
-ಸಿ. ಕೆ. ಸತೀಶ್, ಮೈಸೂರು
ನಾನು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದು, ಭೋಗ್ಯಕ್ಕೆ ಮನೆ ಪಡೆದು ವಾಸವಾಗಿದ್ದೇನೆ. ನನಗೆ ಸ್ವಂತ ಮನೆ, ನಿವೇಶನ ಇಲ್ಲ. ನನ್ನ ವಯಸ್ಸು 54 ವರ್ಷ. ನನ್ನ ವೇತನ ಸುಮಾರು ₹93,000 ಆಗಿದ್ದು, ಇದರಲ್ಲಿ ವಿಮೆ, ಪಿ.ಎಫ್ ಹಾಗೂ ಇತರ ಎಲ್ಲ ಕಡಿತಗಳ ನಂತರ ನಿವ್ವಳ ವೇತನ ನನಗೆ ಲಭ್ಯವಾಗುತ್ತಿದೆ. ನಾನು ಸುಮಾರು ₹16 ಲಕ್ಷ ವೈಯಕ್ತಿಕ ಸಾಲ ಪಡೆದಿದ್ದು, ಇದರ ಬಾಕಿ ಮೊತ್ತ ₹12.54 ಲಕ್ಷ. ಈ ಸಾಲದ ತಿಂಗಳ ಕಂತು ₹26,500. ನನಗೆ ಕರ್ನಾಟಕ ಸರ್ಕಾರದ ವಿಮಾ ವಿಭಾಗದಿಂದ ಸುಮಾರು ₹7–8 ಲಕ್ಷ ಬರಲಿದೆ. ಇದಲ್ಲದೆ, ನನ್ನ ಬಳಿ ಯಾವುದೇ ಉಳಿತಾಯವಿಲ್ಲ. ನಾನು ಜುಲೈ 2031 ರಲ್ಲಿ ನಿವೃತ್ತನಾಗಲಿದ್ದೇನೆ. ನನ್ನ ಪ್ರಶ್ನೆ ಏನೆಂದರೆ, ನಾನು ಎಷ್ಟು ಮೌಲ್ಯದ ಮನೆ ಕೊಳ್ಳಬಹುದು? ಮುಂದಿನ ಜೀವನಕ್ಕೆ ಯಾವ ರೀತಿಯ ಹಣಕಾಸು ವ್ಯವಸ್ಥೆ ಮಾಡಿಕೊಳ್ಳಬೇಕು?
ಉತ್ತರ: ನೀವು ಮೊದಲ ಆದ್ಯತೆಯಾಗಿ ವೈಯಕ್ತಿಕ ಸಾಲ ಕಡಿಮೆ ಮಾಡುವುದು ಅಥವಾ ಅದನ್ನು ಸಂಪೂರ್ಣವಾಗಿ ಮರುಪಾವತಿ ಮಾಡುವುದು ಅತ್ಯಂತ ಸಮಂಜಸ ಕ್ರಮ. ವೈಯಕ್ತಿಕ ಸಾಲಗಳಿಗೆ ಸಾಮಾನ್ಯವಾಗಿ ಹೆಚ್ಚಿನ ಬಡ್ಡಿದರ ಅನ್ವಯವಾಗುತ್ತದೆ. ನೀವು ಕರ್ನಾಟಕ ಸರ್ಕಾರದ ವಿಮಾ ವಿಭಾಗದಿಂದ ಬರಲಿರುವ ₹7–8 ಲಕ್ಷ ಮೊತ್ತವನ್ನು ಅಗತ್ಯ ತುರ್ತು ಅವಶ್ಯಕತೆಗಳಿಲ್ಲದಿದ್ದಲ್ಲಿ ಸಾಲವನ್ನು ಭಾಗಶಃ ಅಥವಾ ಸಂಪೂರ್ಣವಾಗಿ ತೀರಿಸಲು ಬಳಸಿದರೆ, ಬಡ್ಡಿ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಇದರಿಂದ ನಿಮ್ಮ ತಿಂಗಳ ಇಎಂಐ ಕಂತಿನ ಒತ್ತಡ ಕಡಿಮೆಯಾಗುತ್ತದೆ, ನಿವ್ವಳ ಆದಾಯದಲ್ಲಿ ಹೆಚ್ಚುವರಿ ಉಳಿತಾಯಕ್ಕೆ ಅವಕಾಶ ಸಿಗುತ್ತದೆ. ಸಾಲದ ಹೊರೆ ಕಡಿಮೆಯಾದ ನಂತರ ಗೃಹ ಖರೀದಿ ಕುರಿತು ಯೋಚಿಸುವುದು ಹೆಚ್ಚು ಸುರಕ್ಷಿತ ಹಾಗೂ ಸಮತೋಲನದ ನಿರ್ಧಾರ.
