ಇನ್ನು ಐದೇ ವರ್ಷಗಳಲ್ಲಿ ಚಂದ್ರನ ಮೇಲೆ ಪುಟ್ಟ ಪರಮಾಣು ಸ್ಥಾವರವನ್ನು ಹೂಡಲಿದ್ದೇವೆಂದು ‘ನಾಸಾ’ ಘೋಷಿಸಿದೆ. ರಷ್ಯಾ–ಚೀನಾ ಜಂಟಿಯಾಗಿ 2035ರ ವೇಳೆಗೆ ಅದೇ ಗುರಿ ಇಟ್ಟಿದ್ದರಿಂದಲೇ ಅಮೆರಿಕ ಅವಸರದ ಸಾಹಸಕ್ಕೆ ಹೊರಡುತ್ತಿದೆ. ಪರಮಾಣು ಬಾಂಬ್‌ಗಳನ್ನು ತಮ್ಮದಾಗಿಸಿಕೊಳ್ಳಲು ಹಿಂದೆಲ್ಲ ಶಕ್ತ ರಾಷ್ಟ್ರಗಳು ಪೈಪೋಟಿ ನಡೆಸಿದ್ದರಿಂದ ಈಗ ಭೂಮಿಯ ಮೇಲೆ 12 ಸಾವಿರಕ್ಕೂ ಹೆಚ್ಚು ಬಾಂಬ್‌ಗಳು ಅವಿತು ಕೂತಿವೆ.
ದಿಲ್ಲಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದು ಹೆಚ್ಚಿನ ಓದಿಗೆಂದು ಅಮೆರಿಕಕ್ಕೆ ಹೋದ ಯುವತಿ ಭವ್ಯಾ ಲಾಲ್ ಅಮೆರಿಕದ ‘ನಾಸಾ’ ಬಾಹ್ಯಾಕಾಶ ಸಂಸ್ಥೆಯಲ್ಲಿ ತುಂಬ ಎತ್ತರದ ಹುದ್ದೆಗೆ ಏರಿದವರು. ಹಿಂದಿನ ಅಧ್ಯಕ್ಷ ಜೋ ಬೈಡನ್ ಅವರಿಗೆ ಬಾಹ್ಯಾಕಾಶ ವಿಷಯದಲ್ಲಿ ಸರ್ವೋನ್ನತ ಸಲಹೆಗಾರ್ತಿ, ಅಂದರೆ ‘ಚೀಫ್ ಆಫ್ ಸ್ಟಾಫ್’ ಆಗಿದ್ದರು. ಚಂದ್ರನ ನೆಲದ ಮೇಲೆ ನಾವೇನು ಮಹತ್ವದ್ದನ್ನು ಸಾಧಿಸಬಹುದು ಎಂಬ ಬಗ್ಗೆ ಈಕೆ ಸಲ್ಲಿಸಿದ ವರದಿಗೆ ಕಳೆದ ವರ್ಷ ಭಾರೀ ಮಹತ್ವ ಬಂತು. ಆ ವರದಿಯಲ್ಲಿ ಅವರು ‘ಗೋ ಬಿಗ್ ಆರ್ ಗೋ ಹೋಮ್’ (ಭಾರೀ ಗುರಿ ಹೂಡಿ, ಇಲ್ಲವೇ ಮನೆಯಲ್ಲೇ ಮುದುಡಿ ಕೂತಿರಿ) ಎಂಬ ವಾಕ್ಯವನ್ನೂ ಸೇರಿಸಿದ್ದರು. ಅದು ಚಕಮಕಿಯಂತೆ ಕೆಲಸ ಮಾಡಿದ್ದರಿಂದಲೇ ಅಮೆರಿಕ ಮೈಕೊಡವಿ ಎದ್ದಿದೆ. ಚಂದ್ರನ ನೆಲದಲ್ಲಿ 2030ರ ಹೊತ್ತಿಗೆ ಪರಮಾಣು ಸ್ಥಾವರ ಹೂಡುವುದಾಗಿ ಇದೀಗ ಘೋಷಿಸಿದೆ.
