲ ಆಗುತ್ತದೆ.

ADVERTISEMENT

ಕಡಿಮೆ ರಿಸ್ಕ್‌ ಇರುವ ಹೂಡಿಕೆ ಉತ್ಪನ್ನಗಳಲ್ಲಿ ಹಣ ತೊಡಗಿಸುವುದರಿಂದ ಗಳಿಕೆ ಪ್ರಮಾಣ ಕೂಡ ಕಡಿಮೆ ಆಗುತ್ತದೆ. ಅದೇ ರೀತಿಯಲ್ಲಿ ಹೆಚ್ಚಿನ ರಿಸ್ಕ್‌ ಇರುವ ಹೂಡಿಕೆ ಉತ್ಪನ್ನಗಳಲ್ಲಿ ತೊಡಗಿಸುವುದರಿಂದ ಸಾಮಾನ್ಯ ಸಂದರ್ಭಗಳಲ್ಲಿ, ಸಿಗಬಹುದಾದ ಲಾಭವೂ ಜಾಸ್ತಿ ಇರುತ್ತದೆ.

ಅಲ್ಪಾವಧಿಯಲ್ಲಿ ಈಕ್ವಿಟಿ ಮೇಲಿನ ಹೂಡಿಕೆಗಳಲ್ಲಿ ಏರಿಳಿತಗಳು ವಿಪರೀತ ಆಗಿರಬಹುದು. ಆದರೆ ಅವು ಹೂಡಿಕೆದಾರರಿಗೆ ದೀರ್ಘಾವಧಿಯಲ್ಲಿ ಹೆಚ್ಚು ಲಾಭ ತಂದುಕೊಡುವ ಸಾಧ್ಯತೆಯನ್ನು ಹೊತ್ತಿರುತ್ತವೆ. ಇದಕ್ಕೆ ತದ್ವಿರುದ್ಧ ಎಂಬಂತೆ, ಸಾಲಪತ್ರ ಆಧಾರಿತ ಹೂಡಿಕೆಗಳು ತೊಡಗಿಸಿದ ಬಂಡವಾಳವನ್ನು ಕಾಪಾಡಿಕೊಳ್ಳುವ ಹಾಗೂ ನಿಶ್ಚಿತ ಪ್ರಮಾಣದಲ್ಲಿ ವರಮಾನ ತಂದುಕೊಡುವ ಗುರಿಯನ್ನು ಹೊಂದಿರುತ್ತವೆ. ಹೀಗಾಗಿ ಹೂಡಿಕೆದಾರರು ಹೂಡಿಕೆ ಮೊತ್ತವನ್ನು ರಿಸ್ಕ್‌ ತೆಗೆದುಕೊಳ್ಳುವ ತಮ್ಮ ಸಾಮರ್ಥ್ಯ ಹಾಗೂ ಲಾಭದ ನಿರೀಕ್ಷೆಗೆ ಅನುಗುಣವಾಗಿ ಭಿನ್ನ ಉತ್ಪನ್ನಗಳಲ್ಲಿ ವಿನಿಯೋಗಿಸಬೇಕು. 

ಒಂದೊಂದು ವರ್ಷದಲ್ಲಿ ಒಂದೊಂದು ಹೂಡಿಕೆಯು ಹೆಚ್ಚಿನ ಲಾಭವನ್ನು ತಂದುಕೊಟ್ಟಿದೆ ಎಂಬುದನ್ನು ಪಟ್ಟಿ–1 ಹೇಳುತ್ತಿದೆ. ಒಂದೇ ಕಡೆಯಲ್ಲಿ ಹೂಡಿಕೆ ಮಾಡುವುದರಿಂದ ಸಿಗಬಹುದಾದ ಲಾಭ ಕಡಿಮೆ ಆಗಬಹುದು ಎಂಬುದನ್ನೂ ಇದು ಹೇಳುತ್ತಿದೆ.

