ಎಐ ಚಿತ್ರ
ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ನವರಾತ್ರಿಯೂ ಒಂದಾಗಿದೆ. ಈ ಹಬ್ಬದಲ್ಲಿ ದುರ್ಗಾದೇವಿಗೆಯನ್ನು ಆರಾಧನೆ ಮಾಡಲಾಗುತ್ತದೆ. ದೇವಿಯ 9 ರೂಪಗಳನ್ನು ಒಂದೊಂದಾಗಿ ದಿನನಿತ್ಯ ಪೂಜಿಸಲಾಗುತ್ತದೆ.
9 ದೇವಿಯರಿಗೆ ಪೂಜೆಯನ್ನು ಸಲ್ಲಿಸುವುದರಿಂದ ಸುಖ, ಶಾಂತಿ, ನೆಮ್ಮದಿಯ ಜೊತೆಗೆ ಸಕಲ ಐಶ್ವರ್ಯಗಳು ದೊರೆಯುತ್ತವೆ. ದುರ್ಗೆಯ 9 ಅವತಾರಗಳು ಯಾವುವು? ಪೂಜೆ ಸಲ್ಲಿಸುವುದರಿಂದ ಸಿಗುವ ಲಾಭಗಳೇನು? ಎಂಬ ಮಾಹಿತಿ ಇಲ್ಲಿದೆ..
ಮಾತೆ ಶೈಲಪುತ್ರಿ :
ದುರ್ಗೆಯ ಒಂಬತ್ತು ದೈವಿಕ ರೂಪಗಳಲ್ಲಿ ಮೊದಲನೆಯ ರೂಪ ಶೈಲಪುತ್ರಿಯದು. ನವರಾತ್ರಿ ಆರಂಭವಾಗುವುದು ಈಕೆಯನ್ನು ಪೂಜಿಸುವುದರಿಂದ. ಸಮೃದ್ಧಿಯ ದೇವತೆ ಹಾಗೂ ಪ್ರಕೃತಿ ಮಾತೆ ಎಂದು ಕರೆಯಲಾಗುತ್ತದೆ. ಶೈಲಪುತ್ರಿಯು ಅದೃಷ್ಟ ನೀಡುವಳು ಎಂದು ಹೇಳಲಾಗುತ್ತದೆ. ದೃಕ್ ಪಂಚಾಂಗದಲ್ಲಿ ಹೇಳಿರುವಂತೆ ಸತಿ ದೇವಿಯ ಆತ್ಮಾಹುತಿಯ ನಂತರ ಹಿಮಾಲಯ ದೇವರ ಮಗಳಾಗಿ ಪುನರ್ಜನ್ಮ ಪಡೆದಳು ಎಂಬ ಉಲ್ಲೇಖಗಳಿವೆ.
ಬಣ್ಣ : ಬಿಳಿ ಬಣ್ಣ
ಬ್ರಹ್ಮಚಾರಿಣಿ :
ಬ್ರಹ್ಮಚಾರಿಣಿಯು ಹಸಿರು ಬಣ್ಣದ ವಸ್ತ್ರವನ್ನು ತೊಟ್ಟಿರುತ್ತಾಳೆ. ಒಂದು ಕೈಯಲ್ಲಿ ಜಪಮಾಲೆ ಇನ್ನೊಂದು ಕೈಯಲ್ಲಿ ಕಮಂಡಲವನ್ನು ಹಿಡಿದುಕೊಂಡಿರುತ್ತಾಳೆ. ತನ್ನ ಭಕ್ತರಿಗೆ ಸಂತೋಷ ಹಾಗೂ ಜ್ಞಾನವನ್ನು ನೀಡುತ್ತಾಳೆ. ಪಾರ್ವತಿಯು ಹಿಮಾಲಯದ ಪುತ್ರಿಯಾಗಿ ಜನಿಸಿದಳು. ಪರಶಿವನನ್ನು ಪತಿಯಾಗಿ ಪಡೆಯಲು ನಾರದರ ಉಪದೇಶದಂತೆ ಕಠಿಣ ತಪಸ್ಸನ್ನು ಮಾಡುತ್ತಾಳೆ. ಇದರಿಂದಾಗಿ ಬ್ರಹ್ಮಚಾರಿಣಿ ಎಂಬ ಹೆಸರು ಬಂದಿದೆ. ತಪಸ್ಸಿನ ವೇಳೆಯಲ್ಲಿ ಹೂ, ಹಣ್ಣು ಹಾಗೂ ಎಲೆಗಳನ್ನು ಸೇವಿಸುತ್ತಿದ್ದಳು. ಕಾಲಾನಂತರದಲ್ಲಿ ಎಲೆಗಳ ಸೇವನೆಯನ್ನು ನಿಲ್ಲಿಸುತ್ತಾಳೆ. ಈ ಕಾರಣಕ್ಕಾಗಿ ಆಕೆಯನ್ನು ಅಪರ್ಣ ಎಂತಲೂ ಕರೆಯಲಾಗುತ್ತದೆ.
