
ಮುಂಬೈ: ಮೂರು ದಿನಗಳ ಸತತ ಕುಸಿತದ ಬಳಿಕ ದೇಶೀಯ ಷೇರು ಸೂಚ್ಯಂಕಗಳಾದ ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ ಏರಿಕೆ ದಾಖಲಿಸಿವೆ. ಸೆನ್ಸೆಕ್ಸ್ 1,022 ಅಂಶ ಏರಿಕೆ ಕಂಡರೆ, ನಿಫ್ಟಿ 26,000 ಹಂತ ತಲುಪಿದೆ.
ಅಮೆರಿಕದ ಫೆಡರಲ್ ಬ್ಯಾಂಕ್‌ನಿಂದ ಬಡ್ಡಿ ಕಡಿತದ ಆಶಯದ ಹಿನ್ನೆಲೆಯಲ್ಲಿ ಜಾಗತಿಕ ಷೇರುಪೇಟೆಗಳಲ್ಲಿ ಚೇತರಿಕೆ ಮತ್ತು ಹೊಸದಾಗಿ ವಿದೇಶಿ ನಿಧಿಯ ಒಳಹರಿವು ಭಾರತೀಯ ಷೇರುಪೇಟೆಗಳಲ್ಲಿ ಜಿಗಿತಕ್ಕೆ ಕಾರಣ ಎಂದು ವರದಿ ತಿಳಿಸಿದೆ.
30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 1,022.50 ಅಂಶಗಳಷ್ಟು(ಶೇ 1.21) ಏರಿಕೆ ಕಂಡು 85,609.51ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ದಿನದ ವಹಿವಾಟಿನ ಸಮಯದಲ್ಲಿ 1,057.18 ಅಂಶಗಳಷ್ಟು ಏರಿಕೆ ಕಂಡಿತ್ತು.
50 ಷೇರುಗಳ ಎನ್‌ಎಸ್‌ಇ ನಿಫ್ಟಿ 320.50 ಅಂಶಗಳಷ್ಟ ಏರಿಕೆ ಕಂಡು 26,205.30ರಲ್ಲಿ ವಹಿವಾಟು ಮುಗಿಸಿತು.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ವಿರಾಮದ ಸಾಧ್ಯತೆ ಹೆಚ್ಚಿರುವುದು ಹೂಡಿಕೆದಾರರಿಗೆ ಆಶಾವಾದ ಮೂಡಿಸಿದೆ ಎಂದು ಪರಿಣಿತರು ಅಭಿಪ್ರಾಯೊಟ್ಟಿದ್ದಾರೆ.
ಸೆನ್ಸೆಕ್ಸ್ ಸಂಸ್ಥೆಗಳ ಪೈಕಿ ಬಜಾಜ್ ಫಿನ್‌ಸರ್ವ್, ಬಜಾಜ್ ಫೈನಾನ್ಸ್, ಟಾಟಾ ಸ್ಟೀಲ್, ರಿಲಯನ್ಸ್ ಇಂಡಸ್ಟ್ರೀಸ್, ಸನ್ ಫಾರ್ಮಾ, ಟಾಟಾ ಮೋಟಾರ್ಸ್, ಆ್ಯಕ್ಸಿಸ್ ಬ್ಯಾಂಕ್ ಮತ್ತು ಇನ್ಫೊಸಿಸ್ ಅತ್ಯಧಿಕ ಗಳಿಕೆ ಕಂಡ ಕಂಪನಿಗಳಾಗಿವೆ.
ಭಾರ್ತಿ ಏರ್‌ಟೆಲ್ ಮತ್ತು ಏಷಿಯನ್ ಪೈಂಟ್ಸ್ ನಷ್ಟ ಕಂಡಿವೆ.
ಏಷ್ಯಾದ ಮಾರುಕಟ್ಟೆಗಳಲ್ಲಿ, ದಕ್ಷಿಣ ಕೊರಿಯಾದ ಕಾಸ್ಪಿ, ಜಪಾನ್‌ನ ನಿಕ್ಕಿ 225 ಸೂಚ್ಯಂಕ ಮತ್ತು ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕಗಳು ಏರಿಕೆ ಕಂಡಿವೆ. ಕಾಸ್ಪಿ ಶೇ 2.67, ನಿಕ್ಕಿ 225 ಸೂಚ್ಯಂಕ ಶೇ 1.85 ಮತ್ತು ಹ್ಯಾಂಗ್ ಸೆಂಗ್ ಸೂಚ್ಯಂಕ ಶೇ 0.13 ರಷ್ಟು ಏರಿಕೆ ಕಂಡವು. ಶಾಂಘೈನ ಎಸ್‌ಎಸ್‌ಇ ಕಾಂಪೊಸಿಟ್ ಸೂಚ್ಯಂಕವು ಕುಸಿತದೊಂದಿಗೆ ಕೊನೆಗೊಂಡಿತು.
ಯುರೋಪ್ ಮಾರುಕಟ್ಟೆಗಳು ಸಹ ಏರಿಕೆ ದಾಖಲಿಸಿದ್ದವು. ಅಮೆರಿಕ ಮಾರುಕಟ್ಟೆಗಳು ಮಂಗಳವಾರ ಏರಿಕೆಯೊಂದಿಗೆ ಕೊನೆಗೊಂಡಿದ್ದವು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು(ಎಫ್‌ಐಐ) ಮಂಗಳವಾರ ₹785.32 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದರೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐ) ಸಹ ₹3,912.47 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದರು ಎಂದು ವಿನಿಮಯ ದತ್ತಾಂಶಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.