
ಒಂದು ಸರಳವಾದ ಪ್ರಶ್ನೆಯೊಂದಿಗೆ ಈ ಬರಹವನ್ನು ಆರಂಭಿಸೋಣ. ‘ನನ್ನ ಈಗಿನ ಆದಾಯ ನಿಂತ ನಂತರದಲ್ಲಿ ನನ್ನ ಜೀವನಕ್ಕೆ ಹಣ ಯಾರು ಕೊಡುತ್ತಾರೆ?’
ನಮ್ಮ ಅಪ್ಪ–ಅಮ್ಮನ ತಲೆಮಾರಿನವರು, ಅವರ ಹಿಂದಿನ ತಲೆಮಾರಿನವರು ಪಿಂಚಣಿ ಸೌಲಭ್ಯದೊಂದಿಗೆ ನಿವೃತ್ತಿ ಹೊಂದಿದರು. ಆದರೆ ನಾವು ಪ್ರಜ್ಞಾಪೂರ್ವಕವಾಗಿ ಏನನ್ನು ಉಳಿತಾಯ ಮಾಡುತ್ತೇವೆಯೋ ಅಷ್ಟು ಮೊತ್ತದೊಂದಿಗೆ ನಿವೃತ್ತರಾಗುತ್ತೇವೆ. ಇಂದು ನಿವೃತ್ತಿಯ ನಂತರದ ಬದುಕಿಗಾಗಿ ಆಲೋಚಿಸುವುದು ಅಂದರೆ, ತೊಡಗಿಸಿದ ಬಂಡವಾಳವನ್ನು ಉಳಿಸಿಕೊಳ್ಳುವುದಷ್ಟೇ ಅಲ್ಲ. ಬಂಡವಾಳವು ಬೆಳೆಯುವಂತೆ ನೋಡಿಕೊಳ್ಳುವುದು, ಅದು ಹಣದುಬ್ಬರದ ಪ್ರಮಾಣಕ್ಕೆ ಅನುಗುಣವಾಗಿ ಹೆಚ್ಚಾಗುವ ಆದಾಯವನ್ನು ಎರಡು ಅಥವಾ ಮೂರು ದಶಕಗಳವರೆಗೆ ತಂದುಕೊಡುವಂತೆ ಮಾಡುವುದು ಕೂಡ ಸೇರಿದೆ.
ಸರಾಸರಿ ಜೀವಿತಾವಧಿ ಹೆಚ್ಚಳ, ಸಾಮಾಜಿಕ ಭದ್ರತಾ ಯೋಜನೆಗಳು ಬಹಳ ಕಡಿಮೆ ಇರುವುದು, ಆರೋಗ್ಯ ವೆಚ್ಚಗಳು ಹೆಚ್ಚುತ್ತಿರುವುದು... ಈ ಎಲ್ಲವುಗಳ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ತಮ್ಮ ನಿವೃತ್ತಿ ನಂತರದ ಬದುಕಿಗಾಗಿ ಆಲೋಚಿಸಬೇಕು.
ಮ್ಯೂಚುವಲ್ ಫಂಡ್‌ಗಳನ್ನು ಶಿಸ್ತಿನಿಂದ ಬಳಕೆ ಮಾಡಿಕೊಂಡರೆ, ಅವು ನಿವೃತ್ತಿ ನಿಧಿಯನ್ನು ಹೊಂದಲು ಹಾಗೂ ಪಿಂಚಣಿ ಮಾದರಿಯಲ್ಲಿ ಆದಾಯ ಸಿಗುವಂತೆ ಮಾಡಿಕೊಳ್ಳಲು ಉತ್ತಮ ಸಾಧನಗಳಾಗಿ ನೆರವಿಗೆ ಬರಬಲ್ಲವು.
