
ಸ್ವಾತಂತ್ರ್ಯೋತ್ತರ ಭಾರತದ ಬಹುಮುಖ್ಯ ಜಾಗತಿಕ ಸಂಗಾತಿ ರಷ್ಯಾ. ಸಂಕಷ್ಟ ಕಾಲದಲ್ಲಿ ನೆರವಿಗೆ ನಿಂತಿರುವ ರಷ್ಯಾದೊಂದಿಗಿನ ಭಾರತದ ಸಂಬಂಧ ಮೋದಿ ಅವರು ಪ್ರಧಾನಿಯಾದ ನಂತರ ಮೊದಲಿನಷ್ಟು ಮಧುರವಾಗಿಲ್ಲ. ಇತ್ತೀಚೆಗೆ ಮರಳಿ ಹಳಿಗೆ ಬರುತ್ತಿರುವ ಉಭಯ ರಾಷ್ಟ್ರಗಳ ನಂಟನ್ನು, ಪುಟಿನ್‌ರ ಭಾರತ ಭೇಟಿ ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.
ಭಾರತ ಹಾಗೂ ರಷ್ಯಾ ನಡುವಿನ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಡಿ. 4ರಂದು ವ್ಲಾದಿಮಿರ್ ಪುಟಿನ್ ಭಾರತಕ್ಕೆ ಆಗಮಿಸುತ್ತಿದ್ದಾರೆ. 2021ರಲ್ಲಿ ಭಾರತದಲ್ಲಿ ನಡೆದ ಶೃಂಗಸಭೆಯಲ್ಲಿ ಪುಟಿನ್ ಪಾಲ್ಗೊಂಡಿದ್ದರು. ಈ ನಾಲ್ಕು ವರ್ಷಗಳಲ್ಲಿ ಭಾರತ ಹಾಗೂ ರಷ್ಯಾಗೆ ಸಂಬಂಧಿಸಿದಂತೆ ಅನೇಕ ಬೆಳವಣಿಗೆಗಳು ನಡೆದಿವೆ. ಜಾಗತಿಕ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ.
ಉಕ್ರೇನ್ ಹಾಗೂ ರಷ್ಯಾ ನಡುವೆ ಕದನ ಚಾಲ್ತಿಯಲ್ಲಿದೆ. ಚೀನಾ ಹಾಗೂ ರಷ್ಯಾ ನಡುವಿನ ಸಂಬಂಧ ಗಟ್ಟಿಗೊಂಡಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಷ್ಯಾ ಜೊತೆಗಿನ ವಾಣಿಜ್ಯಿಕ ಸಂಬಂಧದ ಕಾರಣಕ್ಕೆ ಭಾರತದ ಮೇಲೆ ದಂಡನಾಸುಂಕ ಹೇರಿದ್ದಾರೆ. ಭಾರತ ಹಾಗೂ ಪಾಕಿಸ್ತಾನದ ನಡುವಿನ ಘರ್ಷಣೆಯ ವೇಳೆ ರಷ್ಯಾದ ಯುದ್ಧ ಉಪಕರಣಗಳು ಭಾರತದ ಸಹಾಯಕ್ಕೆ ಒದಗಿದ್ದು ಖಾತರಿಯಾಗಿದೆ. ಈ ಎಲ್ಲ ಸಂಗತಿಗಳ ಬೆಳಕಿನಲ್ಲಿಯೇ ಪುಟಿನ್‌ರ ಭಾರತ ಭೇಟಿಯನ್ನು ಮತ್ತು ಈ ಭೇಟಿ ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧದ ಮೇಲೆ ಉಂಟು ಮಾಡುವ ಪರಿಣಾಮವನ್ನು ಅಂದಾಜಿಸಬೇಕಿದೆ.
