ADVERTISEMENT

ತುಮಕೂರಿನಲ್ಲಿದೆ ಹೊಯ್ಸಳರ ಪ್ರಸಿದ್ಧ ದೇವಾಲಯ: ಏನಿದರ ವಿಶೇಷತೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಡಿಸೆಂಬರ್ 2025, 7:19 IST
Last Updated 10 ಡಿಸೆಂಬರ್ 2025, 7:19 IST
<div class="paragraphs"><p>ಚಿತ್ರ:&nbsp;tumkur.nic.in</p></div>
   

ಚಿತ್ರ: tumkur.nic.in

ಕರ್ನಾಟಕವನ್ನು ಆಳಿದ ಪ್ರತಿ ರಾಜರೂ ಧಾರ್ಮಿಕ ಸಹಿಷ್ಣುತೆ ಮೆರೆದಿದ್ದಾರೆ. ಪ್ರತಿ ಅರಸರು ತಮ್ಮ ಧರ್ಮಕ್ಕೆ ಅನುಸಾರವಾಗಿ ದೇವಾಲಯ, ಧಾರ್ಮಿಕ ಸ್ಥಳ, ಬಸದಿಗಳು ಹೀಗೆ ಹತ್ತು ಹಲವು ಆಲಯಗಳನ್ನು ನಿರ್ಮಿಸಿದ್ದಾರೆ. ಆ ಪೈಕಿ ತುಮಕೂರು ಜಿಲ್ಲೆಯ ಅರಳುಗುಪ್ಪೆ ಗ್ರಾಮದಲ್ಲಿರುವ ದೇವಾಲಯವೂ ಒಂದು.

ತುಮಕೂರಿನ ಸಮೀಪವಿರುವ ಚೆನ್ನಕೇಶವ ದೇವಾಲಯ ಹೊಯ್ಸಳ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದೆ. ದೇವಾಲಯದಲ್ಲಿ ವಿಷ್ಣುವಿನ ಸುಂದರವಾದ ಮೂರ್ತಿ ಇದ್ದು, ಈ ಮೂರ್ತಿ ದಶಾವತಾರಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. 

12ನೇ ಶತಮಾನದಲ್ಲಿ ನಿರ್ಮಾಣವಾದ ಈ ದೇವಾಲಯವನ್ನು ಹೊಯ್ಸಳ ರಾಜ ವಿಷ್ಣುವರ್ಧನ ನಿರ್ಮಿಸಿದನು. ಮೂರು ಹಂತಗಳನ್ನು ಒಳಗೊಂಡಿರುವ ಈ ದೇವಾಲಯ, ಮುಖ್ಯ ದೇವಾಲಯ, ಮಂಟಪ ಮತ್ತು ಮೆಟ್ಟಿಲು ಬಾವಿಗಳಾಗಿ ವಿಭಜನೆಯಾಗಿದೆ. ಮುಖ್ಯ ದೇಗುಲದಲ್ಲಿ ವಿಷ್ಣುವಿನ ವಿಗ್ರಹವಿದ್ದು, ಅದರ ಸುತ್ತಲೂ ವಿಷ್ಣುವಿನ ಪತ್ನಿಯರಾದ ಶ್ರೀದೇವಿ ಮತ್ತು ಭೂದೇವಿಯ ವಿಗ್ರಹಗಳಿವೆ. 

ದೇವಾಲಯವಾದ ಸುತ್ತಲೂ ಸುಂದರವಾದ ಕುಸುರಿ ಕೆತ್ತನೆಗಳಿವೆ. ಈ ದೇವಾಲಯವು ಪೂರ್ವಾಭಿಮುಖವಾಗಿ  ಪ್ರವೇಶದ್ವಾರವನ್ನು ಹೊಂದಿದೆ. ನಕ್ಷತ್ರಾಕೃತಿಯ ಚಾವಣಿ ಇದ್ದು, ವಿಭಿನ್ನ ಕೆತ್ತನೆಯುಳ್ಳ 9 ಕಂಬಗಳಿವೆ. ಇಲ್ಲಿನ ಮೆಟ್ಟಿಲು ಬಾವಿ ಹಂತ ಹಂತವಾಗಿದೆ. ಈ ಬಾವಿಯ ನೀರು ಪವಿತ್ರ ಎಂಬ ನಂಬಿಕೆ ಇದೆ. ಈ ಬಾವಿಗೆ ಪಾತಾಳದಿಂದ ಪವಿತ್ರ ನದಿಯ ನೀರು ಬರುತ್ತದೆ ಎಂಬ ನಂಬಿಕೆ ಸ್ಥಳೀಯರಲ್ಲಿದೆ. 

