ADVERTISEMENT

ಕುಟುಂಬಕ್ಕೆ ಯಾವ ಇನ್ಶೂರನ್ಸ್ ಬೇಕು?

ನರಸಿಂಹ ಬಿ
Published 4 ನವೆಂಬರ್ 2018, 20:15 IST
Last Updated 4 ನವೆಂಬರ್ 2018, 20:15 IST
   

ಮನೆಯ ಯಜಮಾನ ಹಗಲಿರುಳೆನ್ನದೆ ಶ್ರಮಪಟ್ಟು ದುಡಿಯುತ್ತಿರುತ್ತಾನೆ. ಕುಟುಂಬದ ಹಣಕಾಸಿನ ಅಗತ್ಯಗಳನ್ನೆಲ್ಲಾ ಆತ ಪೂರೈಸುತ್ತಿರುತ್ತಾನೆ. ಹೀಗೆ ಬದುಕ ಬಂಡಿ ಅಡೆತಡೆಯಿಲ್ಲದೆ ಸಾಗುತ್ತಿದೆ ಎನ್ನುವಾಗ ಯಜಮಾನನ ಜೀವಕ್ಕೆ ಅಪಾಯ ಎದುರಾದರೆ ಅವನನ್ನೇ ನಂಬಿರುವ ಕುಟುಂಬದ ಪಾಡೇನು? ಇಂತಹ ಗಂಭೀರ ಪ್ರಶ್ನೆಗೆ ಉತ್ತರವೇ ಟರ್ಮ್ ಲೈಫ್ ಇನ್ಶೂರನ್ಸ್‌.

ಹೌದು! ಪಾಲಿಸಿದಾರರು ಆಕಸ್ಮಿಕ ಸಾವಿನ ವಿರುದ್ಧ ಪಡೆಯುವ ವಿಮೆ ರಕ್ಷಣೆ ಸೌಲಭ್ಯವನ್ನು ‘ಟರ್ಮ್‌ ಇನ್ಶೂರನ್ಸ್‌’ ಒಳಗೊಂಡಿರುತ್ತದೆ. ನೀವು ನಂಬಿದವರನ್ನ ನಿಮ್ಮ ಮರಣದ ನಂತರವೂ ಹಣಕಾಸಿನ ಸಂಕಷ್ಟದಿಂದ ಪಾರು ಮಾಡುವ ವಿಶಿಷ್ಟ ವಿಮೆ ಇದು. ಮನೆಯ ಆಧಾರ ಸ್ತಂಭವಾಗಿರುವವರು ನಿಧನ ಹೊಂದಿದಾಗ ಎರಡು ರೀತಿಯ ನಷ್ಟಗಳು ಉಂಟಾಗುತ್ತವೆ. ಒಂದು ಭಾವನಾತ್ಮಕ ನಷ್ಟ, ಮತ್ತೊಂದು ಹಣಕಾಸಿನ ಸಂಕಷ್ಟ. ಮನೆಯ ಯಜಮಾನನಿಲ್ಲ ಎಂಬ ಭಾವನಾತ್ಮಕ ನೋವನ್ನು ಯಾರಿಂದಲೂ ಸರಿಪಡಿಸಲು ಸಾಧ್ಯವಿಲ್ಲ. ಆದರೆ, ಹಣಕಾಸಿನ ಕೊರತೆಯನ್ನು ನೀಗಿಸಲು ಟರ್ಮ್ ಇನ್ಶೂರನ್ಸ್‌‌ನಿಂದ ಸಾಧ್ಯವಿದೆ. ಇನ್ಶೂರನ್ಸ್‌ ಪಾಲಿಸಿ ಅವಧಿಯಲ್ಲಿ ಒಂದು ವೇಳೆ ಪಾಲಿಸಿದಾರನು ಮೃತಪಟ್ಟರೆ, ಗರಿಷ್ಠ ಮೊತ್ತದ ವಿಮಾ ಸುರಕ್ಷತೆಯನ್ನು ಇದು ಖಾತರಿಪಡಿಸುತ್ತದೆ.