ನಮ್ಮ ನಿವೃತ್ತಿಯ ನಂತರದ ಬದುಕಿಗೆ ನಾವೇ ಹಣ ಹೊಂದಿಸಿಕೊಳ್ಳಬೇಕು ಎಂಬುದು ಅರ್ಥವಾದಾಗ ಬಂಡವಾಳವನ್ನು ಒಗ್ಗೂಡಿಸಿಕೊಳ್ಳುವ ಕೆಲಸವೂ ಶುರುವಾಗುತ್ತದೆ. ಹೀಗೆ ಬಂಡವಾಳ ಒಟ್ಟುಮಾಡುವ ಪ್ರಕ್ರಿಯೆಯನ್ನು ಮೂರು ಹಂತಗಳಲ್ಲಿ ವಿಂಗಡಿಸಬಹುದು.
ಶಿಸ್ತು, ಸಮಯದ ಬಳಕೆ ಮೂಲಕ ಒಗ್ಗೂಡಿಸುವಿಕೆ
ಇದು ವ್ಯಕ್ತಿಯ ದುಡಿಯುವ ವರ್ಷಗಳನ್ನು ಆವರಿಸಿಕೊಂಡಿರುತ್ತದೆ (23 ವರ್ಷ ವಯಸ್ಸಿನಿಂದ 53ರವರೆಗೆ). ವ್ಯವಸ್ಥಿತ ಹೂಡಿಕೆಯ ಮೂಲಕ ಇದನ್ನು ಹೆಚ್ಚು ಚೆನ್ನಾಗಿ ಮಾಡಬಹುದು. ದೀರ್ಘಾವಧಿಯಲ್ಲಿ ಹೆಚ್ಚು ಸಂಪತ್ತನ್ನು ಸೃಷ್ಟಿಸಿಕೊಡುವ ಸಾಮರ್ಥ್ಯವಿರುವ ಕಾರಣದಿಂದಾಗಿ ಈಕ್ವಿಟಿ ಆಧಾರಿತ ಮ್ಯೂಚುವಲ್ ಫಂಡ್‌ಗಳು ಇದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ.
ವ್ಯವಸ್ಥಿತ ಹೂಡಿಕೆ ಯೋಜನೆಗಳು (ಎಸ್‌ಐಪಿ) ಹೂಡಿಕೆದಾರರಿಗೆ ಈಕ್ವಿಟಿ ಮಾರುಕಟ್ಟೆಯಲ್ಲಿ ಹಂತ ಹಂತವಾಗಿ ಪ್ರವೇಶಿಸಿ, ಅಲ್ಲಿನ ಏರಿಳಿತಗಳಲ್ಲಿ ಭಾಗಿಯಾಗುತ್ತ ಸಂಪತ್ತನ್ನು ಒಗ್ಗೂಡಿಸಲು ನೆರವಾಗುತ್ತವೆ. ಹಣಕಾಸಿನ ಶಿಸ್ತು ಮೈಗೂಡಿಸಿಕೊಳ್ಳಲು ಅವು ಸಹಾಯ ಮಾಡುತ್ತವೆ. ಮಲ್ಟಿ ಅಸೆಟ್, ಫ್ಲೆಕ್ಸಿ ಕ್ಯಾಪ್‌ಗಳಲ್ಲಿ ಹೂಡಿಕೆ, ಮಿಡ್‌ಕ್ಯಾಪ್, ಸ್ಮಾಲ್‌ಕ್ಯಾಪ್ ಮತ್ತು ವಿಷಯ (ಥೀಮ್) ಆಧಾರಿತ ಫಂಡ್‌ಗಳಲ್ಲಿ ಹೂಡಿಕೆ ಇದ್ದಾಗ ರಿಸ್ಕ್‌ನ ಪರಿಣಾಮಕಾರಿ ನಿರ್ವಹಣೆ ಹಾಗೂ ಆರ್ಥಿಕ ಬೆಳವಣಿಗೆಯಲ್ಲಿ ಪಾಲ್ಗೊಳ್ಳುವಿಕೆ ಸಾಧ್ಯವಾಗುತ್ತದೆ.
