ADVERTISEMENT

ಗುರುರಾಜ ಕರಜಗಿ ಅಂಕಣ–ಬೆರಗಿನ ಬೆಳಕು| ಅಂತರಂಗ -ಬಹಿರಂಗ

ಡಾ. ಗುರುರಾಜ ಕರಜಗಿ
Published 21 ಜುಲೈ 2021, 20:23 IST
Last Updated 21 ಜುಲೈ 2021, 20:23 IST
ಗುರುರಾಜ ಕರಜಗಿ
ಗುರುರಾಜ ಕರಜಗಿ    

ಇಂತು ಹೊರಗೊಳಗುಗಳು ಬೇರೆ ಲೋಕಗಳಲ್ಲ |
ಅಂತರಂಗದೊಳೂರಸಂತೆ ಸದ್ದಿಹುದು ||
ಸಂತೆಯೊಳಮಂತರಂಗದ ಸದ್ದು ಕೇಳಿಪುದು |
ಸ್ವಾಂತದಿಕ್ಕೆಲಗಳವು – ಮಂಕುತಿಮ್ಮ || 441 ||

ಪದ-ಅರ್ಥ: ಹೊರಗೊಳಗುಗಳು=ಹೊರಗೆ+
ಒಳಗುಗಳು, ಅಂತರಂಗದೊಳೂರಸಂತೆ=
ಅಂತರಂಗದೊಳು+ಊರಸಂತೆ, ಸಂತೆಯೊಳಮಂತರಂಗದ=ಸಂತೆಯೊಳಮ್ (ಸಂತೆಯಲ್ಲಿ)+ ಅಂತರಂಗದ, ಸ್ವಾಂತದಿಕ್ಕೆಲಗಳವು=ಸ್ವಾಂತದ (ಮನಸ್ಸಿನ)+ ಇಕ್ಕೆಲಗಳು (ಎರಡು
ಬದಿಗಳು)+ಅವು.

ವಾಚ್ಯಾರ್ಥ: ಒಳಗೆ, ಹೊರಗೆ ಎನ್ನುವ ಲೋಕಗಳು ಬೇರೆಯಲ್ಲ. ಅಂತರಂಗದಲ್ಲಿ ಊರಸಂತೆಯ ಸದ್ದಿದೆ. ಅಂತೆಯೇ ಸಂತೆಯಲ್ಲೂ ಅಂತರಂಗದ ಸದ್ದು ಕೇಳಿಸುತ್ತದೆ. ಅವೆರಡೂ ಮನಸ್ಸಿನ ಎರಡು ಬದಿಗಳು.

ADVERTISEMENT

ವಿವರಣೆ: ಭಗವದ್ಗೀತೆಯ ಹದಿನೆಂಟನೆ ಅಧ್ಯಾಯದಲ್ಲಿ ಒಂದು ಸುಂದರವಾದ ಚಿಂತನೆ ಬರುತ್ತದೆ.
ಜ್ಞಾನಂ ಜ್ಞೇಯಂ ಪರಿಜ್ಞಾತಾ ತ್ರಿವಿಧಾ ಕರ್ಮಚೋದನಾ|
ಕರಣಂ ಕರ್ಮ ಕರ್ತಾ ಇತಿ ತ್ರಿವಿಧ: ಕರ್ಮಸಂಗ್ರಹ: ||