ಸ್ವಾತಂತ್ರ್ಯಾನಂತರ ಭಾರತ, ಸೋವಿಯತ್ ಒಕ್ಕೂಟದಿಂದ ಕೈಗಾರಿಕೀಕರಣಕ್ಕೆ ಪ್ರೇರಣೆ ಮತ್ತು ಸಹಕಾರ ಪಡೆದಿತ್ತು. 1951ರಲ್ಲಿ ಕಾಶ್ಮೀರ ವಿವಾದ ವಿಶ್ವಸಂಸ್ಥೆಯಲ್ಲಿ ಚರ್ಚೆಗೊಳಗಾದಾಗ ಭಾರತಕ್ಕೆ ಬೆಂಬಲವಾಗಿ ಸೋವಿಯತ್ ತನ್ನ ವೀಟೊ ಚಲಾಯಿಸಿತ್ತು. 1953ರಲ್ಲಿ ಸೋವಿಯತ್ ನಾಯಕ ಜೋಸೆಫ್ ಸ್ಟಾಲಿನ್, ಭಾರತದ ಉಪರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ, ‘ನೀವು ನಮ್ಮ ಶತ್ರುಗಳಲ್ಲ ಎನ್ನುವುದು ನಮ್ಮ ನೀತಿಯಾಗಿ ಮುಂದುವರಿಯುತ್ತದೆ ಮತ್ತು ನೀವು ನಮ್ಮ ಸಹಾಯವನ್ನು ನಂಬಬಹುದು’ ಎಂದು ಹೇಳಿದ್ದರು. 1955ರಲ್ಲಿ ಸೋವಿಯತ್ ರಷ್ಯಾಕ್ಕೆ ಪ್ರಧಾನಿ ನೆಹರೂ ಭೇಟಿಯಿತ್ತರು. ಅದೇ ವರ್ಷ ನಿಕಿತಾ ಕ್ರುಶ್ಚೇವ್ ಭಾರತಕ್ಕೆ ಬಂದುಹೋದರು. ಭಿಲಾಯಿಯ ಉಕ್ಕಿನ ಕಾರ್ಖಾನೆ ನಿರ್ಮಾಣಕ್ಕೆ ಸೋವಿಯತ್ ಕೈ ಜೋಡಿಸಿತು.
1970ರ ದಶಕದಲ್ಲಿ ಚೀನಾದ ಜೊತೆಗೆ ಮೈತ್ರಿ ಸಾಧಿಸಲು ಹವಣಿಸುತ್ತಿದ್ದ ಅಮೆರಿಕ, ಅದಕ್ಕೆ ಪೂರಕವಾಗಿ ಪಾಕಿಸ್ತಾನವನ್ನು ಸೇತುವೆಯಾಗಿ ನೋಡುತ್ತಿತ್ತು. 1971ರಲ್ಲಿ ಬಾಂಗ್ಲಾ ವಿಮೋಚನಾ ಯುದ್ಧ ನಡೆದಾಗ, ಪಾಕಿಸ್ತಾನಕ್ಕೆ ಅಮೆರಿಕ ಬೆಂಬಲವಾಗಿ ನಿಂತಿತು. ಯುದ್ಧದಲ್ಲಿ ಭಾರತವನ್ನು ಬೆದರಿಸಲೋ ಎಂಬಂತೆ ಅಮೆರಿಕ ತನ್ನ ಯುಎಸ್ಎಸ್ ಎಂಟರ್‌ಪ್ರೈಸ್ ವಿಮಾನವಾಹಕ ನೌಕೆ ಮತ್ತು ಏಳನೇ ಫ್ಲೀಟ್ ಕಾರ್ಯಪಡೆಯನ್ನು ಬಂಗಾಳ ಕೊಲ್ಲಿಗೆ ಕಳುಹಿಸಿತು. ಆಗ ಭಾರತದ ನೆರವಿಗೆ ಬಂದದ್ದು ಸೋವಿಯತ್ ಒಕ್ಕೂಟ!