ಬಣ್ಣ : ಹಸಿರು
ಚಂದ್ರಘಂಟಾ:
ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ದೇವಿಯನ್ನು ಆರಾಧಿಸಲಾಗುತ್ತದೆ.
ಹೊಸದಾಗಿ ವಿವಾಹವಾದ ರೂಪವನ್ನು ದುರ್ಗಾಮಾತೆಯು ಚಂದ್ರಘಂಟಾ ರೂಪದಲ್ಲಿ ಕಾಣಬಹುದು. ಪಾರ್ವತಿ ದೇವಿಯು ಕಠಿಣವಾದ ತಪಸ್ಸನ್ನು ಮಾಡಿ ಶಿವನನ್ನು ಮದುವೆಯಾಗುತ್ತಾಳೆ. ವಿವಾಹ ಸಂದರ್ಭದಲ್ಲಿ ಶಿವ ಪಾರ್ವತಿಯರು ಅರಮನೆಯನ್ನು ಪ್ರವೇಶಿಸುತ್ತಾರೆ. ಅತಿ ಭಯಂಕರನಾಗಿ ಕಾಣುತ್ತಿದ್ದ ಶಿವನನ್ನು ನೋಡಿ ಪಾರ್ವತಿಯು ಮೂರ್ಛೆ ಹೋಗುತ್ತಾಳೆ. ಆಗ ಪಾರ್ವತಿಯು ಚಂದ್ರಘಂಟಾ ರೂಪದಲ್ಲಿ ಶಿವನ ಮುಂದೆ ಪ್ರತ್ಯಕ್ಷಳಾಗಿ ಶಿವನು ರಾಜಕುಮಾರನ ರೂಪವನ್ನು ತಾಳುವಂತೆ ವಿನಂತಿಸಿಕೊಳ್ಳುತ್ತಾಳೆ. ಹೀಗೆ ಶಿವನು ಸುಂದರ ವರನ ರೂಪವನ್ನು ತಾಳಿದ ನಂತರ ಶಿವ ಪಾರ್ವತಿಯ ಮದುವೆ ನೆರವೇರುತ್ತದೆ.
ಬಣ್ಣ : ಕಡು ಬೂದು ಬಣ್ಣ
ಕೂಷ್ಮಾಂಡ ದೇವಿ :
ನವರಾತ್ರಿಯ ನಾಲ್ಕನೇ ದಿನದಂದು ದೇವಿಯ ಕೂಷ್ಮಾಂಡಿನಿ ಅವತಾರವನ್ನು ಆರಾಧಿಸಲಾಗುತ್ತದೆ. ಕೂಷ್ಮಾಂಡಿನಿ ರೂಪವನ್ನು ತೊಟ್ಟ ದೇವಿಯು ಭೂಮಿಯ ಸೃಷ್ಠಿಕರ್ತೆ ಎಂದು ಹೇಳಲಾಗುತ್ತದೆ. ಎಂಟು ಭುಜಗಳಿರುವ ಕಾರಣ ಅಷ್ಟಭುಜಾದೇವಿ ಎಂತಲೂ ಕರೆಯಲಾಗುತ್ತದೆ.
ಸೃಷ್ಟಿಯ ಅಸ್ತಿತ್ವ ಇಲ್ಲದಿರುವಾಗ ಎಲ್ಲೆಡೆ ಅಂಧಕಾರವಿತ್ತು. ಆಗ ಕೂಷ್ಮಾಂಡ ದೇವಿಯು ತನ್ನ ಶಕ್ತಿಯಿಂದ ಬ್ರಹ್ಮಾಂಡವನ್ನು ಸೃಷ್ಟಿಸುತ್ತಾಳೆ. ಆದ್ದರಿಂದ ಇವಳನ್ನು ಸೃಷ್ಟಿಯ ಆದಿ, ಸ್ವರೂಪ ಶಕ್ತಿ ಎಂದು ಕರೆಯಲಾಗುತ್ತದೆ.
