ADVERTISEMENT

ಬೆರಗಿನ ಬೆಳಕು: ಸ್ವಾತಂತ್ರ್ಯ ಮಿತಿ

ಡಾ. ಗುರುರಾಜ ಕರಜಗಿ
Published 22 ಮಾರ್ಚ್ 2022, 19:30 IST
Last Updated 22 ಮಾರ್ಚ್ 2022, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಪುರುಷನ ಸ್ವಾತಂತ್ರ್ಯವವನ ತೋಳ್ಗಿರುವಷ್ಟು |
ಪರಿಧಿಯೊಂದರೊಳದರ ಯತ್ನಕೆಡೆಯುಂಟು ||
ತಿರುಗುವುದು ಮಡಿಸುವುದು ನಿಗುರುವುದು ನೀಳುವುದು |
ತೊರೆದು ಹಾರದು ತೋಳು – ಮಂಕುತಿಮ್ಮ

|| 590 ||

ಪದ-ಅರ್ಥ: ಸ್ವಾತಂತ್ರ್ಯವವನ=ಸ್ವಾತಂತ್ರ್ಯವು+ಅವನ, ತೋಳ್ಗಿರುವಷ್ಟು=ತೋಳಿಗೆ+ಇರುವಷ್ಟು, ಪರಿಧಿಯೊಂದರೊಳದರ=ಪರಿಧಿ (ಮಿತಿ)+ಒಂದರೊಳು+ಅದರ, ಯತ್ನಕೆಡೆಯುಂಟು=ಯತ್ನಕೆ+ಎಡೆಯುಂಟು, ನೀಳುವುದು=ಚಾಚುವುದು, ಎಟಕಿಸುವುದು

ವಾಚ್ಯಾರ್ಥ: ಮನುಷ್ಯನಸ್ವಾತಂತ್ರ್ಯಅವನ ತೋಳಿಗಿರುವಷ್ಟೆ. ಒಂದು ಮಿತಿಯಲ್ಲಿ ಅದರ ಪ್ರಯತ್ನಕ್ಕೆ ಸ್ಥಾನವಿದೆ. ಕೈಯನ್ನು ತಿರುಗಿಸುವುದು, ಮಡಿಸುವುದು, ಬಿಗಿಮಾಡುವುದು ಮತ್ತು ಚಾಚುವುದು ಇಂಥವುಗಳನ್ನು ಮಾಡಬಹುದೆ ವಿನಃ ಅದು ತೋಳನ್ನು ಬಿಟ್ಟು ಹಾರಲಾರದು.

ADVERTISEMENT

ವಿವರಣೆ: ಎಲ್ಲರೂ ಬಯಸುವುದು ಸ್ವಾತಂತ್ರ್ಯವನ್ನು. ಸ್ವಾಮಿ ವಿವೇಕಾನಂದರು ಹೇಳುತ್ತಾರೆ, ‘ಇಡೀ ಸಾಮಾಜಿಕ ಜೀವನವೇ ಒಂದುಸ್ವಾತಂತ್ರ್ಯತತ್ವದ ಪ್ರತಿಪಾದನೆ’. ಹುಟ್ಟಿನಿಂದ ಪ್ರತಿಯೊಬ್ಬ ವ್ಯಕ್ತಿ ಸ್ವತಂತ್ರನಾಗಿರುತ್ತಾನೆ. ಒಂದು ಮಗು ತನಗೆ ಏನು ಬೇಕೋ ಅದನ್ನೇ ಮಾಡುತ್ತದೆ. ಬೇಡವಾದುದನ್ನು ಮುಟ್ಟುವುದಿಲ್ಲ. ವ್ಯಕ್ತಿ ಬೆಳೆಯುತ್ತಾನೆ. ಅಭಿವೃದ್ಧಿ ಹೊಂದುತ್ತಾನೆ. ಅವನ ಸಂಪರ್ಕ ಪರಿಸರ ಮತ್ತು ಸಮಾಜದೊಂದಿಗೆ ಗಾಢವಾಗುತ್ತ ಹೋಗುತ್ತದೆ. ಈ ಸಂಬಂಧಗಳು ಗಟ್ಟಿಯಾಗುತ್ತ ಬಂದಂತೆ, ಆಂತರಿಕವಾಗಿ ಸ್ವಾತಂತ್ರ್ಯದ ಕಲ್ಪನೆ ಕ್ರಮೇಣ ಮರೆಯಾಗುತ್ತ ಬರುತ್ತದೆ. ಆಗ ಮನುಷ್ಯ ತನ್ನ ನಡೆಯನ್ನು, ಅವಕಾಶಗಳನ್ನು, ಅಪೇಕ್ಷೆಗಳನ್ನು ಸುತ್ತಲಿನ ಪರಿಸರಕ್ಕೆ ಹೊಂದುವಂತೆ ನಿಯಮಿತಗೊಳಿಸುತ್ತ ಹೋಗುತ್ತಾನೆ. ತನಗೆ ಬೇಕಾದ ಹಾಗೆ ಮಾಡುವುದು ಸರಿಯಲ್ಲ ಎಂದು ತಿಳಿಯುತ್ತಾನೆ. ಒಬ್ಬ ಸನ್ಯಾಸಿ ಸಹಿತ ಮನಸ್ಸಿಗೆ ಬಂದಂತೆ ಇರಲಾರ. ಅವನು ಎಲ್ಲವನ್ನೂ ತ್ಯಾಗ ಮಾಡಿದ್ದರೂ ಸಮಾಜಕ್ಕೆ ಒಪ್ಪಿತವಾದ ನಡೆಗಳನ್ನು ಪಾಲಿಸುತ್ತಾನೆ.