ಅಮೆರಿಕ ಹಾಗೂ ಪಾಕಿಸ್ತಾನ ನಡುವಿನ ಸಖ್ಯದ ಪರಿಣಾಮಗಳನ್ನು ಅಂದಾಜಿಸಿದ್ದ ಭಾರತದ ಪ್ರಧಾನಿ ಇಂದಿರಾ ಗಾಂಧಿ, ಸೋವಿಯತ್ ಜೊತೆಗೆ ಸ್ನೇಹ ಮತ್ತು ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ್ದರು. ಹಾಗಾಗಿ, ಯುಎಸ್ಎಸ್ ಎಂಟರ್‌ಪ್ರೈಸ್ ಹಿಂದೂ ಮಹಾಸಾಗರವನ್ನು ಪ್ರವೇಶಿಸಿದಾಗ, ಅಮೆರಿಕದ ಯುದ್ಧನೌಕೆಗಳು ಮತ್ತು ಭಾರತದ ಭೂಪ್ರದೇಶದ ನಡುವೆ ಸೋವಿಯತ್ ನೌಕಾಪಡೆ ನಿಯೋಜನೆಗೊಂಡಿತು. ಇದು ಬಾಂಗ್ಲಾಯುದ್ಧದಲ್ಲಿ ನಿರ್ಣಾಯಕ ಎನಿಸಿತು. ಅಮೆರಿಕ ತನ್ನ ಯುದ್ಧನೌಕೆಯನ್ನು ಹಿಂದಕ್ಕೆ ಕರೆಸಿಕೊಂಡಿತು.
ಆ ಬಳಿಕ ಭಾರತ ಹಾಗೂ ಸೋವಿಯತ್ ಒಕ್ಕೂಟದ ನಡುವಿನ ಸಂಬಂಧ ಅಲಿಪ್ತ ನೀತಿಯ ಚೌಕಟ್ಟನ್ನು ದಾಟಿ ಮತ್ತಷ್ಟು ಗಟ್ಟಿಯಾಯಿತು. ವಿವಿಧ ಕ್ಷೇತ್ರಗಳಲ್ಲಿ ಸೋವಿಯತ್ ಸಹಕಾರ ಪ್ರತಿಫಲಿಸಿತು. 1984ರಲ್ಲಿ ಸೋವಿಯತ್ ಬಾಹ್ಯಾಕಾಶ ನೌಕೆಯಲ್ಲಿ ಭಾರತದ ರಾಕೇಶ್ ಶರ್ಮ ಗಗನಯಾತ್ರೆ ನಡೆಸಿದರು. 1985ರಲ್ಲಿ ಸೋವಿಯತ್ ನೆರವಿನೊಂದಿಗೆ ತಮಿಳುನಾಡಿನ ಕೂಡಂಕುಳಂನಲ್ಲಿ ಪರಮಾಣು ವಿದ್ಯುತ್ ಸ್ಥಾವರ ಆರಂಭಿಸಲಾಯಿತು.
1991ರಲ್ಲಿ ಸೋವಿಯತ್ ವಿಘಟನೆಯಾದ ಬಳಿಕ ಭಾರತ–ರಷ್ಯಾದ ಸಂಬಂಧ ಮುಂದುವರಿಯಿತು. ಭಾರತದ ವಿದೇಶಾಂಗ ನೀತಿಯಲ್ಲಿ ರಷ್ಯಾಕ್ಕೆ ಆದ್ಯತೆ ದೊರೆಯಿತು. ಸೋವಿಯತ್ ವಿಘಟನೆಯಿಂದಾಗಿ ರಷ್ಯಾ ವಾಣಿಜ್ಯಿಕ ಹಾಗೂ ಆರ್ಥಿಕ ಸವಾಲನ್ನು ಎದುರಿಸುತ್ತಿತ್ತು. 1993ರಲ್ಲಿ ಭಾರತ ಹಾಗೂ ರಷ್ಯಾ ನಡುವಿನ ಸ್ನೇಹ ಮತ್ತು ಸಹಕಾರ ಒಪ್ಪಂದ ನವೀಕರಣಗೊಂಡಿತು. ಮೇ 7, 2000ರಂದು ವ್ಲಾದಿಮಿರ್ ಪುಟಿನ್ ರಷ್ಯಾದ ಅಧ್ಯಕ್ಷರಾದ ಬಳಿಕ ಭಾರತದ ಜೊತೆಗೆ ರಷ್ಯಾ ಮತ್ತಷ್ಟು ಬೆಸೆದುಕೊಂಡಿತು. 