ಮನುಷ್ಯ ಜೀವಿ ಈ ಹಿಂದೆ ಚಂದ್ರನ ಮೇಲೆ ಇಳಿದು ಮೂರು ದಿನದ ವಾಸ್ತವ್ಯ ಹೂಡಿ ಮರಳಿ ಬಂದಿದ್ದು 53 ವರ್ಷಗಳ ಹಿಂದೆ. ಅಮೆರಿಕದ 12 ಗಗನಯಾತ್ರಿಗಳು 1969ರಿಂದ 72ರವರೆಗೆ ಅಲ್ಲಿಗೆ ಹೋಗಿ ಬಂದಿದ್ದು ಬಿಟ್ಟರೆ ನಂತರ ಯಾರೂ ಹೋಗಿಲ್ಲ. ಈಗ ಚೀನಾ, ರಷ್ಯಾ, ಜಪಾನ್ ಅಷ್ಟೇಕೆ, ಭಾರತ ಕೂಡ ಅಲ್ಲಿ ತಂತಮ್ಮ ಪ್ರಜೆಗಳನ್ನು ಇಳಿಸಲು ಯೋಜನೆ ಹಾಕಿಕೊಂಡಿದ್ದರಿಂದ ಅಮೆರಿಕಕ್ಕೆ ತಾನು ಹಿಂದೆ ಬಿದ್ದೇನೆಂಬ ಭಾವನೆ ಬಂದಿದೆ. ಈ ಮೊದಲು ಸೋವಿಯತ್ ರಷ್ಯಾಕ್ಕೆ ಪೈಪೋಟಿ ಕೊಡಲೆಂದು ಅದು ‘ಅಪೊಲೊ ಮಿಷನ್’ ಹೂಡಿದ ಹಾಗೆ ಈಗ ಹೊಸದಾಗಿ ‘ಆರ್ಟೆಮಿಸ್ ಮಿಷನ್’ ಹೆಸರಿನಲ್ಲಿ ಮತ್ತೆ ಚಂದ್ರನತ್ತ ಹೊರಡಲು ತೋಳೇರಿಸಿದೆ. (ಆರ್ಟೆಮಿಸ್ ಎಂಬುದು ಗ್ರೀಕ್ ಪುರಾಣದಲ್ಲಿ ಬರುವ ಚಂದ್ರದೇವಿಯ ಹೆಸರು). ಈ ಯೋಜನೆಯ ಪ್ರಕಾರ ಚಂದ್ರನ ಮೇಲೆ ಒಬ್ಬ ಮಹಿಳೆಯನ್ನೂ ಮತ್ತೊಬ್ಬ ಶ್ವೇತೇತರ ವ್ಯಕ್ತಿಯನ್ನೂ ಇಳಿಸಬೇಕು; ಅಲ್ಲೊಂದು ನೆಲೆಯನ್ನು ಸ್ಥಾಪಿಸಿ, ಅಲ್ಲಿಂದ ಮಂಗಳ ಮತ್ತು ಅದರಾಚಿನ ಲೋಕಕ್ಕೆ ಮಾನವರನ್ನು ಕಳಿಸುವ ಸಿದ್ಧತೆ ನಡೆಸಬೇಕು ಎಂಬೆಲ್ಲ ದೂರಗಾಮೀ ನೀಲನಕ್ಷೆಗಳನ್ನು ರೂಪಿಸಲಾಗಿದೆ.
