ADVERTISEMENT

ಈ ದೇವಾಲಯದಲ್ಲಿ ಪೂಜೆ ಸಲ್ಲಿಸಿದರೆ ಸಿಗುತ್ತಂತೆ ಅಮೆರಿಕದ H1B ವೀಸಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಸೆಪ್ಟೆಂಬರ್ 2025, 11:40 IST
Last Updated 23 ಸೆಪ್ಟೆಂಬರ್ 2025, 11:40 IST
<div class="paragraphs"><p><strong>ಚಿಲ್ಕೂರು ಬಾಲಾಜಿ ದೇವಸ್ಥಾನ</strong></p></div>

ಚಿಲ್ಕೂರು ಬಾಲಾಜಿ ದೇವಸ್ಥಾನ

   

ಬೆಂಗಳೂರು: ಶಿಕ್ಷಣ, ಉದ್ಯೋಗ, ವ್ಯಾಪಾರ ಹಾಗೂ ಪ್ರವಾಸಕ್ಕಾಗಿ ವಿದೇಶಗಳಿಗೆ ಹೋಗಬಯಸುವವರಿಗೆಲ್ಲಾ ಅಗತ್ಯ ಇರುವುದು ಪಾಸ್‌ಪೋರ್ಟ್‌ ಮತ್ತು ವೀಸಾ. ಆದರೆ ಅಮೆರಿಕದ ವೀಸಾ ಪಡೆಯುವ ಪ್ರಕ್ರಿಯೆಯ ಕಷ್ಟ ಎನ್ನುವುದು ಅದನ್ನು ಪಡೆದವರು ಅಥವಾ ತಿರಸ್ಕೃತಗೊಂಡವರಿಗೇ ಗೊತ್ತು. ಹೀಗಾಗಿ ಅಮೆರಿಕ ಹಾರಲು ಸಜ್ಜಾದವರು ವೀಸಾಗಾಗಿ ತಮ್ಮ ಪ್ರಯತ್ನದ ಜತೆಗೆ, ದೇವರ ಮೊರೆ ಹೋಗುವ ಪದ್ಧತಿಯೂ ಇದೆ. ಇದಕ್ಕಾಗಿ ವೀಸಾ ‘ಕರುಣಿಸುವ’ ದೇವಾಲಯಗಳೂ ಇವೆ.

ಕಾಣಿಪಾಕಂ

ADVERTISEMENT

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ಈ ಪುರಾತನ ದೇವಸ್ಥಾನಕ್ಕೆ ಜನರು ವೀಸಾ ಸಲುವಾಗಿ ಪ್ರಾರ್ಥನೆ ಸಲ್ಲಿಸಲು ಭೇಟಿ ನೀಡುತ್ತಾರೆ. ಇಲ್ಲಿ ಉದ್ಭವಾಗಿರುವ ವರಸಿದ್ಧಿ ವಿನಾಯಕ ವಿಗ್ರಹಕ್ಕೆ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರೆ ವೀಸಾ ಸಿಗುತ್ತದೆ ಎಂಬ ನಂಬಿಕೆ ಭಕ್ತರದ್ದಾಗಿದೆ. ಇದು ಬೆಂಗಳೂರಿನಿಂದ ಕೇವಲ 186 ಕಿ.ಮೀ ದೂರದಲ್ಲಿದೆ. ಪ್ರತಿನಿತ್ಯ ಸಾವಿರಾರು ಭಕ್ತರು ಇಲ್ಲಿ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಾರೆ.

ಚಿಲ್ಕೂರು ಬಾಲಾಜಿ ದೇವಸ್ಥಾನ

ಹೈದರಾಬಾದ್‌ ನಗರದಲ್ಲಿರುವ ಈ ದೇವಸ್ಥಾನವು ವೀಸಾ ದೇವಸ್ಥಾನ ಎಂದೇ ಪ್ರಸಿದ್ಧಿ ಪಡೆದಿದೆ. ದಕ್ಷಿಣ ಭಾರತದ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾಗಿರುವ ಇಲ್ಲಿ ಭಕ್ತರು ವೀಸಾಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಅಂದಹಾಗೆ ಈ ದೇವಸ್ಥಾನ ಬೆಂಗಳೂರಿನಿಂದ 570 ಕಿ.ಮೀ ದೂರದಲ್ಲಿದೆ. ಇಲ್ಲಿ ಪ್ರತಿನಿತ್ಯ ಸಾವಿರಾರು ಭಕ್ತರು ಬರುತ್ತಾರೆ.