2000 ಇಸವಿಯ ಅಕ್ಟೋಬರ್‌ನಲ್ಲಿ ಪುಟಿನ್ ಭಾರತಕ್ಕೆ ಭೇಟಿಯಿತ್ತರು. ಭದ್ರತೆ, ರಕ್ಷಣೆ, ವ್ಯಾಪಾರ ಮತ್ತು ಆರ್ಥಿಕತೆ, ವಿಜ್ಞಾನ ಮತ್ತು ತಂತ್ರಜ್ಞಾನ, ಸಂಸ್ಕೃತಿ, ಹೀಗೆ ವಿವಿಧ ಕ್ಷೇತ್ರಗಳಲ್ಲಿ ಉಭಯ ದೇಶಗಳು ಗೌರವ ಹಾಗೂ ಸಹಕಾರದೊಂದಿಗೆ ಮುಂದುವರಿಯಲು ನಿರ್ಧರಿಸಿದವು. ಜಂಟಿಯಾಗಿ ಬ್ರಹ್ಮೋಸ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದವು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವಕ್ಕೆ ಭಾರತದ ಉಮೇದುವಾರಿಕೆಯನ್ನು ರಷ್ಯಾ ಬೆಂಬಲಿಸಿತು.
2003ರಲ್ಲಿ ಭಾರತದ ನಾಗರಿಕ ಪರಮಾಣು ಕಾರ್ಯಕ್ರಮವನ್ನು ವಿಸ್ತರಿಸುವ ಭಾಗವಾಗಿ ‘ಪರಮಾಣು ಸಹಕಾರ ಒಪ್ಪಂದ’ಕ್ಕೆ ರಷ್ಯಾ ಮತ್ತು ಭಾರತ ಸಹಿ ಹಾಕಿದವು. 2010ರ ಡಿಸೆಂಬರ್‌ನಲ್ಲಿ ಪುಟಿನ್ ಭಾರತಕ್ಕೆ ಬಂದಾಗ, ಉಭಯ ದೇಶಗಳ ನಡುವಿನ ಸಂಬಂಧವನ್ನು ಎತ್ತರಿಸುವ ವಿಶೇಷ ಕಾರ್ಯತಾಂತ್ರಿಕ ಸಹಭಾಗಿತ್ವ ಒಪ್ಪಂದಕ್ಕೆ ಅಂಕಿತ ಹಾಕಲಾಯಿತು. 2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಅಮೆರಿಕವನ್ನು ಹೆಚ್ಚು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮತ್ತು ರಷ್ಯಾದ ಜೊತೆಗೆ ಸಮತೋಲನ ಸಾಧಿಸುವ ಹೆಜ್ಜೆ ಇಡಲಾಯಿತು. ರಕ್ಷಣಾ ಸಾಮಗ್ರಿಗಳ ಖರೀದಿಯಲ್ಲಿ ರಷ್ಯಾ ಮೇಲಿನ ಅವಲಂಬನೆಯನ್ನು ಕಡಿತಗೊಳಿಸುವ ಹಾಗೂ ವೈವಿಧ್ಯ ಕಾಯ್ದುಕೊಳ್ಳುವ ಕ್ರಮ ಕೈಗೊಳ್ಳಲಾಯಿತು. ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾದ ಬಳಿಕ 2017ರಲ್ಲಿ ಅಮೆರಿಕ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾ ಒಳಗೊಂಡ ‘ಕ್ವಾಡ್’ ಹೊಸ ಹುರುಪು ಪಡೆಯಿತು. ಭಾರತದ ಇಂಡೋ–ಪೆಸಿಫಿಕ್ ಕಾರ್ಯತಂತ್ರದಲ್ಲಿ ಬದಲಾವಣೆ
ಯಾದಾಗ ಚೀನಾದೊಂದಿಗೆ ರಷ್ಯಾ ಇನ್ನಷ್ಟು ಬೆಸೆದುಕೊಂಡಿತು.
