ADVERTISEMENT

ಬೆರಗಿನ ಬೆಳಕು: ಹಸ್ತಮುದ್ರೆಯಲ್ಲಿ ಸಂವಾದ

ಡಾ. ಗುರುರಾಜ ಕರಜಗಿ
Published 26 ಮೇ 2021, 22:01 IST
Last Updated 26 ಮೇ 2021, 22:01 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಮರುದಿನ ರಾಜ ಆ ಐದು ಸ್ತ್ರೀಯರನ್ನು ಕರೆದು ಕೇಳಿದ, ‘ನೀವು ಮಹೋಷಧಕುಮಾರ ಮತ್ತು ಪರಿವ್ರಾಜಿಕೆ ಮಾತನಾಡುವುದನ್ನು ಕೇಳಿದೆವು ಎಂದಿರಿ. ನೀವು ಕೇಳಿದ್ದು ಏನು?’. ಅವರು ಹೇಳಿದರು, ‘ಮಹಾರಾಜಾ, ಅವರಿಬ್ಬರೂ ಬಾಯಿಬಿಟ್ಟು ಮಾತನಾಡಲಿಲ್ಲ. ಕೇವಲ ಸಂಜ್ಞೆ ಮಾಡುತ್ತಿದ್ದರು’. ‘ಆಯ್ತು, ಆ ಸಂಜ್ಞೆಗಳೇನು? ಅವುಗಳಿಗೆ ಅರ್ಥವೇನು?’ ಕೇಳಿದ ರಾಜ. ಒಬ್ಬ ಮಹಿಳೆ ಹೇಳಿದಳು, ‘ಪ್ರಭೂ, ಕುಮಾರನನ್ನು ಪಡಸಾಲೆಯಲ್ಲಿ ಕಾಣುತ್ತಲೇ ತನ್ನ ಕೈಗಳನ್ನು ಚಾಚಿ ಈ ರಾಜನನ್ನು ಕೈಗೊಂಬೆಯಂತೆ ಹಿಡಿದುಕೊಂಡು ಕಟ್ಟಿ ಹಾಕಿ, ರಾಜ್ಯವನ್ನು ನಿನ್ನ ಕೈಗೆ ತೆಗೆದುಕೊಳ್ಳುವುದು ಕಷ್ಟವೇ? ಎಂದು ಕೇಳಿದಳು. ಆಗ ಬೋಧಿಸತ್ವ ಕುಮಾರ, ತನ್ನ ಬಿಗಿಮುಷ್ಠಿಯನ್ನು ತೋರಿಸಿ - ಇರು, ಸ್ವಲ್ಪ ದಿನಗಳಲ್ಲೇ ಅವನನ್ನು ಬಿಗಿ ಹಿಡಿದು ರಾಜ್ಯವನ್ನು ಕೈಗೆ ತೆಗೆದುಕೊಳ್ಳುತ್ತೇನೆ ಎಂದ.

ಆಗ ಆ ಮಾಯಗಾತಿ ಪರಿವ್ರಾಜಿಕೆ ತನ್ನ ಕೈಗಳನ್ನು ತಲೆಯ ಮೇಲಿಟ್ಟುಕೊಂಡು - ಬಿಡಬೇಡ, ಅವನ ತಲೆಯನ್ನೇ ಕತ್ತರಿಸಿ ಬಿಡು – ಎಂಬಂತೆ ಸೂಚನೆ ಕೊಟ್ಟಳು. ಆಗ ಆತ ತನ್ನ ಹೊಟ್ಟೆಯ ಮೇಲೆ ಕೈಯಾಡಿಸಿಕೊಂಡು – ಚಿಂತಿಸಬೇಡ, ತಲೆಯೊಂದಿಗೆ ಅವನ ಮಧ್ಯಭಾಗವನ್ನು ಕತ್ತರಿಸುತ್ತೇನೆ – ಎನ್ನುವಂತೆ ಸಂಜ್ಞೆ ಮಾಡಿದ. ಆದ್ದರಿಂದ ಮಹಾರಾಜಾ, ನೀನು ತುಂಬ ಎಚ್ಚರದಿಂದ ಇರಬೇಕು. ಈ ಮಹೋಷಧಕುಮಾರನನ್ನು ಬೇಗನೆ ಕೊಲ್ಲಿಸಿಬಿಡು’. ಆಕೆಯ ಮಾತಿಗೆ ಉಳಿದ ಸ್ತ್ರೀಯರೂ ತಲೆ ಅಲ್ಲಾಡಿಸಿದರು.