ಬಣ್ಣ : ಹಳದಿ ಬಣ್ಣ
ಸ್ಕಂದ ಮಾತೆ :
ನವರಾತ್ರಿಯ 5ನೇ ದಿನದಂದು ದುರ್ಗೆಯ 5ನೇ ಅವತಾರವಾಗಿರುವ ಸ್ಕಂದ ಮಾತೆಯನ್ನು ಪೂಜಿಸಲಾಗುತ್ತದೆ. ಸ್ಕಂದ ಎಂದರೆ ಕಾರ್ತಿಕೇಯ ಅಥವಾ ಮುರುಗನ್. ಕಾರ್ತಿಕೇಯನ ತಾಯಿ ಸ್ಕಂದ ಮಾತೆ. ಕಾರ್ತಿಕೇಯನನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡಿರುವ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ.
ಬಣ್ಣ: ಹಸಿರು ಬಣ್ಣ
ಕಾತ್ಯಾಯಿನಿ:
ನವರಾತ್ರಿಯ 6ನೇ ದಿನ ಕಾತ್ಯಾಯಿನಿಯನ್ನು ಆರಾಧಿಸಲಾಗುತ್ತದೆ. ಒಮ್ಮೆ ಕಾತ್ಯಾಯನ ಎಂಬ ಋಷಿಯು ಪಾರ್ವತಿಯಂತಹ ಮಗಳನ್ನು ಪಡೆಯಬೇಕೆಂದು ಬಯಸಿ ತಪಸ್ಸನ್ನು ಮಾಡುತ್ತಾನೆ. ಋಷಿಯ ಭಕ್ತಿಗೆ ಮೆಚ್ಚಿದ ದುರ್ಗಾ ಮಾತೆ ವರವನ್ನು ದಯಪಾಲಿಸುತ್ತಾಳೆ. ಅಂತೆಯೇ ಮಗಳು ಹುಟ್ಟಿದ ಮೇಲೆ ಕಾತ್ಯಾಯಿನಿ ಎಂದು ಹೆಸರಿಟ್ಟರು. ಕಾತ್ಯಾಯಿನಿಯು ದೊಡ್ಡವಳಾದ ಮೇಲೆ ತನ್ನ ಹತ್ತು ಕೈಗಳಲ್ಲಿ ಶಸ್ತ್ರಾಸ್ತ್ರ ಹಿಡಿದು ದುಷ್ಕೃತ್ಯ ಎಸಗುವ ರಾಕ್ಷಸರನ್ನು ನಾಶ ಮಾಡಲು ಪ್ರಾರಂಭಿಸಿದಳು. ದುಷ್ಟ ರಾಕ್ಷಸರ ಸಂಹಾರಕ್ಕಾಗಿ ದುರ್ಗಾದೇವಿಯು ಈ ಅವತಾರದಲ್ಲಿ ಜನಿಸಿ ಬಂದಳು ಎಂದು ಹೇಳಲಾಗುತ್ತದೆ.
ಬಣ್ಣ: ಬೂದು ಬಣ್ಣ
ಕಾಳರಾತ್ರಿ:
ನವರಾತ್ರಿಯ 7ನೇ ದಿನದಂದು ಕಾಳರಾತ್ರಿ ದೇವಿಯನ್ನು ಪೂಜಿಸಲಾಗುವುದು. ರೌದ್ರಾವತಾರವನ್ನು ಹೊಂದಿರುವ ದೇವಿಯು ಕಡುಕಪ್ಪು ಬಣ್ಣದಿಂದ ಕಾಣುತ್ತಾಳೆ. ಕಡು ಕತ್ತಲಿನಲ್ಲಿ ರಕ್ಕಸರನ್ನು ಸಂಹಾರ ಮಾಡುತ್ತಾಳೆ. ಕಾಳರಾತ್ರಿ ದೇವಿಯು ದುಷ್ಟಶಕ್ತಿ ಮತ್ತು ನಕಾರಾತ್ಮಕ ಶಕ್ತಿಯನ್ನು ಸಂಹಾರ ಮಾಡಿ ತನ್ನ ಭಕ್ತರಿಗೆ ಸುಖ ಹಾಗೂ ತೃಪ್ತಿ ಕರುಣಿಸುವುದರಿಂದ ಆಕೆಯನ್ನು ಶುಭ ಕರುಣಿಸುವವಳು ಎಂದು ಕರೆಯಲಾಗುತ್ತದೆ.