ಇಲ್ಲಿ ಬಹಳ ಮಹತ್ವದ ಅಂಶ ‘ಸಮಯ’. ಹೂಡಿಕೆಯನ್ನು ಬಹಳ ಬೇಗ ಆರಂಭಿಸಿದರೆ, ಅರ್ಥಪೂರ್ಣವಾದ ಮೊತ್ತವನ್ನು ಒಗ್ಗೂಡಿಸಲು ಅಗತ್ಯವಿರುವ ತಿಂಗಳ ಹೂಡಿಕೆ ಮೊತ್ತವು ಬಹಳ ಕಡಿಮೆ ಆಗುತ್ತದೆ. ಉದಾಹರಣೆಗೆ, 25 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನಿಗೆ ದೀರ್ಘಾವಧಿಗೆ ಹೂಡಿಕೆ ಮಾಡುವ ಸಾಮರ್ಥ್ಯವಿದ್ದರೆ, ಆತ ಹೆಚ್ಚಿನ ಪಾಲನ್ನು ಈಕ್ವಿಟಿಯಲ್ಲಿ ತೊಡಗಿಸಬಹುದು, ದೀರ್ಘಾವಧಿಯಲ್ಲಿ ಹಣವು ಹೆಚ್ಚು ವೃದ್ಧಿಯಾಗುವುದರ ಪ್ರಯೋಜನ ಪಡೆಯಬಹುದು. ನಿವೃತ್ತಿಯು ಹತ್ತಿರವಾದಂತೆಲ್ಲ, ಹೂಡಿಕೆಯ ಮೊತ್ತವನ್ನು ನಿಧಾನವಾಗಿ ಹೈಬ್ರಿಡ್ ಅಥವಾ ಸಾಲಪತ್ರ ಆಧಾರಿತ ಫಂಡ್‌ಗಳಿಗೆ ವರ್ಗಾವಣೆ ಮಾಡಬಹುದು. ಇದರಿಂದ ಅಲ್ಲಿಯವರೆಗೆ ಒಗ್ಗೂಡಿಸಿದ ಮೊತ್ತವನ್ನು ರಕ್ಷಿಸಿಕೊಳ್ಳಲು ಅನುಕೂಲ ಆಗುತ್ತದೆ.
ಆದಾಯದಲ್ಲಿ ಹೆಚ್ಚಳವಾದಂತೆಲ್ಲ ಹೂಡಿಕೆಯ ಮೊತ್ತವನ್ನು ಹೆಚ್ಚುಮಾಡುವುದು ಕೂಡ ಬಹಳ ಮುಖ್ಯ. ಎಸ್‌ಐಪಿ ಮೊತ್ತವನ್ನು ಪ್ರತಿವರ್ಷ ಹೆಚ್ಚಿಸುವುದರಿಂದ ಆದಾಯದಲ್ಲಿನ ಹೆಚ್ಚಳ ಹಾಗೂ ಜೀವನ ಶೈಲಿಯಲ್ಲಿನ ಬದಲಾವಣೆಗೆ ಅನುಗುಣವಾಗಿ ಉಳಿತಾಯವೂ ಹೆಚ್ಚಾಗುತ್ತದೆ. ಹೂಡಿಕೆಯನ್ನು ಬೇಗನೆ ಶುರು ಮಾಡುವುದು, ಈಕ್ವಿಟಿಯಲ್ಲಿ ಹಣ ತೊಡಗಿಸುವುದು ಮತ್ತು ಹೂಡಿಕೆ ಮೊತ್ತವನ್ನು ಶಿಸ್ತುಬದ್ಧವಾಗಿ ಹೆಚ್ಚಿಸುವುದು ಉತ್ತಮ ನಿವೃತ್ತಿ ನಿಧಿ ಹೊಂದಲು ಬಲಿಷ್ಠವಾದ ಅಡಿಪಾಯದಂತೆ ಕೆಲಸ ಮಾಡುತ್ತವೆ.