ಮುಂದಿನ ಹಂತವಾಗಿ, ತಿಂಗಳ ಆದಾಯದ ಕನಿಷ್ಠ ಶೇ 30ರಿಂದ ಶೇ 40ರವರೆಗೆ ಉಳಿತಾಯ ಮಾಡುವುದನ್ನು ಗುರಿಯಾಗಿಸಿ. ನಿಮ್ಮ ನಿವೃತ್ತಿಗೆ ಇನ್ನೂ ಸುಮಾರು ಆರು ವರ್ಷ ಇರುವುದರಿಂದ ಈ ಅವಧಿಯಲ್ಲಿ ಆರ್ಥಿಕ ವಿಚಾರದಲ್ಲಿ ಶಿಸ್ತು ಹಾಗೂ ಸೂಕ್ತ ಹೂಡಿಕೆಗಳ ಮೂಲಕ ಉತ್ತಮ ಮೊತ್ತ ಸಂಗ್ರಹಿಸಬಹುದು. ಉದಾಹರಣೆಗೆ, ತಿಂಗಳಿಗೆ ಸರಾಸರಿ ₹30,000 ಅಥವಾ ₹40,000 ಉಳಿತಾಯ ಮಾಡಿದರೆ, ಸರಳ ಹಾಗೂ ಸುರಕ್ಷಿತ ಹೂಡಿಕೆ ಮಾರ್ಗಗಳ ಮೂಲಕವೇ ನಿವೃತ್ತಿ ಸಮಯಕ್ಕೆ ₹22–30 ಲಕ್ಷದವರೆಗೆ ಒಗ್ಗೂಡಿಸಬಹುದು. ಇದರ ಮೇಲಿನ ಬಡ್ಡಿಯ ಲಾಭವೂ ಸಿಗುತ್ತದೆ. ಕುಟುಂಬದ ಜವಾಬ್ದಾರಿಗಳನ್ನು ಪರಿಗಣಿಸಿ, ಕೆಲವು ತಿಂಗಳಲ್ಲಿ ಇನ್ನೂ ಹೆಚ್ಚಿನ ಉಳಿತಾಯ ಸಾಧ್ಯವಾದರೆ ಅದನ್ನು ಹೂಡಿಕೆ ಮಾಡಬಹುದು.