ಕರ್ಮದ ಪ್ರೇರಣೆ ಮೂರು ಅಂಶಗಳ ಸಂಯೋಜನೆಯಿಂದ ಆಗುವಂಥದ್ದು. ತಿಳಿವಳಿಕೆ, ತಿಳಿಯಬೇಕಾದ ವಿಷಯ ಮತ್ತು ತಿಳಿದವನು. ಇವುಗಳನ್ನು ಗೀತೆ ಜ್ಞಾನ, ಕರ್ಮ ಮತ್ತು ಕರ್ಮಿ ಎಂದು ಕರೆಯುತ್ತದೆ. ಅಡುಗೆಮನೆಯಿಂದ ವಾಸನೆ ನುಗ್ಗಿ ಬರುತ್ತಿದ್ದರೆ ಬೋಂಡಾ ಕರಿಯುತ್ತಿದ್ದಾರೆ ಎಂದು ತಿಳಿಯುವುದು ಜ್ಞಾನ. ಒಳಗೆ ಹೋಗಿ ಹೊಟ್ಟೆತುಂಬ ಬೋಂಡಾ ತಿನ್ನುವುದು ಕರ್ಮ. ತಿಂದವನು ಕರ್ಮಿ. ಈ ಪ್ರತಿಯೊಂದು ಕರ್ಮದ ಚರಿತ್ರೆಯಲ್ಲಿ ಮೂರು ಘಟ್ಟಗಳಿವೆ - ಪ್ರಾರಂಭ, ಪ್ರವರ್ತನ ಮತ್ತು ಪರಿಣಾಮ. ಯಾವುದೇ ಕರ್ಮ ಪ್ರಾರಂಭವಾಗುವುದು ಅಂತರಂಗದಲ್ಲಿ. ಈ ಕಾರ್ಯವನ್ನು ಮಾಡಬೇಕೇ, ಬೇಡವೇ? ಹೇಗೆ ಮಾಡಿದರೆ ಚೆನ್ನಾದೀತು? ಕರ್ಮದ ಪ್ರಾರಂಭದಲ್ಲಿ ಈ ಚಿಂತನೆಗಳು ಆಂತರ್ಯದಲ್ಲಿ ಮೂಡುತ್ತವೆ. ಅದು ಜ್ಞಾನಕ್ಷೇತ್ರದ್ದು. ಅದು ಕೇವಲ ಚಿಂತನೆಯಲ್ಲೇ ಉಳಿದುಬಿಟ್ಟರೆ ಕರ್ಮವಾಗುವುದಿಲ್ಲ. ಚಿಂತನೆ ಮುಂದುವರೆದು ಅದು ಪ್ರಪಂಚದಲ್ಲಿ ಕಾರ್ಯರೂಪವಾಗುತ್ತದೆ. ಕಾರ್ಯ ನಡೆಯುವುದು ಬಾಹ್ಯರೂಪದಲ್ಲಿ. ಅದು ಎಲ್ಲರಿಗೂ ಕಾಣುತ್ತದೆ. ಅಂದರೆ, ಅಂತರಂಗದಲ್ಲಿ ನಡೆದ ಚಿಂತನೆ ಕಾರ್ಯವಾಗುವುದು ಬಹಿರಂಗದಲ್ಲಿ. ಮೂರನೆಯ ಘಟ್ಟ, ಪರಿಣಾಮ. ಅದು ದೈವದ ಕೆಲಸ. ಕೆಲವೊಮ್ಮೆ ಎಷ್ಟೊಂದು ಚಿಂತನೆ ಮಾಡಿದ, ಸರಿಯಾಗಿ ಯೋಜಿಸಿದ ಕೆಲಸ ಫಲಕಾರಿಯಾಗದೆ ಹೋಗಬಹುದು. ಮತ್ತೆ ಕೆಲವು ಬಾರಿ, ಅಷ್ಟೊಂದು ಆಳವಾಗಿ ಯೋಚಿಸದ, ತಕ್ಷಣಕ್ಕೆ ಮಾಡಿದ ಕಾರ್ಯ ಅಭೂತಪೂರ್ವ ಪರಿಣಾಮವನ್ನು ನೀಡೀತು. ಪರಿಣಾಮ ನಮ್ಮನ್ನು ಮೀರಿದ್ದು. ಅದು ದೈವದ್ದು.

ಪ್ರಸ್ತುತ ಚಿಂತನೆಗೆ ಮೊದಲ ಎರಡು ಘಟ್ಟಗಳು ಮುಖ್ಯ, ಯಾವುದೇ ಕರ್ಮದ ಪ್ರಾರಂಭ ಆಗುವುದು ಅಂತರಂಗದಲ್ಲಿ. ಅದು ಜ್ಞಾನಕ್ಷೇತ್ರದ್ದು. ನಂತರ ಅದು ಪ್ರಕಟವಾಗಿ ಕಾರ್ಯವಾಗುವುದು, ಪ್ರವರ್ತನೆ. ಅದು ಬಾಹ್ಯಪ್ರಪಂಚದ್ದು, ಕ್ರಿಯಾಕ್ಷೇತ್ರದ್ದು. ಹೀಗೆ ಅಂತರಂಗದ ಯೋಜನೆ ಬಹಿರಂಗವಾಗುತ್ತದೆ. ಬಹಿರಂಗದಲ್ಲಿ ನಡೆದ ಕರ್ಮ ಬೆಳೆದಂತೆ ಹೊಸ ಯೋಚನೆಗಳು ಹುಟ್ಟಿಕೊಳ್ಳುತ್ತವೆ. ಆ ಹೊಸ ಯೋಚನೆಗಳಿಂದ ಮತ್ತೆ ಹೊಸಕಾರ್ಯ. ಹೀಗೆ ಅಂತರಂಗ, ಬಹಿರಂಗಗಳು ಬೇರೆಯಲ್ಲ. ಅವು ಮತ್ತೊಂದರ ಮುಂದುವರೆದ ಭಾಗ. ಇದನ್ನು ಈ ಕಗ್ಗ ತುಂಬ ಕಾವ್ಯಮಯವಾಗಿ ಹೇಳುತ್ತದೆ. ಅಂತರಂಗದಲ್ಲಿ ಊರಸಂತೆಯ ಸದ್ದಿದೆ. ಊರಸಂತೆಯೆಂದರೆ ಜಗತ್ತಿನ ವ್ಯಾಪಾರ, ಅದು ಬಹಿರಂಗದ್ದು, ಗದ್ದಲದ್ದು. ಅಂತೆಯೇ ಸಂತೆಯಲ್ಲಿ ಅಂತರಂಗದ ಕೂಗು ಕೇಳಿಸುತ್ತದೆ. ಪ್ರಪಂಚದ ಗದ್ದಲ ಹೊಸದೊಂದು ಯೋಚನೆಗೆ ದಾರಿಯಾಗುತ್ತದೆ. ಆದ್ದರಿಂದ ಅಂತರಂಗ- ಬಹಿರಂಗಗಳು ಮನಸ್ಸಿನ ಎರಡು ಬದಿಗಳು ಅಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.