ಬಹುತೇಕರಿಗೆ ಎಂಡೋಮೆಂಟ್ ಪಾಲಿಸಿಗಳ ಬಗ್ಗೆ ಗೊತ್ತಿದೆ. ಆದರೆ, ಟರ್ಮ್ ಇನ್ಶೂರನ್ಸ್‌ ಬಗ್ಗೆ ಸಮರ್ಪಕ ಮಾಹಿತಿ ಇಲ್ಲ. ಟರ್ಮ್ ಇನ್ಶೂರನ್ಸ್‌ ಅತ್ಯಂತ ಅಗ್ಗ ಮತ್ತು ಸುರಕ್ಷಿತ ಜೀವ ವಿಮೆ. ಟರ್ಮ್ ಇನ್ಶೂರನ್ಸ್‌ ಇವತ್ತಿನ ಪ್ರತಿಯೊಂದು ಕುಟುಂಬದ ಅನಿವಾರ್ಯ ಅಗತ್ಯವಾಗಿದೆ. ವಿಮಾ ಕಂಪನಿಗಳು ಟರ್ಮ್ ಇನ್ಶೂರನ್ಸ್‌ ಮಾರಾಟಕ್ಕೆ ಒತ್ತು ನೀಡುವುದಿಲ್ಲ. ಎಂಡೋಮೆಂಟ್‌, ಯುಲಿಪ್‌ ಪಾಲಿಸಿಗಳನ್ನು ಮಾತ್ರ ಪ್ರೋತ್ಸಾಹಿಸುತ್ತವೆ.

ADVERTISEMENT

ಬಹಳಷ್ಟು ಜನರು ಟರ್ಮ್ ಇನ್ಶೂರನ್ಸ್‌ ವಿಮೆಯ ಬಗ್ಗೆ ಮಾತನಾಡುವಾಗ ಅದು ನಷ್ಟದ ಹೂಡಿಕೆ ಎನ್ನುವ ನಿರ್ಧಾರಕ್ಕೆ ಬಂದುಬಿಟ್ಟಿರುತ್ತಾರೆ. ಇದಕ್ಕೆ ಅವರು ಕೊಡುವ ಮುಖ್ಯ ಕಾರಣ, ಈ ವಿಮೆಯಲ್ಲಿ ಕಟ್ಟಿದ ಹಣ ವಾಪಸ್ ಬರುವುದಿಲ್ಲ ಎನ್ನುವುದು. ಬಹುತೇಕರು ಹಣ ವಾಪಸು ನೀಡುವ (ಮನಿ ಬ್ಯಾಕ್) ಪಾಲಿಸಿಗಳೇ ಲಾಭದಾಯಕ ಎನ್ನುವ ವಾದವನ್ನು ಸಮರ್ಥಿಸಿಕೊಳ್ಳುತ್ತಾರೆ. ಆದರೆ, ವಾಸ್ತವದಲ್ಲಿ ವಿಮೆಗಾಗಿ ಕಟ್ಟಿದ ಹಣ ಯಾವ ಪಾಲಿಸಿಯಲ್ಲಿಯೂ ವಾಪಸು ಬರುವುದಿಲ್ಲ. ಟರ್ಮ್ ಇನ್ಶೂರನ್ಸ್‌‌ನಲ್ಲಿ ವಿಮೆಯ ಪ್ರೀಮಿಯಂ ಅನ್ನು ಮಾತ್ರ ನಾವು ಕಟ್ಟುತ್ತೇವೆ. ಇತರ ಪಾಲಿಸಿಗಳಲ್ಲಿ ವಿಮೆಯ ಪ್ರೀಮಿಯಂ ಜತೆಗೆ ಹೂಡಿಕೆಯ ಮೊತ್ತವನ್ನೂ ಪಾವತಿ ಮಾಡುತ್ತೇವೆ. ಎರಡೂ ಸಂದರ್ಭಗಳಲ್ಲೂ ವಿಮೆಯ ಪ್ರೀಮಿಯಂ ಹಣ ವಾಪಸು ಬರುವುದಿಲ್ಲ. ವಾಪಸು ಬರುವುದು ಹೂಡಿಕೆಯ ಮೊತ್ತ ಮಾತ್ರ.

