ADVERTISEMENT

ಗುರುರಾಜ ಕರಜಗಿ ಅಂಕಣ–ಬೆರಗಿನ ಬೆಳಕು| ಪರೀಕ್ಷೆಯ ಕ್ಷಣ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 19:30 IST
Last Updated 22 ಜುಲೈ 2021, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ    

ಕಂಡ ಭೀಕರವಾದ ಕನಸಿನಿಂದ ಗಾಬರಿಯಾದ ಮಾದ್ರಿದೇವಿ ಬೋಧಿಸತ್ವನ ಪರ್ಣಕುಟಿಗೆ ಬಂದು ಬಾಗಿಲು ತಟ್ಟಿದಳು. ಆತ, ‘ಯಾರು ಈ ವೇಳೆಯಲ್ಲಿ ಬಂದದ್ದು?’ ಎಂದು ಕೇಳಿದ. ‘ಸ್ವಾಮಿ, ನಾನು ಮಾದ್ರಿ ಬಂದಿದ್ದೇನೆ’ ಎಂದಳಾಕೆ. ಆತ ಧೃಡವಾಗಿ ಕೇಳಿದ, ‘ಭದ್ರೆ, ನಾವು ಮೊದಲೇ ತೀರ್ಮಾನ ಮಾಡಿಕೊಂಡಿರಲಿಲ್ಲವೇ? ತೀರ್ಮಾನವನ್ನು ಉಲ್ಲಂಘಿಸಿ ಬರಬಾರದಿತ್ತಲ್ಲವೇ?’ ಆಕೆ, ‘ಸ್ವಾಮಿ, ನಾನು ತಮ್ಮಲ್ಲಿಗೆ ಕಾಮರಾಗದಿಂದ ಬಂದಿಲ್ಲ. ನನಗೊಂದು ಭಯಂಕರವಾದ ಕನಸು ಬಿದ್ದಿದೆ. ಅದರ ತಳಮಳವನ್ನು ತಡೆಯಲಾಗುತ್ತಿಲ್ಲ. ಆ ಕನಸಿನ ಅರ್ಥವನ್ನು ತಮ್ಮಿಂದ ತಿಳಿಯಲೆಂದು ಬಂದೆ’ ಎಂದಳು. ಆತ ಪರ್ಣಕುಟಿಯಿಂದ ಹೊರಗೆ ಬಂದು ಕುಳಿತು, ‘ಆಯ್ತು, ನಿನ್ನ ಕನಸನ್ನು ಹೇಳು’ ಎಂದು ನುಡಿದ. ಆಕೆ ತನ್ನ ಕನಸನ್ನು ಕಂಡಂತೆ ವಿಸ್ತಾರವಾಗಿ ಹೇಳಿದಳು. ಆಗ ವೆಸ್ಸಂತರ ಬೋಧಿಸತ್ವ ಕಣ್ಣುಮುಚ್ಚಿ ಕನಸನ್ನು ಧೇನಿಸಿದ. ಅವನಿಗೆ ಮುಂದಾಗುವುದು ಗೋಚರವಾಯಿತು. ಈಗ ನನ್ನ ದಾನದ ನಿಜವಾದ ಪರೀಕ್ಷೆಯಾಗಲಿದೆ. ನಾಳೆ ಒಬ್ಬ ಯಾಚಕ ಬಂದು ನನ್ನ ಮಕ್ಕಳನ್ನು ದಾನವಾಗಿ ಬೇಡುತ್ತಾನೆ. ಅದಕ್ಕೆ ನಾನು ಇಲ್ಲವೆನ್ನುವುದು ಅಸಾಧ್ಯ. ಆಗಲಿ ಬಂದದ್ದನ್ನು ಎದುರಿಸಲೇಬೇಕು ಎಂದುಕೊಂಡು ಮಾದ್ರಿಯನ್ನು ಸಮಾಧಾನ ಪಡಿಸಿದ. ‘ಭದ್ರೆ, ಬಹುಶಃ ನೀನು ಮಲಗುವ ಭಂಗಿ ಸರಿಯಾಗಿರಲಿಕ್ಕಿಲ್ಲ ಅಥವಾ ಮಲಗುವಾಗ ಮಾಡಿದ ಊಟ ಪಚನವಾಗಿರಲಾರದು. ಅದಕ್ಕಾಗಿ ಇಂತಹ ಕನಸುಗಳು ಬೀಳುತ್ತವೆ. ನಿನಗೆ ಯಾವ ಭಯವೂ ಬೇಡ. ನೀನು ಈಗ ಹೋಗಿ ಮಲಗಿಕೊ’ ಎಂದು ಹೇಳಿದಾಗ ಆಕೆ ಸ್ವಲ್ಪ ಸಮಾಧಾನದಿಂದ ಹೊರಟಳು.

