
ಅಮೆರಿಕ ತನ್ನ ಗೋದಾಮುಭರ್ತಿ ಕುಲಾಂತರಿ ಫಸಲನ್ನು ಭಾರತದತ್ತ ತಳ್ಳಲು ಅವಸರ ಮಾಡುತ್ತಿದೆ. ಯುರೋಪ್, ಜಪಾನ್, ದಕ್ಷಿಣ ಕೊರಿಯಾ ದೇಶಗಳಲ್ಲಿ ಗ್ರಾಹಕರೇ ಅಮೆರಿಕದ ಕುಲಾಂತರಿಗೆ ಗಟ್ಟಿ ತಡೆಗೋಡೆ ಆಗಿದ್ದಾರೆ. ನಮ್ಮಲ್ಲಿನ ಗ್ರಾಹಕರಿಗೆ ಈ ಕುರಿತು ಚಿಂತಿಸಲು ಪುರುಸೊತ್ತಿಲ್ಲ.
ಹೆಸರಾಂತ ಸಸ್ಯವಿಜ್ಞಾನಿ ಬಿ.ಜಿ.ಎಲ್. ಸ್ವಾಮಿ ಅವರು ಬರೆದ ‘ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ’ ಗ್ರಂಥದ ಬಗ್ಗೆ ಗೊತ್ತಿದೆ ತಾನೆ? ಏಷ್ಯಾ ಖಂಡಕ್ಕೆ ದಕ್ಷಿಣ ಅಮೆರಿಕದಿಂದ ಬಂದ ಸಸ್ಯಗಳನ್ನು ನೆನಪಿಸಿಕೊಳ್ಳಿ. ಟೊಮೆಟೊ, ಬಟಾಟೆ, ಹುಣಿಸೆ, ಹಸಿಮೆಣಸು, ಸೀಬೆ, ಪಪಾಯಾ, ಅನಾನಸ್, ಸೀತಾಫಲ, ಶೇಂಗಾ, ತಂಬಾಕು, ರಬ್ಬರ್... ಈ ದೀರ್ಘ ಪಟ್ಟಿ ನೋಡಿದರೆ 16ನೇ ಶತಮಾನಕ್ಕೂ ಮೊದಲು ಭಾರತೀಯರ ಊಟ–ತೋಟ ಅದೆಷ್ಟು ಮಂಕಾಗಿತ್ತೊ ಎಂದು ನಮಗೇ ಅಚ್ಚರಿಯಾಗುತ್ತದೆ.
ಕೊಲಂಬಸ್ ಅಮೆರಿಕವನ್ನು ಪತ್ತೆ ಹಚ್ಚಿದ ನಂತರದ ಎರಡು ಶತಮಾನಗಳಲ್ಲಿ ಅತ್ತಿಂದ ಇತ್ತ, ಇತ್ತಿಂದತ್ತ ಸಸ್ಯ, ಪ್ರಾಣಿ, ಪಕ್ಷಿ (ಮತ್ತು ರೋಗಾಣು)ಗಳ ಭಾರೀ ವಿನಿಮಯ ನಡೆಯಿತು. ಅದು ‘ಕೊಲಂಬಿಯನ್ ಮಹಾ ವಿನಿಮಯ’ ಎಂತಲೇ ಹೆಸರು ಪಡೆದಿದೆ. ಅಲ್ಲಿಂದ ಬಂದಷ್ಟೇ ವೈವಿಧ್ಯಮಯ ಜೀವಿಗಳು ಇಲ್ಲಿಂದ ಅಮೆರಿಕ ಖಂಡಕ್ಕೆ ಹೋದವು. ಅವುಗಳಲ್ಲಿ ಕಬ್ಬು, ಭತ್ತ, ಗೋಧಿ, ಕಾಫಿ, ಬನಾನಾ, ಕಿತ್ತಳೆ, ಸೇಬು, ದ್ರಾಕ್ಷಿ, ಸೋಯಾ, ಈರುಳ್ಳಿ ಇತ್ಯಾದಿಗಳ ಸಂಗಡ ಕುದುರೆ, ದನಕರು, ಹಂದಿ, ಕೋಳಿ, ಕುರಿ–ಮೇಕೆಗಳೂ ಹೋದವು. ಜೊತೆಗೆ ಸಿಡುಬು, ಮಲೇರಿಯಾ ಕೂಡ.
