ADVERTISEMENT

Share Market | ಷೇರುಗಳ ಸೂಚ್ಯಂಕಗಳಲ್ಲಿ ಹೂಡಿಕೆ: ತಿಳಿದಿರಲಿ ಇದರ ಪ್ರಯೋಜನ

ಚಿಂತನ್ ಹಾರಿಯಾ
Published 25 ಡಿಸೆಂಬರ್ 2025, 2:53 IST
Last Updated 25 ಡಿಸೆಂಬರ್ 2025, 2:53 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಐಸ್ಟಾಕ್ ಚಿತ್ರ

ಕೋವಿಡ್‌ ನಂತರದ ದಿನಗಳಲ್ಲಿ ದೇಶದ ಷೇರುಪೇಟೆಗಳು ದೊಡ್ಡ ಮಟ್ಟದಲ್ಲಿ ಏರಿಕೆ ಕಂಡವು. ಆ ಹೊತ್ತಿನಲ್ಲಿ ಹಲವಾರು ಮಂದಿ ಸಣ್ಣ ಹೂಡಿಕೆದಾರರು ಮಾರುಕಟ್ಟೆಯನ್ನುಪ್ರವೇಶಿಸಿದರು, ದೇಶದಲ್ಲಿ ಡಿಮ್ಯಾಟ್ ಖಾತೆಗಳ ಸಂಖ್ಯೆಯು ಆಗ ಸರಿಸುಮಾರು ಐದುಪಟ್ಟು ಹೆಚ್ಚಳ ಕಂಡಿತು. 2020ಲ್ಲಿ 40 ಲಕ್ಷದಷ್ಟಿದ್ದ ಡಿಮ್ಯಾಟ್ ಖಾತೆಗಳ ಸಂಖ್ಯೆಯು 2025ರ ಮಧ್ಯಭಾಗದಲ್ಲಿ ಸರಿಸುಮಾರು 2 ಕೋಟಿಗೆ ಹೆಚ್ಚಳ ಕಂಡಿದೆ.

ADVERTISEMENT

ನಿರ್ದಿಷ್ಟವಾದ ಕಂಪನಿಯ ಷೇರುಗಳಲ್ಲಿ ನೇರವಾಗಿ ಹಣ ತೊಡಗಿಸಿ, ಷೇರುಪೇಟೆಯು ನೀಡುವ ಸರಾಸರಿ ಲಾಭಕ್ಕಿಂತ ಹೆಚ್ಚಿನ ಲಾಭ ಪಡೆಯಲು ಹಲವು ಹೂಡಿಕೆದಾರರು ಬಯಸುತ್ತಾರೆ. ಅವರ ಬಯಕೆ, ಮನಃಸ್ಥಿತಿ ಹಿಂದೆಯೂ ಹೀಗೇ ಇತ್ತು, ಈಗಲೂ ಹೀಗೇ ಇದೆ. ಆದರೆ, ಆಯ್ದ ಕಂಪನಿಯ ಷೇರುಗಳಲ್ಲಿ ನೇರವಾಗಿ ಹಣ ತೊಡಗಿಸಿ ದೀರ್ಘಾವಧಿಯಲ್ಲಿ ಹೆಚ್ಚಿನ ಮಟ್ಟದ ಲಾಭ ಪಡೆದುಕೊಳ್ಳುವುದು ಹೊಸ ಹೂಡಿಕೆದಾರರಿಗೂ ಪರಿಣತ ಸಣ್ಣ ಹೂಡಿಕೆದಾರರಿಗೂ ಸವಾಲಿನ ಸಂಗತಿ.

