ADVERTISEMENT

ಷೇರುಪೇಟೆ | ವಾರದ ವಹಿವಾಟಿನಲ್ಲಿ ಶೇ 4ರಷ್ಟು ಗರಿಷ್ಠ ಗಳಿಕೆ

ವಿದೇಶಿ ಬಂಡವಾಳ ಒಳಹರಿವು: ಬ್ಯಾಂಕ್‌ ಷೇರು ಮೌಲ್ಯ ವೃದ್ಧಿ

ರಾಯಿಟರ್ಸ್
Published 22 ಜುಲೈ 2022, 14:13 IST
Last Updated 22 ಜುಲೈ 2022, 14:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ದೇಶದ ಷೇರುಪೇಟೆಗಳು ಶುಕ್ರವಾರಕ್ಕೆ ಕೊನೆಗೊಂಡ ವಾರದಲ್ಲಿ ಶೇಕಡ 4ರಷ್ಟು ಗಳಿಕೆ ಕಂಡುಕೊಂಡಿವೆ. 2021ರ ಫೆಬ್ರುವರಿ ನಂತರ ವಾರದ ವಹಿವಾಟಿನಲ್ಲಿ ಕಂಡ ಉತ್ತಮ ಗಳಿಕೆ ಇದು.

ಶುಕ್ರವಾರದ ವಹಿವಾಟಿನಲ್ಲಿ ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕ ಶೇ 0.7ರಷ್ಟು ಹೆಚ್ಚಾಗಿ 16,719 ಅಂಶಗಳಿಗೆ ತಲುಪಿತು.ಬಿಎಸ್‌ಇ ಮತ್ತು ನಿಫ್ಟಿ ಸೂಚ್ಯಂಕಗಳು ಜೂನ್‌ 3ರ ನಂತರದ ಗರಿಷ್ಠ ಮಟ್ಟವನ್ನು ತಲುಪಿದವು. ಬಿಎಸ್‌ಇ ಸೆನ್ಸೆಕ್ಸ್‌ 56,072 ಅಂಶಗಳಿಗೆ ತಲುಪಿತು. ಜೂನ್‌ 3ರ ನಂತರದ ಗರಿಷ್ಠ ಮಟ್ಟವನ್ನು ಎರಡೂ ಸೂಚ್ಯಂಕಗಳು ತಲುಪಿವೆ.

ನಿಫ್ಟಿ 50 ಸೂಚ್ಯಂಕದ ಈಚಿನ ಓಟಕ್ಕೆ ಬ್ಯಾಂಕ್‌ ಮತ್ತು ಆಟೊಮೊಬೈಲ್‌ ವಲಯಗಳ ಗಳಿಕೆ ಪ್ರಮುಖ ಕಾರಣ. ಜುಲೈನಲ್ಲಿ ಬ್ಯಾಂಕ್‌ ಸೂಚ್ಯಂಕ ಶೇ 9.9ರಷ್ಟು ಮತ್ತು ವಾಹನ ಸೂಚ್ಯಂಕ ಶೇ 8ರಷ್ಟು ಏರಿಕೆ ಆಗಿವೆ.

ADVERTISEMENT

ವಿದೇಶಿ ಬಂಡವಾಳ ಹೂಡಿಕೆ ಮತ್ತೆ ಬರುತ್ತಿರುವುದು ಸೂಚ್ಯಂಕಗಳ ಏರಿಕೆಗೆ ಕಾರಣವಾಯಿತು ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.

ಗುಜರಾತ್‌ ಸ್ಟೇಟ್‌ ಫರ್ಟಿಲೈಸರ್ಸ್‌ ಆ್ಯಂಡ್‌ ಕೆಮಿಕಲ್ಸ್‌ ಕಂಪನಿಯು ಜೂನ್‌ ತ್ರೈಮಾಸಿಕದ ಫಲಿತಾಂಶ ಉತ್ತಮವಾಗಿದೆ. ಹೀಗಾಗಿ ಕಂಪನಿ ಷೇರು ಮೌಲ್ಯ ಶೇ 14.7ರಷ್ಟು ಏರಿಕೆ ಆಗಿದೆ. ಕ್ವಿಕ್‌ ಹೀಲ್‌ ಟೆಕ್ನಾಲಜೀಸ್‌ ಕಂಪನಿಯ ಷೇರು ಮರುಖರೀದಿ ಯೋಜನೆಗೆ ಒಪ್ಪಿಗೆ ದೊರೆತಿರುವುದರಿಂದ ಆ ಕಂಪನಿಯ ಷೇರು ಮೌಲ್ಯ ಶೇ 7ರಷ್ಟು ಹೆಚ್ಚಾಗಿದೆ.

ಕಚ್ಚಾ ತೈಲ ದರ ಇಳಿಕೆ ಮತ್ತು ವಿದೇಶಿ ಸಾಂಸ್ಥಿಕ ಬಂಡವಾಳ ಒಳಹರಿವಿನಿಂದಾಗಿ ಸೆನ್ಸೆಕ್ಸ್‌ 56 ಸಾವಿರದ ಮಟ್ಟವನ್ನು ಮೀರಲು ಸಾಧ್ಯವಾಯಿತು. ಅಮೆರಿಕದ ಫೆಡರಲ್‌ ರಿಸರ್ವ್‌ ಮತ್ತು ಆರ್‌ಬಿಐ ಹೆಚ್ಚಿನ ಪ್ರಮಾಣದಲ್ಲಿ ಬಡ್ಡಿದರ ಏರಿಕೆ ಮಾಡಲಿದೆ ಎನ್ನುವ ಆತಂಕವು ತುಸು ತಗ್ಗಿದಂತೆ ಕಾಣುತ್ತಿದೆ. ಹೀಗಾಗಿ ಆರ್ಥಿಕ ಸ್ಥಿತಿ ಉತ್ತಮವಾಗಿರುವ ಕಂಪನಿಗಳ ಷೇರುಗಳನ್ನು ಖರೀದಿಸಲು ಹೂಡಿಕೆದಾರರಿಗೆ ಅವಕಾಶ ಒದಗಿಬಂದಿದೆ ಎಂದು ಕೋಟಕ್‌ ಸೆಕ್ಯುರಿಟೀಸ್‌ ಲಿಮಿಟೆಡ್‌ನ ತಾಂತ್ರಿಕ ಸಂಶೋಧನೆಯ ಡೆಪ್ಯುಟಿ ಉಪಾಧ್ಯಕ್ಷ ಅಮೋಲ್‌ ಅಠಾವಳೆ ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರ ಶೇ 0.51ರಷ್ಟು ಇಳಿಕೆ ಕಂಡು ಒಂದು ಬ್ಯಾರಲ್‌ಗೆ 103.33 ಡಾಲರ್‌ಗೆ ತಲುಪಿತು.

ಸೂಚ್ಯಂಕದ ಏರಿಕೆಗೆ ಕಾರಣಗಳು
*ವಿದೇಶಿ ಬಂಡವಾಳ ಒಳಹರಿವು
*ಸರಕುಗಳ ದರ ಇಳಿಕೆ
*ಕಚ್ಚಾ ತೈಲ ದರ ಇಳಿಕೆ
*ಕಾರ್ಪೊರೇಟ್‌ ಫಲಿತಾಂಶ ಉತ್ತಮವಾಗಿರುವುದು

****

ಬಿಎಸ್‌ಇನಲ್ಲಿ ದಿನದ ಗಳಿಕೆ (%)

ಅಲ್ಟ್ರಾಟೆಕ್‌;5.03
ಎಚ್‌ಡಿಎಫ್‌ಸಿ; 2.37
ಎಚ್‌ಡಿಎಫ್‌ಸಿ ಬ್ಯಾಂಕ್‌; 2.34
ಎಕ್ಸಿಸ್‌ ಬ್ಯಾಂಕ್‌; 2.14
ಐಸಿಐಸಿಐ ಬ್ಯಾಂಕ್‌; 1.74

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.