ಹಣಕಾಸಿನ ವಿಚಾರವಾಗಿ ಸಂಪೂರ್ಣ ಸ್ಥಿರತೆ ಸಾಧಿಸಿದ ನಂತರ ಮನೆಯ ಖರೀದಿಯ ನಿರ್ಧಾರ ಕೈಗೊಳ್ಳುವುದು ಒಳಿತು. ನಿವೃತ್ತಿ ನಂತರದ ನಿಯಮಿತ ಆದಾಯ, ಪಿಂಚಣಿ, ಪಿ.ಎಫ್, ವಿಮಾ ಮೊತ್ತ ಹಾಗೂ ಸಂಗ್ರಹಿತ ಉಳಿತಾಯ— ಇವುಗಳನ್ನು ಒಟ್ಟಾಗಿ ಪರಿಗಣಿಸಿ ಮನೆ ಮೌಲ್ಯವನ್ನು ನಿರ್ಧರಿಸಬೇಕು. ಬ್ಯಾಂಕ್ ಸಾಲದ ಅಗತ್ಯ ಬಿದ್ದರೆ, ಆ ಸಂದರ್ಭದಲ್ಲಿ ನಿಮ್ಮ ಕುಟುಂಬದ ಸದಸ್ಯರನ್ನು ಆಧಾರಕ್ಕೆ ಪರಿಗಣಿಸಬೇಕಾಗಬಹುದು. ಅತಿಯಾಗಿ ಸಾಲ ಅವಲಂಬಿಸದೆ, ಅಗತ್ಯವಿದ್ದರೆ ಚಿಕ್ಕ ಮನೆ ಅಥವಾ ಕಡಿಮೆ ಮೌಲ್ಯದ ಆಸ್ತಿ ಆಯ್ಕೆ ಮಾಡುವುದು ದೀರ್ಘಕಾಲಿಕವಾಗಿ ನಿಮ್ಮ ನಿವೃತ್ತ ಬದುಕನ್ನು ನೆಮ್ಮದಿಯಿಂದ ಇರಿಸಲು ನೆರವಾಗುತ್ತದೆ. ಜೊತೆಗೆ ತುರ್ತು ನಿಧಿ, ಆರೋಗ್ಯ ವಿಮೆ ಸಮರ್ಪಕವಾಗಿರುವುದನ್ನು ಖಚಿತಪಡಿಸಿಕೊಳ್ಳಿ. ನಿವೃತ್ತಿ ನಂತರದ ವೆಚ್ಚಗಳಿಗಾಗಿ ಸ್ಪಷ್ಟ ಯೋಜನೆ ರೂಪಿಸಿ.
****
-ಶಂಕರ್ ಎಸ್., ಕಾರವಾರ
ನನ್ನ ಮಗ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಆತನ ಸೇವಾ ಅವಧಿ ಸುಮಾರು ಐದು ವರ್ಷ ಆಗಿದ್ದು ಕಂಪನಿಯ ಆಡಳಿತ ವರ್ಗ ಆತನ ಸೇವೆಗೆ ಸಂಬಂಧಿಸಿ ಪ್ರೋತ್ಸಾಹಪೂರ್ವಕವಾಗಿ ಕಂಪನಿಯ ಕೆಲವು ಷೇರುಗಳನ್ನು ನೀಡುವುದಾಗಿ ತಿಳಿಸಿದೆ. ಇದರ ಮೌಲ್ಯ ಸುಮಾರು ₹10 ಲಕ್ಷ ಎಂದು ಕಂಪನಿಯವರು ಅಂದಾಜಿಸಿದ್ದಾರೆ. ಈ ಕಂಪನಿ ಯಾವುದೇ ಷೇರು ಮಾರುಕಟ್ಟೆಯಲ್ಲಿ ನೋಂದಾಯಿತ ಆಗದಿರುವುದರಿಂದ ಇದರ ಮೌಲ್ಯದಲ್ಲಿ ಏರಿಳಿತ ಆಗುವುದಿಲ್ಲವೇ? ಹಾಗೂ ಈ ಮೌಲ್ಯ ಮುಂದೆಯೂ ಇರುವುದೇ? ಅನಿವಾರ್ಯವಾದರೆ ಈ ಷೇರುಗಳನ್ನು ಇತರರಿಗೆ ಮಾರಾಟ ಮಾಡಿ ಹಣ ನಗದೀಕರಿಸುವ ಅವಕಾಶ ಇದೆಯೇ?