ಇಂಡೆಕ್ಸ್‌ ಫಂಡ್‌ಗಳು ಹೂಡಿಕೆದಾರರ ನೆರವಿಗೆ ಬರುವುದು ಇಂತಹ ಹಂತದಲ್ಲಿ. ಆಯ್ದ ಕಂಪನಿಗಳ ಷೇರುಗಳನ್ನು ನೇರವಾಗಿ ಖರೀದಿಸಿ, ಹೂಡಿಕೆ ಮಾಡಿದ ಮೊತ್ತ ಕರಗುವ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವ ಬದಲು ಸಂಪತ್ತಿನ ಸೃಷ್ಟಿಗಾಗಿ ಇಂಡೆಕ್ಸ್ ಫಂಡ್‌ನಲ್ಲಿ ಹೂಡಿಕೆ ಮಾಡಬಹುದು. ಸರಳವಾದ ವೈಶಿಷ್ಟ್ಯಗಳು, ಬಹುವಿಧದ ಫಂಡ್‌ಗಳ ಲಭ್ಯತೆ, ಖರೀದಿ ಮತ್ತು ಮಾರಾಟ ಸುಲಭವಾಗಿರುವುದು, ವೆಚ್ಚ ಕಡಿಮೆ ಇರುವುದು, ವೈವಿಧ್ಯವ‌ನ್ನು ಸಾಧಿಸುವ ಮೂಲಕ ಅಪಾಯದ ಸಾಧ್ಯತೆಯನ್ನು ಕಡಿಮೆ ಮಾಡುವುದು, ಸೂಚ್ಯಂಕ ನೀಡುವ ಲಾಭದ ಪ್ರಮಾಣಕ್ಕೆ ಅನುಗುಣವಾಗಿ ತಾವೂ ಲಾಭ ನೀಡುವುದು ಇಂಡೆಕ್ಸ್‌ ಫಂಡ್‌ಗಳ ಪ್ರಯೋಜನಗಳು.

ಇಂತಹ ಹೂಡಿಕೆಯು ಹೆಚ್ಚೆಚ್ಚು ಜನಪ್ರಿಯವಾಗುತ್ತಿದೆ ಎಂಬುದನ್ನು ಅಂಕಿ–ಅಂಶಗಳು ಹೇಳುತ್ತಿವೆ. 2021ರ ಅಕ್ಟೋಬರ್‌ ಮಟ್ಟಕ್ಕೆ ಹೋಲಿಕೆ ಮಾಡಿದರೆ ಪ್ಯಾಸಿವ್‌ ಫಂಡ್‌ಗಳ ಅಡಿಯಲ್ಲಿ ನಿರ್ವಹಣೆಯಲ್ಲಿರುವ ಹೂಡಿಕೆಗಳ ಮೊತ್ತವು 3.3 ಪಟ್ಟು ಹೆಚ್ಚಾಗಿದೆ. ಈಗ ಈ ಮೊತ್ತವು (2025ರ ಅಕ್ಟೋಬರ್‌ ವೇಳೆಯ ಅಂಕಿ–ಅಂಶ) ₹13.30 ಲಕ್ಷ ಕೋಟಿಯಷ್ಟಾಗಿದೆ. ಭಾರತೀಯ ಮ್ಯೂಚುವಲ್‌ ಫಂಡ್‌ ಕಂಪನಿಗಳ ಒಕ್ಕೂಟದ (ಎಎಂಎಫ್‌ಐ) ಅಂಕಿ–ಅಂಶಗಳ ಪ್ರಕಾರ ಪ್ಯಾಸಿವ್‌ ಫಂಡ್‌ಗಳಲ್ಲಿ ಹಣ ತೊಡಗಿಸುವ ಫೋಲಿಯೊಗಳ (ಖಾತೆ) ಸಂಖ್ಯೆಯು ಕಳೆದ ಐದು ವರ್ಷಗಳಲ್ಲಿ 18 ಪಟ್ಟು ಹೆಚ್ಚಾಗಿದೆ.