––

ತಮ್ಮ ಪೋರ್ಟ್‌ಫೋಲಿಯೊ ಈಚಿನ ದಿನಗಳಲ್ಲಿ ನೀಡಿದ ಲಾಭದ ವಿಚಾರವಾಗಿ ಹೂಡಿಕೆದಾರರು ಅತಿಯಾದ ವ್ಯಾಮೋಹ ಬೆಳೆಸಿಕೊಳ್ಳುವುದು ಅಸಹಜವೇನೂ ಅಲ್ಲ. ಹಿಂದಿನ ದಿನಗಳಲ್ಲಿ ಒಳ್ಳೆಯ ಅಥವಾ ಕೆಟ್ಟ ರೀತಿಯ ಪ್ರತಿಫಲ ನೀಡಿರುವ ತಮ್ಮ ಹೂಡಿಕೆಗಳ ಬಗ್ಗೆ ಭಾವನಾತ್ಮಕವಾದ ನಂಟನ್ನು ಬಹುತೇಕ ಹೂಡಿಕೆದಾರರು ಬೆಳೆಸಿಕೊಳ್ಳುವುದಿದೆ. ಪೋರ್ಟ್‌ಫೋಲಿಯೊದಲ್ಲಿನ ಪ್ರತಿ ಫಂಡ್‌ ಕೂಡ ಏರಿಳಿತಗಳ ಹಂತವನ್ನು ದಾಟಲೇಬೇಕು ಎಂಬುದನ್ನು ನಾವು ಮರೆಯುತ್ತೇವೆ. ಅಲ್ಲದೆ, ನಮ್ಮ ಪೋರ್ಟ್‌ಫೋಲಿಯೊದಲ್ಲಿ ಮತ್ತೆ ಮತ್ತೆ ಬದಲಾವಣೆ ಮಾಡಲು ಮುಂದಾಗುತ್ತೇವೆ. ಅದರಿಂದಾಗಿ ದೀರ್ಘಾವಧಿಯಲ್ಲಿ ಸಿಗಬಹುದಾದ ಲಾಭದ ಪ್ರಮಾಣ ತಗ್ಗಬಹುದು ಕೂಡ.

ಉದಾಹರಣೆಗೆ ಹೇಳುವುದಾದರೆ, ಬಂಡವಾಳ ಮಾರುಕಟ್ಟೆಗಳಲ್ಲಿ ಬೆಳವಣಿಗೆಯು ಹೆಚ್ಚಾಗಿ ಇರುವ ಅವಧಿಯಲ್ಲಿ ಮಿಡ್‌ಕ್ಯಾಪ್‌ ಹಾಗೂ ಸ್ಮಾಲ್‌ಕ್ಯಾಪ್‌ ಫಂಡ್‌ಗಳು ಬಹಳ ಅಸಾಧಾರಣ ಪ್ರಮಾಣದಲ್ಲಿ ಲಾಭ ತಂದುಕೊಡುತ್ತವೆ. ಆದರೆ ಮಾರುಕಟ್ಟೆಗಳಲ್ಲಿ ಅನಿಶ್ಚಿತತೆ ಇದ್ದಾಗ ಅಥವಾ ‘ಕರಡಿ ಕುಣಿತ’ ಜೋರಾಗಿ ಇದ್ದಾಗ ಲಾರ್ಜ್‌ಕ್ಯಾಪ್‌ ಫಂಡ್‌ಗಳಲ್ಲಿ ಹೂಡಿಕೆಯು ಹೆಚ್ಚು ಉತ್ತಮವಾಗಬಹುದು. ಹೀಗಾಗಿ, ಹೆಚ್ಚು ಸ್ಥಿರ ಪ್ರಮಾಣದಲ್ಲಿ ಮತ್ತು ಉತ್ತಮ ಮಟ್ಟದಲ್ಲಿ ಗಳಿಕೆ ಪಡೆಯಬೇಕು ಎಂದಾದರೆ ಎಲ್ಲ ವರ್ಗಗಳ (ಅಂದರೆ ಸ್ಮಾಲ್‌ಕ್ಯಾಪ್‌, ಮಿಡ್‌ಕ್ಯಾಪ್‌ ಮತ್ತು ಲಾರ್ಜ್‌ಕ್ಯಾಪ್‌) ಫಂಡ್‌ಗಳಲ್ಲಿ ಹಣ ತೊಡಗಿಸುವುದು ಮತ್ತು ಹೂಡಿಕೆಯನ್ನು ಮರುಹೊಂದಾಣಿಕೆ ಮಾಡುತ್ತ ಇರುವುದು ಮಹತ್ವದ ನಡೆಯಾಗುತ್ತದೆ.

ಭಿನ್ನ ಮಾರುಕಟ್ಟೆ ಬಂಡವಾಳಕ್ಕೆ ಸೇರಿದ ಫಂಡ್‌ಗಳು ಬೇರೆ ಬೇರೆ ಸಂದರ್ಭಗಳಲ್ಲಿ ಹೇಗೆ ಲಾಭ ತಂದುಕೊಟ್ಟಿವೆ ಎಂಬುದನ್ನು ಪಟ್ಟಿ–2 ವಿವರಿಸುತ್ತದೆ.

