ಹುನಗುಂದ: ‘ಕೆಲವರು ಹೊಸ ಸರ್ಕಾರ ಬಂದ ಮೇಲೆ ಹೋರಾಟ ಕೈ ಬಿಡಿ. ನಾವು ಹೇಳಿದಂತೆ ಹೋರಾಟ ಮಾಡಿ ಎಂದರು. ಆದರೆ, ನನ್ನದು ಪ್ರಾಮಾಣಿಕ ಹೋರಾಟ. ಇದರಿಂದ ಅವರಿಗೆ ಇರಿಸು–ಮುರಿಸು ಆಗಿರಬಹುದು. ಗುರುಗಳನ್ನು ನಂಬಿ ಜನ ಹೋರಾಟಕ್ಕೆ ಮುಂದಾಗಿದ್ದಾರೆ. ಜನರಿಗೆ ದ್ರೋಹ ಮಾಡಲ್ಲ’ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಮಂಗಳವಾರ ವಿವಿಧ ಜಿಲ್ಲೆಗಳ ಮುಖಂಡರೊಂದಿಗೆ ಪಟ್ಟಣದ ಮಹಾಂತೇಶ ಮಠದ ಬಸವ ಮಂಟಪದಲ್ಲಿ ನಡೆದ ಸಭೆ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಹೋರಾಟ ಮುಂದುವರಿಯುತ್ತದೆ. ಪಾದಯಾತ್ರೆ ಮೂಲಕ ಸರ್ಕಾರದ ಒತ್ತಡ ಹಾಕಿದ್ದೇವೆ. ದಡ ಸೇರುವವರೆಗೂ (ಗುರಿ ಮುಟ್ಟುವ ) ಹೋರಾಟ ನಿರಂತರ. ಯಾವುದೇ ವ್ಯಕ್ತಿ, ಪಕ್ಷ ಪರ ಹೋರಾಟ ನಮ್ಮದಲ್ಲ. ಇದು ಜನರ ಪರ ಹೋರಾಟ’ ಎಂದರು.
‘ಕೂಡಲಸಂಗಮದಲ್ಲಿ ಪಂಚಮಸಾಲಿ ಪೀಠ ಆರಂಭ ಆದಾಗಿನಿಂದ ಹೋರಾಟ ಆರಂಭವಾಗಿದೆ. ಮೀಸಲಾತಿ ಸಿಗುವವರೆಗೂ ಮಠಕ್ಕೆ ಹೋಗದಿರಲು ತೀರ್ಮಾನ ಮಾಡಲಾಗಿತ್ತು. ರಾಜಕೀಯವಾಗಿ ಬಸನಗೌಡರಿಗೆ ಅನ್ಯಾಯವಾದಾಗ ಅವರ ಪರವಾಗಿ ಹೋರಾಡಿದ್ದೇನೆ. ಕಟ್ಟ ಕಡೆಯ ದನ ಕಾಯುವ ಹುಡುಗನಿಗೂ ಅನ್ಯವಾದಾಗ ಹೋರಾಡುತ್ತೇನೆ. ಹೋರಾಟಕ್ಕೆ ಬೆಂಬಲವಾಗಿ ನಿಂತವರ ಪರವಾಗಿ ಹೋರಾಟ ಮಾಡಿದ್ದೇನೆ’ ಎಂದು ಹೇಳಿದರು.
‘ಮಠದ ಬಗ್ಗೆ ಅಪಪ್ರಚಾರ ನಿಲ್ಲಬೇಕು. ಮಠಕ್ಕೆ ಬೀಗ ಹಾಕುವುದು ಪರಿಹಾರ ಅಲ್ಲ. ಇದರಿಂದ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿದೆ. ಸಭೆಯಲ್ಲಿ ಮುಖಂಡರ ಅಭಿಪ್ರಾಯದಂತೆ ನಡೆದುಕೊಳ್ಳುತ್ತೇನೆ. ನಾನು ಕಟ್ಟಡ, ಆಸ್ತಿಗಾಗಿ ಆಸೆ ಪಟ್ಟವನಲ್ಲ. ಭಕ್ತರ ಮನೆಗಳು ನನ್ನ ಪೀಠ. ಎಲ್ಲಿ ಗುರುಗಳು ಇರುತ್ತಾರೋ ಅದೇ ಪೀಠ’ ಎಂದರು.