ದೇವಾಲಯವು ಮಧ್ಯಮ ಗಾತ್ರವಾಗಿದ್ದು, ತನ್ನ ಕೆತ್ತನೆಗೆ ಹೆಸರು ವಾಸಿಯಾಗಿದೆ. ಸೋಮನಾಥಪುರದ  ದೇವಾಲಯದಂತೆ ಕಂಡರೂ, ವಿಭಿನ್ನ ಶೈಲಿಯಲ್ಲಿದೆ. ದೇವಾಲಯದ ನಾನಾ ಭಾಗಗಳಲ್ಲಿ ದೇವರ ವಿಗ್ರಹಗಳ ಕೆತ್ತನೆಗಳಾದ ವಿಷ್ಣುವಿನ ದಶಾವತಾರ, ರಾಮಾಯಣದ ಕಥಾನಕಗಳು, ಕಾಲ್ಪನಿಕ ಮೃಗ, ಮಕರ, ಹಂಸ, ಆನೆ, ಕುದುರೆ, ಕುದುರೆಗಳು ಸರಕನ್ನು ಸಾಗಿಸುತ್ತಿರುವ ಕೆತ್ತನೆ, ಬಾಲ ಕೃಷ್ಣನ ಲೀಲೆಗಳು, ನಾಟ್ಯ ಗಣಪ, ಲಕ್ಷ್ಮೀ, ಸರಸ್ವತಿ, ಯಕ್ಷ ಸೇರಿದಂತೆ ವಿವಿಧ ಕಾಲ್ಪನಿಕ ಕೆತ್ತನೆಗಳನ್ನು ಕೆತ್ತಲಾಗಿದೆ. 

ಭೂಮಿಯಿಂದ 4 ರಿಂದ 5 ಅಡಿ ಎತ್ತರವಾದ ನಕ್ಷತ್ರಕಾರದ ಜಗಳಿಯ ಮೇಲೆ ಇಡೀ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ. ಈ ದೇವಾಲಯದಲ್ಲಿ ಸೂಕ್ಷ್ಮ ಕೆತ್ತನೆಗಳಿದ್ದು, ಕರ್ನಾಟಕದ ಪರಂಪರೆ, ಧಾರ್ಮಿಕ ವಿಚಾರಗಳನ್ನು ಬಿಂಬಿಸುತ್ತದೆ.

ದೇವಾಲಯದ ಪ್ರತಿ ಗೋಡೆಯಲ್ಲಿಯೂ ಕಲ್ಲಿನಿಂದ ಕೊರೆಯಾಲದ ಉಬ್ಬು ಶಿಲ್ಪಗಳನ್ನು ಕಾಣಬಹುದು. ಆದಿಶೇಷನ ಮೇಲೆ ಕುಳಿತಿರುವ ವಿಷ್ಣುವಿನ ವಿಗ್ರಹ, 7 ತಲೆಯ ಸರ್ಪ, ದಕ್ಷಿಣಾಭಿಮುಖವಾಗಿ ಕೆತ್ತಲಾಗಿರುವ 4 ತೋಳುಗಳ ಗಣಪತಿ. ಪ್ರತಿ ವರ್ಷ ಇಲ್ಲಿ ಚೆನ್ನಕೇಶವ ಬ್ರಹ್ಮೋತ್ಸವವನ್ನು ಮಾಡಲಾಗುತ್ತದೆ.

ತಲುಪುವುದು ಹೇಗೆ? 

ತುಮಕೂರಿನಿಂದ ಸುಮಾರು 25 ದೂರದಲ್ಲಿದೆ. ಬಸ್, ಕಾರು ಮೂಲಕ ಅರಳುಗುಪ್ಪೆಗೆ ತಲುಪಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.