ADVERTISEMENT

ಸ್ಪಂದನ ಅಂಕಣ: ಫೈಬ್ರಾಯ್ಡ್‌ ಇದೆಯೇ? ಆತಂಕ ಬೇಡ

ಡಾ.ವೀಣಾ ಭಟ್ಟ
Published 20 ಫೆಬ್ರುವರಿ 2026, 23:30 IST
Last Updated 20 ಫೆಬ್ರುವರಿ 2026, 23:30 IST
   

ನನಗೆ 47 ವರ್ಷ. ಉದ್ಯೋಗಸ್ಥೆ. ಮದುವೆಯಾಗಿ 22 ವರ್ಷಗಳಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ ವಾರ್ಷಿಕ ಬಾಡಿ ಚೆಕಪ್ ಪ್ರಯುಕ್ತ ಸ್ಕ್ಯಾನಿಂಗ್ ಮಾಡಿಸಿದಾಗ, ಗರ್ಭಕೋಶದಲ್ಲಿ 14 ಮಿ.ಮೀ ಗಾತ್ರದ ಎರಡು– ಮೂರು ಸಣ್ಣ ಫೈಬ್ರಾಯ್ಡ್‌ಗಳಿರುವುದು (ನಾರುಗಡ್ಡೆ) ತಿಳಿಯಿತು. ನನಗೆ ಈಗ ಎರಡರಿಂದ ಮೂರು ತಿಂಗಳಿಗೆ ಮುಟ್ಟಾಗುತ್ತಿದೆ. ಹೊಟ್ಟೆ ನೋವಾಗಲೀ ಹೆಚ್ಚು ರಕ್ತಸ್ರಾವವಾಗಲೀ ಇಲ್ಲ. ನಾನು ತೋರಿಸಿದ ವೈದ್ಯರು ಫೈಬ್ರಾಯ್ಡ್‌ಗಳಿಂದ ಯಾವುದೇ ತೊಂದರೆ ಇಲ್ಲ ಅಂದಿದ್ದಾರೆ. ನಮ್ಮ ಮನೆಯಲ್ಲಿ ಯಾರಿಗೂ ಇಂತಹ ಸಮಸ್ಯೆ ಇರಲಿಲ್ಲ. ಆದರೂ ನನಗೇನೋ ಆತಂಕ. ಏನು ಮಾಡಲಿ?

–ಉಷಾ, ಮಾಲೂರು

ಉಷಾ ಅವರೆ, ನಿಮಗಿರುವುದು ಕೇವಲ ಫೈಬ್ರಾಯ್ಡ್‌, ಅಂದರೆ ಗರ್ಭಕೋಶದ ನಾರುಗಡ್ಡೆ. ಈ ಗಡ್ಡೆಗಳು ಗರ್ಭಕೋಶದಲ್ಲಿ ಆಗಬಹುದಾದ ಅತಿ ಸಾಮಾನ್ಯ ಮತ್ತು ಕ್ಯಾನ್ಸರ್ ಅಲ್ಲದ ಗಡ್ಡೆಗಳು. 

ADVERTISEMENT

ಇವು ಕ್ಯಾನ್ಸರ್ ಆಗಿ ಮಾರ್ಪಡುವುದು ಅತಿ ವಿರಳ. ಈ ಗಡ್ಡೆಗಳಾಗುವಲ್ಲಿ ಆನುವಂಶೀಯ ಹಿನ್ನೆಲೆ ಸ್ವಲ್ಪಮಟ್ಟಿಗೆ ಮಾತ್ರ ಕಾರಣವಾಗಿದ್ದರೂ ಇದು ಈಸ್ಟ್ರೋಜನ್ ಹಾಗೂ ಪ್ರೊಜೆಸ್ಟಿರಾನ್ ಹಾರ್ಮೋನ್‌ ಸಂಬಂಧಿತ ಗಡ್ಡೆ ಆಗಿರುತ್ತದೆ. ಅತಿಯಾದ ತೂಕ, ಜಂಕ್‌ಫುಡ್ ಸೇವನೆ, ಹೆಚ್ಚು ಕೆಂಪುಮಾಂಸ ಸೇವನೆಯಂತಹ ಕಾರಣಗಳು ಈ ಗಡ್ಡೆಗಳಾಗಲು ಪ್ರಚೋದಿಸಬಹುದು.

ಗರ್ಭಕೋಶದ ಹೊರಭಾಗ, ಸ್ನಾಯು, ಗರ್ಭಕೋಶದ ಒಳಾವರಣ ಹೀಗೆ ಬೇರೆ ಬೇರೆ ಕಡೆ ಈ ಗಡ್ಡೆಗಳು ಕಾಣಿಸಿಕೊಳ್ಳಬಹುದು. ಒಳಾವರಣದಲ್ಲಿ ಕಾಣಿಸಿಕೊಂಡಾಗ ರಕ್ತಸ್ರಾವ ಹೆಚ್ಚಾಗಿ ಆಗಬಹುದು. ಸ್ನಾಯುಗಳ ಒಳಗೆ ಅಥವಾ ಹೊರಭಾಗದಲ್ಲಿ ಇದ್ದಾಗ ಸಣ್ಣಪುಟ್ಟ ಗಡ್ಡೆಗಳಿಂದ ಏನೂ ಸಮಸ್ಯೆ ಆಗುವುದಿಲ್ಲ. ಹಾಗಾಗಿ, ನಿಮಗೆ ಈ ಬಗ್ಗೆ ಯಾವುದೇ ಆತಂಕ ಬೇಡ.