ಚಂದ್ರನ ಮೇಲೆ ನೆಲೆಯೂರುವುದು ಇಡೀ ಮಾನವ ಸಂಕುಲದ ಯೋಜನೆ ಆಗಬೇಕಿತ್ತು. ಆದರೆ, ಹಿಂದೆ ಅಂಟಾರ್ಕ್ಟಿಕಾ ಖಂಡವನ್ನು ಆಕ್ರಮಿಸಿಕೊಳ್ಳಲೆಂದು ನಾನಾ ದೇಶಗಳು ಪೈಪೋಟಿ ನಡೆಸಿದ ಹಾಗೆ ಈಗ ಚಂದ್ರನ ನೆಲವೂ ಪ್ರತಿಷ್ಠೆಯ ಕಣವಾಗುತ್ತಿದೆ. ಆಗಲೇ ಚೀನಾ ಮತ್ತು ರಷ್ಯಾ ದೇಶಗಳು ಅಲ್ಲಿ ಮನೆ ಕಟ್ಟುವ ಸಿದ್ಧತೆ ಮಾಡಿಕೊಳ್ಳುತ್ತಿವೆ. ತಿಂಗಳುಗಟ್ಟಲೆ ವಾಸ್ತವ್ಯ ಹೂಡಬೇಕೆಂದರೆ ಅಲ್ಲಿ ಮೊದಲು ಶಕ್ತಿ ಸ್ಥಾವರವೊಂದನ್ನು ಹೂಡಲೇಬೇಕು. ಶಕ್ತಿ ಇದ್ದರೆ ತಾನೆ ಗಾಳಿ, ನೀರು, ಇಟ್ಟಿಗೆ, ಪೆಟ್ಟಿಗೆಗಳನ್ನು ಉತ್ಪಾದಿಸಲು ಸಾಧ್ಯ? ಅಲ್ಲಿ ಕಲ್ಲಿದ್ದಲು ಇಲ್ಲ, ಪೆಟ್ರೋಲು ಇಲ್ಲ, ನೈಸರ್ಗಿಕ ಅನಿಲವಿಲ್ಲ; ನದಿ–ಕೆರೆಗಳಿಲ್ಲ, ಗಾಳಿ ಇಲ್ಲ. ಚಂದ್ರಗರ್ಭದಲ್ಲಿ ಶಾಖವಿಲ್ಲ, ಸೂರ್ಯನ ಬೆಳಕೂ ಸಾಕಷ್ಟಿಲ್ಲ. ಹಾಗಾಗಿ, ವಿದ್ಯುತ್ ಶಕ್ತಿಯ ಉತ್ಪಾದನೆಗೆ ಪರಮಾಣು ಸ್ಥಾವರವೇ ಆಗಬೇಕು. ಅದರಲ್ಲಿ ಒಂದೆರಡು ಕಿಲೊ ಯುರೇನಿಯಂ ಇಂಧನವನ್ನು ತುಂಬಿಟ್ಟರೆ ಅದು ತನ್ನಷ್ಟಕ್ಕೆ ದಶಕಗಳ ಕಾಲ ಉರಿಯುತ್ತಿರುತ್ತದೆ. ಅದಕ್ಕೇ ರಷ್ಯಾ ಮತ್ತು ಚೀನಾ 2035ರ ವೇಳೆಗೆ ತಾವು ಜಂಟಿಯಾಗಿ ಅಲ್ಲೊಂದು ಪರಮಾಣು ಸ್ಥಾವರವನ್ನು ಕಟ್ಟಿ ನಿಲ್ಲಿಸುತ್ತೇವೆಂದು ಘೋಷಣೆ ಮಾಡಿವೆ. ಆ ಸಾಧನೆಯನ್ನು ಹಿಮ್ಮೆಟ್ಟಿಸಬೇಕೆಂದೇ ಅಮೆರಿಕ ತಾನು 2030ರೊಳಗೇ ಅಂಥ ಶಕ್ತಿ ಸ್ಥಾವರವನ್ನು ಹೂಡುವುದಾಗಿ ಘೋಷಿಸಿದೆ.
