ದೇಶದ ಷೇರುಪೇಟೆಗಳ ಮೇಲೆ ಏಪ್ರಿಲ್ ತಿಂಗಳಲ್ಲಿ ಹಾಗೂ ಮೇ ತಿಂಗಳ ಆರಂಭದಲ್ಲಿ ಬಹಳ ದೊಡ್ಡದಾದ ಬಿರುಗಾಳಿಯೊಂದು ಅಪ್ಪಳಿಸಿತು. ದುರದೃಷ್ಟದ ಸಂಗತಿಯೆಂದರೆ ಈ ಬಿರುಗಾಳಿಯು ಜೂನ್ ತಿಂಗಳಿನಲ್ಲಿಯೂ ಮುಂದುವರಿಯಿತು.
ಇವೆಲ್ಲ ಆರಂಭವಾಗಿದ್ದು ಏಪ್ರಿಲ್ 2ರಂದು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆ ದಿನ, ಅಮೆರಿಕದ ವಾಣಿಜ್ಯ ಪಾಲುದಾರ ದೇಶಗಳ ಮೇಲೆ ವಿವಾದಿತ ‘ಪ್ರತಿಸುಂಕ’ವನ್ನು ಪ್ರಕಟಿಸಿದರು. ಈ ಘೋಷಣೆ ಆದ ನಂತರ ವಿಶ್ವದಾದ್ಯಂತ ಷೇರುಪೇಟೆಗಳು ಕುಸಿತ ಕಂಡವು. ಆದರೆ ಟ್ರಂಪ್ ನೇತೃತ್ವದ ಆಡಳಿತಕ್ಕೆ ಸಾಲಪತ್ರಗಳ ಮಾರುಕಟ್ಟೆಯಿಂದ ಅನಿರೀಕ್ಷಿತವಾದ ಅಡ್ಡಿ ಎದುರಾಯಿತು. ಈ ಅಡ್ಡಿಯ ಕಾರಣದಿಂದಾಗಿ ಅಮೆರಿಕದ ಅಧ್ಯಕ್ಷರು ‘ಪ್ರತಿಸುಂಕ’ ವಿಧಿಸುವ ಕ್ರಮವನ್ನು 90 ದಿನಗಳ ಮಟ್ಟಿಗೆ ತಡೆಹಿಡಿದರು. ಇದಾದ ನಂತರ ಷೇರುಪೇಟೆಗಳು ಚೇತರಿಕೆಯ ಹಾದಿಗೆ ಮರಳಿದವು.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯ ನಂತರದ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವು ಷೇರುಪೇಟೆಗಳ ಮೇಲೆ ಅಲ್ಪ ಅವಧಿಗೆ ಪರಿಣಾಮ ಉಂಟುಮಾಡಿತು. ದೇಶದ ರಕ್ಷಣಾ ಪಡೆಗಳು ತೋರಿದ ಶೌರ್ಯದ ಕಾರಣದಿಂದಾಗಿ ದೊರೆತ ನೈತಿಕ ಸ್ಥೈರ್ಯವು, ನಿಫ್ಟಿ ಸೂಚ್ಯಂಕವು ಮೇ 11ರಂದು ರಾಕೆಟ್ ವೇಗದಲ್ಲಿ ಮೇಲಕ್ಕೆ ಜಿಗಿಯುವಂತೆ ಮಾಡಿತು. ಆ ದಿನ ನಿಫ್ಟಿ ಸೂಚ್ಯಂಕ ಶೇ 3.82ರಷ್ಟು ಏರಿಕೆ ಕಂಡಿತು. ಇಡೀ ಮಾರುಕಟ್ಟೆಯು ಅಂದು ಶೇ 4ರಷ್ಟು ಏರಿಕೆ ಕಂಡಿತು. ಇದು ನಾಲ್ಕು ವರ್ಷಗಳಲ್ಲಿ ಕಂಡ ಅತ್ಯುತ್ತಮ ಏರಿಕೆ ಆಗಿತ್ತು.