ಈಸ್ಟ್ರೋಜನ್ ಹಾರ್ಮೋನ್ ಹೆಚ್ಚಳ ಮತ್ತು ಈಸ್ಟ್ರೋಜನ್‌, ಪ್ರೊಜೆಸ್ಟಿರಾನ್ ಹಾರ್ಮೋನ್‌ಗಳ ಅಸಮತೋಲನದಿಂದ ಹೆಚ್ಚಿನ ಸಂದರ್ಭಗಳಲ್ಲಿ ಇವು ಉಂಟಾಗುತ್ತವೆ. ಹಾಗಾಗಿ, ಮುಟ್ಟು ನಿಂತಾಗ ಈ ಹಾರ್ಮೋನ್‌ಗಳ ಪ್ರಮಾಣ ಕಡಿಮೆಯಾಗುತ್ತಾ ಹೋಗುವುದರಿಂದ ಈ ಗಡ್ಡೆಗಳು ಸಹಜವಾಗಿಯೇ ಸಣ್ಣದಾಗುತ್ತಾ ಹೋಗುತ್ತವೆ. ನಿಮಗೂ ಮುಟ್ಟು ನಿಲ್ಲುವ ಹಂತ ಆಗಿರುವುದರಿಂದ, ಮುಟ್ಟು ನಿಂತಾಗ ಸಹಜವಾಗಿಯೇ ಈ ಗಡ್ಡೆಗಳು ತಾನೇ ತಾನಾಗಿ ಕಡಿಮೆಯಾಗಬಹುದು.

ನೀವೇ ಅನುಸರಿಸಬಹುದಾದ ಜೀವನಶೈಲಿ ಬದಲಾವಣೆಗಳೆಂದರೆ, ನಿಮಗೆ ಬೊಜ್ಜಿದ್ದರೆ ಅದನ್ನು ನಿಯಂತ್ರಿಸಿ ಸಮತೂಕ ಹೊಂದಲು ಪ್ರಯತ್ನಿಸಿ. ಹಾಲು ಮತ್ತು ಹಾಲಿನ ಉತ್ಪನ್ನ ಸೇವಿಸುವುದನ್ನು ನಿಲ್ಲಿಸಿ. ಅತಿಯಾದ ಕೊಬ್ಬುಳ್ಳ ಮಾಂಸಾಹಾರ ಸೇವನೆ ಬೇಡ. ಹೀಗೆ ಮಾಡುವುದರಿಂದ ಅನಗತ್ಯವಾಗಿ ಈಸ್ಟ್ರೋಜನ್ ಹೆಚ್ಚಳವಾಗುವುದು ತಪ್ಪುತ್ತದೆ. ಯಾವುದಕ್ಕೂ ನೀವು ವೈದ್ಯರನ್ನು ಸಂಪರ್ಕಿಸಿ ಅವರ ಮೇಲ್ವಿಚಾರಣೆಯಲ್ಲಿ ಇರಿ.

ಕನಿಷ್ಠ ಒಂದು ವರ್ಷಕ್ಕಾದರೂ ಒಮ್ಮೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್‌ ಮಾಡಿಸಿ. ದೈಹಿಕ ಚಟುವಟಿಕೆ, ಯೋಗಾಸನ, ಏರೋಬಿಕ್ಸ್‌ನಂತಹ ವ್ಯಾಯಾಮಗಳನ್ನು ದಿನವೂ ನಿಯಮಿತವಾಗಿ ಕನಿಷ್ಠ ಒಂದು ಗಂಟೆಯಾದರೂ ಮಾಡಿ ಒತ್ತಡ ನಿರ್ವಹಣೆ ಮಾಡಿಕೊಂಡರೆ, ಫೈಬ್ರಾಯ್ಡ್ ಗಾತ್ರ ಹೆಚ್ಚುವುದಿಲ್ಲ. ಮೊದಲಾದರೆ ನಾರುಗಡ್ಡೆಗೆ ಎಲ್ಲರೂ ಹೆದರಿ ಒಮ್ಮೆಲೇ ಶಸ್ತ್ರಚಿಕಿತ್ಸೆಯನ್ನು ಮಾಡಿಸುತ್ತಿದ್ದರು. ಆದರೆ ಈಗ ಅದಕ್ಕೆ ಪರ್ಯಾಯವಾಗಿ ಮಾತ್ರೆಗಳು ಲಭ್ಯವಿವೆ. ವೈದ್ಯರ ಮೇಲ್ವಿಚಾರಣೆಯಲ್ಲಿ ಅವುಗಳನ್ನು ತೆಗೆದುಕೊಳ್ಳಬೇಕು.

ಗರ್ಭಕೋಶದಲ್ಲಿ ಅಳವಡಿಸುವ LNG I UD ಎಂಬ ‌‘ಕಾಪರ್‌ ಟಿ’ಯಂತಹ ಉಪಕರಣವನ್ನೂ ಕೆಲವೊಮ್ಮೆ ವೈದ್ಯರು ಅಳವಡಿಸುತ್ತಾರೆ. ಆದ್ದರಿಂದ ಫೈಬ್ರಾಯ್ಡ್‌ ಇದೆ ಎಂದು ನೀವೇನೂ ಭಯಪಡುವುದು ಬೇಡ. ‘ಹೈಫು’ ಅಂದರೆ ಹೈ ಇಂಟೆನ್ಸಿಟಿ ಫೋಕಸ್ಡ್‌ ಅಲ್ಟ್ರಾಸೌಂಡ್‌ ಚಿಕಿತ್ಸೆಯಿಂದ ಕೂಡ ಈ ಗಡ್ಡೆಗಳನ್ನು ಕರಗಿಸಬಹುದು. ಆದರೆ ಈ ಸೌಲಭ್ಯ ಎಲ್ಲೆಡೆ ಲಭ್ಯವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.