ರಾಜ ಈ ಮಾತುಗಳನ್ನು ಚಿಂತಿಸಿದ. ಮಹೋಷಧಕುಮಾರನ ನಿಷ್ಠೆ ನನಗೆ ಗೊತ್ತು, ಆತ ಮೋಸ ಮಾಡಲಾರ. ಈಕೆ ಹೇಗಿದ್ದರೂ ಪರಿವ್ರಾಜಿಕೆ. ಆಕೆಯನ್ನೇ ಕೇಳಿ ನೋಡುತ್ತೇನೆ ಎಂದುಕೊಂಡು ಮರುದಿನ ಪರಿವ್ರಾಜಿಕೆ ಊಟ ಮಾಡುವಾಗ ಅವಳ ಬಳಿಗೆ ಬಂದು ಕೇಳಿದ, ‘ಆರ್ಯೆ, ನಿನ್ನೆ ನೀನು ಮಹೋಷಧಕುಮಾರನನ್ನು ಕಂಡಿದ್ದೇಯಾ?’ ಆಕೆ, ‘ಹೌದು, ನಿನ್ನೆ ಊಟ ಮಾಡಿ ಹೋಗುವಾಗ ಮೊಗಸಾಲೆಯಲ್ಲಿ ಅವನನ್ನು ಕಂಡಿದ್ದೆ’ ಎಂದಳು. ‘ಅವನ ಜೊತೆಗೆ ಹಸ್ತಮುದ್ರೆಯಲ್ಲಿ ಮಾತನಾಡಿದೆಯಂತಲ್ಲ? ಏನು ಮಾತದು?’ ಎಂದು ರಾಜ ಕುತೂಹಲದಿಂದ ಕೇಳಿದ. ಆಕೆ ನಿರಾಳವಾಗಿ ಹೇಳಿದಳು.

ADVERTISEMENT

‘ಆತ ಪಂಡಿತ, ಬುದ್ಧಿವಂತನೆಂದು ಎಲ್ಲರೂ ಹೇಳಿದ್ದರಿಂದ, ಅವನನ್ನು ಪರೀಕ್ಷಿಸಲು ಮುದ್ರಾಶಾಸ್ತ್ರದಲ್ಲಿ ಸಂವಾದ ಮಾಡಿದೆ. ಮೊದಲು ನನ್ನ ಕೈ ಚಾಚಿದೆ. ಅದರರ್ಥ, ನಿನ್ನನ್ನು ಕರೆದುಕೊಂಡು ಬಂದ ರಾಜ, ನಿನ್ನ ವಿಷಯದಲ್ಲಿ ಮುಕ್ತನಾಗಿದ್ದಾನೋ ಅಥವಾ ನಿನಗೆ ಸ್ವಾತಂತ್ರ್ಯವನ್ನು ಕೊಟ್ಟಿಲ್ಲವೇ? ಅದಕ್ಕೆ ಆತ ಪ್ರತಿಯಾಗಿ ತನ್ನ ಮುಷ್ಠಿ ಬಿಗಿ ಹಿಡಿದು ತೋರಿಸಿದ. ಅದರ ಅರ್ಥ. ರಾಜ ನನಗೆ ಮಾತು ಕೊಟ್ಟು, ಕರೆಸಿಕೊಂಡು, ಈಗ ಕೈ ತುಂಬ ಬಿಗಿ ಮಾಡಿದ್ದಾನೆ, ಅಧಿಕಾರ, ಹಣ ಯಾವುದನ್ನೂ ಕೊಡುತ್ತಿಲ್ಲ. ಆಗ ನಾನು ನಿನಗೆ ತುಂಬ ಕಷ್ಟವಾಗುತ್ತಿದ್ದರೆ, ನನ್ನ ಹಾಗೆ ಪ್ರವ್ರಜಿತನಾಗು ಎಂದು ಹೇಳುವಂತೆ, ನನ್ನ ಕೈಗಳನ್ನು ತಲೆಯ ಮೇಲೆ ಇಟ್ಟುಕೊಂಡೆ. ಅದಕ್ಕೆ ಅವನು, ತನ್ನ ಹೊಟ್ಟೆಯ ಮೇಲೆ ಕೈಯಾಡಿಸಿಕೊಂಡು - ನನ್ನ ಮೇಲೆ ಅನೇಕ ಜನರು ಅವಲಂಬಿತರಾಗಿದ್ದಾರೆ, ಅವರ ಜವಾಬ್ದಾರಿ ನನ್ನದು, ಆದ್ದರಿಂದ ಪ್ರವ್ರಜಿತನಾಗಲಾರೆ – ಎಂದು ಸಂಜ್ಞೆ ಮಾಡಿದ....’ ಎಂದು ವಿವರಿಸಿದಳು. ರಾಜ ಮಹೋಷಧಕುಮಾರನನ್ನು ಅದೇ ರೀತಿ ಪ್ರಶ್ನೆ ಮಾಡಿದಾಗ ಆತನೂ ಪರಿವ್ರಾಜಿಕೆ ನೀಡಿದ ಉತ್ತರವನ್ನೇ ನೀಡಿದ. ರಾಜನಿಗೆ ಅಂತಃಪುರದ ಸ್ತ್ರೀಯರಿಗೆ ಈ ಸಂಜ್ಞೆಗಳು ಅರ್ಥವಾಗಿಲ್ಲವೆಂಬುದು ಸ್ಪಷ್ಟವಾಗಿ, ಕುಮಾರನಿಗೆ ಸೇನಾಪತಿ ಹುದ್ದೆಯನ್ನು ನೀಡಿ, ಅಪಾರ ಹಣವನ್ನು ಕೊಟ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.