ಈ ನಡುವೆ ರಷ್ಯಾ ಮತ್ತು ಉಕ್ರೇನ್ ನಡುವಿನ ಸಮರ ಹಾಗೂ ಗಾಜಾದಲ್ಲಿನ ಸಂಘರ್ಷ ಮುಂದುವರಿದಿವೆ. ಆದರೆ ಈ ಜಾಗತಿಕ ಬಿಕ್ಕಟ್ಟುಗಳು ಷೇರುಪೇಟೆಗಳ ಮೇಲೆ ಗಣನೀಯ ಪರಿಣಾಮ ಉಂಟುಮಾಡಿಲ್ಲ. ಕಚ್ಚಾ ತೈಲದ ಬೆಲೆಯು ಕಡಿಮೆ ಮಟ್ಟದಲ್ಲಿಯೇ ಇದೆ. ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 67.30 ಡಾಲರ್‌ನಷ್ಟು ಇದೆ. ಆದರೆ ಇಸ್ರೇಲ್ ಸೇನೆಯು ಇರಾನ್ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ದೊಡ್ಡ ಕಂಪನ ಸೃಷ್ಟಿಯಾಯಿತು. ಆ ಸಂದರ್ಭದಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಸರಿಸುಮಾರು ಶೇ 10ರಷ್ಟು ಏರಿಕೆ ಕಂಡು, ಪ್ರತಿ ಬ್ಯಾರೆಲ್‌ಗೆ 75 ಡಾಲರ್‌ಗೆ ತಲುಪಿತ್ತು. ಹೀಗಿದ್ದರೂ ನಂತರದಲ್ಲಿ ಅದರ ಬೆಲೆಯು ಇಳಿಕೆ ಆಗಿದೆ.
ಜಾಗತಿಕ ಮಟ್ಟದಲ್ಲಿ ಯುದ್ಧಗಳು ನಡೆದಾಗ, ಷೇರುಪೇಟೆಯಲ್ಲಿ ಷೇರುಗಳ ಮೌಲ್ಯವು ದುಬಾರಿ ಎಂದು ಹೂಡಿಕೆದಾರರಿಗೆ ಅನ್ನಿಸಿದಾಗ ಷೇರುಪೇಟೆ ಸೂಚ್ಯಂಕಗಳು ಇಳಿಜಾರಿನ ಹಾದಿಹಿಡಿಯುವುದು ಸಹಜ. ಆದರೆ ಅಂತಹ ಸಂದರ್ಭಗಳು ಎದುರಾದಾಗ ದೀರ್ಘಾವಧಿ ಹೂಡಿಕೆದಾರರು ಅಧೀರರಾಗಬೇಕಿಲ್ಲ. ಕುಸಿತವು ಖರೀದಿಗೆ ಸಿಗುವ ಉತ್ತಮ ಅವಕಾಶ!
ಇರಾನ್ ಮತ್ತು ಇಸ್ರೇಲ್ ನಡುವಿನ ಸಮರವು ಇನ್ನಷ್ಟು ತೀವ್ರಗೊಳ್ಳುತ್ತದೆಯೇ, ಅದು ಇನ್ನಷ್ಟು ವಿಸ್ತರಣೆ ಕಾಣುತ್ತದೆಯೇ ಎಂಬ ಪ್ರಶ್ನೆ ಇತ್ತು. ಸಮರವು ಇನ್ನಷ್ಟು ತೀವ್ರಗೊಂಡರೆ, ಅದು ವಿಸ್ತರಿಸಿದರೆ ಇರಾನ್ ದೇಶವು ಹೊರ್ಮುಜ್ ಜಲಸಂಧಿಯನ್ನು ಮುಚ್ಚಬಹುದು ಎಂಬ ಭೀತಿ ಎದುರಾಗಿತ್ತು. ಪಶ್ಚಿಮ ಏಷ್ಯಾದಿಂದ ಕಚ್ಚಾ ತೈಲವು ವಿಶ್ವದ ಇತರ ದೇಶಗಳಿಗೆ ಭಾರಿ ಪ್ರಮಾಣದಲ್ಲಿ ರಫ್ತಾಗುವುದು ಈ ಜಲಸಂಧಿಯ ಮೂಲಕವೇ. ಈ ಜಲಸಂಧಿಯ ಮೂಲಕ ಸರಕು ಸಾಗಣೆ ಸ್ಥಗಿತಗೊಂಡರೆ ಇರಾನ್ ಮತ್ತು ಪಶ್ಚಿಮ ಏಷ್ಯಾದ ಇತರ ತೈಲ ರಫ್ತುದಾರರಿಗೂ ತೊಂದರೆ ಆಗುತ್ತದೆ. ಹೀಗಾಗಿ, ಒಂದಿಷ್ಟು ಭೀತಿ ಉಂಟಾಗಿತ್ತು. ಆದರೆ ಈಗ ಇರಾನ್ ಮತ್ತು ಇಸ್ರೇಲ್ ನಡುವೆ ಕದನ ವಿರಾಮ ಘೋಷಣೆ ಆಗಿದೆ. ಆದರೂ, ಪಶ್ಚಿಮ ಏಷ್ಯಾದಲ್ಲಿನ ಬೆಳವಣಿಗೆಗಳ ಮೇಲೆ ಒಂದು ಕಣ್ಣಿಡಬೇಕಿದೆ.
ಭಾರತದ ಷೇರುಪೇಟೆ ದುಬಾರಿ ಆಗಿದೆಯೇ?