ಟರ್ಮ್ ಇನ್ಶೂರನ್ಸ್‌ ಅನ್ನು ಬಹುತೇಕ ಎಲ್ಲ ಇನ್ಶೂರನ್ಸ್‌ ಕಂಪನಿಗಳು ನೀಡುತ್ತವೆ. ಆನ್ ಲೈನ್ ಮತ್ತು ಏಜೆಂಟ್‌ರ ಮೂಲಕ ಈ ಇನ್ಶೂರನ್ಸ್‌ ಖರೀದಿಸಬಹುದು. ಆನ್‌ಲೈನ್‌ನಲ್ಲಿ ಟರ್ಮ್ ಲೈಫ್ ಇನ್ಶೂರನ್ಸ್‌ ಖರೀದಿ ಮಾಡಿದರೆ ನಿಮಗೆ ಕಂಪನಿಗಳು ಹೆಚ್ಚಿನ ಡಿಸ್ಕೌಂಟ್ ನೀಡುತ್ತವೆ.

ಟರ್ಮ್ ಲೈಫ್ ಇನ್ಶೂರನ್ಸ್‌ ಎಷ್ಟಿರಬೇಕು?
ನಿಮ್ಮ ವಾರ್ಷಿಕ ಆದಾಯದ ಶೇ 15 ರಿಂದ ಶೇ 20 ಪಟ್ಟು ಟರ್ಮ್ ಲೈಫ್ ಇನ್ಶೂರನ್ಸ್‌ ಖರೀದಿ ಮಾಡಬೇಕು ಎನ್ನುವುದು ಒಂದು ಮಾನದಂಡ. ಆದರೆ, ಕುಟುಂಬದ ಜವಾಬ್ದಾರಿ ಹೊತ್ತಿರುವವರು, ಮದುವೆಯಾಗಿರುವವರು, ಸಾಲ ಮಾಡಿರುವವರು ಸೇರಿದಂತೆ ಹೆಚ್ಚು ಆರ್ಥಿಕ ಹೊಣೆಗಾರಿಕೆ ಇರುವವರು ಅಗತ್ಯಕ್ಕೆ ತಕ್ಕಂತೆ ಇನ್ಶೂರನ್ಸ್‌ ಮೊತ್ತ ಹೆಚ್ಚಿಸಿಕೊಳ್ಳಬೇಕು.

