ADVERTISEMENT

ಜಿಯೊದಲ್ಲಿ ಫೇಸ್‌ಬುಕ್‌ ಹೂಡಿಕೆ: ಷೇರುಪೇಟೆಯಲ್ಲಿ ಶೇ 8ರಷ್ಟು ಜಿಗಿದ ರಿಲಯನ್ಸ್‌ 

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2020, 5:56 IST
Last Updated 22 ಏಪ್ರಿಲ್ 2020, 5:56 IST
ಷೇರುಪೇಟೆ ವಹಿವಾಟು
ಷೇರುಪೇಟೆ ವಹಿವಾಟು    

ಬೆಂಗಳೂರು: ರಿಲಯನ್ಸ್ ಜಿಯೊದಲ್ಲಿ ಫೇಸ್‌ಬುಕ್‌ 5.7 ಬಿಲಿಯನ್‌ ಡಾಲರ್‌ (₹43,574) ಹೂಡಿಕೆ ಮಾಡುವ ಮೂಲಕ ಶೇ 9.9ರಷ್ಟು ಪಾಲುದಾರಿಕೆ ಹೊಂದಲಿದೆ ಎಂಬ ಸುದ್ದಿ ಹೊರಬಿದ್ದ ಬೆನ್ನಲ್ಲೇ ರಿಲಯನ್ಸ್‌ ಷೇರು ಬೆಲೆ ಶೇ 8ರ ವರೆಗೂ ಜಿಗಿದಿದೆ. ಇದರೊಂದಿಗೆ ಸೆನ್ಸೆಕ್ಸ್‌ ಸಹ ಏರು ಗತಿಯಲ್ಲಿ ಸಾಗಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಬುಧವಾರ ಬೆಳಗಿನ ವಹಿವಾಟಿನಲ್ಲಿ 521.30 ಅಂಶ ಚೇತರಿಕೆ ಕಂಡು 31,158.01 ಅಂಶಗಳಲ್ಲಿ ವಹಿವಾಟು ನಡೆದಿದೆ. ಮಂಗಳವಾರ ಸೆನ್ಸೆಕ್ಸ್‌ 30,636.71 ಅಂಶಗಳಲ್ಲಿ ವಹಿವಾಟು ಮುಕ್ತಾಯವಾಗಿತ್ತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 144.2 ಅಂಶ ಹೆಚ್ಚಳದೊಂದಿಗೆ 9,125.65 ಅಂಶ ಮುಟ್ಟಿದೆ.

ರಿಲಯನ್ಸ್‌ ಷೇರು ಬೆಲೆ ₹101.05 (ಶೇ 8.17) ಹೆಚ್ಚಳದೊಂದಿಗೆ₹1,338.40ತಲುಪಿದೆ. ಜಿಯೊದಲ್ಲಿ ಫೇಸ್‌ಬುಕ್‌ ಹೂಡಿಕೆಯಿಂದ ರಿಲಯನ್ಸ್‌ನ ಡಿಜಿಟಲ್‌ ಕಂಪನಿ ಕನಸು ಬಹುಬೇಗ ಈಡೇರುವ ಸಾಧ್ಯತೆಗಳ ಬಗ್ಗೆ ವಿಶ್ಲೇಷಿಸಿರುವ ಹೂಡಿಕೆದಾರರು ಷೇರು ಖರೀದಿಗೆ ಮುಂದಾಗಿದ್ದಾರೆ.

ADVERTISEMENT

ನಿಫ್ಟಿ ಷೇರುಗಳ ಪೈಕಿ ಒಎನ್‌ಜಿಸಿ, ವೇದಾಂತ, ಪವರ್‌ ಗ್ರಿಡ್‌, ಕೋಲ್‌ ಇಂಡಿಯಾ, ಯುಪಿಎಲ್‌ ಹಾಗೂ ಜೆಎಸ್‌ಡಬ್ಲ್ಯು ಸ್ಟೀಲ್‌ ಷೇರುಗಳು ಶೇ 2ರಿಂದ ಶೇ 8ರಷ್ಟು ಕುಸಿದಿವೆ. ರಿಲಯನ್ಸ್‌, ಜೀ ಎಂಟರ್‌ಟೈನ್ಮೆಂಟ್‌, ಭಾರ್ತಿ ಇನ್ಫ್ರಾಟೆಲ್‌, ಮಾರುತಿ ಸುಜುಕಿ ಹಾಗೂ ಏಷಿಯನ್‌ ಪೇಂಟ್ಸ್‌ ಷೇರುಗಳು ಶೇ 1 ರಿಂದ ಶೇ 10ರ ವರೆಗೂ ಏರಿಕೆ ದಾಖಲಿಸಿವೆ.

ಸೆನ್ಸೆಕ್ಸ್‌ಗೆ ಇನ್ಫೊಸಿಸ್‌, ಟಿಸಿಎಸ್‌ ಹಾಗೂ ರಿಲಯನ್ಸ್‌ ಷೇರುಗಳ ಗಳಿಕೆ ಮುನ್ನುಗ್ಗುವ ಶಕ್ತಿ ತುಂಬಿವೆ. ಎಚ್‌ಡಿಎಫ್‌ಸಿ, ಹಿಂದುಸ್ತಾನ್‌ ಯೂನಿಲಿವರ್‌ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ ಷೇರುಗಳು ನಷ್ಟ ಅನುಭವಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.