ಕಳೆದ ಏಳೆಂಟು ದಶಕಗಳಲ್ಲಿ ಪೂರ್ವ–ಪಶ್ಚಿಮ ದೇಶಗಳ ನಡುವೆ ಏನೆಲ್ಲ ವಿನಿಮಯ ಆಗುತ್ತಿವೆ ಎಂದು ನೋಡಲು ಹೋದರೆ ದೊಡ್ಡ ಮಿಸಳ ಭಾಜಿಯೇ ಕಾಣಬಹುದು. ಅತ್ತಿಂದ ಇತ್ತ ಹೈಬ್ರಿಡ್ ಸಸ್ಯಗಳಿಂದ ಹಿಡಿದು ಕೃಷಿವಿಷಗಳವರೆಗೆ; ಕೆಂಟುಕಿ ಪೀಟ್ಸಾದಿಂದ ಏಡ್ಸ್ ರೋಗಾಣುಗಳವರೆಗೆ ಬಂದರೆ ಇತ್ತಿಂದ ಅತ್ತ ಅಧ್ಯಾತ್ಮ, ಆಯುರ್ವೇದ, ಅರಿಸಿನ, ತುಳಸಿ, ಯೋಗ, ಬೇವಿನತೈಲದ ಮಸಾಜ್‌ವರೆಗೆ ಏನೆಲ್ಲ
ಸರಂಜಾಮು ಹೋಗುತ್ತಿವೆ. ಅವೆಲ್ಲ ಒತ್ತಟ್ಟಿಗಿರಲಿ.
ಈಗ ನೋಡಿ: ಟ್ರಂಪ್ ಯಜಮಾನಿಕೆಯಲ್ಲಿ ಅಮೆರಿಕದ ಸಂಯುಕ್ತ ಸಂಸ್ಥಾನದಿಂದ (ಯುಎಸ್‌ನಿಂದ) ನಮ್ಮ ದೇಶಕ್ಕೆ ಹಡಗುಭರ್ತಿ ಕುಲಾಂತರಿ ಸೋಯಾ, ಮೆಕ್ಕೆಜೋಳ, ಕುಸುಬೆ ಎಣ್ಣೆ ಬರಲಿವೆ. ಖಾದ್ಯ ಪದಾರ್ಥಗಳಲ್ಲಿ ಕುಲಾಂತರಿ ಜೀವಿ ಗಳು ಬೇಡವೇ ಬೇಡವೆಂದು ಇದುವರೆಗೆ ಬಿಗಿಪಟ್ಟು ಹಿಡಿದ ಭಾರತೀಯರಿಗೆ ಇದು ನುಂಗಲಾರದ ತುತ್ತಾಗಲಿದೆ. ಕೇಂದ್ರ ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ಅವರಿಗಂತೂ ಇದು ಬಿಸಿತುಪ್ಪವಾಗಿದೆ. ಒಂದೆಡೆ ಟ್ರಂಪ್ ಸರ್ಕಾರದ ತುಷ್ಟೀಕರಣಕ್ಕೆಂದು ಕುಲಾಂತರಿ ಉತ್ಪನ್ನಗಳ ಆಮದಿಗೆ ಸ್ವಾಗತ ಕೋರ ಬೇಕಾದ ಒತ್ತಡ; ಇನ್ನೊಂದೆಡೆ, ಕುಲಾಂತರಿ ಬೇಡ ವೆಂಬ ನಮ್ಮದೇ ರೈತ ಸಮುದಾಯದ ಒತ್ತಡ. ಉಗುಳಲಾಗದ ತುಪ್ಪ ಜಾಸ್ತಿ ಬಿಸಿಯಾಗಿರಲು ಕಾರಣ ಏನೆಂದರೆ, ಸಂಘ ಪರಿವಾರಕ್ಕೆ ಸೇರಿದ ‘ಭಾರತೀಯ ಕಿಸಾನ್ ಸಂಘ’ ಕೂಡ ಕುಲಾಂತರಿ ಬರಕೂಡದೆಂದು ದನಿಯೆತ್ತಿದೆ.