ಬಂಡವಾಳದ ಬೆಳವಣಿಗೆಯಿಂದ ಸಂಪತ್ತಿನ ಸ್ಥಿರತೆಯೆಡೆಗೆ...
ನಿವೃತ್ತಿಗೆ ತುಸು ಮೊದಲಿನ ವರ್ಷಗಳಲ್ಲಿ ಕಾರ್ಯತಂತ್ರದಲ್ಲಿ ಒಂದಿಷ್ಟು ಬದಲಾವಣೆ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಗಮನವು ಹೂಡಿಕೆಯ ಮೇಲಿನ ಗಳಿಕೆಯನ್ನು ಹೆಚ್ಚಿಸಿಕೊಳ್ಳುವುದಕ್ಕಿಂತಲೂ ತೊಡಗಿಸಿದ ಬಂಡವಾಳವನ್ನು ಸರಿಯಾಗಿ ಕಾಪಾಡಿಕೊಳ್ಳುವುದರತ್ತ, ಹೂಡಿಕೆಯ ಮೊತ್ತವು ಬೇಕೆಂದಾಗಲೆಲ್ಲ ನಗದಾಗಿ ಲಭ್ಯವಿರುವಂತೆ ನೋಡಿಕೊಳ್ಳುವುದರತ್ತ ಇರಬೇಕಾಗುತ್ತದೆ. ಹಣದುಬ್ಬರ ಪ್ರಮಾಣಕ್ಕಿಂತ ಹೆಚ್ಚಿನ ಮಟ್ಟದ ಗಳಿಕೆಗೆ ಈಕ್ವಿಟಿ ಹೇಳಿ ಮಾಡಿಸಿದ ಹೂಡಿಕೆ. ಹೀಗಾಗಿ ಈ ಹಂತದಲ್ಲಿಯೂ ಈಕ್ವಿಟಿ ಹೂಡಿಕೆಗಳಿಂದ ಪೂರ್ತಿಯಾಗಿ ಹಿಂದೆ ಸರಿಯಬಾರದು. ಅದರ ಬದಲಿಗೆ, ವ್ಯವಸ್ಥಿತ ಹಿಂತೆಗೆತ ಯೋಜನೆಯ (ಎಸ್‌ಡಬ್ಲ್ಯುಪಿ) ಮಾದರಿಯ ಮೊರೆ ಹೋಗಬೇಕು. ನಿವೃತ್ತಿಯ ನಂತರದಲ್ಲಿಯೂ ಹಣದುಬ್ಬರವು ಕೊಳ್ಳುವ ಶಕ್ತಿಯನ್ನು ಕುಗ್ಗಿಸುತ್ತಿರುತ್ತದೆ ಎಂಬುದು ನೆನಪಿನಲ್ಲಿರಲಿ.
ಈ ಹಂತದಲ್ಲಿ ಹೈಬ್ರಿಡ್ ಫಂಡ್‌ಗಳು, ಸುರಕ್ಷತೆಗೆ ಆದ್ಯತೆ ನೀಡುವ ಫಂಡ್‌ಗಳು ಮತ್ತು ಉತ್ತಮ ಗುಣಮಟ್ಟದ ಸಾಲಪತ್ರ ಆಧಾರಿತ ಫಂಡ್‌ಗಳು ನೆರವಿಗೆ ಬರುತ್ತವೆ. ಪೋರ್ಟ್‌ಫೋಲಿಯೊ ಸಮತೋಲನದಿಂದ ಕೂಡಿದೆಯೇ ಎಂಬುದನ್ನು ಈ ಹಂತದಲ್ಲಿ ಕಾಲಕಾಲಕ್ಕೆ ಪರಿಶೀಲಿಸುವುದರಿಂದ ಮಾರುಕಟ್ಟೆಯ ಅಸ್ಥಿರತೆಯು ಪೋರ್ಟ್‌ಫೋಲಿಯೊ ಮೇಲೆ ವಿಪರೀತ ಪರಿಣಾಮ ಬೀರದಂತೆ ನೋಡಿಕೊಳ್ಳಬಹುದು. ಈ ಹಂತದಲ್ಲಿ, ಒಗ್ಗೂಡಿಸಿದ ಹಣವನ್ನು ಎರಡು ಭಾಗವನ್ನಾಗಿ ವಿಂಗಡಿಸಬೇಕು.
