ADVERTISEMENT

ಜ್ಯೋತಿಗೆ ಬೆಳಕಾದ ಬಯಲ ಮಹಾ ಬೆಳಗು ’ಶ್ರೀ ಚೆನ್ನಬಸವಣ್ಣ’

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 10:35 IST
Last Updated 20 ಅಕ್ಟೋಬರ್ 2025, 10:35 IST
   

12 ಶತಮಾನದ ಶೋಷಣೆಯ ಉತ್ತುಂಗದಲ್ಲಿ ಜಗಜ್ಯೋತಿ ಚೆನ್ನಬಸವಣ್ಣನೆಂಬ ಅಖಂಡ ಜ್ಞಾನ, ಭಕ್ತಿ ಬೆಳಕು ಸಮ ಸಮಾಜಕ್ಕಾಗಿ, ಜಾತಿ ವರ್ಗ, ವರ್ಣ ರಹಿತ ಸಮಾಜಕ್ಕೆ ಶ್ರಮಿಸುತ್ತಿರಲಾಗಿ, ಅಕ್ಕ ನಾಗಲಾಂಬಿಕೆಯ ಮಗನಾಗಿ ಉದಯಿಸಿದ ಷಟಸ್ಥಳ ಚಕ್ರವರ್ತಿ ಶ್ರೀ ಚೆನ್ನಬಸವಣ್ಣನವರು ಕಿರಿಯ ವಯಸ್ಸಿನಲ್ಲೇ ಉನ್ನತ ಜ್ಞಾನ ಸಂಪಾದಿಸಿದವರಲ್ಲಿ ಮೊದಲಿಗರು. ಸಿದ್ಧರಾಮೇಶ್ವರ ದಿಕ್ಷಾ ಗುರುಗಳು. ಅಕ್ಕಮಹಾದೇವಿ, ಹಡಪದ ಲಿಂಗಮ್ಮ ಹಾಗೂ ಅನೇಕ ಶಿವ ಶರಣರ ಪಾಲಿಗೆ ಅಖಂಡ ಜ್ಞಾನ ರತ್ನ ಚೆನ್ನಬಸವಣ್ಣನವರು. 

ಲಿಂಗಾನುಭಾವ ಶೂನ್ಯ ಸಿಂಹಾಸನಾ ಅಧ್ಯಕ್ಷರಾದ ಅಲ್ಲಮಪ್ರಭುವಿಗೂ ಮೀರಿದ ಜ್ಞಾನ ಸಂಪದ ಚೆನ್ನಬಸವಣ್ಣನವರು.

'ಬಸವ' ಎಂಬ ಮೂರಕ್ಷರ ಹೃದಯ ಕಮಲದಲ್ಲಿ ನೆಲೆಗೊಂಡಡೆ, ಅಭೇದ್ಯವು ಭೇದ್ಯವಾಗುತ್ತದೆ. ಅಸಾಧ್ಯ ಸಾಧ್ಯವಾಗುತ್ತದೆ. ಚೆನ್ನಬಸವಣ್ಣನಿಂದ ಲೋಕಲೌಕಿಕ ಕುಭಾಷೆಯ ಕಳೆದು. ಲೋಕಾಚರಣೆಯನತಿಗಳೆದು ಭಕ್ತಿಭರವಪ್ಪುದು. ಕೂಡಲಚೆನ್ನಸಂಗಯ್ಯನಲ್ಲಿ ಚೆನ್ನಬಸವಣ್ಣನ ಕಾರುಣ್ಯದಿಂದ ಗುರು ಚೆನ್ನಬಸವಣ್ಣನವರ ಮೇಲಿದ್ದ ಅಪಾರವಾದ ಭಕ್ತಿ ಭಾವ ಇವರನ್ನು ಜ್ಞಾನದ ಉತ್ತುಂಗಕ್ಕೆ ಕೊಂಡೊಯ್ದಿತ್ತೆಂದರೆ ಅತಿಶಯೋಕ್ತಿಯಲ್ಲ.