ಅಂತೂ ರೈತರ ಖುಷಿಗೆಂದು ಮೊನ್ನೆ ಶನಿವಾರ ಅವರು ಪತ್ರಿಕಾಗೋಷ್ಠಿ ಕರೆದು, ‘ಕುಲಾಂತರಿ
ದ್ರವ್ಯಗಳನ್ನು ಸುತರಾಂ ಆಮದು ಮಾಡಿಕೊಳ್ಳುವು ದಿಲ್ಲ’ ಎಂದು ಘೋಷಿಸಿದರು. ನಮ್ಮ ದೇಶದ ರೈತರ ಹಿತಾಸಕ್ತಿಗಳಿಗೆ ಧಕ್ಕೆ ತರುವ ಯಾವುದಕ್ಕೂ ಪ್ರವೇಶ ಇರುವುದಿಲ್ಲ ಎಂದರು. ಅಮೆರಿಕದಲ್ಲಿ ಎಥೆನಾಲ್ ಮದ್ಯಸಾರವನ್ನು ಬೇರ್ಪಡಿಸಿದ ನಂತರ ಉಳಿಯುವ ಕುಲಾಂತರಿ ಧಾನ್ಯಗಳನ್ನು (ಡಿಡಿಜಿಗಳನ್ನು) ಪಶು ಆಹಾರವಾಗಿ ಆಮದು ಮಾಡಿಕೊಳ್ಳುತ್ತೇವೆ, ಅದರಲ್ಲೇನೂ ಕುಲಾಂತರಿ ಅಂಶ ಇರುವುದಿಲ್ಲ ಎಂತಲೂ ಹೇಳಿದರು. ಅವರ ಮಾತುಗಳು ಅಡ್ಡಗೋಡೆಯ ಮೇಲಿನ ದೀಪವೊ ಅಥವಾ ಬೀಸುವ ದೊಣ್ಣೆಯಿಂದ ಬಚಾವಾಗುವ ಡಕ್ಕಿಂಗೊ ಎಂಬ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ.
ಕುಲಾಂತರಿ (ತಳಿ ತಿರುಚಿದ ಅಥವಾ ಜೆನೆಟಿಕಲಿ ಮಾಡಿಫೈಡ್ – ಜಿಎಂ/ಬಿಟಿ) ತಂತ್ರಜ್ಞಾನ ಒಳ್ಳೆಯದೋ ಕೆಟ್ಟದ್ದೋ ಎಂಬ ಬಗ್ಗೆ ವಿಜ್ಞಾನಿಗಳ ಸಮುದಾಯದಲ್ಲೂ ಒಮ್ಮತವಿಲ್ಲ; ರಾಷ್ಟ್ರ–ರಾಷ್ಟ್ರಗಳಲ್ಲೂ ಒಮ್ಮತವಿಲ್ಲ. ಸಸ್ಯದ ವರ್ಣತಂತು ವಿನಲ್ಲಿ ಪರಜೀವಿಯೊಂದರ (ಏಕಾಣುಜೀವಿಯ) ಡಿಎನ್‌ಎಯನ್ನೂ ಸೇರಿಸಿದ್ದರಿಂದ ಅದು ಮನುಷ್ಯರ ಆರೋಗ್ಯಕ್ಕೆ ಅಪಾಯಕಾರಿ ಆಗಬಹುದು ಎಂದು ಈ ಶತಮಾನದ ಆರಂಭದಲ್ಲಿ ಕೆಲವು ವಿಜ್ಞಾನಿಗಳು ಹೇಳಿದ್ದರಿಂದ ಯುರೋಪಿಯನ್ ರಾಷ್ಟ್ರಗಳ ಜೊತೆಗೆ, ರಷ್ಯಾ, ಚೀನಾ, ಜಪಾನ್, ದಕ್ಷಿಣ ಕೊರಿಯಾ ದೇಶಗಳೆಲ್ಲ ಅಂಥ ತಂತ್ರಜ್ಞಾನವನ್ನು ನಿಷೇಧಿಸಿದವು. ಅದಕ್ಕೆ ತದ್ವಿರುದ್ಧವಾಗಿ, ಕುಲಾಂತರಿ ಅಪಾಯಕಾರಿ ಅಲ್ಲವೆಂದು ಅಮೆರಿಕ, ಕೆನಡಾ, ಬ್ರಝಿಲ್ ದೇಶಗಳು ಸೋಯಾ, ಮೆಕ್ಕೆಜೋಳ, ಟೊಮೆಟೊ, ಕಬ್ಬು ಮುಂತಾದವುಗಳ ಕುಲಾಂತರಿ ತಳಿಗಳನ್ನು ದಂಡಿಯಾಗಿ ಬೆಳೆಯುತ್ತಿವೆ.
