ADVERTISEMENT

ಷೇರುಪೇಟೆ ಸೂಚ್ಯಂಕ ಇಳಿಕೆ: ಹೂಡಿಕೆದಾರರಿಗೆ ₹ 11.22 ಲಕ್ಷ ಕೋಟಿ ನಷ್ಟ

ಪಿಟಿಐ
Published 10 ಮೇ 2022, 15:14 IST
Last Updated 10 ಮೇ 2022, 15:14 IST
ಷೇರುಪೇಟೆ (ಸಾಂದರ್ಭಿಕ ಚಿತ್ರ)
ಷೇರುಪೇಟೆ (ಸಾಂದರ್ಭಿಕ ಚಿತ್ರ)   

ನವದೆಹಲಿ: ಷೇರುಗಳಲ್ಲಿ ಹೂಡಿಕೆ ಮಾಡಿರುವವರ ಸಂಪತ್ತು ಮೌಲ್ಯವು ಮೂರು ದಿನಗಳ ವಹಿವಾಟಿನಲ್ಲಿ ಒಟ್ಟು ₹ 11.22 ಲಕ್ಷ ಕೋಟಿಯಷ್ಟು ಕರಗಿದೆ.

ದೇಶದ ಷೇರುಪೇಟೆ ಸೂಚ್ಯಂಕಗಳು ಸತತ ಮೂರನೆಯ ದಿನವೂ ಇಳಿಕೆ ಕಂಡಿವೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರ 105 ಅಂಶ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 61 ಅಂಶ ಇಳಿಕೆ ಕಂಡಿವೆ.

ಸೆನ್ಸೆಕ್ಸ್‌ ಮೂರು ದಿನಗಳಲ್ಲಿ 1,337 ಅಂಶ ಕುಸಿದಿದೆ. ‘ಬಡ್ಡಿ ದರ ಹೆಚ್ಚಾಗುತ್ತಿರುವುದು, ಆರ್ಥಿಕ ಬೆಳವಣಿಗೆಯು ನಿಧಾನಗತಿಯಲ್ಲಿ ಇರುತ್ತದೆ ಎಂಬ ಕಳವಳ, ಚೀನಾದಲ್ಲಿ ಕೋವಿಡ್‌ ಸಂಬಂಧಿತ ನಿರ್ಬಂಧಗಳು ಬಿಗಿಗೊಂಡಿರುವುದು ಹೂಡಿಕೆದಾರರ ಮೇಲೆ ಪ್ರಭಾವ ಬೀರಿವೆ. ಈ ಕಾರಣಗಳಿಂದಾಗಿ ಷೇರು ಮಾರುಕಟ್ಟೆಗಳಲ್ಲಿ ಅಸ್ಥಿರ ವಹಿವಾಟು ನಡೆಯುತ್ತಿದೆ’ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್‌ನ ಸಣ್ಣ ಹೂಡಿಕೆಗಳ ಸಂಶೋಧನಾ ವಿಭಾಗದ ಮುಖ್ಯಸ್ಥ ಸಿದ್ಧಾರ್ಥ ಖೇಮ್ಕ ಹೇಳಿದ್ದಾರೆ.

ADVERTISEMENT

ಬಿಎಸ್‌ಇ ಸ್ಮಾಲ್‌ ಕ್ಯಾಪ್ ಸೂಚ್ಯಂಕ ಶೇ 2.11ರಷ್ಟು, ಮಿಡ್‌ ಕ್ಯಾಪ್ ಸೂಚ್ಯಂಕ ಶೇ 1.98ರಷ್ಟು ಇಳಿಕೆ ಕಂಡಿವೆ. ಲೋಹ, ಇಂಧನ, ರಿಯಾಲ್ಟಿ, ವಿದ್ಯುತ್ ವಲಯಗಳ ಸೂಚ್ಯಂಕಗಳು ಕೂಡ ಕುಸಿತ ದಾಖಲಿಸಿವೆ. ಬ್ಯಾಂಕ್, ಹಣಕಾಸು ಮತ್ತು ಎಫ್‌ಎಂಸಿಜಿ ವಲಯದ ಸೂಚ್ಯಂಕಗಳು ತುಸು ಏರಿಕೆ ಕಂಡಿವೆ.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಮಂಗಳವಾರ 10 ಪೈಸೆಯಷ್ಟು ಏರಿಕೆ ಕಂಡಿದ್ದು, 77.34ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.