‌ಚಮತ್ಕಾರಿ ಹನುಮಾನ್ ದೇವಸ್ಥಾನ

ಚಮತ್ಕಾರಿ ಹನುಮಾನ್ ದೇವಾಲಯ ಅಥವಾ ವೀಸಾ ಹನುಮಾನ್ ದೇವಾಲಯ ಎಂದು ಕರೆಯುವ ಈ ದೇವಸ್ಥಾನ ಗುಜರಾತ್‌ನ ಅಹಮದಾಬಾದ್‌ನಲ್ಲಿದೆ. ಅಮೆರಿಕಕ್ಕೆ ಹಾರಲು ಅಗತ್ಯವಿರುವ ವೀಸಾ ಪಡೆಯಬಯಸುವವರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ನಿರ್ದಿಷ್ಟವಾಗಿ H-1B ಮತ್ತು L1 ವೀಸಾಗಳಿಗಾಗಿ ಈ ದೇವಾಲಯಗಳಿಗೆ ಭೇಟಿ ನೀಡುತ್ತಾರೆ.

ಶ್ರೀ ಲಕ್ಷ್ಮಿ ವೀಸಾ ಗಣಪತಿ ದೇವಸ್ಥಾನ

ಚೈನ್ನೈನಲ್ಲಿರುವ ಈ ದೇವಸ್ಥಾನ ಕೂಡ ದಕ್ಷಿಣ ಭಾರತದ ಪ್ರಸಿದ್ಧ ವೀಸಾ ದೇವಸ್ಥಾನ ಎಂಬ ಖ್ಯಾತಿ ಹೊಂದಿದೆ. ಇಲ್ಲಿಗೆ ಕೂಡ ಅನೇಕ ಭಕ್ತರು ವೀಸಾಗಾಗಿ ಪ್ರರ್ಥನೆ ಸಲ್ಲಿಸಲು ಆಗಮಿಸುತ್ತಾರೆ. ಇದು ಬೆಂಗಳೂರಿನಿಂದ ಸುಮಾರು 328 ಕಿ.ಮೀ ದೂರದಲ್ಲಿದೆ.

ಶ್ರೀ ಸಿದ್ಧಿ ಪೀಠ ಚಮತ್ಕಾರಿ ಹನುಮಾನ್ ಮಂದಿರ

ದೆಹಲಿಯ ನೆಬ್ ಸರೈನಲ್ಲಿರುವ ಈ ಪ್ರಸಿದ್ಧ ದೇವಾಲಯಕ್ಕೆ ಕೂಡ ಭಕ್ತರು ವೀಸಾಗಾಗಿ ಪ್ರಾರ್ಥನೆ ಸಲ್ಲಿಸಲು ಭೇಟಿ ನೀಡುತ್ತಾರೆ. ಇಲ್ಲಿಗೆ ಬರುವ ಭಕ್ತರು ವೀಸಾಗಾಗಿ ಪ್ರಾರ್ಥನೆ ಸಲ್ಲಿಸಿದ ಬಳಿಕ 41 ದಿನಗಳವರೆಗೆ ಮಾಂಸ, ಬೆಳ್ಳುಳ್ಳಿ ಮತ್ತು ಮದ್ಯವನ್ನು ತ್ಯಜಿಸಿ ವೃತಾಚರಣೆ ಕೈಗೊಳ್ಳುತ್ತಾರೆ. ಈ ದೇವಾಲಯ ಬೆಂಗಳೂರಿನಿಂದ ಸುಮಾರು 2350 ಕಿ.ಮೀ ದೂರದಲ್ಲಿದೆ. ರೈಕು ಹಾಗೂ ವಿಮಾನದ ಮೂಲಕ ಪ್ರಯಾಣಿಸಬಹುದು.

ಶಹೀದ್ ಬಾಬಾ ನಿಹಾಲ್ ಸಿಂಗ್ ಗುರುದ್ವಾರ

ಪಂಜಾಬ್‌ನ ತಲ್ಹಾನ್ ಗ್ರಾಮದಲ್ಲಿರುವ ಶಹೀದ್ ಬಾಬಾ ನಿಹಾಲ್ ಸಿಂಗ್ ಗುರುದ್ವಾರಕ್ಕೆ ಕೂಡ ಜನರು ವೀಸಾಗಾಗಿ ಪ್ರಾರ್ಥನೆ ಸಲ್ಲಿಸಲು ಭೇಟಿ ನೀಡುತ್ತಾರೆ. ಈ ಗುರುದ್ವಾರ ಏರೋಪ್ಲೇನ್ ಗುರುದ್ವಾರ ಎಂದು ಕರೆಯಲಾಗುತ್ತದೆ. ಈ ದೇವಸ್ಥಾನಕ್ಕೆ ಆಟಿಕೆ ವಿಮಾನಗಳನ್ನು ನೀಡುವ ಮೂಲಕ ತ್ವರಿತವಾಗಿ ವೀಸಾ ಸಿಗಲೆಂದು ಭಕ್ತರು ಬೇಡಿಕೊಳ್ಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.