
ಚುನಾವಣೆ(ಸಾಂದರ್ಭಿಕ ಚಿತ್ರ)
ಬಾಗಲಕೋಟೆ: ಶಾಸಕರಾಗಿದ್ದ ಎಚ್.ವೈ.ಮೇಟಿ ಅವರ ನಿಧನದಿಂದ ಐದು ತಿಂಗಳು ಒಳಗೆ ಉಪಚುನಾವಣೆ ನಡೆಯಲಿದೆ. ಆ ಮೂಲಕ ಬಾಗಲಕೋಟೆ ವಿಧಾನಸಭೆ ಕ್ಷೇತ್ರವು ಮೂರನೇ ಬಾರಿಗೆ ಉಪಚುನಾವಣೆಗೆ ಸಾಕ್ಷಿಯಾಗಲಿದೆ.
ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆಗಳು ಆರಂಭವಾದ ಬಳಿಕ ಬಾಗಲಕೋಟೆ ವಿಧಾನಸಭೆ ಕ್ಷೇತ್ರಕ್ಕೆ ಈಗ ನಡೆಯಲಿರುವ ಉಪ ಚುನಾವಣೆ ಮೂರನೇಯದ್ದಾಗಿದೆ. ಇದರಲ್ಲಿ ಎರಡು ಸಲ ಹಾಲಿ ಶಾಸಕರಾಗಿದ್ದವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಉಪಚುನಾವಣೆ ನಡೆದಿದ್ದರೆ, ಮೊದಲ ಬಾರಿಗೆ ಶಾಸಕರ ನಿಧನದಿಂದಾಗಿ ಚುನಾವಣೆ ನಡೆಯುತ್ತಿದೆ.
ಸಿಎಂ ಆಗುವವರಿಗಾಗಿ ಉಪಚುನಾವಣೆ: ಬಾಗಲಕೋಟೆ ವಿಧಾನಸಭೆ ಕ್ಷೇತ್ರಕ್ಕೆ ಮೊದಲ ಬಾರಿಗೆ ನಡೆದ ಉಪಚುನಾವಣೆ ಮುಖ್ಯಮಂತ್ರಿ ಅಭ್ಯರ್ಥಿಯೊಬ್ಬರ ಆಯ್ಕೆಗಾಗಿ ನಡೆದಿದ್ದು ವಿಶೇಷವಾಗಿತ್ತು. ಅವರೂ ಅವಿರೋಧವಾಗಿ ಆಯ್ಕೆಯಾದರು ಎನ್ನುವುದು ಮತ್ತಷ್ಟು ವಿಶೇಷ.
ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಮೊದಲ ಬಾರಿಗೆ ನಡೆದ ಉಪಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಎಸ್.ನಿಜಲಿಂಗಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರೆ, ಅಲ್ಲಿಯವರೆಗೆ ಮುಖ್ಯಮಂತ್ರಿಯಾಗಿದ್ದ ಜಿಲ್ಲೆಯ ಹುನಗುಂದ ಕ್ಷೇತ್ರದ ಶಾಸಕ ಎಸ್.ಆರ್.ಕಂಠಿ ರಾಜೀನಾಮೆ ನೀಡಿ ಮಾಜಿ ಆದರು.