2020ರಲ್ಲಿ ಭಾರತ ಹಾಗೂ ರಷ್ಯಾ ನಡುವಿನ ವಾರ್ಷಿಕ ಶೃಂಗಸಭೆ ರದ್ದಾಯಿತು! ಅದಕ್ಕೆ ಕೋವಿಡ್ ಕಾರಣ ಎನ್ನಲಾಯಿತು. ಆದರೆ, ಇತರ ಶೃಂಗಸಭೆಗಳು ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆದಿದ್ದವು. ಅಸಲಿಗೆ ಭಾರತ ಹಾಗೂ ಅಮೆರಿಕ ನಡುವೆ ಬಿಗಿಯಾದ ಬಂಧ ಹಾಗೂ ಅಮೆರಿಕ ನೇತೃತ್ವದ ಕ್ವಾಡ್‌ನಲ್ಲಿ ಭಾರತ ಭಾಗಿಯಾದದ್ದನ್ನು ವಾರ್ಷಿಕ ಸಭೆಯ ರದ್ದತಿಯ ಮೂಲಕ ರಷ್ಯಾ ವಿರೋಧಿಸಿತ್ತು. ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್, ‘ಪಾಶ್ಚಿಮಾತ್ಯ ರಾಷ್ಟ್ರಗಳು ಭಾರತವನ್ನು ದಾಳವಾಗಿಸಿಕೊಂಡಿವೆ’ ಎಂದು ಪ್ರತಿಕ್ರಿಯಿಸಿದ್ದರು. ಆದರೆ, ‘ನಾವು ಸ್ವತಂತ್ರ ವಿದೇಶಾಂಗ ನೀತಿಯನ್ನು ಹೊಂದಿದ್ದೇವೆ, ಭಾರತದ ಇಂಡೋ–ಪೆಸಿಫಿಕ್ ಕಾರ್ಯತಂತ್ರ ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿದೆ, ಯಾವುದೇ ನಿರ್ದಿಷ್ಟ ದೇಶದ ಮೇಲೆ ಕೇಂದ್ರೀಕೃತವಾಗಿಲ್ಲ’ ಎಂದು ಭಾರತ ತಾಳ್ಮೆಯಿಂದ ಪ್ರತಿಕ್ರಿಯಿಸಿತು.
ಭಾರತ ತನ್ನ ನಿಲುವಿಗೆ ಬದ್ಧವಾಯಿತು. ಎಸ್–400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಖರೀದಿಯ ವಿಷಯ ಬಂದಾಗ ಅಮೆರಿಕದ ಒತ್ತಡವನ್ನು ಪಕ್ಕಕ್ಕಿಟ್ಟು ರಷ್ಯಾದ ಜೊತೆಗೆ ಖರೀದಿ ಒಪ್ಪಂದ ಅಂತಿಮಗೊಳಿಸಿತು. ಇದು ಭಾರತ–ರಷ್ಯಾ ನಡುವಿನ ಸಂಬಂಧವನ್ನು ಮತ್ತೊಮ್ಮೆ ಹಳಿಗೆ ತಂದಿತು. 2021ರಲ್ಲಿ ಪುಟಿನ್ ಅವರು ಭಾರತಕ್ಕೆ ಭೇಟಿಯಿತ್ತಾಗ, ಬಾಹ್ಯಾಕಾಶ, ರಕ್ಷಣೆ ಮತ್ತು ಇಂಧನ ಸುರಕ್ಷತೆಯ ಸಹಕಾರ ಸೇರಿದಂತೆ ವಿಭಿನ್ನ ಕ್ಷೇತ್ರಗಳಿಗೆ ಸಂಬಂಧಿಸಿದ 28 ಒಪ್ಪಂದ ಏರ್ಪಟ್ಟಿದ್ದವು.