ಒಂದು ಭಾಗವನ್ನು ಅಲ್ಪಾವಧಿಯ ಸಾಲಪತ್ರ ಆಧಾರಿತ ಫಂಡ್ ಹಾಗೂ ಲಿಕ್ವಿಡ್ ಫಂಡ್‌ಗಳಲ್ಲಿ ತೊಡಗಿಸಬೇಕು. ಇದನ್ನು ಮುಂದಿನ ಒಂದೆರಡು ವರ್ಷಗಳ ಖರ್ಚಿಗೆ ಮೀಸಲಾಗಿ ಇರಿಸಿಕೊಳ್ಳಬಹುದು. ಇನ್ನೊಂದು ಭಾಗವನ್ನು ಈಕ್ವಿಟಿಗಳಲ್ಲಿ ಅಥವಾ ಈಕ್ವಿಟಿ ಆಧಾರಿತ ಫಂಡ್‌ಗಳಲ್ಲಿ ತುಸು ದೀರ್ಘಾವಧಿಗೆ ತೊಡಗಿಸಬೇಕು. ಹೀಗೆ ಮಾಡಿದಾಗ, ನಿವೃತ್ತರು ಮಾರುಕಟ್ಟೆ ಕುಸಿದ ಹೊತ್ತಿನಲ್ಲಿ ಷೇರುಗಳನ್ನು ಅಥವಾ ಈಕ್ವಿಟಿ ಆಧಾರಿತ ಮ್ಯೂಚುವಲ್ ಫಂಡ್ ಹೂಡಿಕೆಗಳನ್ನು ಮಾರಾಟ ಮಾಡಬೇಕಾದ ಪ್ರಮೇಯ ಎದುರಾಗುವುದಿಲ್ಲ.
ಪಿಂಚಣಿ ಮಾದರಿಯಲ್ಲಿ ಆದಾಯ ಸೃಷ್ಟಿ
ನಿವೃತ್ತಿ ಜೀವನ ಆರಂಭವಾದ ನಂತರದಲ್ಲಿ, ಅಲ್ಲಿಯವರೆಗೆ ಒಗ್ಗೂಡಿಸಿದ ಮೊತ್ತವನ್ನು ನಿರಂತರವಾದ ಆದಾಯದ ಸೃಷ್ಟಿಗೆ ಬಳಸಿಕೊಳ್ಳಬಹುದು. ಇದಕ್ಕೆ ಎಸ್‌ಡಬ್ಲ್ಯುಪಿ ಮೊರೆ ಹೋಗುವುದು ಉತ್ತಮ. ಎಸ್‌ಡಬ್ಲ್ಯುಪಿ ಮೂಲಕ ಹೂಡಿಕೆದಾರರು ನಿಗದಿತ ಅವಧಿಗೆ ನಿಶ್ಚಿತ ಮೊತ್ತವನ್ನು ಹಿಂದಕ್ಕೆ ಪಡೆಯಬಹುದು, ಇನ್ನುಳಿದ ಮೊತ್ತವು ಹೂಡಿಕೆಯಲ್ಲಿ ಮುಂದುವರಿಯುತ್ತದೆ.
