ಎಐ ಚಿತ್ರ
ನವರಾತ್ರಿಯನ್ನು ಎಲ್ಲರೂ ಸಂಭ್ರಮ ಸಡಗರದಿಂದ ಆಚರಣೆ ಮಾಡುತ್ತಾರೆ. ಪ್ರತಿನಿತ್ಯ ದೇವಿಯ ಒಂದೊಂದು ರೂಪವನ್ನು ಆರಾಧನೆ ಮಾಡಲಾಗುತ್ತದೆ. ದೇವಿಯನ್ನು ಆರಾಧನೆ ಮಾಡುವುದರಿಂದ ಸಕಲವು ಸಿದ್ಧಿಸುತ್ತವೆ ಎಂದು ಶಾಸ್ತ್ರಗಳು ಹೇಳುತ್ತವೆ. ಈ ಸಂದರ್ಭದಲ್ಲಿ ಜನರು ಹಲವು ವಸ್ತುಗಳನ್ನು ಮನೆಗೆ ತರಲು ಬಯಸುತ್ತಾರೆ.
ನವರಾತ್ರಿ ಹಬ್ಬದ ಸಂದರ್ಭದಲ್ಲಿ ಕೆಲವು ವಸ್ತುಗಳನ್ನು ಖರೀದಿಸುವುದು ಶುಭಕರವೆಂದು ಹೇಳಲಾಗುತ್ತದೆ. ಯಾವ ವಸ್ತುಗಳನ್ನು ಖರೀದಿಸುವುದರಿಂದ ಲಾಭ ದೊರೆಯುತ್ತದೆ ಎಂಬುದರ ಮಾಹಿತಿ ಇಲ್ಲಿದೆ.
ಕಾಮಧೇನು ವಿಗ್ರಹ :
ಕಾಮಧೇನು ವಿಗ್ರಹವನ್ನು ಮನೆಗೆ ತರುವುದರಿಂದ ಕುಟುಂಬಕ್ಕೆ ಸಂಪತ್ತು ಹಾಗೂ ಆರೋಗ್ಯ ಪ್ರಾಪ್ತಿಯಾಗಲಿದೆ. ನವರಾತ್ರಿ ಆರಂಭದಿಂದ ಮುಗಿಯುವವರೆಗೂ ನಿತ್ಯ ಕಾಮಧೇನು ಫೋಟೋಗೆ ಪೂಜೆ ಸಲ್ಲಿಸುವುದರಿಂದ ಹಣಕಾಸಿನ ಸಮಸ್ಯೆಗಳು ಪರಿಹಾರವಾಗುತ್ತವೆ. ಮನೆಯಲ್ಲಿ ಗೋವು ಇದ್ದರೆ ಗೋವಿಗೆ ಪೂಜೆಯನ್ನು ಸಲ್ಲಿಸಬಹುದು.
ವಾಸ್ತು ಮೀನಿನ ಪ್ರತಿಮೆ :
ವಾಸ್ತು ಮೀನಿನ ಪ್ರತಿಮೆಯನ್ನು ಮನೆಯಲ್ಲಿ ಇಡುವುದರಿಂದ ಸಂಪತ್ತು ಹೆಚ್ಚಾಗುತ್ತದೆ. ಇದು ಶುಭ ಸಂಕೇತವೂ ಹೌದು. ಮೀನು ವಿಷ್ಣುವಿನ ಅವತಾರವಾಗಿರುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿ ನಿವಾರಣೆಯಾಗುತ್ತದೆ. ಮನೆಯಲ್ಲಿ ಮೀನಿನ ಅಕ್ವೇರಿಯಂ ಇದ್ದರೆ ಒಳಿತು.
ಬೆಳ್ಳಿ ನಾಣ್ಯ, ಶ್ರೀ ಚಕ್ರ, ಶ್ರೀಗಂಧ, ಕಲಶ :
ನವರಾತ್ರಿ 9 ದಿನಗಳ ಅವಧಿಯಲ್ಲಿ ಮನೆಗೆ ಬೆಳ್ಳಿ ನಾಣ್ಯಗಳು, ಶ್ರೀ ಚಕ್ರ, ಶ್ರೀಗಂಧ ಹಾಗೂ ಕಲಶವನ್ನು ಖರೀದಿಸಬಹುದು. ಯಾವುದೇ ಮಂಗಳಕರವಾದ ವಸ್ತುಗಳನ್ನು ಖರೀದಿಸುವುದರಿಂದ ದುರ್ಗಾದೇವಿಯ ಆಶೀರ್ವಾದ ಪಡೆಯಬಹುದು.