ಅಮೆರಿಕ ಟೊಂಕ ಕಟ್ಟಿತೆಂದರೆ ಅದು ಇಡೀ ಮನುಕುಲಕ್ಕೆ ಕಟ್ಟೆಚ್ಚರದ ವಿದ್ಯಮಾನವೂ ಆದೀತು; ದಿಟ್ಟಹೆಜ್ಜೆಯೂ ಆದೀತು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಜರ್ಮನಿ ಪರಮಾಣು ಬಾಂಬ್ ತಯಾರಿಸಲು ಹೊರಟಿದೆ ಎಂಬುದು ಗೊತ್ತಾದಾಗ ಅಮೆರಿಕ ‘ಮ್ಯಾನಹಟ್ಟನ್ ಯೋಜನೆ’ಯ ಹೆಸರಿನಲ್ಲಿ ತನ್ನ ವ್ಯಾಪ್ತಿಯಲ್ಲಿರುವ ಎಲ್ಲ ಪ್ರತಿಭಾವಂತ ವಿಜ್ಞಾನಿಗಳನ್ನೂ ಮಿಲಿಟರಿ ತಜ್ಞರನ್ನೂ ಒಂದೆಡೆ ಸೇರಿಸಿ ಮೂರೇ ವರ್ಷಗಳಲ್ಲಿ ಅಸಾಧ್ಯವನ್ನೂ ಸಾಧಿಸಿತು. ಹಿರೊಶಿಮಾ, ನಾಗಾಸಾಕಿ ನಗರಗಳ ಮುಗ್ಧರ ಮೇಲೆ ಬಾಂಬ್ ಹಾಕಿ ಜಪಾನ್, ಜರ್ಮನಿ ದೇಶಗಳನ್ನು ಶಾಶ್ವತವಾಗಿ ಹಿಮ್ಮೆಟ್ಟಿಸಿತು. ಅದೇ ನೆಪದಲ್ಲಿ ನಂತರ ಹತ್ತಾರು ದೇಶಗಳು ತಮ್ಮ ಉಡಿಯಲ್ಲಿ ಈ ಪ್ರಳಯಾಂತಕ ಅಸ್ತ್ರವನ್ನು ಇಟ್ಟುಕೊಳ್ಳುವಂತಾಯಿತು. 1957ರಲ್ಲಿ ರಷ್ಯನ್ನರು ಭೂಮಿಯ ಸುತ್ತ ಪ್ರದಕ್ಷಿಣೆ ಹಾಕುವಂತೆ ‘ಸ್ಪುತ್ನಿಕ್’ ಹೆಸರಿನ ಬಾಹ್ಯಾಕಾಶ ಡಬ್ಬಿಯನ್ನು ಉಡಾಯಿಸಿದಾಗ ಅಮೆರಿಕ ಮತ್ತೆ ಧಿಗ್ಗನೆದ್ದು ಬಾಹ್ಯಾಕಾಶ ಸಂಚಾರಕ್ಕೆಂದೇ ‘ನಾಸಾ’ ಸಂಸ್ಥೆಯನ್ನು ಆರಂಭಿಸಿ ಚಂದ್ರನ ಮೇಲೂ ಕಾಲೂರಿತು. ಸೋವಿಯೆತ್ ರಷ್ಯಾವನ್ನು ಹಿಂದಿಕ್ಕಿ ಮುನ್ನುಗ್ಗಿತು. ಅಮೆರಿಕ ಆಗಿಟ್ಟ ಆ ದಿಟ್ಟ ಹೆಜ್ಜೆಯಲ್ಲಿ ಆರೇಳು ದೇಶಗಳು ಸಾಗುವಂತಾಯಿತು.