ಎಸ್‌ಡಬ್ಲ್ಯುಪಿ ವಿಧಾನವು ಸಾಂಪ್ರದಾಯಿಕ ಪಿಂಚಣಿಗಳಿಗಿಂತ ಹೆಚ್ಚಿನ ಆಯ್ಕೆಗಳನ್ನು ನೀಡುತ್ತದೆ. ಹಿಂಪಡೆಯುವ ಮೊತ್ತವನ್ನು ವ್ಯಕ್ತಿಯ ಅಗತ್ಯಗಳಿಗೆ ಅನುಗುಣವಾಗಿ ಹೊಂದಿಸಿಕೊಳ್ಳಬಹುದು. ಕಾಲಕಾಲಕ್ಕೆ ಮೊತ್ತವನ್ನು ಬದಲಾಯಿಸಿಕೊಳ್ಳಬಹುದು. ಇದಕ್ಕಿಂತ ಮುಖ್ಯವಾಗಿ, ಬಂಡವಾಳವು ಹೂಡಿಕೆ ಉತ್ಪನ್ನಗಳಲ್ಲಿ ವಿನಯೋಗ ಆಗಿರುತ್ತದೆ, ಅದು ಇನ್ನಷ್ಟು ದೊಡ್ಡ ಮೊತ್ತವಾಗಿ ಬೆಳೆಯುವ ಅವಕಾಶ ಇದ್ದೇ ಇರುತ್ತದೆ.
ಸುವ್ಯವಸ್ಥಿತವಾದ ಎಸ್‌ಡಬ್ಲ್ಯುಪಿ ವಿಧಾನವು ಸ್ಥಿರತೆಗಾಗಿ ಸಾಲಪತ್ರ ಆಧಾರಿತ ಫಂಡ್‌ಗಳು ಹಾಗೂ ಹೈಬ್ರಿಡ್ ಫಂಡ್‌ಗಳಿಂದ ಹಣ ಹಿಂಪಡೆಯುತ್ತಿರುತ್ತದೆ. ಈಕ್ವಿಟಿಗಳಲ್ಲಿ ತೊಡಗಿಸಿದ ಮೊತ್ತವು ಮೂಲ ಬಂಡವಾಳವು ಹೆಚ್ಚುತ್ತಿರುವಂತೆ ನೋಡಿಕೊಳ್ಳುತ್ತದೆ. ಇಲ್ಲಿ ಮುಖ್ಯವಾದ ಅಂಶ, ಹಣವನ್ನು ಹಿಂದಕ್ಕೆ ಪಡೆಯುವ ಪ್ರಮಾಣವು ಹಣದ ಬೆಳವಣಿಗೆ ಪ್ರಮಾಣಕ್ಕಿಂತ ಕಡಿಮೆ ಇರುವಂತೆ ನೋಡಿಕೊಳ್ಳುವುದು. ವೈವಿಧ್ಯಮವಾದ ಪೋರ್ಟ್‌ಫೋಲಿಯೊದಿಂದ ವಾರ್ಷಿಕ ಶೇ 3 ಅಥವಾ ಶೇ 4ರಷ್ಟು ಮೊತ್ತವನ್ನು ಹಿಂಪಡೆಯುವುದು ಸೂಕ್ತವಾಗುತ್ತದೆ. ಹಾಗೆ ಮಾಡಿದಾಗ ನಿವೃತ್ತಿಯ ಜೀವನದುದ್ದಕ್ಕೂ ಮೂಲ ಬಂಡವಾಳವು ಉಳಿದುಕೊಳ್ಳುತ್ತದೆ.
ಲೇಖಕಿ ದಿ ವೆಲ್ತ್ ಕಂಪನಿ ಮ್ಯೂಚುವ್‌ಲ್ ಫಂಡ್‌ನ ಈಕ್ವಿಟಿ ವಿಭಾಗದ ಮುಖ್ಯ ಹೂಡಿಕೆ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.