ಮರುದಿನ ಬೆಳಿಗ್ಗೆ ಬೇಗನೇ ಎದ್ದು ಬೆಳಗಿನ ಕೃತ್ಯಗಳನ್ನು ಮುಗಿಸಿ ತನ್ನ ಇಬ್ಬರೂ ಮಕ್ಕಳನ್ನು ಹತ್ತಿರಕ್ಕೆ ಕರೆದು ತೊಡೆಯ ಮೇಲೆ ಕೂರಿಸಿಕೊಂಡಳು. ಅವರನ್ನು ಮುದ್ದಾಡಿ, ‘ಮಕ್ಕಳೇ ನಿನ್ನೆ ರಾತ್ರಿ ನಾನೊಂದು ಕೆಟ್ಟ ಕನಸನ್ನು ಕಂಡೆ. ಏನಾಗುತ್ತದೋ ತಿಳಿದಿಲ್ಲ. ಮಕ್ಕಳೇ, ನಾನು ಹಣ್ಣು ಹಂಪಲಗಳನ್ನು ತರಲು ಹೋದಾಗ ನೀವು ತುಂಬ ಜಾಗ್ರತರಾಗಿರಿ. ನಿಮ್ಮ ತಂದೆಯ ಬಳಿಯೇ ಇರಿ. ಯಾವ ಅಪಾಯವೂ ಆಗದಂತೆ ನೋಡಿಕೊಳ್ಳಿ’ ಎಂದು ಹೇಳಿ, ವೆಸ್ಸಂತರನಿಗೆ ಮಕ್ಕಳನ್ನು ಒಪ್ಪಿಸಿ ಫಲಮೂಲಗಳನ್ನು ತರಲು ಕಾಡಿಗೆ ಹೋದಳು.

ಅವಳು ಹೊರಗೆ ಹೋಗುವುದನ್ನೇ ದೂರ ನಿಂತು ನೋಡುತ್ತಿದ್ದ ಬ್ರಾಹ್ಮಣ, ತಾನಿದ್ದ ಪುಟ್ಟ ಪರ್ವತದಿಂದಿಳಿದು, ಕಾಲುದಾರಿಯಲ್ಲಿ ನಡೆದು ಪರ್ಣಕುಟಿಗಳ ಕಡೆಗೆ ಬಂದ. ಅವನು ಬರುವ ಹೊತ್ತಿಗೆ ವೆಸ್ಸಂತರ ಬೋಧಿಸತ್ವ ಪರ್ಣಕುಟಿಯ ಹೊರಗೆ ಕಲ್ಲಿನ ಪೀಠದ ಮೇಲೆ ಚಿನ್ನದ ಪುತ್ಥಳಿಯಂತೆ ಧ್ಯಾನಸ್ಥನಾಗಿ ಕುಳಿತಿದ್ದ. ಯಾವಾಗ ಯಾಚಕ ಬಂದಾನು ಎಂಬ ನಿರೀಕ್ಷೆಯಲ್ಲಿದ್ದ. ಅವನ ಮಕ್ಕಳಿಬ್ಬರೂ ಅವನ ಸುತ್ತಮುತ್ತಲೇ ಆಡುತ್ತಿದ್ದರು. ಒಂದಷ್ಟು ಸಮಯದ ನಂತರ ಮುದುಕ ಬ್ರಾಹ್ಮಣ ಬರುವುದು ದೂರದಿಂದ ಕಂಡಿತು. ಕಳೆದ ಏಳು ತಿಂಗಳಿನಿಂದ ತಾನು ಬಿಟ್ಟಿದ್ದ ದಾನದ ಪ್ರತಿಜ್ಞೆಯ ಪರೀಕ್ಷೆಯಾಗುತ್ತದೆ ಎನ್ನಿಸಿತು ವೆಸ್ಸಂತರನಿಗೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.