ದೀಪಾವಳಿ ಸನಿಹದಲ್ಲಿ ಪೇರುಪೇಟೆ ಚೇತರಿಕೆ
ದೀಪಾವಳಿ ಸನಿಹದಲ್ಲಿ ಷೇರುಪೇಟೆಯಲ್ಲಿ ಚೇತರಿಕೆ ಕಂಡುಬಂದಿದೆ. ಅಕ್ಟೋಬರ್ 4 ರಂದು 35,169 ಅಂಶಗಳ ಏರಿಕೆ ದಾಖಲಿಸಿದ್ದ ಸೆನ್ಸೆಕ್ಸ್, ನಂತರದಲ್ಲಿ ನಕಾರಾತ್ಮಕ ಹಾದಿಯಲ್ಲೇ ಸಾಗಿತ್ತು. ಆದರೆ, ಶುಕ್ರವಾರ ಮುಂಬೈ ಷೇರು ಸೂಚ್ಯಂಕ 579 ಅಂಶಗಳ ಪ್ರಗತಿಯೊಂದಿಗೆ 35,012 ರಲ್ಲಿ ವಹಿವಾಟು ಕೊನೆಗೊಳಿಸಿದ್ದು, ಐದು ವಾರಗಳಿಂದ ಕಂಡುಬಂದಿದ್ದ ಕುಸಿತವನ್ನು ಮೆಟ್ಟಿ ನಿಂತಿದೆ. ನಿಫ್ಟಿ ಸೂಚ್ಯಂಕ ಸಹ 173 ಅಂಶಗಳ ಏರಿಕೆ ಕಂಡು 10,553 ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ವಾರದ ನೆಲೆಯಲ್ಲಿ ಹೇಳುವುದಾದರೆ ಈ ವಾರ ಸೆನ್ಸೆಕ್ಸ್‌ ಮತ್ತು ನಿಫ್ಟಿ ಎರಡೂ ಸೂಚ್ಯಂಕಗಳು ಸತತ ಸೋಲಿಗೆ ತಡೆ ಹಾಕಿವೆ. ಸೆನ್ಸೆಕ್ಸ್‌ 1,662.34 ಅಂಶಗಳನ್ನು (ಶೇ 5) ಸಂಪಾದಿಸಿದ್ದರೆ, ನಿಫ್ಟಿ 523 ಅಂಶಗಳನ್ನು (ಶೇ5.2 ) ಕಲೆ ಹಾಕಿದೆ.

ಚೇತರಿಕೆಗೆ ಕಾರಣ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆ, ಡಾಲರ್ ಎದುರು ರೂಪಾಯಿ ಮೌಲ್ಯ ₹ 72.43ಗೆ ಚೇತರಿಕೆ, ಜಾಗತಿಕ ಮಾರುಕಟ್ಟೆಗಳ ಸಕಾರಾತ್ಮಕ ಸ್ಪಂದನೆ, ಅಮೆರಿಕ ಚೀನಾ ನಡುವೆ ವಾಣಿಜ್ಯ ಬಿಕ್ಕಟು ಶಮನದ ಸೂಚನೆ, ಸೇರಿ ಹಲವು ವಿಚಾರಗಳು ಮಾರುಕಟ್ಟೆ ಸುಧಾರಣೆಗೆ ಕಾರಣವಾಗಿವೆ.

ಇನ್ನೂ ಸರ್ಕಾರಿ ಸಾಲ ಪತ್ರಗಳನ್ನು ಖರೀದಿಸುವ ಮೂಲಕ ನವೆಂಬರ್‌ನಲ್ಲಿ ₹ 40 ಸಾವಿರ ಕೋಟಿ ಪೂರೈಸುವುದಾಗಿ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೇಳಿದೆ. ಇದು ನಗದು ಹರಿವು ಹೆಚ್ಚಿಸುವ ನಿಟ್ಟಿನಲ್ಲಿ ಆಶಾದಾಯಕ ಕ್ರಮ. ಅಕ್ಟೋಬರ್ ತಿಂಗಳಲ್ಲಿ ₹ 1 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗಿರುವುದು, ಆರ್‌ಬಿಐನ ಸ್ವಾಯತತ್ತೆಯನ್ನು ಸರ್ಕಾರ ಒಪ್ಪಿಕೊಳ್ಳುತ್ತದೆ ಎಂದು ಹಣಕಾಸು ಸಚಿವಾಲಯದ ಹೇಳಿಕೆ ಮುಂತಾದ ಅಂಶಗಳು ಮಾರುಕಟ್ಟೆಯಲ್ಲಿನ ಹಿಂಜರಿಕೆ ತಡೆಗೆ ಪೂರಕವಾಗಿ ಕೆಲಸಮಾಡಿವೆ.