ಬಣ್ಣ: ನವಿಲು ನೀಲಿ ಬಣ್ಣ.
ಮಹಾ ಗೌರಿ:
ನವರಾತ್ರಿಯ 8ನೇ ದಿನ ಮಹಾಗೌರಿಯನ್ನು ಪೂಜಿಸಲಾಗುತ್ತದೆ. ಮಹಾಗೌರಿಯು ಯೌವ್ವನ ರೂಪವನ್ನು ಹೊಂದಿರುತ್ತಾಳೆ. ಗೌರಿಯು ಶಿವನನ್ನು ಒಲಿಸಿಕೊಳ್ಳಲು ತಪಸ್ಸು ಮಾಡುತ್ತಾಳೆ. ಆಹಾರ, ನೀರು ತ್ಯಜಿಸಿ ತಪಸ್ಸನ್ನು ಮಾಡುವಾಗ ಆಕೆಯ ದೇಹದಲ್ಲಿ ಧೂಳು, ಕೊಳೆ ತುಂಬಿಕೊಳ್ಳುತ್ತದೆ. ಬಿಸಿಲಿನಿಂದಾಗಿ ಆಕೆಯ ದೇಹವು ಸಂಪೂರ್ಣವಾಗಿ ಕಪ್ಪಾಗುತ್ತದೆ. ಶಿವನು ಪಾರ್ವತಿಯ ತಪಸ್ಸಿಗೆ ಮೆಚ್ಚಿ ಗಂಗೆಯಿಂದ ಪಾರ್ವತಿಯ ಮೈತೊಳೆಯುತ್ತಾನೆ. ಇದರಿಂದಾಗಿ ಗೌರಿಯು ಕಾಂತಿಯುತವಾಗಿ, ಶ್ವೇತ ವರ್ಣದಲ್ಲಿ ಧ್ಯಾನಾಸಕ್ತಳಾಗಿ ಕಾಣುತ್ತಾಳೆ.
ಬಣ್ಣ: ಕೆಂಪು ಬಣ್ಣ
ಸಿದ್ಧಿಧಾತ್ರಿ :
ನವಮಿಯಂದು ದುರ್ಗೆಯು 9ನೇ ಅವತಾರವಾದ ಸಿದ್ಧಿಧಾತ್ರಿಯನ್ನು ಆರಾಧಿಸಲಾಗುತ್ತದೆ. ಸಿದ್ಧಿಧಾತ್ರಿಯು ತ್ರಿಮೂರ್ತಿಗಳಾಗಿರುವ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಆಧ್ಯಾತ್ಮಿಕ ಜ್ಞಾನ ಹಾಗೂ ಪರಿಪೂರ್ಣತೆ ನೀಡಿದವಳು ಎಂದು ಹೇಳಲಾಗುತ್ತದೆ. ಸಿದ್ಧಿಧಾತ್ರಿಯು ಎಲ್ಲಾ ಶಕ್ತಿ, ವೈಭವ ಮತ್ತು ಮಹಿಮೆಯ ಮೂಲವಾಗಿದ್ದಾಳೆ.
ಹೀಗೆ ನವರಾತ್ರಿಯ ಒಂಬತ್ತು ದಿನಗಳಲ್ಲಿ ನವದುರ್ಗೆಯರನ್ನು ಸ್ಥಾಪಿಸಿ ಪೂಜಿಸಲಾಗುತ್ತದೆ. ಜಗತ್ತಿನಲ್ಲಿ ಯಾವಾಗ ಕ್ರೌರ್ಯ, ಅಶಾಂತಿ, ಹಿಂಸೆ, ಕ್ರೂರತ್ವ ಹೆಚ್ಚುತ್ತದೆಯೋ ಆಗ ದೇವಿಯು ಅವತಾರಗಳನ್ನು ತಾಳಿ ದುಷ್ಟರನ್ನು ಸಂಹಾರ ಮಾಡುತ್ತಾಳೆ ಎಂದು ನಂಬಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.