ಈಗಿನ ಈ ಚಂದ್ರನ ಮೇಲಿನ ಪರಮಾಣು ಸ್ಥಾವರ ಪೈಪೋಟಿ ದಿಟ್ಟವೊ ದುಷ್ಟವೊ? ಉತ್ತರ ಹುಡುಕಲು ಹೊರಟರೆ ಅನೇಕ ಸ್ವಾರಸ್ಯಗಳು ಹೊರಬರುತ್ತವೆ. ಇದುವರೆಗೆ ಪರಮಾಣು ವಿದ್ಯುತ್ ಕ್ಷೇತ್ರದಲ್ಲಿ ದೊಡ್ಡ, ಇನ್ನೂ ದೊಡ್ಡ ಸ್ಥಾವರಗಳನ್ನು ನಿರ್ಮಿಸುವ ಪೈಪೋಟಿ ಇತ್ತು. ಈಗ ಅದಕ್ಕೆ ವಿರುದ್ಧವಾಗಿ, ಚಿಕ್ಕ, ಇನ್ನೂ ಚಿಕ್ಕ ಸ್ಥಾವರದ ನಿರ್ಮಾಣವಾಗಬೇಕು. ಕಳಚಿ ಅದನ್ನು ಎಲ್ಲೆಂದರಲ್ಲಿ ಹೊತ್ತೊಯ್ಯುವಂತಿರಬೇಕು. ಚೀನಾ, ರಷ್ಯಾ ದೇಶಗಳು ಇಂಥ ‘ಸ್ಮಾಲ್ ಮಾಡ್ಯೂಲರ್ ರಿಯಾಕ್ಟರ್’ಗಳ (ಎಸ್‌ಎಂಆರ್) ನಿರ್ಮಾಣದಲ್ಲಿ ಮುಂದಿವೆ. ರಷ್ಯಾ ಐದು ವರ್ಷಗಳ ಹಿಂದೆ ಉತ್ತರ ಧ್ರುವ ಸಮೀಪದ ಘೋರ ಚಳಿಯ ಪಟ್ಟಣದ ಬಳಿಯ ಹಿಮನದಿಯ ಮೇಲೆ ‘ಜಗತ್ತಿನ ಏಕೈಕ ತೇಲುಸ್ಥಾವರ’ ಎಂಬ ಹೆಗ್ಗಳಿಕೆಯೊಂದಿಗೆ ಒಂದು ಪರಮಾಣು ವಿದ್ಯುತ್ ಘಟಕವನ್ನು ಸ್ಥಾಪಿಸಿ, ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ಇತ್ತ ಚೀನಾ ಕೂಡ ನಾಲ್ಕು ವರ್ಷಗಳ ಹಿಂದೆಯೇ ಎಸ್ಸೆಮ್ಮಾರ್ ನಿರ್ಮಾಣದಲ್ಲಿ ಪರಿಣತಿ ಸಾಧಿಸಿದೆ. ದೇಶ– ವಿದೇಶಗಳಲ್ಲಿ ಮಾರಲೆಂದೇ ಅದು ಲಿಂಗ್ಲಾಂಗ್ ಯೋಜನೆಯಲ್ಲಿ ಹೊಸ ಮಾದರಿಗಳನ್ನು ನಿರ್ಮಿಸುತ್ತಿದೆ.
ಅಮೆರಿಕದ ಸಾಧನೆ ಇದುವರೆಗೆ ಸೊನ್ನೆ. ಒಂದು ಎಸ್ಸೆಮ್ಮಾರ್ ನಿರ್ಮಿಸಲು ಹೋಗಿ ವೆಚ್ಚ ತೀರಾ ಜಾಸ್ತಿ ಆಯಿತೆಂದು ಎರಡು ವರ್ಷಗಳ ಹಿಂದೆ ಕೈಬಿಡಲಾಗಿದೆ. ಈಗ ಅಮೆಜಾನ್ ಮತ್ತು ಮೈಕ್ರೊಸಾಫ್ಟ್ ಕಂಪನಿಗಳು ಪುಟ್ಟ ಘಟಕಗಳನ್ನು ನಿರ್ಮಿಸುತ್ತಿರುವುದಾಗಿ ಹೇಳಿವೆ. ಇನ್ನೇನು ಧಿಗ್ಗನೆದ್ದು ದೊಡ್ಡಣ್ಣ ತೋಳೇರಿಸಿತೆಂದರೆ ಅದೇ ಮಾದರಿಯ ಪುಟ್ಟ ಸ್ಥಾವರಗಳ ನಿರ್ಮಾಣಕ್ಕೆ ವಿವಿಧ ದೇಶಗಳಲ್ಲಿ ದೊಡ್ಡ ಪೈಪೋಟಿ ನಡೆಯಲಿದೆ. ಅವುಗಳ ನಿರ್ಮಾಣಕ್ಕೆ ಎರಡೇ ವರ್ಷ ಸಾಕು. ಕಾರ್ಬನ್ ಹೊಗೆ ಇಲ್ಲ; ಸಣ್ಣ ಪಟ್ಟಣಗಳಿಗೆ, ಕಾರ್ಖಾನೆಗಳ ಸಂಕೀರ್ಣಕ್ಕೆ ವಿದ್ಯುತ್ ಬೇಕಿದ್ದರೂ ಎಲ್ಲೆಂದರಲ್ಲಿ ಇದನ್ನು ಸ್ಥಾಪಿಸಬಹುದು ಎಂದೆಲ್ಲ ಹೊಗಳುತ್ತ ಖಾಸಗಿ ಕಂಪನಿಗಳು ನಮ್ಮಲ್ಲೂ ಅಂಥವನ್ನು ಸ್ಥಾಪಿಸುತ್ತ ಹೋದರೆ ಮುಂದಿನದನ್ನು ನಾವು ಊಹಿಸಿಕೊಳ್ಳಬಹುದು. ಈಗೇನೋ ಕೈಗಾ, ಕಕ್ರಪಾರಾ, ಕಲ್ಪಾಕ್ಕಮ್, ಕೂಡಂಕುಲಂನ ದೊಡ್ಡ ಸ್ಥಾವರಗಳಲ್ಲಿ ಬಿಗಿ ಭದ್ರತೆ ಇದೆ. ಅಲ್ಲಿ ಹೊಮ್ಮುವ ಅಪಾಯಕಾರಿ ವಿಕಿರಣ ತ್ಯಾಜ್ಯಗಳನ್ನು ಮತ್ತು ಶಿಥಿಲ ಬಿಡಿಭಾಗಗಳನ್ನು ಅಲ್ಲಲ್ಲೇ ಇಟ್ಟಿರುತ್ತಾರೆ. ಅಲ್ಲಿ ಭಯೋತ್ಪಾದಕರು ಅಥವಾ ವೈರಿ ದೇಶಗಳು ಶೆಲ್ ದಾಳಿ ನಡೆಸದಂತೆ ರಡಾರ್ ಕಣ್ಗಾವಲು ಇದೆ. ಹೂಳಿಟ್ಟ ತ್ಯಾಜ್ಯಗಳ ಮೇಲೆ ಸಮಾಧಿ ಕಟ್ಟಿದರೂ ಅದನ್ನು ಲಕ್ಷಗಟ್ಟಲೆ ವರ್ಷ ಕಾಯಬೇಕಾಗುತ್ತದೆ. ಯಾವ ಬಗೆಯ ಕಾಂಕ್ರೀಟಿನಲ್ಲಿ ಸಮಾಧಿ ಮಾಡುತ್ತಾರೊ, ಯಾವ ಭಾಷೆಯಲ್ಲಿ ಎಚ್ಚರಿಕೆ ಫಲಕ ಹಾಕುತ್ತಾರೊ ಯಾರಿಗೂ ಗೊತ್ತಿಲ್ಲ. ಯಾವುದೂ ಹತ್ತು ಸಾವಿರ ವರ್ಷಗಳವರೆಗೆ
ಸ್ಥಿರವಾಗಿ ನಿಂತಿದ್ದು ನಮಗಂತೂ ಗೊತ್ತಿಲ್ಲ.
ಪರಮಾಣು ತ್ಯಾಜ್ಯಗಳ ಪ್ರಶ್ನೆ ಬಂದಾಗ ಅಲ್ಲಿ ದೊಡ್ಡದು ಚಿಕ್ಕದು ಎಂಬ ವ್ಯತ್ಯಾಸ ಇರುವುದಿಲ್ಲ. ಭೂಮಿಯ ಮೇಲೆ ಈಗ 2500 ಮೆಗಾವಾಟ್ ವಿದ್ಯುತ್ ಹೊಮ್ಮಿಸಬಲ್ಲ ಬೃಹತ್ ಸ್ಥಾವರಗಳಿವೆ. ಚಂದ್ರನ ಮೇಲೆ, ಅದರ ದಕ್ಷಿಣ ಧ್ರುವದ ಅರೆಗತ್ತಲಲ್ಲಿ ಸ್ಥಾಪಿಸಲೆಂದು ಅಮೆರಿಕ ಬರೀ 100 ಕಿಲೊವಾಟ್ (ಸಾವಿರ ಕಿಲೊವಾಟ್ ಅಂದರೆ ಒಂದು ಮೆಗಾವಾಟ್) ಸಾಮರ್ಥ್ಯದ ಚಿಕ್ಕ ಘಟಕವನ್ನು ಒಯ್ಯಲಿದೆಯಂತೆ. ನಮ್ಮೂರಲ್ಲಾದರೆ
ಅದು ನೂರು ಮನೆಗಳ ಪುಟ್ಟ ಹಳ್ಳಿಗೆ ಸಾಲುವಷ್ಟು ವಿದ್ಯುತ್ ಶಕ್ತಿಯನ್ನು ನೀಡುತ್ತದೆ.
