ADVERTISEMENT

ಓಮೈಕ್ರಾನ್‌ ಭೀತಿ: ಷೇರುಪೇಟೆಗಳಲ್ಲಿ ತಲ್ಲಣ, ಸೆನ್ಸೆಕ್ಸ್‌ 1,189 ಅಂಶ ಕುಸಿತ

ಪಿಟಿಐ
Published 20 ಡಿಸೆಂಬರ್ 2021, 18:37 IST
Last Updated 20 ಡಿಸೆಂಬರ್ 2021, 18:37 IST
ಷೇರುಪೇಟೆ ಕುಸಿತ– ಪ್ರಾತಿನಿಧಿಕ ಚಿತ್ರ
ಷೇರುಪೇಟೆ ಕುಸಿತ– ಪ್ರಾತಿನಿಧಿಕ ಚಿತ್ರ   

ಮುಂಬೈ: ಓಮೈಕ್ರಾನ್ ಪ್ರಕರಣಗಳು ಜಗತ್ತಿನ ಹಲವೆಡೆ ಜಾಸ್ತಿ ಆಗುತ್ತಿರುವುದು ಹೂಡಿಕೆದಾರರ ಸ್ಥೈರ್ಯ ಕುಂದಿಸಿವೆ. ಇದರಿಂದಾಗಿ, ದೇಶಿ ಮತ್ತು ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಹೆಚ್ಚಿನ ಗಮನ ನೀಡಿದರು. ಸೋಮವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 1,189 ಅಂಶ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 371 ಅಂಶ ಇಳಿಕೆ ಕಂಡವು.

ವಿದೇಶಿ ಹೂಡಿಕೆದಾರರು ದೇಶಿ ಮಾರುಕಟ್ಟೆಗಳಿಂದ ಬಂಡವಾಳ ಹಿಂದಕ್ಕೆ ಪಡೆಯುತ್ತಿರುವುದು ಮತ್ತು ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿ ದರ ಹೆಚ್ಚಿಸುವತ್ತ ಒಲವು ತೋರಿಸುತ್ತಿರುವುದು ಕೂಡ ಹೂಡಿಕೆದಾರರ ಮೇಲೆ ನಕಾರಾತ್ಮಕ ಪರಿಣಾಮ ಬೀರಿದವು ಎಂದು ವರ್ತಕರು ತಿಳಿಸಿದ್ದಾರೆ.

ಸೆನ್ಸೆಕ್ಸ್ 55,822 ಅಂಶಗಳಿಗೆ ಇಳಿಕೆಯಾಗಿದ್ದು, ಈ ವರ್ಷದ ಆಗಸ್ಟ್ 23ರ ನಂತರದ ಕನಿಷ್ಠ ಮಟ್ಟ ಇದು. ನಿಫ್ಟಿ 16,614 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿದೆ.ಸೋಮವಾರದ ಕುಸಿತದ ಪರಿಣಾಮವಾಗಿ ಬಿಎಸ್‌ಇಯಲ್ಲಿ ನೋಂದಾಯಿತ ಆಗಿರುವ ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು ₹ 6.79 ಲಕ್ಷ ಕೋಟಿಯಷ್ಟು ಕಡಿಮೆ ಆಗಿದೆ. ಈಗ ಬಿಎಸ್‌ಇ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಮೌಲ್ಯ ₹ 252 ಲಕ್ಷ ಕೋಟಿ.