ದೇಶದ ಅರ್ಥ ವ್ಯವಸ್ಥೆಯು ಸುಸ್ಥಿತಿಯಲ್ಲಿ ಇದೆ. ಅರ್ಥ ವ್ಯವಸ್ಥೆಯ ಆರೋಗ್ಯವನ್ನು ಹೇಳುವ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ದರ, ಹಣದುಬ್ಬರ ದರ, ವಿತ್ತೀಯ ಕೊರತೆ ಪ್ರಮಾಣ, ಚಾಲ್ತಿ ಖಾತೆ ಕೊರತೆ, ವಿದೇಶಿ ವಿನಿಮಯ ಮೀಸಲು... ಇವೆಲ್ಲ ಸುಸ್ಥಿತಿಯಲ್ಲಿ ಇವೆ. ಆದರೆ ಕಂಪನಿಗಳ ವರಮಾನ ಹೆಚ್ಚಳವು ಮಂದಗತಿಯಲ್ಲಿ ಇರುವುದೊಂದೇ ದೊಡ್ಡ ಸಮಸ್ಯೆ. ಸತತ ಮೂರು ವರ್ಷಗಳ ಅವಧಿಗೆ ಕಂಪನಿಗಳ ವರಮಾನ ಹೆಚ್ಚಳದ ಪ್ರಮಾಣವು ಶೇ 20ಕ್ಕಿಂತ ಜಾಸ್ತಿ ಇತ್ತು. ಆದರೆ ಈ ಪ್ರಮಾಣವು 2024–25ನೇ ಆರ್ಥಿಕ ವರ್ಷದಲ್ಲಿ ಶೇ 5ಕ್ಕೆ ಕುಸಿದಿದೆ. ನಿಫ್ಟಿ–50 ಸೂಚ್ಯಂಕದಲ್ಲಿನ ಕಂಪನಿಗಳ ವರಮಾನ ಏರಿಕೆಯು ಸರಾಸರಿ ಶೇ 1ರಷ್ಟು ಮಾತ್ರ ಆಗಿದೆ.
ಕಂಪನಿಗಳ ವರಮಾನದಲ್ಲಿನ ಏರಿಕೆಯು ಹೆಚ್ಚಿನ ಮಟ್ಟದಲ್ಲಿ ಇಲ್ಲದಿರುವುದು ಷೇರುಗಳ ಮೌಲ್ಯವನ್ನು ದುಬಾರಿ ಆಗಿಸಿದೆ. 24,600ರ ಮಟ್ಟದಲ್ಲಿ ನಿಫ್ಟಿ ಸೂಚ್ಯಂಕವು, ಕಂಪನಿಗಳ 2025–26ನೆಯ ಹಣಕಾಸು ವರ್ಷದ ಅಂದಾಜು ವರಮಾನಕ್ಕಿಂತ 22 ಪಟ್ಟು ಹೆಚ್ಚಿನ ಮೌಲ್ಯ ಹೊಂದಿದಂತೆ ಆಗಿದೆ. ಇದು ಕಳೆದ 10 ವರ್ಷಗಳ ಸರಾಸರಿ ಮೌಲ್ಯವಾದ 18.5ಕ್ಕಿಂತ ಬಹಳ ಹೆಚ್ಚು. ಮಾರುಕಟ್ಟೆಯಲ್ಲಿ ಷೇರುಗಳ ಮೌಲ್ಯವು ದುಬಾರಿ ಆಗಿರುವ ಕಾರಣಕ್ಕೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಷೇರು ಮಾರಾಟಕ್ಕೆ ಮುಂದಾಗುವ ಅಪಾಯ ಇದೆ.
ಹೀಗಾಗಿ, ಹೂಡಿಕೆದಾರರು 2025ರಲ್ಲಿ ದೊಡ್ಡ ಮಟ್ಟದ ಲಾಭದ ನಿರೀಕ್ಷೆಯನ್ನು ಹೊಂದಬಾರದು. ಜಾಗತಿಕ ಮಟ್ಟದಲ್ಲಿನ ನಕಾರಾತ್ಮಕ ಸಂಗತಿಗಳು ಹಾಗೂ ಕಂಪನಿಗಳ ವರಮಾನದಲ್ಲಿನ ಏರಿಕೆಯು ಅಷ್ಟೇನೂ ದೊಡ್ಡ ಮಟ್ಟದಲ್ಲಿ ಇಲ್ಲದಿರುವುದು ಷೇರುಪೇಟೆಗಳಲ್ಲಿ ಸ್ಥಿರವಾದ ಏರಿಕೆ ಸಾಧ್ಯವಾಗದಂತೆ ಮಾಡುತ್ತವೆ.
