ADVERTISEMENT

ತಿಂಗಳ ಮೊದಲ ವಹಿವಾಟಿನಲ್ಲೇ ಸೆನ್ಸೆಕ್ಸ್‌ 2,000 ಅಂಶ ಕುಸಿತ; ಆಟೊ ವಲಯದಲ್ಲಿ ನಷ್ಟ

ಏಜೆನ್ಸೀಸ್
Published 4 ಮೇ 2020, 10:39 IST
Last Updated 4 ಮೇ 2020, 10:39 IST
ಷೇರುಪೇಟೆ ವಹಿವಾಟು
ಷೇರುಪೇಟೆ ವಹಿವಾಟು    

ಬೆಂಗಳೂರು: ದೇಶದಾದ್ಯಂತ ಮೂರನೇ ಬಾರಿಗೆ ಲಾಕ್‌ಡೌನ್‌ ಮುಂದುವರಿದಿರುವುದು, ಅಮೆರಿಕ ಮತ್ತು ಚೀನಾ ನಡುವಿನ ಬಿಕ್ಕಟ್ಟು ಹಾಗೂ ಜಾಗತಿಕ ಷೇರುಪೇಟೆಗಳಲ್ಲಿನ ವಹಿವಾಟು ದೇಶೀಯ ಷೇರುಗಳ ಮೇಲೆ ಪ್ರಭಾವ ಬೀರಿದೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 2000 ಅಂಶ ಕುಸಿದಿದೆ.

ಸೆನ್ಸೆಕ್ಸ್‌ 2,002.27 ಅಂಶ (ಶೇ 5.94) ಇಳಿಕೆಯಾಗಿ 31,715.35 ಅಂಶಗಳಲ್ಲಿ ವಹಿವಾಟು ಮುಕ್ತಾಯವಾಗಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 566.40 ಅಂಶ (ಶೇ 5.74) ಅಂಶ ಕಡಿಮೆಯಾಗಿ 9,293.50 ಅಂಶ ಮುಟ್ಟಿದೆ. ಲೋಹ, ಫೈನಾನ್ಸ್‌, ಆಟೊ ವಲಯದ ಷೇರುಗಳು ತೀವ್ರ ನಷ್ಟಕ್ಕೆ ಒಳಗಾಗಿವೆ.

ಲಾಕ್‌ಡೌನ್‌ ಅವಧಿಯಲ್ಲಿ ವಾಹನ ತಯಾರಿಕಾ ಕಂಪನಿಗಳು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದವು ಹಾಗೂ ಶೂನ್ಯ ವಾಹನ ಮಾರಾಟ ಕಂಡಿದೆ. ಟಾಟಾ ಮೋಟಾರ್ಸ್‌ ಷೇರು ಶೇ 12.45ರಷ್ಟು ಕಡಿಮೆ, ಮದರ್‌ಸನ್‌ ಸುಮಿ ಸಿಸ್ಟಮ್ಸ್‌ ಷೇರು ಶೇ 12.27, ಅಪೊಲೊ ಟೈರ್ಸ್‌ ಶೇ 9.45, ಹೀರೊ ಮೊಟೊಕಾರ್ಪ್‌ ಶೇ 8.34, ಮಾರುತಿ ಸುಜುಕಿ ಶೇ 8, ಅಶೋಕ ಲೇಲ್ಯಾಂಡ್‌ ಶೇ 7.83, ಟಿವಿಎಸ್‌ ಮೋಟಾರ್ಸ್‌ ಕಂಪನಿ ಶೇ 7.16, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಶೇ 6.95, ಬಜಾಜ್‌ ಆಟೊ ಶೇ 6.66 ಹಾಗೂ ಐಷರ್‌ ಮೋಟಾರ್ಸ್‌ ಷೇರು ಬೆಲೆ ಶೇ 6.30ರಷ್ಟು ಕಡಿಮೆಯಾಗಿದೆ.

ADVERTISEMENT

ಹಿಂದುಸ್ತಾನ್ ಯೂನಿಲಿವರ್‌ , ರಿಲಯನ್ಸ್‌ , ಐಸಿಐಸಿಐ ಬ್ಯಾಂಕ್‌, ಟಾಟಾ ಸ್ಟೀಲ್‌, ಇನ್ಫೊಸಿಸ್‌, ಐಟಿಸಿ ಷೇರುಗಳ ಬೆಲೆ ಶೇ 2ರಿಂದ ಶೇ 10.5ರಷ್ಟು ಇಳಿಕೆ ದಾಖಲಿಸಿವೆ.

ಕಳೆದ ವಾರ ವಹಿವಾಟು ಅಂತ್ಯಕ್ಕೆ ಸೆನ್ಸೆಕ್ಸ್‌ 33,717 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿ ಶೇ 7.6 ರಷ್ಟು ಜಿಗಿತ ಕಂಡಿತ್ತು. ಶೇ 7.7 ರಷ್ಟು ಏರಿಕೆಯೊಂದಿಗೆ ನಿಫ್ಟಿ 9,859 ಅಂಶಗಳಲ್ಲಿ ವಹಿವಾಟು ಮುಗಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.