ವಾಸ್ತವಕ್ಕೆ ಹತ್ತಿರವಲ್ಲದ ನಿರೀಕ್ಷೆ

ಈಕ್ವಿಟಿ ಆಧಾರಿತ ಫಂಡ್‌ಗಳಲ್ಲಿ ಹೂಡಿಕೆ ಮಾಡಿದಾಗ, ಮಾರುಕಟ್ಟೆಯ ಗತಿ ಹೇಗೇ ಇದ್ದರೂ ತಾವು ಹೂಡಿಕೆ ಮಾಡಿದ ಫಂಡ್‌ ಮಾರುಕಟ್ಟೆಯ ಸೂಚ್ಯಂಕಗಳಿಗಿಂತ ಹೆಚ್ಚು ಲಾಭ ತಂದುಕೊಡುತ್ತದೆ ಎಂಬ ನಿರೀಕ್ಷೆಯಲ್ಲಿ ಹೂಡಿಕೆದಾರರು ಇರುತ್ತಾರೆ. ಆದರೆ ಭಿನ್ನ ಹೂಡಿಕೆ ಶೈಲಿಗಳು ಭಿನ್ನವಾದ ವೈಶಿಷ್ಟ್ಯಗಳನ್ನು ಹೊಂದಿರುತ್ತವೆ, ಆ ಶೈಲಿಯ ಹೂಡಿಕೆಗಳು ತಂದುಕೊಡುವ ಲಾಭದಲ್ಲಿಯೂ ಏರಿಳಿತಗಳು ಇರುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡು, ಭಿನ್ನ ಬಗೆಯ ಹೂಡಿಕೆ ಶೈಲಿಗಳಲ್ಲಿ ಸರಿಯಾಗಿ ಹಣ ಹಂಚಿಕೆ ಮಾಡಿದಾಗ ಮಾರುಕಟ್ಟೆಯ ಭಿನ್ನ ಹಂತಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಹೂಡಿಕೆೆದಾರರಿಗೆ ಸಾಧ್ಯವಾಗುತ್ತದೆ. ಪೋರ್ಟ್‌ಫೋಲಿಯೊದಲ್ಲಿನ ರಿಸ್ಕ್‌ಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ಹಾಗೂ ಒಟ್ಟಾರೆ ಗಳಿಕೆಯನ್ನು ಹೆಚ್ಚಿಸಿಕೊಳ್ಳಲು ಕೂಡ ಅವರಿಗೆ ಆಗುತ್ತದೆ. 

ಹೂಡಿಕೆಯಲ್ಲಿ ಎಲ್ಲರಿಗೂ ಸರಿಹೊಂದುವ ಸೂತ್ರವೊಂದು ಇಲ್ಲ. ಹೀಗಾಗಿ, ನಿರ್ದಿಷ್ಟ ಫಂಡ್‌ಗಳಿಗೆ ಹಣವನ್ನು ತೊಡಗಿಸುವ ಮೊದಲು ಹೂಡಿಕೆದಾರರು ಯೋಜನೆಯನ್ನು ಸರಿಯಾಗಿ ಸಿದ್ಧಪಡಿಸಿಕೊಳ್ಳಬೇಕು. ತಮ್ಮ ಪೋರ್ಟ್‌ಫೋಲಿಯೊದಲ್ಲಿ ಒಂದೇ ಅಂಶದ, ಒಂದೇ ಬಗೆಯ ಕಾರ್ಯತಂತ್ರದ ಫಂಡ್‌ಗಳು ಹೆಚ್ಚಿಲ್ಲ ಎಂಬುದನ್ನು ಹೂಡಿಕೆದಾರರು ಖಾತರಿಪಡಿಸಿಕೊಳ್ಳಬೇಕು. ಬೇರೆ ಬೇರೆ ಕಾರ್ಯತಂತ್ರವನ್ನು ಅನುಸರಿಸುವ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಪೋರ್ಟ್‌ಫೋಲಿಯೊ ಹೊಂದುವ ಮೂಲಕ ಹೂಡಿಕೆದಾರರು ಹೆಚ್ಚಿನ ಗಳಿಕೆ ಕಾಣಬಹುದು.

ಕೊನೆಯ ಮಾತು

ರಿಸ್ಕ್‌ ತೆಗೆದುಕೊಳ್ಳುವ ಸಾಮರ್ಥ್ಯ ಹಾಗೂ ಹಣಕಾಸಿನ ಗುರಿಗಳು ಸರಿಹೊಂದುವಂತೆ ಮಾಡಬೇಕಾದರೆ ಹೂಡಿಕೆದಾರರು ಸರಿಯಾದ ಮ್ಯೂಚುವಲ್‌ ಫಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ದೀರ್ಘಾವಧಿಗೆ ಹೂಡಿಕೆ ಮಾಡುವಾಗ ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿರಬೇಕು ಹಾಗೂ ಹೂಡಿಕೆಯಲ್ಲಿ ಮರುಹೊಂದಾಣಿಕೆಗಳ ಅಗತ್ಯವೂ ಇರುತ್ತದೆ.

ಲೇಖಕ ಯುಟಿಐ ಎಎಂಸಿ ಕಂಪನಿಯ ನಿಧಿ ನಿರ್ವಾಹಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.