ADVERTISEMENT

ಷೇರುಪೇಟೆಗಳಲ್ಲಿ ತಳಮಳ: ಉಳಿಯಲಿಲ್ಲ ಹೂಡಿಕೆ ವಿಶ್ವಾಸ, ಮತ್ತೆ ಕುಸಿದ ಸೆನ್ಸೆಕ್ಸ್‌

ಪಿಟಿಐ
Published 8 ಏಪ್ರಿಲ್ 2020, 15:43 IST
Last Updated 8 ಏಪ್ರಿಲ್ 2020, 15:43 IST
ಷೇರುಪೇಟೆ
ಷೇರುಪೇಟೆ   

ಮುಂಬೈ: ದೇಶದ ಷೇರುಪೇಟೆಗಳು ದಿನದ ಆರಂಭದಲ್ಲಿ ಕಂಡುಕೊಂಡಿದ್ದ ಗಳಿಕೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದರಿಂದ ನಕಾರಾತ್ಮಕ ಹಾದಿಯಲ್ಲಿ ವಹಿವಾಟು ಅಂತ್ಯವಾಯಿತು.

ದೇಶದಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿದ್ದರೂ ಸೋಂಕಿಗೆ ಒಳಗಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಏಪ್ರಿಲ್‌ 14ರ ನಂತರವೂ ಲಾಕ್‌ಡೌನ್‌ ವಿಸ್ತರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನುವ ವದಂತಿಗಳಿಂದ ಷೇರುಪೇಟೆಗಳಲ್ಲಿ ಹೂಡಿಕೆ ಚಟುವಟಿಕೆ ತಗ್ಗಿವೆ ಎಂದು ತಜ್ಞರು ಹೇಳಿದ್ದಾರೆ.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ ದಿನದ ಗರಿಷ್ಠ ಮಟ್ಟದಿಂದ 1,300 ಅಂಶಗಳಷ್ಟು ಕುಸಿಯಿತು. ಅಂತಿಮವಾಗಿ 173 ಅಂಶಗಳ ಇಳಿಕೆಯೊಂದಿಗೆ 29,894 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 43 ಅಂಶ ಇಳಿಕೆಯಾಗಿ 8,749 ಅಂಶಗಳಿಗೆ ತಲುಪಿತು.

ADVERTISEMENT

ರೂಪಾಯಿ ಕುಸಿತ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 70 ಪೈಸೆ ಕುಸಿತ ಕಂಡು ಒಂದು ಡಾಲರ್‌ಗೆ ₹76.34ರಂತೆ ವಿನಿಮಯಗೊಂಡಿತು. ಇದು ರೂಪಾಯಿಯ ಸಾರ್ವಕಾಲಿಕ ಕನಿಷ್ಠ ಮಟ್ಟವಾಗಿದೆ.

'ಕೆಲವು ರಾಜ್ಯಗಳು ಲಾಕ್‌ಡೌನ್‌ ವಿಸ್ತರಿಸುವ ಸಾಧ್ಯತೆ ಇದ್ದು, ಕೆಲವು ರಾಜ್ಯಗಳು ಹಂತ ಹಂತವಾಗಿ ಲಾಕ್‌ಡೌನ್ ಸಡಿಲಿಸುವ ಚಿಂತನೆ ನಡೆಸುತ್ತಿವೆ. ಲಾಕ್‌ಡೌನ್‌ ಅವಧಿ ವಿಸ್ತರಣೆ ಆದಷ್ಟೂ ಅದು ಆರ್ಥಿಕತೆ ಮತ್ತು ಕಂಪನಿಗಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ' ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.