ಈ ಮಧ್ಯೆ ಭಾರತ ಹತ್ತಿಯ ವಿಷಯದಲ್ಲಿ ಮಾತ್ರ ಕುಲಾಂತರಿ ತಳಿಗಳನ್ನು ಬೆಳೆಯಲು ಅನುಮತಿ ನೀಡಿದೆ. ಖಾದ್ಯ ಪದಾರ್ಥಗಳಲ್ಲಿ ಬದನೆಗೆ ಏಕಾಣುಜೀವಿಯನ್ನು ತೂರಿಸುವ ಮೊದಲ ಪ್ರಯತ್ನ ನಮ್ಮಲ್ಲಿ ನಡೆದಾಗ ದೇಶದಾದ್ಯಂತ ರೈತ ಸಮುದಾಯ ವಿರೋಧಿಸಿತ್ತು. ಬಹುರಾಷ್ಟ್ರೀಯ ಬೀಜ ಕಂಪನಿಗಳು ನಾನಾ ಬಗೆಯ ತರಕಾರಿ, ದವಸ ಧಾನ್ಯಗಳ ಕುಲಾಂತರಿ ತಳಿಗಳನ್ನು ಭಾರತದಲ್ಲಿ ನುಗ್ಗಿಸಲು ಯತ್ನಿಸಿ ವಿಫಲವಾಗಿವೆ. ವಿದೇಶಿ ಕಂಪನಿಯ ಬದಲು ಭಾರತೀಯ ವಿಜ್ಞಾನಿಗಳೇ (ವಿದೇಶಿ ನೆರವಿನಿಂದ) ರೂಪಿಸಿದ ಕುಲಾಂತರಿ ಸಾಸಿವೆಯನ್ನೂ ಬಹಿರಂಗ ಬಿತ್ತನೆಗೆ ಬಿಡಲು ಕೇಂದ್ರ ಸರ್ಕಾರ ಧೈರ್ಯ ಮಾಡುತ್ತಿಲ್ಲ.
ಕುಲಾಂತರಿ ತಳಿ ಒಳ್ಳೆಯದೊ ಕೆಟ್ಟದೊ ಎಂಬು ದನ್ನು ವಿಜ್ಞಾನಿಗಳು ಖಚಿತವಾಗಿ ಹೇಳುತ್ತಿಲ್ಲ ಏಕೆ? ಕಾರಣ ಇಷ್ಟೆ: ಕುಲಾಂತರಿ ಬೀಜಗಳ ಪೇಟೆಂಟ್ ಪಡೆದ ಬಹುರಾಷ್ಟ್ರೀಯ ಕಂಪನಿಗಳು ಅಂಥ ಬೀಜಗಳನ್ನು ಪರೀಕ್ಷೆಗೆ ಒಡ್ಡಲು ಅನ್ಯ ವಿಜ್ಞಾನಿಗಳಿಗೆ ಅನುಮತಿ ನೀಡುವುದಿಲ್ಲ. ಪರೀಕ್ಷೆ ಮಾಡಲು ಹೋದರೆ ನ್ಯಾಯಾಲಯಕ್ಕೆ ಅಲೆದಾಟ ತಪ್ಪಿದ್ದಲ್ಲ. ಬೀಜ ಕಂಪನಿ ಗಳ ಈ ಬಗೆಯ ಬಿಗಿಮುಷ್ಟಿಯ ವಿರುದ್ಧ 2013ರಲ್ಲಿ ಅಮೆರಿಕದಲ್ಲೇ ಕೃಷಿ ವಿಜ್ಞಾನಿಗಳ ತಂಡವೊಂದು ಅಲ್ಲಿನ ಪರಿಸರ ಸಂರಕ್ಷಣಾ ನಿಗಮಕ್ಕೆ ದೂರು ನೀಡಿ
ದ್ದರೂ ಪ್ರಯೋಜನ ಆಗಲಿಲ್ಲ. ಭಾರತೀಯ ವಿಜ್ಞಾನಿಗಳಂತೂ ಈ ವಿಷಯದಲ್ಲಿ ನಗೆಪಾಟಲಿಗೇ ಸಿಲುಕಿದ್ದರು. ‘ಕುಲಾಂತರಿ ಫಸಲು ಆರೋಗ್ಯಕ್ಕೆ ಅಪಾಯಕಾರಿ ಹೌದೊ ಅಲ್ಲವೊ?’ ಎಂದು ಅಂದಿನ ಪರಿಸರ ಸಚಿವ ಜಯರಾಂ ರಮೇಶ್ ನಮ್ಮ ವಿಜ್ಞಾನಿಗಳನ್ನು ಅದೇ ವರ್ಷ ಕೇಳಿದ್ದರು. ‘ಅಪಾಯವೇನೂ ಇಲ್ಲ, ಅದು ಸುರಕ್ಷಿತ’ ಎಂದು ನಮ್ಮ ಐದು ಮಹೋನ್ನತ ವಿಜ್ಞಾನ ಸಂಸ್ಥೆಗಳು ನೀಡಿದ ಜಂಟಿ ವರದಿಯಲ್ಲಿ ಅಂದಿನ ಮೊನ್ಸಾಂಟೊ ಕಂಪನಿಯ ವರದಿಯನ್ನೇ ಪುಟಗಟ್ಟಲೆ ನಕಲು ಮಾಡಿದ್ದು ಗೊತ್ತಾಗಿತ್ತು!