‘ರಾಜ್ಯದ ಎಲ್ಲ ಮಠಗಳ ಭಕ್ತರಲ್ಲೂ ಭಿನ್ನಾಭಿಪ್ರಾಯ ಬಂದಿದೆ. ಇದು ಹೊಸತಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ₹1 ಕೋಟಿ ಹಾಗೂ ಸದಾನಂದಗೌಡ ₹50 ಲಕ್ಷ ಕೊಟ್ಟಿದ್ದಾರೆ. ಸಂಘಟನೆ ಫಲ ಅಜ್ಞಾನ ವ್ಯಕ್ತಿಗಳ ಪಾಲಾಗಬಾರದು. ಸಮಾಜಕ್ಕಾಗಿ ದುಡಿಯುವ ಕಟ್ಟಕಡೆಯ ವ್ಯಕ್ತಿಗೆ ಸೇರಬೇಕು’ ಎಂದು ಹೇಳಿದರು.
‘ನಾಲ್ಕು ಗೋಡೆಗಳ ಮಠ ಕಟ್ಟಿದ್ದೇನೆ. ಭಕ್ತರ ಮನಸ್ಸುಗಳು ಪೀಠದ ಒಳಗೆ ಹೋಗುವುದನ್ನು ಯಾರಿಂದ ತಡೆಗಟ್ಟಲು ಸಾಧ್ಯವಿಲ್ಲ. ಕೂಡಲಸಂಗಮದಲ್ಲೇ ಹೋರಾಟ ಆರಂಭವಾಗಿದ್ದು, ಅಲ್ಲೇ ನನ್ನ ಉಳಿವು ಅಳಿವು. ಅಂತ್ಯವು ಅಲ್ಲೇ ಆಗಲಿ’ ಎಂದರು
‘ನನ್ನ ಕಡೆಯಿಂದ ಸಣ್ಣ ಪುಟ್ಟ ತಪ್ಪುಗಳು ಆಗಿರಬಹುದು, ಟೀಕೆ ಟಿಪ್ಪಣಿಗಳನ್ನು ಸಮಾನವಾಗಿ ಸ್ವೀಕರಿಸುತ್ತೇನೆ. ನಿಮ್ಮೆಲ್ಲರ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ಇಲ್ಲಿಯೇ ಸುಖಾಂತ್ಯ ಮಾಡಲು ಬಯಸಿದರೆ, ಅದಕ್ಕೂ ಸಿದ್ಧ’ ಎಂದು ಹೇಳಿದರು.
‘ನನ್ನ ಮತ್ತು ಶಾಸಕ ವಿಜಯಾನಂದ ಕಾಶಪ್ಪನವರ ಸಂಬಂಧ ಗುರು–ಶಿಷ್ಯರ ಸಂಬಂಧ. ನಮ್ಮ ನಡುವೆ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿರಬಹುದು. ಅವುಗಳನ್ನು ಸರಿಪಡಿಸುವ ಕೆಲಸ ಕೂಡಲಸಂಗಮ ಭಕ್ತರಿಂದ ನಡೆಯುತ್ತಿದೆ’ ಎಂದರು.
ಟ್ರಸ್ಟಿ ಎಲ್.ಎಂ. ಪಾಟೀಲ, ಮುಖಂಡರಾದ ಶಂಕ್ರಪ್ಪ ನೇಗಲಿ, ಎಂ.ಎಸ್. ಪಾಟೀಲ, ರುದ್ರಗೌಡ್ರು, ದರಿಯಪ್ಪ ಸಾಂಗ್ಲಿಕರ, ರಾಜಕುಮಾರ ಬಾದವಾಡಗಿ, ಸುಭಾಷ್ ತಾಳಿಕೋಟಿ ಸಭೆಯಲ್ಲಿ ಮಾತನಾಡಿದರು.
ಬಸವರಾಜ ಕಡಪಟ್ಟಿ, ಸಿದ್ದಪ್ಪನಡಗೌಡ, ಮಹಾಂತೇಶ ಕಡಪಟ್ಟಿ, ವಿಜಯಪುರ, ಧಾರವಾಡ, ಗದಗ, ಬೆಳಗಾವಿ, ಬಾಗಲಕೋಟೆ ಜಿಲ್ಲೆ ಸಮಾಜದ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.