ಆದರೆ, ಭವಿಷ್ಯ ಉಜ್ವಲವಾಗಿದೆ:
ಹೀಗಿದ್ದರೂ, ಅಲ್ಪಾವಧಿಯಲ್ಲಿ ಕಾಣುವ ಅನಿಶ್ಚಿತತೆಗಳು ದೀರ್ಘಾವಧಿ ಹೂಡಿಕೆದಾರರ ತಲೆಬಿಸಿಗೆ ಕಾರಣವಾಗಬಾರದು. ಪ್ರಗತಿಯ ಪಥದಲ್ಲಿ ಭಾರತವು ಮಹತ್ವದ ಪರಿವರ್ತನೆಯ ಪರ್ವಕಾಲದಲ್ಲಿ ಇದೆ, ಭಾರತವು ಆರ್ಥಿಕ ಶಕ್ತಿಕೇಂದ್ರವಾಗಿ ಬೆಳೆಯುವ ಕಾಲಘಟ್ಟದಲ್ಲಿ ಇದೆ. ಭಾರತವು ಈಗ ವಿಶ್ವದ ನಾಲ್ಕನೆಯ ಅತಿದೊಡ್ಡ ಅರ್ಥ ವ್ಯವಸ್ಥೆ ಆಗಿದೆ. 2027–28ನೆಯ ಆರ್ಥಿಕ ವರ್ಷದಲ್ಲಿ ಭಾರತವು ವಿಶ್ವದ ಮೂರನೆಯ ಅತಿದೊಡ್ಡ ಅರ್ಥವ್ಯವಸ್ಥೆ ಆಗುವ ನಿರೀಕ್ಷೆ ಇದೆ.
ಊಹಿಸಲು ಸಾಧ್ಯವಾಗದ ಸಂದರ್ಭಗಳು ಎದುರಾಗದೆ ಇದ್ದರೆ, 2032ರ ವೇಳೆಗೆ ಭಾರತದ ಅರ್ಥವ್ಯವಸ್ಥೆಯ ಗಾತ್ರವು 8 ಟ್ರಿಲಿಯನ್ ಡಾಲರ್ ಆಗಿರಲಿದೆ. ಭಾರತದ ಬಂಡವಾಳ ಮಾರುಕಟ್ಟೆಗಳ ಮೌಲ್ಯವು 10 ಟ್ರಿಲಿಯನ್ ಡಾಲರ್ ಆಗಲಿದೆ. ಇವುಗಳಿಗಿಂತ ಮುಖ್ಯವಾಗಿ, ಭಾರತದ ಷೇರು ಮಾರುಕಟ್ಟೆಗಳು ಕಳೆದ 20 ವರ್ಷಗಳ ಅವಧಿಯಲ್ಲಿ ಜಗತ್ತಿನಲ್ಲಿ ಎರಡನೆಯ ಅತ್ಯುತ್ತಮ ಪ್ರಮಾಣದ ಗಳಿಕೆ ತಂದುಕೊಟ್ಟಿವೆ.
ಭಾರತದ ಅರ್ಥ ವ್ಯವಸ್ಥೆ ಹಾಗೂ ಷೇರುಪೇಟೆಗಳ ಭವಿಷ್ಯ ಉಜ್ವಲವಾಗಿರುವ ಕಾರಣಕ್ಕೆ, ಭಾರತದ ಷೇರುಪೇಟೆಗಳಲ್ಲಿ ಷೇರುಗಳ ಮೌಲ್ಯವು ತುಸು ದುಬಾರಿಯಾಗಿಯೇ ಇರಲಿದೆ. ಹೀಗಾಗಿ, ದೀರ್ಘಾವಧಿ ಹೂಡಿಕೆದಾರರಿಗೆ ಷೇರುಮೌಲ್ಯ ದುಬಾರಿ ಎಂಬುದು ಹೂಡಿಕೆಗೆ ಅಡ್ಡಿಯಾಗಿ ಪರಿಣಮಿಸಬಾರದು. ಹೂಡಿಕೆಗಳನ್ನು, ಷೇರು ಖರೀದಿಯನ್ನು ವ್ಯವಸ್ಥಿತವಾಗಿ ಮಾಡುವ ಮೂಲಕ ‘ದುಬಾರಿ’ಯ ಸಮಸ್ಯೆಯನ್ನು ನಿರ್ವಹಿಸಬಹುದು.
ದೀರ್ಘಾವಧಿ ಹೂಡಿಕೆದಾರರ ಪಾಲಿಗೆ ಷೇರುಪೇಟೆಗಳ ಕುಸಿತಗಳು ಖರೀದಿಗೆ ಸಿಗುವ ಒಳ್ಳೆಯ ಅವಕಾಶಗಳು!
ಲೇಖಕ ಜಿಯೋಜಿತ್ ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್‌ನ ಮುಖ್ಯ ಹೂಡಿಕೆ ತಜ್ಞ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.