ಸ್ವಾತಂತ್ರ್ಯ, ವೈಯಕ್ತಿಕ ಜವಾಬ್ದಾರಿಯನ್ನು ಅಪೇಕ್ಷಿಸುತ್ತದೆ. ತನ್ನ ನೆಮ್ಮದಿ, ಸಂತೋಷಗಳಿಗಾಗಿ ಮತ್ತೊಬ್ಬರಿಗೆ ತೊಂದರೆ ನೀಡುವುದು ಸ್ವಾತಂತ್ರ್ಯವಲ್ಲ. ಇದು ನನ್ನಸ್ವಾತಂತ್ರ್ಯ, ನಾನು ಹೇಗಾದರೂ ಇರುತ್ತೇನೆ ಎಂದು ಇತ್ತೀಚೆಗೆ ಪ್ಯಾರಿಸ್‌ನಲ್ಲಿ, ಒಬ್ಬ ತರುಣ ತುಂಬಿದ ಸಭೆಯಲ್ಲಿ ಬೆತ್ತಲೆಯಾಗಿ ಓಡಿ ಹೋದ. ಅವನನ್ನು ಹಿಡಿದು ಜೈಲಿಗೆ ಹಾಕಿದರು. ನೀನು ಹೇಗಾದರೂ ಇರಬಹುದು ಆದರೆ ಆ ನಡೆ ಸಮಾಜಕ್ಕೆ ಇರಿಸುಮುರಿಸು ಮಾಡಬಾರದು ಎಂದು ಎಚ್ಚರಿಕೆ ನೀಡಿದರು.

ಹಾಗೆಂದರೆ ನಮ್ಮ ಮನಸ್ಸಿಗೆ ಬಂದ ಹಾಗೆ ಮಾಡುವುದು ಸ್ವಾತಂತ್ರ್ಯವಲ್ಲ, ಅದು ಅನಿಯಂತ್ರತೆ. ಎಲ್ಲಿ ಎಲ್ಲಿಸ್ವಾತಂತ್ರ್ಯನೈತಿಕತೆಯ ಮಿತಿಯಲ್ಲಿದೆಯೋ ಅಲ್ಲಿ ಸುವ್ಯವಸ್ಥೆ ಇರುತ್ತದೆ. ಎಲ್ಲಿಸ್ವಾತಂತ್ರ್ಯಮಿತಿಗಳನ್ನು ಮೀರುತ್ತದೆಯೋ ಅಲ್ಲಿ ಅಸ್ಥಿರತೆ, ಅನಾಯಕತೆ ಕಾಣುತ್ತದೆ. ಇದನ್ನು ನಾವು ಪುರಾಣಗಳಲ್ಲಿ, ಇತಿಹಾಸದಲ್ಲಿ ಮತ್ತು ವರ್ತಮಾನದಲ್ಲಿ ಕಂಡಿದ್ದೇವೆ. ಹಿರಣ್ಯಕಶಿಪು, ಹಿಟ್ಲರ್, ಸದ್ದಾಂ ಹುಸೇನ್ ಮತ್ತು ಉತ್ತರ ಕೊರಿಯಾದ ಹುಚ್ಚು ದೊರೆ ಕಿಮ್-ಜಾಂಗ್-ಉನ್. ಇವರೆಲ್ಲ ಸ್ವಾತಂತ್ರ್ಯದ ಮಿತಿಗಳನ್ನು ಅರಿಯದೆ ಅನಾಹುತಗಳನ್ನು ಮಾಡಿದವರು.

ಕಗ್ಗ ಅದನ್ನು ಸುಂದರ ಉದಾಹರಣೆಯೊಂದಿಗೆ ತಿಳಿಸುತ್ತದೆ. ಮನುಷ್ಯನಸ್ವಾತಂತ್ರ್ಯಅವನ ತೋಳಿಗಿರುವಷ್ಟೇ. ಅದು ಒಂದು ಮಿತಿಯಲ್ಲಿ ಸ್ವತಂತ್ರವಾಗಿ ಕೆಲಸ ಮಾಡಬಲ್ಲದು. ಅದು ತನ್ನಷ್ಟಕ್ಕೆ ತಾನೇ ತಿರುಗಿಸಬಹುದು, ಮಡಿಸಬಹುದು, ನೇರಮಾಡಬಹುದು, ಚಾಚಬಹುದು, ಹಿಡಿಯಬಹುದು. ಅದೇನೇ ಮಾಡಿದರೂ ಅದು ತೋಳನ್ನು ಬಿಟ್ಟು ಹಾರಲಾರದು. ಹಾರಿದರೆ ಅದು ಮುಂದೇನೂ ಮಾಡಲಾರದು. ಅಂತೆಯೇ ಮನುಷ್ಯ ತನಗೆ ಇರುವ ಮಿತಿಯಲ್ಲಿ ಯಾವ ಕಾರ್ಯವನ್ನೂ ಮಾಡಬಲ್ಲ ಆದರೆ ಅಮಿತನಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.