ಪುಟ್ಟ ಪರಮಾಣು ಸ್ಥಾವರಗಳು ಎಲ್ಲೆಂದರಲ್ಲಿ ಕೂತರೆ ಮುಂದಿನ ಪೀಳಿಗೆಗೆ ದೊಡ್ಡ ಪ್ರಶ್ನೆಗಳೇ ಎದುರಾಗಬಹುದು. ಪರಮಾಣು ಎಂದರೆ ಪ್ಲಾಸ್ಟಿಕ್ ಅಲ್ಲ. ಅತೀವ ಜಾಗೃತಿ, ಕಟ್ಟುನಿಟ್ಟಿನ ಶಿಸ್ತು, ಅಸ್ಖಲಿತ ಸಾಮಾಜಿಕ ಬದ್ಧತೆ ಎಲ್ಲವೂ ಇರಬೇಕಾಗುತ್ತದೆ. ನಮ್ಮಲ್ಲಿ ಅವೆಲ್ಲಿ? 1982ರಲ್ಲಿ ವಿಕ್ಟೋರಿಯಾ ಆಸ್ಪತ್ರೆಯ ಎಕ್ಸ್‌ರೇ ಯಂತ್ರದಲ್ಲಿದ್ದ ಮುಷ್ಟಿಗಾತ್ರದ ಸೀಸಿಯಂ ಡಬ್ಬಿ ಕಳೆದು ಹೋಗಿದ್ದರಿಂದ ಭಾರೀ ರಂಪಾಟವಾಗಿತ್ತು. 1993ರಲ್ಲಿ ಮದ್ರಾಸಿನ ಕೂವಂ ನದಿಗೆ ಅಂಥದ್ದೇ ಕಿರು ಡಬ್ಬಿಯನ್ನು ಬಿಸಾಕಲಾಗಿತ್ತು. ಹಾಹಾಕಾರ ಎದ್ದು ಪರಮಾಣು ತಜ್ಞರು ದೇಶದ ವಿವಿಧ ಭಾಗಗಳಿಂದ ಧಾವಿಸಿ ಬಂದು ಕೆಸರಿನ ಕೂಪದಲ್ಲಿ ಮೂರು ದಿನ ತಡಕಾಡಿ ತೆಗೆಯಬೇಕಾಯಿತು.
ಚಂದ್ರನ ನೆಲದಲ್ಲಿ ಹಾಗಾಗುವುದಿಲ್ಲ ಬಿಡಿ. ಅಲ್ಲಿ ನೀರೂ ಇಲ್ಲ, ಗಾಳಿಯೂ ಇಲ್ಲ, ಜನರೂ ದೀರ್ಘಕಾಲ ಇರುವಂತಿಲ್ಲ. ಹೋದ ಕೆಲವರೂ ಪರಮಾಣು ಸಾಧನಗಳನ್ನು ಕಂಡಲ್ಲಿ ಬಿಸಾಕುವಷ್ಟು ಅಶಿಸ್ತಿನ ಜನ ಆಗಿರುವುದಿಲ್ಲ. ಆದರೆ, ಚಂದ್ರನಿಗೆಂದು ರೂಪಿಸಿದ ಮಾದರಿಗಳು ನಾಳೆ ಚಂದ್ರಾ ಲೇಔಟಿಗೂ ಬಂದರೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.