
ಸಾಂದರ್ಭಿಕ ಚಿತ್ರ
ಚಿತ್ರ: ಎಐ
ಈ ವರ್ಷದ ಕೊನೆಯ ಹಾಗೂ ಶ್ರೇಷ್ಠ ಏಕಾದಶಿಯಾದ ವೈಕುಂಠ ಏಕಾದಶಿಗೆ ಇನ್ನು ಕೆಲವೇ ದಿನಗಳಿವೆ. ಈ ದಿನ ಉಪವಾಸ ಆಚರಣೆ ಮಾಡುವುದರ ಜೊತೆಗೆ ವಿಷ್ಣುವಿಗೆ ಪೂಜೆ ಸಲ್ಲಿಸಿದರೆ ಮೊಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾದರೆ ಈ ದಿನದ ಪೂಜಾ ವಿಧಾನ ಹೇಗಿರಬೇಕು ಎಂಬ ಮಾಹಿತಿ ಇಲ್ಲಿದೆ.
ಏಕಾದಶಿಯ ದಿನ ಬೆಳಿಗ್ಗೆ ಬ್ರಹ್ಮ ಮಹೂರ್ತದಲ್ಲಿ ಎದ್ದು, ಸ್ನಾನ ಮುಗಿಸಿ ಬಿಳಿ ಅಥವಾ ಹಳದಿ ಬಣ್ಣದ ಬಟ್ಟೆಯನ್ನು ಧರಿಸಬೇಕು. ಬಳಿಕ ಮನೆಯ ಮುಖ್ಯ ದ್ವಾರಕ್ಕೆ ವೈಕುಂಠ ದ್ವಾರದ ಅಲಂಕಾರ ಮಾಡಬೇಕು. ನಂತರ ಗಂಗಾಜಲ ಅಥವಾ ತುಳಸಿ ತೀರ್ಥವನ್ನು ಮನೆಯ ಸುತ್ತ ಹಾಕಿ ವ್ರತ ಆಚರಿಸುವುದು ಒಳಿತು ಎಂದು ಹೇಳಲಾಗಿದೆ.
ಪೂಜೆಯ ವಿಧಾನ:
ವೈಕುಂಠ ಏಕಾದಶಿ ಬೆಳಿಗ್ಗೆ 7:50 ರಿಂದ ಪ್ರಾರಂಭವಾಗಿ ಡಿಸೆಂಬರ್ 31 ರ ಬೆಳಿಗ್ಗೆ 5ರ ವರೆಗೆ ಇರುತ್ತದೆ. ಈ ಅವಧಿಯಲ್ಲಿ ವ್ರತವನ್ನು ಆಚರಿಸುವುದು ಉತ್ತಮ.
ಮೊದಲಿಗೆ ಏಕಾದಶಿಯಂದು ಉಪವಾಸ ಮಾಡುವ ಸಂಕಲ್ಪ ಮಾಡಬೇಕು. ವಿಷ್ಣುವಿಗೆ ಪ್ರಿಯವಾದ ಹಳದಿ ಹೂವು, ತುಳಸಿ ಸೇರಿದಂತೆ ಶಂಖ ಹಾಗೂ ಚಕ್ರವನ್ನು ದೇವರ ಮನೆಯಲ್ಲಿ ಪ್ರತಿಷ್ಠಾಪನೆ ಮಾಡಬೇಕು. ನಂತರ ಕಳಸವನ್ನು ಪ್ರತಿಸ್ಠಾಪಿಸಿ, ಎರಡು ದೀಪಗಳನ್ನು ಬೆಳಗಿಸಿರಿ.
ವಿಷ್ಣು ಸಹಸ್ರನಾಮ, ಗೋವಿಂದನ ನಾಮ ಪಠಿಸಿ. ನೈವೇದ್ಯ ಮತ್ತು ಆರತಿಯಲ್ಲಿ ತುಳಸಿಯ 12 ದಳವನ್ನು ಹಾಕಿ ಬೆಲ್ಲದ ನೀರು ಹಾಗೂ ತುಳಸಿ ತೀರ್ಥವನ್ನು ಪೂಜೆಗೆ ಬಂದವರಿಗೆ ನೀಡಬೇಕು.
ನಿಯಮಾನುಸಾರ ವೈಕುಂಠ ಏಕಾದಶಿಯ ಪೂಜೆ ಮಾಡುವುದರಿಂದ ಮೊಕ್ಷ ದೊರೆಯುತ್ತದೆ. ಜೊತೆಗೆ ಗೃಹದೋಷ, ಪಿತೃ ದೋಷ, ಮಂತ್ರ ದೋಷ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ.
ವೈಕುಂಠ ಏಕಾದಶಿಯ ದಿನ ತುಳಸಿ ಗಿಡಕ್ಕೆ ‘ಓಂ ನಮೋ ನಾರಾಯಣಾಯ’ ಎಂಬ ಮಂತ್ರ ಪಠಿಸುತ್ತ, ತಾಮ್ರದ ಬಿಂದಿಗೆ ಇಂದು ನೀರು ಹಾಕಿದರೆ, ವಾಸ್ತು ದೋಷ ನಿವಾರಣೆಯಾಗುತ್ತದೆ.
ಮನೆಯ ಮುಖ್ಯದ್ವಾರವನ್ನು ಅಲಂಕಾರ ಮಾಡಿ, ಈ ದಿನ ಬೆಳಗಿನ ಜಾವ 4:30ಕ್ಕೆ ದೀಪ ಹಚ್ಚುವುದರಿಂದ ವೈಕುಂಠಕ್ಕೆ ದಾರಿ ಮಾಡಿಕೊಡುತ್ತದೆ ಎಂಬ ನಂಬಿಕೆ ಇದೆ.
ಜಪಿಸಬೇಕಾದ ಮಂತ್ರ:
‘ಓಂ ನಮೋ ನಾರಾಯಣಾಯ’ ಮತ್ತು ’ಓಂ ಶ್ರೀವಿಷ್ಣುವೇ ನಮಃ’ ಎಂಬ ಮಂತ್ರವನ್ನು 108 ಬಾರಿ ಪಠಿಸಬೇಕು. ತುಳಸಿ ಗಿಡದ ಹತ್ತಿರ ಕುಳಿತು ಧ್ಯಾನ ಮಾಡುತ್ತ, ಈ ಮಂತ್ರವನ್ನು ಪಠಿಸಿದರೆ ಶುಭಫಲ ದೊರೆಯುತ್ತದೆ ಎಂದು ಹೇಳಲಾಗುತ್ತದೆ.
ನೈವೇದ್ಯಕ್ಕೆ ಬಾಳೆಹಣ್ಣು, ತುಳಸಿ ದಳ, ಅಕ್ಕಿ ಪಾಯಿಸ, ಕಡಲೆ ಹಾಗೂ ಬೆಲ್ಲ ಇಡುವುದು ಶ್ರೇಷ್ಠ. ತುಳಸಿ ದಳ ಇಲ್ಲದೆ ನೈವೇದ್ಯ ಪೂರ್ಣವಾಗುವುದಿಲ್ಲ ಎಂದು ಶಾಸ್ತ್ರ ಅನುಸಾರ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.