ಮುಂಬೈ: ದೇಶದ ಷೇರುಪೇಟೆಗಳ ವಾರದ ವಹಿವಾಟು ನಕಾರಾತ್ಮಕವಾಗಿ ಅಂತ್ಯವಾಗಿದೆ.
ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 1,457 ಅಂಶ ಕುಸಿತ ಕಂಡಿದ್ದು, 37,388 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯವಾಗಿದೆ.
ಇದರಿಂದ ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯ ₹ 6.72 ಲಕ್ಷ ಕೋಟಿಗಳಷ್ಟು ಕರಗಿದ್ದು, ಷೇರುಪೇಟೆಯ ಬಂಡವಾಳ ಮೌಲ್ಯ ₹ 159 ಲಕ್ಷ ಕೋಟಿಗಳಿಂದ ₹ 152.28 ಲಕ್ಷ ಕೋಟಿಗಳಿಗೆ ಇಳಿಕೆಯಾಗಿದೆ. ಸೆ.17 ರಿಂದ 24ರವರೆಗಿನ ಆರು ದಿನಗಳ ವಹಿವಾಟಿನಲ್ಲಿ ನಡೆದ ನಕಾರಾತ್ಮಕ ವಹಿವಾಟಿನಿಂದ ಹೂಡಿಕೆದಾರರ ಸಂಪತ್ತು ₹ 11.31 ಲಕ್ಷ ಕೋಟಿ ಕರಗಿತ್ತು. ಶುಕ್ರವಾರದ ಸಕಾರಾತ್ಮಕ ವಹಿವಾಟು ನಡೆದಿದ್ದರಿಂದ ಹೂಡಿಕೆದಾರರ ಸಂಪತ್ತು ₹ 3.52 ಲಕ್ಷ ಕೋಟಿ ಹೆಚ್ಚಾಗಿತ್ತು.
ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 455 ಅಂಶ ಇಳಿಕೆಯಾಗಿ 11,050 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.
ಆರ್ಥಿಕ ಚೇತರಿಕೆಯ ಕುರಿತಾದ ಕಳವಳ ಮತ್ತು ಜಾಗತಿಕ ಷೇರುಪೇಟೆಗಳ ನಕಾರಾತ್ಮಕ ವಹಿವಾಟು ದೇಶಿ ಷೇರುಪೇಟೆಗಳ ಮೇಲೆ ಪರಿಣಾಮ ಉಂಟುಮಾಡಿವೆ.
ರೂಪಾಯಿ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ವಾರದ ವಹಿವಾಟಿನಲ್ಲಿ 16 ಪೈಸೆ ಇಳಿಕೆಯಾಗಿದೆ. ಒಂದು ಡಾಲರ್‌ಗೆ ₹ 73.61ರಂತೆ ವಿನಿಮಯಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.