ಉತ್ತರ: ನಿಮ್ಮ ಪ್ರಶ್ನೆ ಬಹಳ ಸಹಜವಾದದ್ದು. ಷೇರುಪೇಟೆಯಲ್ಲಿ ನೋಂದಾಯಿತವಾಗದ ಕಂಪನಿಯ ಷೇರುಗಳ ಬೆಲೆ ಪ್ರತಿದಿನ ಏರಿಳಿತ ಕಾಣುವುದಿಲ್ಲ. ಆದರೆ ಇದರ ಅರ್ಥ ಷೇರು ಮೌಲ್ಯ ಬದಲಾಗು
ವುದಿಲ್ಲ ಎಂದಲ್ಲ. ಇಂತಹ ಷೇರುಗಳ ಮೌಲ್ಯವು ಕಂಪನಿಯ ಲಾಭ, ವ್ಯವಹಾರ ವೃದ್ಧಿ ಹಾಗೂ ಭವಿಷ್ಯದ ಹಣಕಾಸು ಸ್ಥಿತಿಗತಿಯ ಸಾಧ್ಯತೆಗಳ ಆಧಾರದ ಮೇಲೆ ಕಾಲಕ್ರಮೇಣ ಏರಿಕೆ ಅಥವಾ ಇಳಿಕೆ ಆಗಬಹುದು. ಕಂಪನಿಯವರು ಹೇಳಿರುವ ₹10 ಲಕ್ಷ ಮೌಲ್ಯವು ಅಂದಾಜು ಮಾತ್ರವಾಗಿದ್ದು, ಮುಂದಿನ ದಿನಗಳಲ್ಲಿ ಅದು ಮೇಲಿನ ಅಂಶಗಳನ್ನು ಪರಿಗಣಿಸಿ ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು.
ಷೇರುಪೇಟೆಯಲ್ಲಿ ನೋಂದಾಯಿತ ಆಗದ ಕಂಪನಿ ಷೇರುಗಳನ್ನು ಸಾಮಾನ್ಯವಾಗಿ ತಕ್ಷಣ ನಗದೀಕರಿಸಲು ಸಾಧ್ಯವಿಲ್ಲ. ಇವುಗಳಿಗೆ ಷೇರುಪೇಟೆ ಮೂಲಕ ತೆರೆದ ಮಾರುಕಟ್ಟೆ ಇಲ್ಲದ ಕಾರಣ, ಇಂತಹ ಷೇರುಗಳನ್ನು ಮಾರಾಟ ಮಾಡಲು ಕಂಪನಿಯ ಅನುಮತಿ, ಬೈ–ಬ್ಯಾಕ್ ಯೋಜನೆ ಅಥವಾ ಇತರ ಹೂಡಿಕೆದಾರರನ್ನು ಅರಸಬೇಕಾಗುತ್ತದೆ. ಮಾನ್ಯತೆ ಪಡೆದ ಕೆಲವು ಬ್ರೋಕರ್‌ಗಳು ಇಂತಹ ಕಂಪನಿಗಳ ಷೇರುಗಳನ್ನು ಮಾರುವ ಹಾಗೂ ಕೊಳ್ಳುವ ಗಿರಾಕಿಗಳನ್ನು ಹೊಂದಿಸಿಕೊಡುವ ವ್ಯವಹಾರ ಮಾಡುತ್ತಾರೆ. ಭವಿಷ್ಯದಲ್ಲಿ ಐಪಿಒ ಮೂಲಕ ಇಂತಹ ಷೇರುಗಳು ಷೇರುಪೇಟೆ ಪ್ರವೇಶಿಸಿದರೆ, ಈ ಷೇರುಗಳು ಹೆಚ್ಚಿನ ಮೌಲ್ಯ ಪಡೆಯುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಇಂತಹ ಷೇರುಗಳನ್ನು ದೀರ್ಘಕಾಲದ ಹೂಡಿಕೆಯಾಗಿ ಪರಿಗಣಿಸುವುದು ಸೂಕ್ತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.