ನಾಲ್ಕು ವರ್ಷಗಳ ಬಳಿಕ ಪುಟಿನ್ ಇದೀಗ ಮತ್ತೊಮ್ಮೆ ಭಾರತಕ್ಕೆ ಬರುತ್ತಿದ್ದಾರೆ. ರಷ್ಯಾದ ರಕ್ಷಣಾ ಉದ್ಯಮಕ್ಕೆ ಭಾರತ ಎರಡನೇ ಅತಿದೊಡ್ಡ ಮಾರುಕಟ್ಟೆ. ಸುಧಾರಿತ ರಕ್ಷಣಾ ಸಾಮಗ್ರಿಗಳ ಖರೀದಿಯ ಕುರಿತ ಮಾತುಕತೆ, ರಕ್ಷಣೆ, ಭದ್ರತೆ, ಇಂಧನ ಕುರಿತ ಒಪ್ಪಂದಗಳು ನಿರೀಕ್ಷಿತವೇ. ಉಕ್ರೇನ್ ಯುದ್ಧ ಆರಂಭವಾದ ಬಳಿಕ ಮೊದಲ ಬಾರಿಗೆ ಪುಟಿನ್ ಭಾರತಕ್ಕೆ ಆಗಮಿಸುತ್ತಿದ್ದಾರೆ. ಉಕ್ರೇನ್ ಯುದ್ಧ ವಿಷಯದಲ್ಲಿ ‘ಇದು ಯುದ್ಧಕ್ಕೆ ಕಾಲವಲ್ಲ’ ಎಂದು ಪುಟಿನ್ ಅವರ ಎದುರಿನಲ್ಲಿ ಕೂತು ಪ್ರಧಾನಿ ಮೋದಿ ಹೇಳಿದ್ದರೂ, ಮಾತುಕತೆಯ ಮೂಲಕ ಬಿಕ್ಕಟ್ಟು ಬಗೆಹರಿಸಿಕೊಳ್ಳಿ ಎಂದು ಜಾಗತಿಕ ವೇದಿಕೆಗಳಲ್ಲಿ ಭಾರತ ಸ್ಪಷ್ಟಪಡಿಸಿದ್ದರೂ, ಟ್ರಂಪ್ ಮಾತ್ರ ಉಕ್ರೇನ್ ಯುದ್ಧ ಮುಂದುವರಿದಿದ್ದರೆ ಅದಕ್ಕೆ ಚೀನಾ ಮತ್ತು ಭಾರತ ಕಾರಣ; ರಷ್ಯಾದ ತೈಲ ಖರೀದಿಯನ್ನು ಮುಂದುವರಿಸುವ ಮೂಲಕ ಈ ದೇಶಗಳು ರಷ್ಯಾಕ್ಕೆ ಹಣಕಾಸು ಒದಗಿಸುತ್ತಿವೆ ಎಂದು ಪದೇ ಪದೇ ಹೇಳುತ್ತಿದ್ದಾರೆ.
ಅಮೆರಿಕದ ಸುಂಕ ಸಮರದ ನಡುವೆಯೇ 2025–26ನೇ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ 8.2ರಷ್ಟು ದಾಖಲಾಗಿದೆ. ಹಾಗಾಗಿ, ಅಮೆರಿಕದ ಸುಂಕ ಬೆದರಿಕೆಯ ಕಾರಣದಿಂದ ಅಲ್ಲದಿದ್ದರೂ, ಜಾಗತಿಕ ಶಾಂತಿ ಕುರಿತ ಭಾರತದ ಬದ್ಧತೆಯ ದೃಷ್ಟಿಯಿಂದ ಮತ್ತು ಟ್ರಂಪ್ ಅವರನ್ನು ಸರಿದೂಗಿಸುವ ಸೂತ್ರವಾಗಿ ಉಕ್ರೇನ್ ಯುದ್ಧದ ವಿಷಯ ಪ್ರಸ್ತಾಪವಾಗಬಹುದು. ಭಾರತ ಹಾಗೂ ರಷ್ಯಾ ನಡುವಿನ ದ್ವಿಪಕ್ಷೀಯ ಸಂಬಂಧ ಹಲವು ಪರೀಕ್ಷೆಗಳನ್ನು ಎದುರಿಸಿ ಗಟ್ಟಿಗೊಂಡಿದೆ. ಪುಟಿನ್ ಅವರ ಭಾರತ ಭೇಟಿ ಆ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಎನ್ನಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.