ಇಂಡೆಕ್ಸ್‌ ಹೂಡಿಕೆಯಲ್ಲಿ ಹಲವು ಪೂರಕ ಅಂಶಗಳು ಇವೆ

ಮೊದಲನೆಯದು: ನಿರ್ದಿಷ್ಟ ಕಂಪನಿಯ ಷೇರುಗಳನ್ನು ಆಯ್ಕೆ ಮಾಡುವಾಗ ಹಲವು ಕೆಲಸಗಳನ್ನು ಮಾಡಬೇಕಾಗುತ್ತದೆ. ಷೇರು ಮೌಲ್ಯದ ಬಗ್ಗೆ ಅಧ್ಯಯನ ಮಾಡಬೇಕು, ಕಂಪನಿಯ ಬೆಳವಣಿಗೆಯ ಸಾಧ್ಯತೆಗಳ ಬಗ್ಗೆ, ಆ ಕಂಪನಿಯು ಕಾರ್ಯ ನಿರ್ವಹಿಸುತ್ತಿರುವ ವಲಯದ ಬಗ್ಗೆ, ಅರ್ಥ ವ್ಯವಸ್ಥೆಯ ಬಗ್ಗೆ ಪರಿಶೀಲಿಸಬೇಕು. ಇವುಗಳಲ್ಲದೆ, ಆ ಕಂಪನಿಯ ಷೇರುಗಳ ಮೇಲೆ ಎಷ್ಟು ಪ್ರಮಾಣದಲ್ಲಿ ಹಣ ತೊಡಗಿಸುವುದು ಸರಿಯಾದ ಹೆಜ್ಜೆ ಎಂಬುದನ್ನು ಕೂಡ ತೀರ್ಮಾನಿಸಬೇಕು. ಸೀಮಿತ ಸಮಯ, ಸೀಮಿತ ಸಂಪನ್ಮೂಲ ಹಾಗೂ ಸೀಮಿತ ಪರಿಣತಿ ಇರುವ ಸಣ್ಣ ಹೂಡಿಕೆದಾರರ ಪಾಲಿಗೆ ಇವೆಲ್ಲ ಬಹಳ ಸವಾಲಿನ ಕೆಲಸಗಳು. ಹಲವು ಆಯಾಮಗಳಿಂದ ವಿಶ್ಲೇಷಣೆ ನಡೆಸಬೇಕಿರುವ ಕಾರಣದಿಂದಾಗಿ ಷೇರು ಖರೀದಿ ಯಾವಾಗ ಮಾಡಿದರೆ ಸೂಕ್ತ, ಯಾವಾಗ ಮಾರಾಟ ಮಾಡುವುದು ಸರಿ ಎಂಬುದನ್ನು ತೀರ್ಮಾನಿಸುವುದು ಕೂಡ ಸುಲಭದ ಕೆಲಸವಲ್ಲ.

ಆದರೆ ಇಂಡೆಕ್ಸ್‌ ಹೂಡಿಕೆಯಲ್ಲಿ ಈ ತಲೆಬಿಸಿಗಳು ಇರುವುದಿಲ್ಲ. ಇಂಡೆಕ್ಸ್‌ ಹೂಡಿಕೆಯು ಮೊದಲೇ ಆಯ್ಕೆ ಮಾಡಿರುವ ಕಂಪನಿಗಳಲ್ಲಿ, ಮೊದಲೇ ತೀರ್ಮಾನವಾಗಿರುವ ಪ್ರಮಾಣಕ್ಕೆ ಅನುಗುಣವಾಗಿ ಹಣ ತೊಡಗಿಸುತ್ತದೆ. ಹೀಗಾಗಿ ಈ ಹೂಡಿಕೆಯನ್ನು ಅರ್ಥ ಮಾಡಿಕೊಳ್ಳುವುದು ಕೂಡ ಬಹಳ ಸುಲಭ. ಕಾಲಕಾಲಕ್ಕೆ ಸೂಚ್ಯಂಕಗಳಿಂದ ಕೆಲವು ಕಂಪನಿಗಳ ಹೆಸರು ಕೈಬಿಡುವ ಹಾಗೂ ಕೆಲವು ಕಂಪನಿಗಳನ್ನು ಹೊಸದಾಗಿ ಸೇರಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತ ಇರುತ್ತದೆ. ಇದರಿಂದಾಗಿ ನಿರ್ದಿಷ್ಟ ಕಂಪನಿ ಹಾಗೂ ನಿರ್ದಿಷ್ಟ ವಲಯಕ್ಕೆ ಎಷ್ಟು ಹಂಚಿಕೆ ಆಗಬೇಕು ಎಂಬುದು ಕೂಡ ತೀರ್ಮಾನ ಆಗುತ್ತಿರುತ್ತದೆ.