ಕಳೆದ 25 ವರ್ಷಗಳಿಂದ ಅಮೆರಿಕದ ಪ್ರಜೆಗಳು ‘ಜಿಎಂ’ ಸಸ್ಯ ಮತ್ತು ಪ್ರಾಣಿಗಳನ್ನು (ಅಲ್ಲಿ ಸಾಲ್ಮನ್ ಮೀನುಗಳೂ ಕುಲಾಂತರಿ) ಸೇವಿಸುತ್ತಿದ್ದಾರೆ. ಅವರು ತಿಂದು ಮಿಕ್ಕುಳಿದ ಪುಷ್ಕಳ ಕುಲಾಂತರಿ ಫಸಲನ್ನು ಬೇರೆ ದೇಶಗಳಿಗೆ ಸಾಗಹಾಕಲು ಅಮೆರಿಕಕ್ಕೆ ಕಷ್ಟವಾಗು ತ್ತಿದೆ. ಅಲ್ಲಿನ ಸರ್ಕಾರದ ಮತ್ತು ಖಾಸಗಿ ಕಂಪನಿ
ಗಳ ಜಂಟಿ ಒತ್ತಡದಿಂದಾಗಿ ಈಗೀಗ ಕುಲಾಂತರಿ ಬೆಳೆ ಗಳನ್ನು ಅನೇಕ ದೇಶಗಳು ಒಳಕ್ಕೆ ಬಿಟ್ಟುಕೊಳ್ಳುತ್ತಿವೆ. ಯಾಂತ್ರೀಕೃತ ಬೇಸಾಯದಲ್ಲಿ ತೊಡಗಿದ ಕೆಲವು ದೇಶಗಳು ಮೆಲ್ಲಗೆ ಜಿಎಂ ಬೀಜಗಳ ಬಿತ್ತನೆಗೂ ತೊಡಗಿವೆ. ಯುರೋಪಿನಲ್ಲಿ ಸ್ಪೇನ್ ದೇಶ ಕುಲಾಂತರಿ ಮೆಕ್ಕೆಜೋಳವನ್ನು ಹೊಲಕ್ಕಿಳಿಸಿದೆ. ಚೀನಾ ದಂಡಿ ಯಾಗಿ ಕುಲಾಂತರಿ ಫಸಲನ್ನು ಬೆಳೆಸತೊಡಗಿದೆ. ನ್ಯೂಜಿಲೆಂಡ್ ಇದೀಗ ಒಪ್ಪಿಗೆ ನೀಡಿದೆ. ಇನ್ನು ಕೆಲವು ದೇಶಗಳು ಅತ್ಯಂತ ಕಟ್ಟುನಿಟ್ಟಾಗಿ ಪರೀಕ್ಷೆ ಮಾಡಿ (ಕುಲಾಂತರಿ ಅಂಶ ಶೇ 1ಕ್ಕಿಂತ ಕಡಿಮೆ ಇದ್ದರೆ ಮಾತ್ರ) ಅಮೆರಿಕದ ಪಶುಆಹಾರವನ್ನು, ಖಾದ್ಯತೈಲವನ್ನು ಆಮದು ಮಾಡಿಕೊಳ್ಳುತ್ತಿವೆ. ದೊಡ್ಡಣ್ಣನ ಒತ್ತಡಕ್ಕೆ ಮಣಿಯುವ ಸರದಿ ಈಗ ಭಾರತದ್ದು.