ADVERTISEMENT

‘ಬ್ರಹ್ಮ ಸೂತ್ರವ ಬಳಿದು ವರ್ಮಾದಿ ವರ್ಮದಲಿ ಕರ್ಮವನು ಕಳೆದು ನಿರ್ವಯಲಾದೆನು ಎಂದು, ಆರು ನೆಲೆಯನ್ನು ಮೀರಿ ಮೂರು ಬಾಗಿಲ ಮುಚ್ಚಿ ಮೀರಿ ಘನ ಲಿಂಗವ ಕಂಡು,ನಿಷ್ಟಿಂತ ನಿರ್ಜಾಥ ನಿರ್ವಯಲ ನೀಡಿದ ಮಹಾಂತ ಕೂಡಲ ಚನ್ನ ಸಂಗಯ್ಯನು ಎಂಬ ಕಿಂಕರ ಭಾವದ ಅಪ್ರತಿಮ ಲಿಂಗೈಕ್ಯ ಸಾಧಕ, ಅಷ್ಟದಳ ಮಂಟಪದ ಅಷ್ಟ ಕೋಣೆಗಳೊಳಗೆ ಅಷ್ಟ ಲಿಂಗಾರ್ಚನೆಯ ಅಷ್ಟ ಪೂಜೆ ನೆಲೆಗೊಳಿಸಿ ನಿರಂಜನವ ಕಂಡವರು’.

ಅಷ್ಟಾವರಣಗಳ ಅನುಷ್ಠಾನವನ್ನು ಅದರ ಅನುಸಂಧಾನವನ್ನು ಕೆಳಗಿನ ವಚನದಲ್ಲಿ, ಮುಕ್ತಿಗೆ ಭಕ್ತಿಯೇ ಮೂಲ, ಎಂದು ಕಿಂಕರ ಭಾವದ ಭಕ್ತಿ ಸಾಧನೆಯ ಮರ್ಮವನ್ನು ತಿಳಿಸಿರುವರು.

ಶ್ರೀಗುರುವನುಳಿದು ಲಿಂಗವುಂಟೆ ? ಲಿಂಗವನುಳಿದು ಜಂಗಮವುಂಟೆ ?

ಜಂಗಮವನುಳಿದು ಪ್ರಸಾದವುಂಟೆ ?

ಪ್ರಸಾದವನುಳಿದು ಭಕ್ತಿಯುಂಟೆ ? ಭಕ್ತಿಯನುಳಿದು ಮುಕ್ತಿಯುಂಟೆ ?

ಇಲ್ಲವಯ್ಯಾ ಕೂಡಲಚೆನ್ನಸಂಗಯ್ಯ.

ಅದೇ ರೀತಿ ಸಾಧಕನು, ಸ್ವಯಂ ಸಾಧನೆಯ ಮೂಲಕ ಯೋಗಿಯಾದರರೂ, ಅವನಲ್ಲಿ ಮಾಯೆಯ ಉಪಟಳ ಅಧೋಗತಿಗೆ ಹೇಗೆ ತರುತ್ತದೆ ಎಂಬುದನ್ನು ಕೆಳಗಿನ ವಚನದಲ್ಲಿ ವಿವರಿಸಲಾಗಿದೆ. ಅರ್ಥಾತ್ ಲಿಂಗಪೂಜೆಯನ್ನು ತನ್ನ ಶರೀರವನ್ನು ತ್ಯಜಿಸುವವರೆಗೂ ತಾನು ಐಕ್ಯ ಸ್ಥಳ ಮೀರಿದ್ದರು, ತ್ರಿಕಾಲ ಲಿಂಗನುಷ್ಠಾನ ಲಿಂಗಪೂಜೆ ಬಿಡಬಾರದೆಂದು, ಆಚರಿಸಿ ಅನುಭಾವ ಸಾಧನೆಯನ್ನು ಮಾಯೆಯ ಮುಷ್ಟಿಗೆ ಸಿಲುಕದ ಹಾಗೆ ಮಾಡಿದ ಮಹಾನ್ ಸಾಧಕರು.