ಮನೆ, ವಾಹನ ಖರೀದಿ :
ಹೊಸ ಮನೆ, ವಾಹನ ಅಥವಾ ಆಸ್ತಿಯನ್ನು ಖರೀದಿಸಬಹುದು. ಧಾರ್ಮಿಕ ನಂಬಿಕೆಗಳ ಪ್ರಕಾರ ನವರಾತ್ರಿಯಲ್ಲಿ ಮನೆ ಅಥವಾ ಆಸ್ತಿಯನ್ನು ಖರೀದಿಸುವುದರಿಂದ ಶುಭ ಫಲಗಳನ್ನು ಪಡೆದುಕೊಳ್ಳಬಹುದು. ಈ ವಸ್ತುಗಳು ನಮ್ಮ ಜೀವನದಲ್ಲಿ ಸಮೃದ್ಧಿಯನ್ನು ಕರುಣಿಸುತ್ತವೆ. ವಿಶೇಷವಾಗಿ ಶನಿವಾರ ವಾಹನವನ್ನು ಖರೀದಿಸಿದರೆ ಶುಭವಾಗಲಿದೆ.
ದೈವಿಕ ಗಿಡಗಳು:
ದೈವಿಕ ಗಿಡಗಳಾದ ತುಳಸಿ, ಶಮಿ, ಮನಿ ಪ್ಲಾಂಟ್,ಬಾಳೆಗಿಡ ಮುಂತಾದ ದೇವರ ಆಶೀರ್ವಾದವಿರುವ ಗಿಡಗಳನ್ನು ಮನೆಗೆ ತರಬೇಕು. ನವರಾತ್ರಿಯ ಸಮಯದಲ್ಲಿ ನಿಮ್ಮ ಮನೆಯಲ್ಲಿ ಈ ಸಸ್ಯಗಳನ್ನು ನೆಡುವುದು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಈ ಸಸ್ಯಗಳನ್ನು ನಿಮ್ಮ ಮನೆಯಲ್ಲಿ ನೆಡುವುದರಿಂದ ನಕಾರಾತ್ಮಕತೆ ದೂರವಾಗುವುದರೊಂದಿಗೆ ವಾಸ್ತು ದೋಷಗಳಿಗೆ ಪರಿಹಾರ ದೊರೆಯುತ್ತದೆ.
ಇಷ್ಟ ದೇವರ ವಿಗ್ರಹಗಳು :
ಇಷ್ಟ ದೇವರ ವಿಗ್ರಹಗಳನ್ನು ಖರೀದಿಸುವುದರಿಂದ ಇಷ್ಟಾರ್ಥಗಳು ಸಿದ್ಧಿಯಾಗಲಿವೆ. ಮನೆಯಲ್ಲಿ ಪೂಜೆ ಸಲ್ಲಿಸಿ ಪ್ರತಿಷ್ಠಾಪನೆ ಮಾಡಬೇಕು. ಇದು ಆರೋಗ್ಯದ ಜೊತೆಗೆ ಶಾಂತಿ ನೆಮ್ಮದಿಯನ್ನು ತಂದುಕೊಡುತ್ತದೆ.
ಶೃಂಗಾರದ ವಸ್ತುಗಳು:
ನವರಾತ್ರಿಯ ಸಮಯದಲ್ಲಿ ಸೌಂದರ್ಯ ವರ್ಧಕಗಳನ್ನು ಖರೀದಿಸುವುದು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಹಬ್ಬದ ಸಪ್ತಮಿ, ಅಷ್ಟಮಿ ಮತ್ತು ನವಮಿ ದಿನಗಳಲ್ಲಿ ಈ ಅಲಂಕಾರಿ ವಸ್ತುಗಳನ್ನು ಖರೀದಿಸುವುದು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ.
ಹಿಂದಿನ ಧಾರ್ಮಿಕ ವಿಚಾರವೇನು?
ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ನವರಾತ್ತಿಯೂ ಒಂದಾಗಿದೆ. ದುರ್ಗಾಮಾತೆಯನ್ನು ಪೂಜಿಸುವುದರಿಂದ ಭಕ್ತರಿಗೆ ಸಂತೋಷ ಮತ್ತು ಸಮೃದ್ಧಿಯನ್ನು ದಯಪಾಲಿಸುತ್ತಾಳೆ. ಆದ್ದರಿಂದ ನವರಾತ್ರಿ ಸಮಯದಲ್ಲಿ ಈ ವಸ್ತುಗಳನ್ನು ಖರೀದಿಸುವುದು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.