ಏರಿಕೆ: ಕಳೆದ ವಾರ ಮುಂಬೈ ಷೇರುಪೇಟೆಯ 148 ಕಂಪನಿಗಳ ಷೇರುಗಳು ಶೇ 10 ರಿಂದ ಶೇ 70 ರಷ್ಟು ಏರಿಕೆ ದಾಖಲಿಸಿವೆ. ಬಿಇಎಂಎಲ್(ಶೇ 30.06) , ಅದಾನಿ ಪವರ್ ( ಶೇ 40.56) , ರಿಲಯನ್ಸ್ ಕಮ್ಯುನಿಕೇಷನ್ಸ್‌ (ಶೇ 40.82) , ಬಾಂಬೆ ಡೈಯಿಂಗ್ (ಶೇ 46.63), ಪಿಸಿ ಜುವೆಲರ್ಸ್‌(ಶೇ 78.41) , ದಿವಾನ್‌ ಹೌಸಿಂಗ್ ಫೈನಾನ್ಸ್(ಶೇ 26.06) ಸೇರಿದಂತೆ ಪ್ರಮುಖ ಕಂಪನಿಗಳು ಈ ಪಟ್ಟಿಯಲ್ಲಿವೆ,

ಮುನ್ನೋಟ: ಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಅಂಶಗಳು ಕಂಡುಬಂದಿರುವುದು ಮತ್ತು ದೇಶೀಯ ಮಾರುಕಟ್ಟೆಯ ಚೇತರಿಕೆಗೂ ಹಲವು ಮುನ್ಸೂಚನೆ ಸಿಕ್ಕಿರುವುದು ದೀಪಾವಳಿಯ ಸನಿಹದಲ್ಲಿ ಷೇರು ಹೂಡಿಕೆದಾರರ ಪಾಲಿಗೆ ಶುಭ ಸುದ್ದಿಯಾಗಿದೆ.

ಹೀಗೆಂದ ಮಾತ್ರಕ್ಕೆ ಮಾರುಕಟ್ಟೆಯಲ್ಲಿ ಈಗ ಯಾವುದೇ ಆತಂಕ ಇಲ್ಲವೇ ಇಲ್ಲ ಎಂದಲ್ಲ. ಆದರೆ, ಖಂಡಿತವಾಗಿಯೂ ಮಾರುಕಟ್ಟೆ ಸುಧಾರಿಸುವ ಅಂಶಗಳು ಸದ್ಯಕ್ಕೆ ಗೋಚರಿಸುತ್ತಿವೆ. ಈ ವಾರ ನಿಫ್ಟಿ 10,600 ರಿಂದ 10,700 ಅಂಶಗಳ ಏರಿಕೆ ದಾಖಲಿಸುವ ನಿರೀಕ್ಷೆಯಿದೆ.

ಬಿಇಎಂಎಲ್, ಒಎನ್‌ಜಿಸಿ, ಜಿಎಐಎಲ್, ಎಸ್‌ಬಿಐ, ಎಂಆರ್‌ಎಫ್, ಎಚ್ಎಎಲ್, ಐಡಿಬಿಐ, ಇಂಡಿಯನ್ ಬ್ಯಾಂಕ್ , ಟೈಟನ್ , ಬಾಷ್ ಇಂಡಿಯಾ, ಸಿಪ್ಲಾ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ವರದಿ ಪ್ರಕಟಿಸುತ್ತಿರುವುದು ಪೇಟೆಯ ಮೇಲೆ ಪ್ರಭಾವ ಬೀರಲಿವೆ.

ಮುಹೂರ್ತ ವಹಿವಾಟು: ನವೆಂಬರ್ 7 ರಂದು ಸಂಜೆ 5 ಗಂಟೆಯಿಂದ 6.30 ರ ವರೆಗೆ ಷೇರುಪೇಟೆಯಲ್ಲಿ ದೀಪಾವಳಿ ಪ್ರಯುಕ್ತ ಮಹೂರ್ತ ವಹಿವಾಟು ನಡೆಯಲಿದೆ.

(ಲೇಖಕ:‘ಇಂಡಿಯನ್‌ ಮನಿಡಾಟ್‌ಕಾಂ’ನ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.