ಶೂನ್ಯವ ನುಡಿದು ದುರ್ಗತಿಗಿಳಿದವರ,

ಅದ್ವೈತವ ನುಡಿದು ಅಹಂಕಾರಿಗಳಾದವರ,

ಬ್ರಹ್ಮವ ನುಡಿದು ಭ್ರಮಿತರಾದವರ,

ತ್ರಿಕಾಲ ಲಿಂಗಪೂಜೆಯ ಮಾಡದವರ

ಬ್ರಹ್ಮದ ಅನವರತ ಮಾತ ಕೇಳಿ

ಹಿಡಿದ ವ್ರತನೇಮಗಳ ಬಿಡುವವರ-

ಈ ದುರಾಚಾರಿಗಳ ಮೆಚ್ಚ, ಕೂಡಲಚೆನ್ನಸಂಗಾ ನಿಮ್ಮ ಶರಣ.

ಪ್ರಸ್ತುತ ಸಮಾಜದಲ್ಲಿ ಅಂದಿನಿಂದ ಇಂದಿನ ವರೆಗೂ ಲಿಂಗವಂತರಾದ ಸಾಧಕರು ಶರಣರನ್ನು, ಸದಾ ಎಚ್ಚರಿಸುವ ವಚನ, ಮನದಲ್ಲಿ ಲಿಂಗದ ಅರ್ಥಾತ್ (ಭಕ್ತರಲ್ಲದ, ಶರಣರಲ್ಲದ, ಉಪದೇಶ ಪಡೆಯದವರ, ಆತ್ಮ ಜ್ಞಾನಿಯಲ್ಲದ) ಬ್ರಹ್ಮ ಭಾವದ, ಶಿವಯೋಗ ಸಾಧನೆಯನ್ನು ಮಾಡದ ಅಲ್ಪರು, ಲೌಕಿಕರು, ಕೇವಲ ಮಾತಿನ ಮಲ್ಲರನ್ನು, ಭಾವ ನಿರ್ಭಾವವಾಗದ ಭವಿಗಳನ್ನು ಶಿವಯೋಗ ಸಾಧನೆಗೆ ತೊಡಗುವಂತೆ ಪ್ರೇರೇಪಿಸುವ ನಿಷ್ಠುರ ವಾಕ್ಯದ ಹಿಂದಿನ ಮರ್ಮವನ್ನು ನಾವು ನೀವೆಲ್ಲರೂ ಅರಿಯಬೇಕಿದೆ.

‘ಹಲವು ಕಾಲ ಹಂಸೆಯ ಸಂಗದಲಿದ್ದರೇನು

ಬಕ ಶುಚಿಯಾಗಬಲ್ಲುದೇ..

ಕಾಶೀಕ್ಷೇತ್ರದಲ್ಲಿ ಒಂದು ಶುನಕನಿದ್ದರೇನು ಅದರ ಹಾಲು ಪಂಚಾಮೃತಕ್ಕೆ ಸಲುವುದೇ...

ಇದು ಕಾರಣ-ಕೂಡಲಸಂಗನ ಶರಣರ ಸನ್ನಿಧಿಯಲ್ಲಿ ಅಸಜ್ಜನನಿದ್ದರೇನು ಸದ್ಭಕ್ತನಾಗಬಲ್ಲನೇ’

ಕಲ್ಯಾಣ ಕ್ರಾಂತಿಯಲ್ಲಿ ಹೋರಾಡಿ ನಂತರ ವಚನ ಸಾಹಿತ್ಯದ ಉಳಿವಿಗಾಗಿ ಉಳವಿಯಲ್ಲಿ ನಿರ್ವಯಲ ಸಮಾಧಿಯನ್ನು ಹೊಂದಿದ ಮಹಾನ್ ದಾರ್ಶನಿಕ ನಿರಂಜನ ಚಕ್ರವರ್ತಿ ಚೆನ್ನಬಸವಣ್ಣನ ಶ್ರೀ ಪಾದಕ್ಕೆ ಅನಂತ ಕೋಟಿ ಶರಣು ಶರಣಾರ್ಥಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.