ಎರಡನೆಯದು: ಇಂಡೆಕ್ಸ್ ಫಂಡ್‌ಗಳು ಹಾಗೂ ಇಟಿಎಫ್‌ಗಳು ಹಲವು ಬಗೆಗಳಲ್ಲಿ ಲಭ್ಯ. ಮಾರುಕಟ್ಟೆ ಬಂಡವಾಳದ ಗಾತ್ರ (ಲಾರ್ಜ್‌ ಕ್ಯಾಪ್, ಮಿಡ್‌ ಕ್ಯಾಪ್‌ ಮತ್ತು ಸ್ಮಾಲ್‌ ಕ್ಯಾಪ್‌) ಆಧರಿಸಿ, ಉದ್ಯಮ ವಲಯ ಆಧರಿಸಿ, ಹೆಚ್ಚಿನ ಡಿವಿಡೆಂಡ್‌ ನೀಡುವ ಕಂಪನಿಗಳನ್ನು ಆಧರಿಸಿ ಸೂಚ್ಯಂಕಗಳನ್ನು ರೂಪಿಸಲಾಗಿದೆ. ಇಂತಹ ಸೂಚ್ಯಂಕಗಳಲ್ಲಿ ಹೂಡಿಕೆ ಮಾಡಲು ಪ್ರತ್ಯೇಕ ಯೋಜನೆಗಳು ಇವೆ. ಹೂಡಿಕೆದಾರರ ಅಗತ್ಯ, ಅವರ ಆರ್ಥಿಕ ಗುರಿಗಳು, ಹೂಡಿಕೆಯ ಶೈಲಿ, ಹೂಡಿಕೆಯ ಒಲವು ಆಧರಿಸಿ ಯಾವುದೇ ಇಂಡೆಕ್ಸ್‌ ಫಂಡ್ ಆಯ್ಕೆ ಮಾಡಿಕೊಳ್ಳಬಹುದು.

ಮೂರನೆಯದು: ಇಂಡೆಕ್ಸ್‌ ಆಧಾರಿತ ಹೂಡಿಕೆಯಲ್ಲಿ ಒಂದಿಷ್ಟು ಅನುಕೂಲಗಳು ಇವೆ. ಒಂದೇ ಫಂಡ್‌ನಲ್ಲಿ ಹಣ ತೊಡಗಿಸುವ ಮೂಲಕ ನೂರಾರು ಕಂಪನಿಗಳ ಷೇರುಗಳನ್ನು ಹೂಡಿಕೆದಾರರು ತಮ್ಮದಾಗಿಸಿ ಕೊಳ್ಳಬಹುದು. ₹100 ಅಥವಾ ₹500ರಷ್ಟು ಕಡಿಮೆ ಮೊತ್ತ ಬಳಸಿಯೂ ಹೂಡಿಕೆದಾರರು ಈ ಫಂಡ್‌ಗಳ ಯೂನಿಟ್‌ಗಳನ್ನು ತಮ್ಮದಾಗಿಸಿಕೊಳ್ಳಬಹುದು. ಮಾರುಕಟ್ಟೆಯು ಏರಿಳಿತಗಳನ್ನು ಕಾಣುವ ಹೊತ್ತಿನಲ್ಲಿಯೂ ಹೂಡಿಕೆಯನ್ನು ಮುಂದುವರಿಸುವ ಮೂಲಕ, ಯೂನಿಟ್‌ಗಳ ಖರೀದಿ ವೆಚ್ಚ ತೀರಾ ದುಬಾರಿ ಆಗಿರದಂತೆ ನೋಡಿಕೊಳ್ಳಬಹುದು. ಆದರೆ ಕಂಪನಿಗಳ ಷೇರುಗಳನ್ನು ನೇರವಾಗಿ ಖರೀದಿಸಲು ಮುಂದಾದರೆ ಈ ಬಗೆಯಲ್ಲಿ ಖರೀದಿ ವೆಚ್ಚ ದುಬಾರಿ ಆಗಿರದಂತೆ ನೋಡಿಕೊಳ್ಳುವುದು ಸುಲಭವಲ್ಲ.

ಉದಾಹರಣೆಗೆ ಹೇಳುವುದಾದರೆ, ಐದು ಅಂಕಿ ಅಥವಾ ಆರು ಅಂಕಿಗಳ ಬೆಲೆಯನ್ನು ಹೊಂದಿರುವ ಷೇರುಗಳು ಕೂಡ ಇಂದು ಮಾರುಕಟ್ಟೆಯಲ್ಲಿ ಇವೆ. ಸಣ್ಣ ಹೂಡಿಕೆದಾರರಿಗೆ ಇಂತಹ ಷೇರುಗಳನ್ನು ಸೂಕ್ತವೆನ್ನುವ ಸಂಖ್ಯೆಯಲ್ಲಿ ಖರೀದಿಸುವಷ್ಟು ಹೆಚ್ಚುವರಿ ಹಣ ಇರುವುದಿಲ್ಲ.