ಹಾಗೆಂದು ಭಾರತ ಕಟ್ಟಿಕೊಂಡಿದ್ದ ಬೇಲಿ ಅಷ್ಟೇನೂ ಸುಭದ್ರವಾಗಿರಲಿಲ್ಲ. ಹಿಂದೆಯೂ ಕುಲಾಂತರಿ ಸೋಯಾ ತೈಲ, ಸೆಜ್ಜೆಯಂಥ ಪಶು ಆಹಾರಗಳು ಸದ್ದಿಲ್ಲದೆ ಒಳಕ್ಕೆ ಬಂದಿದ್ದವು. ಇಷ್ಟಕ್ಕೂ ನಮ್ಮದೇ ಕುಲಾಂತರಿ ಹತ್ತಿಯ ಬೀಜಗಳ ಪಶು ಆಹಾರ ಮತ್ತು ಖಾದ್ಯ ತೈಲಗಳು ಬಿಡುಬೀಸಾಗಿ ನಮ್ಮಲ್ಲಿ ಬಳಕೆಯಾಗುತ್ತಿವೆ. ನಮ್ಮ ಬಳಕೆದಾರರಾಗಲೀ ವೈದ್ಯವೃಂದ ವಾಗಲೀ ಆಕ್ಷೇಪ ಎತ್ತುತ್ತಿಲ್ಲವೆಂದರೆ ಕುಲಾಂತರಿ ಸೋಯಾ ಬರಲಿ, ಜೋಳ ಬರಲಿ, ರೇಪ್‌ಸೀಡ್ ತೈಲ ಬರಲಿ ದನಿ ಎದ್ದೀತು ಹೇಗೆ? ಧಾನ್ಯದಿಂದ ತೈಲ ಹಿಂಡುವಾಗ ಅದರಲ್ಲಿ ಕುಲಾಂತರಿ ತಳಿಯ ಶೇ 99ರಷ್ಟು ಪಾಲು ಡಿಎನ್‌ಎ ನಾಶವಾಗಿರುತ್ತದೆ ಎಂದು ಕಂಪನಿಯ ವಿಜ್ಞಾನಿಗಳು ಹೇಳುತ್ತಿದ್ದಾರೆ. ಅಂದಮೇಲೆ ದನಿ ಎತ್ತುವವರು ಯಾರು?
ರೈತಪರ ಸಂಘಟನೆಗಳು ದನಿ ಎತ್ತುತ್ತಿವೆ. ಕುಲಾಂತರಿ ಬೇಡವೆನ್ನಲು ಅವರಿಗೆ ಹತ್ತೊಂದು ಕಾರಣ
ಗಳಿವೆ. ಇಂದು ತೈಲವನ್ನು ಒಳಕ್ಕೆ ಬಿಟ್ಟವರು ನಾಳೆ ಬಿಟಿ ಬೀಜ ಕಂಪನಿಗಳಿಗೂ ಬಾಗಿಲು ತೆರೆಯಬಹುದು. ಅವು ಬಂದುವೆಂದರೆ ನಮ್ಮ ಸ್ಥಳೀಯ ನಾಟಿ ತರಕಾರಿ, ಹಣ್ಣುಹಂಪಲು, ಗೆಡ್ಡೆಗೆಣಸು ಎಲ್ಲವೂ ಕಣ್ಮರೆಯಾಗಿ ಎಲ್ಲೆಡೆ ಒಂದೇ ಸ್ವಾದದ, ಏಕರೂಪ ತಳಿಗಳು ಬೆಳೆ ಯುತ್ತವೆ. ಈಗ ಬಿಟಿ ಹತ್ತಿ ಬಂದಿದ್ದರಿಂದ ನಾಟಿ ಹತ್ತಿ
ಗಳೆಲ್ಲ ಬಹುತೇಕ ಕಣ್ಮರೆ ಆಗಿವೆ (ಅಮೆರಿಕ, ಕೆನಡಾ ದಲ್ಲಿ ನಾಟಿ ಫಸಲಿನ ನಡುವೆ ಅಲ್ಲೆಲ್ಲೋ ಗಾಳಿಯ ಮೂಲಕ ಬಿಟಿ ತಳಿಯೂ ಬಂದು ಸೇರಿದ್ದರಿಂದ ಅದಕ್ಕೆ ಪೇಟೆಂಟ್ ಶುಲ್ಕ ತೆರಬೇಕೆಂದು ಬೀಜ ಕಂಪನಿ
