ADVERTISEMENT

ಬೆರಗಿನ ಬೆಳಕು: ಶಾಂತವಾದ ಅಂತರಂಗದ ಕಡಲು

ಡಾ. ಗುರುರಾಜ ಕರಜಗಿ
Published 30 ಆಗಸ್ಟ್ 2022, 19:30 IST
Last Updated 30 ಆಗಸ್ಟ್ 2022, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ- |
ದಂತರಂಗದ ಕಡಲು ಶಾಂತಿಗೊಳಲಹುದು ||
ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ |
ಸಂತಯಿಸು ಚಿತ್ತವನು – ಮಂಕುತಿಮ್ಮ || 705 ||

ಪದ-ಅರ್ಥ: ಸಂತತದ=ಸತತವಾದ, ದೀರ್ಘದಭ್ಯಾಸದಿಂದಂತರಂಗದ = ದೀರ್ಘದ+ಅಭ್ಯಾಸದಿಂದ+ಅಂತರಂಗದ, ಶಾಂತಿಗೊಳಲಹುದು=ಶಾಂತಿಗೊಳಲು+ಅಹುದು, ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ=ಸಂತೃಪ್ತ+ ವೃತ್ತಿಯಿಂ ದ+ಏಕಾಂತ+ಸೇವೆಯಿಂ(ಸೇವೆಯಿಂದ), ಸಂತಯಿಸು=ಸಮಾಧಾನಪಡಿಸು.

ವಾಚ್ಯಾರ್ಥ: ನಿರಂತರವಾದ ಶಿಕ್ಷಣದಿಂದ, ದೀರ್ಘಕಾಲದ ಪ್ರಯತ್ನದಿಂದ, ಅಂತರಂಗದ ಸಮುದ್ರ ಶಾಂತವಾಗುತ್ತದೆ. ಸಂತೃಪ್ತಿಯಾದ ಕೆಲಸದಿಂದ, ಏಕಾಂತದ ಚಿಂತನೆಯಿಂದ ಮನಸ್ಸನ್ನು ಸಮಾಧಾನ ಪಡಿಸು.