ನಾಲ್ಕನೆಯದು: ಇಂಡೆಕ್ಸ್ ಫಂಡ್‌ಗಳು ಹಾಗೂ ಇಟಿಎಫ್‌ಗಳು ಬಹಳ ಕಡಿಮೆ ವೆಚ್ಚದ ಹೂಡಿಕೆ ಸಾಧನಗಳು. ಇವು ಅನುಕರಣೆ ಮಾಡುವ ಸೂಚ್ಯಂಕದಲ್ಲಿ ಆದ ಬದಲಾವಣೆಗೆ ಅನುಗುಣವಾಗಿ ಫಂಡ್‌ ಕಂಪನಿಗಳೂ ತಮ್ಮ ಹೂಡಿಕೆಯಲ್ಲಿ ಬದಲಾವಣೆ ಮಾಡುತ್ತವೆ. ಇಂತಹ ಸಂದರ್ಭಗಳಲ್ಲಿ ಈ ಬದಲಾವಣೆಯಿಂದಾಗಿ ತೆರಿಗೆ ಸಂಬಂಧಿ ಪರಿಣಾಮವು ಹೂಡಿಕೆದಾರರ ಮೇಲೆ ಇರುವುದಿಲ್ಲ. ಆದರೆ ಷೇರುಗಳನ್ನು ನೇರವಾಗಿ ಖರೀದಿ ಮಾಡುವುದು, ಮಾರಾಟ ಮಾಡುವುದು ಇದ್ದಾಗ ಅದಕ್ಕೆ ಸಂಬಂಧಿಸಿದ ತೆರಿಗೆ, ಶುಲ್ಕಗಳನ್ನು ಹೂಡಿಕೆದಾರರು ಪಾವತಿಸಬೇಕಾಗುತ್ತದೆ. ಅಲ್ಲದೆ, ಪ್ರತಿ ಖರೀದಿ ಹಾಗೂ ಮಾರಾಟವು ಅದಕ್ಕೆ ಸಂಬಂಧಿಸಿದ ಬಂಡವಾಳ ವೃದ್ಧಿ ತೆರಿಗೆಗೆ ಒಳಪಡುತ್ತದೆ.

ಐದನೆಯದು: ಪ್ಯಾಸಿವ್ ಹೂಡಿಕೆಗಳು ಹೂಡಿಕೆದಾರರಿಗೆ ಬಹಳ ವೈವಿಧ್ಯಮಯವಾದ ಪೋರ್ಟ್‌ಫೋಲಿಯೊ ಒಂದನ್ನು ರೂಪಿಸಿಕೊಳ್ಳಲು ನೆರವಾಗುತ್ತವೆ. ಆ ಮೂಲಕ ಅವು ಮಾರುಕಟ್ಟೆಯ ಅಪಾಯಗಳನ್ನು ಕಡಿಮೆ ಮಾಡಿಕೊಡುತ್ತವೆ. ಆದರೆ, ಹೂಡಿಕೆದಾರರು ತಾವೇ ನೇರವಾಗಿ ಷೇರುಗಳನ್ನು ಖರೀದಿ ಮಾಡಿದಾಗ ರಿಸ್ಕ್‌ನ ಪ್ರಮಾಣವು ಹೆಚ್ಚಿರುವ ಸಾಧ್ಯತೆಯೂ ಇರುತ್ತದೆ.

ಲಾಭದ ದೃಷ್ಟಿಯಿಂದ ಹೇಗೆ?

ಲಾಭ ಗಳಿಕೆಯ ದೃಷ್ಟಿಯಿಂದಲೂ ಇಟಿಎಫ್‌ ಅಥವಾ ಇಂಡೆಕ್ಸ್‌ ಫಂಡ್‌ ಹೂಡಿಕೆಯು ಹೆಚ್ಚು ಪ್ರಯೋಜನಕಾರಿ ಎಂಬುದನ್ನು ಉದಾಹರಣೆಯೊಂದು ವಿವರಿಸುತ್ತದೆ.