ADVERTISEMENT

ಅಭಿವೃದ್ಧಿ ಹೊಂದಿದ ದೇಶಗಳ ಅರ್ಥ ವ್ಯವಸ್ಥೆಯ ಬೆಳವಣಿಗೆ ದರವು ವೇಗ ಕಳೆದುಕೊಳ್ಳುತ್ತಿರುವುದು ಕೂಡ ಸೋಮವಾರ ವಿಶ್ವದ ಬಹುತೇಕ ಕಡೆಗಳಲ್ಲಿ ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ವಿಶ್ವದ ಹಲವೆಡೆ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿ ದರ ಹೆಚ್ಚಿಸುವ ಕಡೆ ಒಲವು ತೋರುತ್ತಿವೆ. ಇದರಿಂದಾಗಿ ಭಾರತದ ಬಂಡವಾಳ ಮಾರುಕಟ್ಟೆಗಳಿಂದ ಹೂಡಿಕೆ ಹಿಂತೆಗೆತಕ್ಕೆ ವಿದೇಶಿ ಹೂಡಿಕೆದಾರರು ಮುಂದಾಗಿದ್ದಾರೆ. ಭಾರತದ ಬಂಡವಾಳ ಮಾರುಕಟ್ಟೆಯಲ್ಲಿನ ಷೇರುಗಳ ಮೌಲ್ಯವು ಇತರ ದೇಶಗಳಲ್ಲಿನ ಷೇರು ಮೌಲ್ಯಕ್ಕೆ ಹೋಲಿಸಿದರೆ ದುಬಾರಿ ಆಗಿದೆ ಎಂಬ ಅಭಿಪ್ರಾಯವೂ ಇದೆ. ಇನ್ನೊಂದೆಡೆ, ಸಣ್ಣ ಹೂಡಿಕೆದಾರರು ಹೂಡಿಕೆ ಮಾಡುವುದು ಕಡಿಮೆ ಆಗಿದೆ. ಇವೆಲ್ಲವೂ ಮಾರುಕಟ್ಟೆ ಇಳಿಕೆಗೆ ಕಾರಣ’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಮತ್ತೆ ಲಾಕ್‌ಡೌನ್‌ ಕ್ರಮಗಳು ಜಾರಿಗೆ ಬರಬಹುದು ಎಂಬ ಭೀತಿಯಿಂದಾಗಿ ಜಾಗತಿಕ ಷೇರು ಮಾರುಕಟ್ಟೆಗಳು ಕುಸಿತದ ಹಾದಿ ಹಿಡಿದವು. ಶಾಂಘೈ, ಹಾಂಗ್‌ಕಾಂಗ್, ಟೋಕಿಯೊ ಮತ್ತು ಸೋಲ್‌ ಷೇರು ಮಾರುಕಟ್ಟೆಗಳು ಭಾರಿ ಇಳಿಕೆ ಕಂಡವು. ಯುರೋಪಿನ ಷೇರು ಮಾರುಕಟ್ಟೆಗಳು ಕೂಡ ಇಳಿಕೆಯ ಹಾದಿಯಲ್ಲಿ ಇದ್ದವು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಶೇಕಡ 3.51ರಷ್ಟು ಇಳಿಕೆ ಆಗಿದ್ದು ಪ್ರತಿ ಬ್ಯಾರೆಲ್‌ಗೆ 70.94 ಡಾಲರ್‌ಗೆ ತಲುಪಿದೆ.

ವಾಯಿದಾ ವಹಿವಾಟಿಗೆ ನಿರ್ಬಂಧ
ಮುಂಬೈ (ರಾಯಿಟರ್ಸ್):
ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಪ್ರಮುಖ ಆಹಾರ ಪದಾರ್ಥಗಳ ವಾಯಿದಾ ವಹಿವಾಟಿನ ಮೇಲೆ ಒಂದು ವರ್ಷದ ಅವಧಿಗೆ ನಿರ್ಬಂಧ ಹೇರಿದೆ. ಕೇಂದ್ರ ಸರ್ಕಾರವು ಹಣದುಬ್ಬರ ಪ್ರಮಾಣವನ್ನು ನಿಯಂತ್ರಿಸಲು ಯತ್ನ ನಡೆಸಿರುವ ನಡುವೆಯೇ, ಸೆಬಿ ಈ ಕ್ರಮ ಕೈಗೊಂಡಿದೆ.

2003ರಲ್ಲಿ ವಾಯಿದಾ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿತ್ತು. ಅದಾದ ನಂತರತೆಗೆದುಕೊಂಡಿರುವ ಪ್ರಮುಖ ತೀರ್ಮಾನ ಇದು ಎನ್ನಲಾಗಿದೆ. ಸೋಯಾಬೀನ್, ಸೋಯಾ ಎಣ್ಣೆ, ಕಚ್ಚಾ ತಾಳೆ ಎಣ್ಣೆ, ಗೋಧಿ, ಭತ್ತ, ಕಡಲೆ ಕಾಳು, ಹೆಸರು ಕಾಳು, ಸಾಸಿವೆಯ ವಾಯಿದಾ ವಹಿವಾಟಿಗೆ ನಿರ್ಬಂಧ ವಿಧಿಸಲಾಗಿದೆ.

ದೇಶದಲ್ಲಿ ಅಡುಗೆ ಎಣ್ಣೆ ಬೆಲೆಯು ಗರಿಷ್ಠ ಮಟ್ಟದಲ್ಲಿ ಇದೆ. ಇವುಗಳ ಬೆಲೆ ತಗ್ಗಿಸಲು ಕೇಂದ್ರ ಸರ್ಕಾರವು ತಾಳೆ ಎಣ್ಣೆ, ಸೋಯಾ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆ ಮೇಲಿನ ಆಮದು ತೆರಿಗೆಯನ್ನು ಕಡಿಮೆ ಮಾಡಿದೆ. ಆದರೆ, ಜಾಗತಿಕ ಮಾರುಕಟ್ಟೆಗಳಲ್ಲಿ ಇವುಗಳ ಬೆಲೆ ಏರಿಕೆ ಆದ ಕಾರಣ, ತೆರಿಗೆ ತಗ್ಗಿಸಿದ್ದರ ‍ಪರಿಣಾಮವು ದೇಶಿ ಮಾರುಕಟ್ಟೆಯಲ್ಲಿ ಹೆಚ್ಚಿನ ಮಟ್ಟದಲ್ಲಿ ಕಾಣಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.