ಗಳು ರೈತರ ಮೇಲೆ ಖಟ್ಲೆ ಹಾಕಿದ್ದಾರೆ). ಎಲ್ಲಕ್ಕಿಂತ ಮಿಗಿಲಾಗಿ, ಬೀಜಗಳ ಜೊತೆಗೆ ಕಳೆನಾಶಕ ದ್ರವ್ಯಗಳೂ
ಲಂಗುಲಗಾಮಿಲ್ಲದೆ ಬಳಕೆಯಾಗಿ ರೈತ ಮಹಿಳೆಯರ ಉದ್ಯೋಗವನ್ನೂ ಕಸಿದು, ನಮ್ಮ ಕೆರೆ ಕೊಳ್ಳಗಳ ಜೀವಿ ವೈವಿಧ್ಯ ನಾಶಕ್ಕೆ ಕಾರಣವಾಗುತ್ತವೆ. ಆಯುರ್ವೇದ ಗಿಡಮೂಲಿಕೆಗಳೂ ರೋಗಗ್ರಸ್ತ ಆಗುತ್ತವೆ.
ಭಾರತ ಸರ್ಕಾರವೇನೊ ಸಾವಯವ ಕೃಷಿಗೆ ಆದ್ಯತೆ ನೀಡುವುದಾಗಿ ಹೇಳಿಕೊಳ್ಳುತ್ತಿದೆ. ಸರಿಯಾಗಿ ನಿರ್ವಹಿಸಿದರೆ ನಾವು ಸಾವಯವ ಉತ್ಪನ್ನಗಳ ಭರ್ಜರಿ ರಫ್ತುದಾರ ಆಗಲು ಸಾಧ್ಯವಿತ್ತು. ಅಮೆರಿಕದಲ್ಲೂ ಸ್ವಲ್ಪಮಟ್ಟಿಗೆ (ಶೇ 2ರಷ್ಟು) ಕುಲಾಂತರಿ ಅಲ್ಲದ ಸೋಯಾ, ಶೇಂಗಾ, ಮೆಕ್ಕೆಜೋಳ ಬೆಳೆದು ಜಪಾನ್, ದಕ್ಷಿಣ ಕೊರಿಯಾದಂಥ ದೇಶಗಳಿಗೆ ವಿಶೇಷ ದರದಲ್ಲಿ ರಫ್ತು ಮಾಡುತ್ತಿದ್ದಾರೆ. ನಮ್ಮಲ್ಲಿ ಅಂಥ ರೈತಪರ ವಿಜ್ಞಾನಕ್ಕಂತೂ ಪ್ರೋತ್ಸಾಹವಿಲ್ಲ; ಕೀಟನಾಶಕ ವಿಷಗಳ ದುರ್ಬಳಕೆ, ಅತಿಬಳಕೆಯ ನಿಯಂತ್ರಣವೂ ಕಟ್ಟುನಿಟ್ಟಾಗಿ ಆಗುತ್ತಿಲ್ಲವಾದ ಕಾರಣ ಪದೇ ಪದೇ ನಮ್ಮ ಫಸಲು ವಿದೇಶಗಳಲ್ಲಿ ತಿರಸ್ಕೃತ ಆಗುತ್ತಿದೆ.
ಈ ಮಧ್ಯೆ ಟ್ರಂಪ್ ಸಾಹೇಬರ ನಿವಾಸದಿಂದ ಭಾರೀ ಅವಸರದಲ್ಲಿ ರಫ್ತು ಪಟ್ಟಿ ಹೊರಟಿದೆ. ಎಂಥ ವಿಪರ್ಯಾಸ ನೋಡಿ: ಅಮೆರಿಕ ತನ್ನ ಹಿಂಗದ ಹಸಿವೆಯನ್ನು ನೀಗಿಸಲೆಂದು ನಮ್ಮ ಗಂಟಲಿಗೆ ಸೋಯಾ ಸುರಿಯುತ್ತಿದೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.