‘ನಿಫ್ಟಿ–100 ಟಿಆರ್‌ಐ’ ಸೂಚ್ಯಂಕದ ಉದಾಹರಣೆಯನ್ನು ಪರಿಗಣಿಸೋಣ (ಇಲ್ಲಿನ ಹೂಡಿಕೆಗಳು ಈ ಸೂಚ್ಯಂಕದಲ್ಲಿನ ಕಂಪನಿಗಳು ನೀಡುವ ಲಾಭಾಂಶವನ್ನು ಕೂಡ ಮತ್ತೆ ಹೂಡಿಕೆಗೆ ಬಳಸಿಕೊಳ್ಳು ತ್ತದೆ). 2020ರ ಮಾರ್ಚ್‌ನಲ್ಲಿ ಕೋವಿಡ್‌–19ರ ಕಾರಣದಿಂದಾಗಿ ಷೇರುಪೇಟೆಗಳು ಬಹಳ ಕುಸಿತ ಕಂಡಿದ್ದವು. ಅದಾದ ನಂತರದಲ್ಲಿ ಈ ಸೂಚ್ಯಂಕವು ಶೇ 224.4ರಷ್ಟು ಏರಿಕೆ ಕಂಡಿದೆ. ಈ ಸೂಚ್ಯಂಕದಲ್ಲಿ ಹೂಡಿಕೆ ಮಾಡುವ ಫಂಡ್‌ ಅಥವಾ ಇಟಿಎಫ್‌ನಲ್ಲಿ ಹಣ ತೊಡಗಿಸುವ ಮೂಲಕ ಈ ಪ್ರಮಾಣದಲ್ಲಿ ಲಾಭ ಗಳಿಸಿಕೊಳ್ಳಲು ಸಾಧ್ಯವಿತ್ತು (ಇದರಲ್ಲಿ ಎಕ್ಸ್‌ಪೆನ್ಸ್‌ ರೇಷ್ಯೊ ಅಥವಾ ಶುಲ್ಕವನ್ನು ಕಳೆಯಬೇಕು).

ಆದರೆ, ನೇರವಾಗಿ ಷೇರುಗಳನ್ನು ಖರೀದಿಸಲು ಮುಂದಾಗಿದ್ದರೆ, ಅದರಿಂದ ಸಿಗುವ ಲಾಭದ ಪ್ರಮಾಣವು ತೀರಾ ಭಿನ್ನವಾಗಿರುತ್ತಿತ್ತು. ಕೋವಿಡ್‌ ಅಪ್ಪಳಿಸಿದ್ದ ಸಂದರ್ಭದ ಆ ಅವಧಿಯಿಂದ ಇದುವರೆಗೆ ದೇಶದ ಮುಂಚೂಣಿ ಖಾಸಗಿ ಬ್ಯಾಂಕ್‌ ಒಂದರ ಷೇರುಗಳು ಶೇ 123ರಷ್ಟು ಲಾಭ ತಂದುಕೊಟ್ಟಿವೆ. ಮುಂಚೂಣಿ ಐ.ಟಿ. ಸೇವಾ ಕಂಪನಿಯೊಂದರಲ್ಲಿ ಮಾಡಿದ ಹೂಡಿಕೆಯು ಶೇ 90ರಷ್ಟು ಲಾಭ ಕೊಟ್ಟಿದೆ. ಜನಪ್ರಿಯ ಎಫ್‌ಎಂಸಿಜಿ ಕಂಪನಿಯೊಂದರ ಷೇರು ಖರೀದಿಯು ಶೇ 19.5ರಷ್ಟು ಲಾಭ ನೀಡಿದೆ. ಇಂತಹ ಹಲವು ಉದಾಹರಣೆಗಳನ್ನು ನೀಡಬಹುದು.

ಹೀಗಾಗಿ, ಸಣ್ಣ ಹೂಡಿಕೆದಾರರಿಗೆ ಇಂಡೆಕ್ಸ್‌ ಫಂಡ್‌ ಅಥವಾ ಇಟಿಎಫ್‌ ಮೂಲಕ ಹೂಡಿಕೆ ಮಾಡುವುದರಿಂದ ಸೂಚ್ಯಂಕವೊಂದು ನೀಡಿದ ಲಾಭಕ್ಕೆ ಸರಿಸಮನಾದ ಲಾಭವನ್ನು ತಮ್ಮದಾಗಿಸಿಕೊಳ್ಳುವ ಅವಕಾಶ ಸಿಗುತ್ತದೆ. ನಿರ್ದಿಷ್ಟ ಕಂಪನಿಯ ಷೇರುಗಳನ್ನು ಖರೀದಿಸಿ, ಅವುಗಳಿಂದ ಹೆಚ್ಚಿನ ಲಾಭ ಸಿಗುವಂತೆ ಮಾಡಿಕೊಳ್ಳುವುದು ಬಹಳ ಸವಾಲಿನ ಕೆಲಸ.

-ಲೇಖಕ ಐಸಿಐಸಿಐ ಪ್ರುಡೆನ್ಶಿಯಲ್ ಎಎಂಸಿ ಕಂಪನಿ ಹೂಡಿಕೆ ಕಾರ್ಯತಂತ್ರದ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.