ADVERTISEMENT

ಮದುವೆ ಮಂಟಪದಲ್ಲಿ ತಾಳಿ ಕಟ್ಟಿದ ಬಳಿಕ ಹೃದಯಾಘಾತದಿಂದ ಕುಸಿದು ಬಿದ್ದು ವರ ಸಾವು!

ವಧುವಿಗೆ ತಾಳಿ ಕಟ್ಟಿ ಅಕ್ಷತೆ ಹಾಕಿ, ವೇದಿಕೆಯನ್ನೇರಿ ಚಿತ್ರ ತೆಗೆಸಿಕೊಳ್ಳುವ ವೇಳೆ ವರ ಕುಸಿದು ಬಿದ್ದು, ಮೃತಪಟ್ಟಿದ್ದಾರೆ.

​ಪ್ರಜಾವಾಣಿ ವಾರ್ತೆ
Published 17 ಮೇ 2025, 14:03 IST
Last Updated 17 ಮೇ 2025, 14:03 IST
ಪ್ರವೀಣ ಕುರಣಿ
ಪ್ರವೀಣ ಕುರಣಿ   

ಜಮಖಂಡಿ (ಬಾಗಲಕೋಟೆ ಜಿಲ್ಲೆ): ನಗರದ ನಂದಿಕೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಶನಿವಾರ ವಧುವಿಗೆ ತಾಳಿ ಕಟ್ಟಿ ಅಕ್ಷತೆ ಹಾಕಿ, ವೇದಿಕೆಯನ್ನೇರಿ ಚಿತ್ರ ತೆಗೆಸಿಕೊಳ್ಳುವ ವೇಳೆ ವರ ಕುಸಿದು ಬಿದ್ದು, ಮೃತಪಟ್ಟಿದ್ದಾರೆ.

ಜಮಖಂಡಿ ತಾಲ್ಲೂಕಿನ ಕುಂಬಾರಹಳ್ಳ ಗ್ರಾಮದ, ರಾಜ್ಯ ಸೈಕ್ಲಿಂಗ್ ಫೆಡರೇಶನ್ ಸಂಘಟನೆಯ ಕಾರ್ಯದರ್ಶಿ ಶ್ರೀಶೈಲ ಕುರಣಿ ಅವರ ಹಿರಿಯ ಪುತ್ರ ಪ್ರವೀಣ ಕುರಣಿ (22) ಮೃತರು. ಅವರು ಮನೆಯಲ್ಲಿ ಕಂಪ್ಯೂಟರ್ ಕೆಲಸ ಮಾಡುತ್ತಿದ್ದರು. ಅವರಿಗೆ ತಂದೆ, ತಾಯಿ, ಸಹೋದರ ಮತ್ತು ಸಹೋದರಿ ಮತ್ತು ಪತ್ನಿ ಇದ್ದಾರೆ.

‘ಶುಕ್ರವಾರ ರಾತ್ರಿ ಅರಿಸಿನ ಕಾರ್ಯಕ್ರಮದಲ್ಲಿ ಎಲ್ಲರೂ ಸಂಭ್ರಮಿಸಿದ್ದರು.

ADVERTISEMENT

ಶನಿವಾರ ಬೆಳಿಗ್ಗೆ ಮದುವೆ ಶಾಸ್ತ್ರ ಮುಗಿಸಿ, 12.30ಕ್ಕೆ ಬಂಧುಬಳಗದವರು ಅಕ್ಷತೆ ಹಾಕಿ ಆಶೀರ್ವದಿಸುತ್ತಿದ್ದರು. ಪ್ರವೀಣಗೆ ಏಕಾಏಕಿ ಎದೆನೋವು ಕಾಣಿಸಿತು. ಪಕ್ಕದಲ್ಲಿದ್ದ ಸ್ನೇಹಿತರಿಗೆ ನೀರು ಕೇಳಿ, ಮರುಕ್ಷಣವೇ ಕುಸಿದು ಬಿದ್ದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಬದುಕಿ ಉಳಿಯಲಿಲ್ಲ’ ಎಂದು ಪ್ರವೀಣ ಸಂಬಂಧಿಕರು ತಿಳಿಸಿದರು.

‘ಸಂಬಂಧಿಕರಲ್ಲೇ ವಧು ನೋಡಿದ್ದೆವು. ಅದ್ದೂರಿ ಮದುವೆಗೆ ಒಂದು ತಿಂಗಳಿನಿಂದ ಸಿದ್ಧತೆ ನಡೆಸಿದ್ದೆವು. ಬಂಧುಗಳನ್ನು ಆಹ್ವಾನಿಸಿದ್ದೆವು. ತಾಳಿ ಕಟ್ಟಿದ ಮೇಲೆ ಇಂತಹ ಘಟನೆ ನಡೆದಿದ್ದು ಅರಗಿಸಿಕೊಳ್ಳಲು ಆಗುತ್ತಿಲ್ಲ. ಆ ದೇವರಿಗೆ ಕರುಣೆ ಇಲ್ಲವೇ’ ಎಂದು ಪ್ರವೀಣ ತಂದೆ ಶ್ರೀಶೈಲ ಕಣ್ಣೀರು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.