1962ರ ಸಾರ್ವತ್ರಿಕ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಹೇಳಲಾಗಿದ್ದ ಎಸ್.ನಿಜಲಿಂಗಪ್ಪ ಸೋಲಿನ ಆಘಾತ ಎದುರಿಸಿದ್ದರು. ಅವರ ಆಪ್ತ ಬಳಗದ ಹುನಗುಂದ ಕ್ಷೇತ್ರದ ಶಾಸಕರ ಎಸ್.ಆರ್.ಕಂಠಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆ ಸಂದರ್ಭದಲ್ಲಿ ಬಾಗಲಕೋಟೆ ಶಾಸಕರಾಗಿದ್ದ ಬಿ.ಟಿ.ಮುರನಾಳ, ಎಸ್.ನಿಜಲಿಂಗಪ್ಪ ಅವರಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆಗ ಎಸ್. ನಿಜಲಿಂಗಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಉಪ ಚುನಾವಣೆಯಲ್ಲೇ ಬಿಜೆಪಿ ಖಾತೆ ಓಪನ್: ಬಾಗಲಕೋಟೆ ಕ್ಷೇತ್ರಕ್ಕೆ 1997ರಲ್ಲಿ ಎರಡನೇ ಸಲ ಉಪಚುನಾವಣೆ ನಡೆಯಿತು. 1997ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಾಗಲಕೋಟೆ ಶಾಸಕರಾಗಿದ್ದ ಅಜಯಕುಮಾರ ಸರನಾಯಕ ಅವರು ಲೋಕಶಕ್ತಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.
ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸಿ.ಬಿ. ಕೋಟಿ, ಬಿಜೆಪಿಯಿಂದ ಸ್ಪರ್ಧಿಸಿದ್ದ ಪಿ.ಎಚ್.ಪೂಜಾರ ಸ್ಪರ್ಧಿಸಿದ್ದರು. ಪೂಜಾರ ಗೆಲುವು ಪಡೆದರು. ಆ ಮೂಲಕ ಮೊದಲ ಸಲ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸಾಧಿಸಿತ್ತು. ಅದು ಮುಂದೆ 2013ರವರೆಗೂ ಮುಂದುವರೆದಿತ್ತು. 2013ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಚ್.ವೈ. ಮೇಟಿ ಗೆಲುವು ಸಾಧಿಸಿದ್ದರು. ಇದೀಗ ಮೇಟಿ ಅವರ ನಿಧನದಿಂದ ಮೂರನೇ ಬಾರಿಗೆ ಉಪಚುನಾವಣೆ ನಡೆಯಲಿದೆ.
ಉಪಚುನಾವಣೆಗೆ ಸಿದ್ಧತೆ
ಬಾಗಲಕೋಟೆ: ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಉಪಚುನಾವಣೆಗೆ ಕಾಂಗ್ರೆಸ್, ಬಿಜೆಪಿಯಲ್ಲಿ ಬಿರುಸಿನ ಸಿದ್ಧತೆ ನಡೆದಿವೆ. ಸದ್ದಿಲ್ಲದೇ ಪ್ರಚಾರ ಕಾರ್ಯವೂ ಆರಂಭವಾಗಿದೆ.
ಕಾಂಗ್ರೆಸ್‌ನಿಂದ ಎಚ್.ವೈ. ಮೇಟಿ ಕುಟುಂಬದ ಸದಸ್ಯರಿಗೆ ಟಿಕೆಟ್ ಸಿಗುವ ಸಾಧ್ಯತೆಗಳು ನಿಚ್ಚಳವಾಗಿದೆ. ಇತ್ತೀಚೆಗೆ ಸಚಿವ ಸತೀಶ ಜಾರಕಿಹೊಳೆಯವರ ಮುಂದೆಯೂ ಮೇಟಿ ಕುಟುಂಬಕ್ಕೆ ಟಿಕೆಟ್ ನೀಡಬೇಕು ಎಂಬ ಮನವಿ ಸಲ್ಲಿಸಲಾಯಿತು. ಇನ್ನೊಂದೆಡೆ ಬಿಜೆಪಿಯಿಂದ ಮಾಜಿ ಶಾಸಕ ವೀರಣ್ಣ ಚರಂತಿಮಠ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳಿವೆ. ಬೇರೆ ಹೆಸರುಗಳ ಬಗ್ಗೆ
ಚರ್ಚೆ ನಡೆದಿಯಾದರೂ, ಅವರಿಗೆ ಟಿಕೆಟ್ ದೊರೆಯುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.