ADVERTISEMENT

ವಿವರಣೆ: ಉತ್ಕಲದ ಶ್ರೀಮಂತನೊಬ್ಬ ತರುಣನನ್ನು ಮನೆಯ ಊಟಕ್ಕೆ ಕರೆದ. ಭರ್ಜರಿ ಭೋಜನ. ಒಂದಾದ ಮೇಲೊಂದು ರುಚಿರುಚಿಯಾದ ತಿನಿಸುಗಳು ಬಂದವು. ಎಲ್ಲರೂ ಆನಂದವಾಗಿರುವಾಗ ಈ ತರುಣ ಬಿಕ್ಕಿ ಬಿಕ್ಕಿ ಅತ್ತ. ಮನೆಯ ಯಜಮಾನ ಮತ್ತು ನೆರೆದವರು “ಯಾಕೆ, ಏನಾಯಿತು?” ಎಂದು ಕೇಳಿದರು. ತರುಣ ಹೇಳಿದ, “ಇಂಥ ವಿಶೇಷ ಊಟ ನನಗೆ ಸರಿಯೆ? ಯಾವ ನಾಡಿನಲ್ಲಿ ನನ್ನ ಜನ ಒಂದು ಹಿಡಿ ಅಕ್ಕಿಗಾಗಿ, ಪಡಬಾರದ ಪಾಡನ್ನು ಪಡುತ್ತಾರೋ, ಅಂಥ ನಾಡಿನ ನಾನು ಈ ಸಮೃದ್ಧ ಊಟವನ್ನು ಮಾಡಬಹುದೆ? ದೇವರು ಮೆಚ್ಚಿಯಾನೆ?”. ಹೀಗೆ ಹೇಳಿ ಊಟಕ್ಕೆ ನಮಸ್ಕರಿಸಿ ಹೊರಗೆ ನಡೆದ. ಆತ ಗೋಪಬಂಧುದಾಸ. ಜನ ಅವನನ್ನು ಉತ್ಕಲದ ದೀನಬಂಧು ಎಂದು ಕರೆದರು. ಗೋಪಬಂಧು ಉತ್ಕಲ ಪ್ರಾಂತದ, ದೇಶಸೇವೆಯ ವೃತತೊಟ್ಟರು. ಹನ್ನೆರಡನೆಯ ವಯಸ್ಸಿಗೆ ಅವರ ಮದುವೆಯೂ ಆಯಿತು ಮತ್ತು ಇಪ್ಪತ್ತರ ಹೊತ್ತಿಗೆ ಹೆಂಡತಿ ತೀರಿಯೂ ಹೋದಳು. ಹೊಟ್ಟೆಪಾಡಿಗೆ ವಕೀಲಿ, ಹೃದಯತೃಪ್ತಿಗೆ ಸಮಾಜಸೇವೆ. ಪೂರಿ ಜಿಲ್ಲೆಯಲ್ಲಿ ಎಂದೂ ಕಾಣದ ಬರ. ಜನ ಹುಳಗಳಂತೆ ಸತ್ತರು. ಗೋಪ ಬಂಧು ಕಂಡವರಲ್ಲಿ ಬೇಡಿದರು, ಸರ್ಕಾರವನ್ನು ಕಾಡಿದರು. ಇವರ ಅಂತಃಕರಣದ ಕರೆಗೆ ಗವರ್ನರ್ ಓಡಿ ಬಂದ. ಸಹಾಯ ಬಂದಿತು. ಗೋಪಿಬಂಧು ಶಾಲೆ ಕಟ್ಟಿದರು. “ಉತ್ಕಲ ಸ್ವರಾಜ್ಯ ಶಿಕ್ಷಾಪೀಠ” ಸ್ಥಾಪಿಸಿದರು. ತರುಣರ ದೊಡ್ಡ ಪಡೆಯನ್ನು ನಿರ್ಮಿಸಿದರು. ಜನ ಅವರನ್ನು ಉತ್ಕಲದ ದ್ರೋಣಾಚಾರ್ಯ ಎಂದರು. ಗಾಂಧೀಜಿಯ ಕಣ್ಣಿಗೆ ಬಿದ್ದ ಗೋಪಬಂಧು ದಾಸರು ಮತ್ತಷ್ಟು ಮೈಮರೆತು ದುಡಿದರು.

ಅದರಲ್ಲೇ ಶಾಂತಿಯನ್ನು ಪಡೆದರು. ತಮ್ಮ ಐವತ್ತನೆಯ ವಯಸ್ಸಿಗೆ ಬದುಕು ಮುಗಿಸಿದರು. ಅದೆಂಥ ಬದುಕು! ಸತತವಾದ ಶಿಕ್ಷೆಯಿಂದ, ದೀರ್ಘಕಾಲದ ಪ್ರಯತ್ನದಿಂದ ತಮ್ಮ ಅಂತರಂಗದ ಕಡಲನ್ನು ಶಾಂತಗೊಳಿಸಿಕೊಂಡವರು ಗೋಪಬಂಧು. ತಮಗೆ ಇಷ್ಟವಾದ, ತೃಪ್ತಿಯನ್ನು ನೀಡಿದ ಸಮಾಜಸೇವೆಯ ವೃತ್ತಿಯನ್ನೇ ಅಪ್ಪಿಕೊಂಡು, ಏನೊಂದನ್ನು ಅಪೇಕ್ಷಿಸದೆ ತಮ್ಮ ಮನಸ್ಸನ್ನು ಸಂತೈಸಿಕೊಂಡು, ಕಗ್ಗದ ಈ ಮುಕ್ತಕಕ್ಕೆ ಉದಾಹರಣೆಯಾದವರು ಗೋಪಬಂಧು ದಾಸ. ಅವರ ಸರ್ವಕಾರ್ಯದ ಆಧಾರ ದೈವಭಕ್ತಿ. ಅದೇ ಅವರ ಅಖಂಡ ತ್ಯಾಗದ ಚಿಲುಮೆ. ಅವರೀಗ ಬಹುಜನರಿಗೆ ನೆನಪಿಲ್ಲ. ನಮ್ಮ ನಾಡಿನ ಮಹಾಪುರುಷರಿಗೆ ನಾವು ತೋರುವ ಗೌರವ ಅದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.