ADVERTISEMENT

ಕನ್ನಡ ಸಾಹಿತ್ಯ ಸಮ್ಮೇಳನ | ಚಾಲುಕ್ಯರ ಕಾಲ ಕನ್ನಡದ ಗಂಗೋತ್ರಿ: ವೈ.ಎಂ. ಯಾಕೊಳ್ಳಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 6:48 IST
Last Updated 3 ಮಾರ್ಚ್ 2026, 6:48 IST
ಬಾದಾಮಿ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಮ್ಮೇಳನದ ಅಧ್ಯಕ್ಷ ಜಿ.ಬಿ. ಶೀಲವಂತರ ದಂಪತಿಯನ್ನು ಮೆರವಣಿಗೆ ಮೂಲಕ ಕರೆತರಲಾಯಿತು
ಬಾದಾಮಿ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಮ್ಮೇಳನದ ಅಧ್ಯಕ್ಷ ಜಿ.ಬಿ. ಶೀಲವಂತರ ದಂಪತಿಯನ್ನು ಮೆರವಣಿಗೆ ಮೂಲಕ ಕರೆತರಲಾಯಿತು   

ಬಾದಾಮಿ: ‘ಇನ್ನೂರು ವರ್ಷಗಳ ಕಾಲ ಚಾಲುಕ್ಯರ ಕಾಲದಲ್ಲಿ ಕನ್ನಡ ಭಾಷೆ ಶ್ರೀಮಂತ ವಾಗಿರುವುದಕ್ಕೆ ಇಲ್ಲಿನ ಕನ್ನಡ ಶಾಸನಗಳು ಸಾಕ್ಷಿಯಾಗಿವೆ. ಈ ನೆಲ ಕನ್ನಡದ ಗಂಗೋತ್ರಿಯಾಗಿತ್ತು’ ಎಂದು ಸಾಹಿತಿ ವೈ.ಎಂ. ಯಾಕೊಳ್ಳಿ ಹೇಳಿದರು.

ಕಸಾಪ ತಾಲ್ಲೂಕು ಘಟಕದ ಆಶ್ರಯದಲ್ಲಿ ಇಲ್ಲಿನ ವೀರಪುಲಿಕೇಶಿ ವಿದ್ಯಾಸಂಸ್ಥೆಯ ಆವರಣದ ಬಸವ ಮಂಟಪದ ಎಂ.ಜಿ. ವಾರಿ ವೇದಿಕೆಯಲ್ಲಿ ಸೋಮವಾರ ನಡೆದ 10ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ರವಿಕೀರ್ತಿ, ಅಚಲನ್ ಮತ್ತು ರಾಣಿ ವಿಜಯಾಂಬಿಕೆ ಕನ್ನಡ ಮತ್ತು ಸಂಸ್ಕೃತ ಸಾಹಿತ್ಯದಲ್ಲಿ ಅಗಾಧ ಪಾಂಡಿತ್ಯ ಹೊಂದಿದ್ದರು. ಕನ್ನಡ ಕಾವ್ಯದ ತ್ರಿಪದಿ ಮೂಲ ರೂಪದ 7ನೇ ಶತಮಾನದ ಕಪ್ಪೆ ಅರಭಟ್ಟನ ಶಾಸನವು ಕನ್ನಡದಲ್ಲಿದೆ’ ಎಂದರು.

ADVERTISEMENT

‘7 ಶತಮಾನದಿಂದ 21ನೇ ಶತಮಾನದವರೆಗೆ ಸಾಹಿತ್ಯ ಚಿಂತಕರನ್ನು ಈ ನೆಲ ನೀಡಿದೆ. ಕನ್ನಡ ಬಗ್ಗೆ ಚಿಂತನೆ ಮಾಡುವುದೇ ಸಾಹಿತ್ಯ ಸಮ್ಮೇಳನದ ಉದ್ದೇಶವಾಗಿದೆ. ಹೃದಯವನ್ನು ಬೆಸೆಯುವ, ಮಾನವೀಯ ಮೌಲ್ಯಗಳನ್ನು ತಿಳಿಸುವುದೇ ಸಾಹಿತ್ಯವಾಗಿದೆ ’ ಎಂದು ಹೇಳಿದರು.

‘ಚಾಲುಕ್ಯ ದೊರೆಗಳು ಸಾಮ್ರಾಜ್ಯವನ್ನು ವಿಸ್ತರಿಸುವುದರೊಂದಿಗೆ ಶಿಲ್ಪಕಲೆ, ಸಾಹಿತ್ಯ, ಸಂಗೀತ, ನಾಟ್ಯ, ನಾಟಕ ಲಲಿತ ಕಲೆಗಳಿಗೆ ಪ್ರೊತ್ಸಾಹ ನೀಡಿ ಇಡೀ ವಿಶ್ವವೇ ಬೆರಗುಗೊಳಿಸುವಂತದ ಸ್ಮಾರಕಗಳನ್ನು ನಿರ್ಮಿಸಿದರು’ ಎಂದು ಸಮ್ಮೇಳನದ ಅಧ್ಯಕ್ಷ ಜಿ.ಬಿ. ಶೀಲವಂತರ ಹೇಳಿದರು.

‘ಚಾಲುಕ್ಯ ಶಿಲ್ಪಿಗಳು ಜೈನ, ವೈಷ್ಣವ, ಶೈವ, ಜೈನ, ಬೌದ್ಧ ಮೂರ್ತಿ ಶಿಲ್ಪಗಳನ್ನು ಸ್ಮಾರಕಗಳಲ್ಲಿ ಕೆತ್ತನೆ ಮಾಡಿ ಸರ್ವಧರ್ಮ ಸಹಿಷ್ಣುಗಳಾದರು. ರಾಮಾಯಣ, ಮಹಾಭಾರತ ಆಧಾರಿತ ಸಾಂಪ್ರದಾಯಿಕ ಮೂರ್ತಿ ಶಿಲ್ಪಗಳನ್ನು ರೂಪಿಸಿದರು’ ಎಂದು ಹೇಳಿದರು.

‘ಇಮ್ಮಡಿ ಪುಲಿಕೇಶಿ ನರ್ಮದಾ ನದಿ ದಂಡೆಯಲ್ಲಿ ಉತ್ತರ ಭಾರತದ ದೊರೆ ಹರ್ಷವರ್ಧನನ್ನು ಸೋಲಿಸಿದನು. ಅವನ ರಾಜ್ಯವನ್ನು ಮರಳಿ ಕೊಟ್ಟು ಔದಾರ್ಯ ಮೆರೆದನು. ‘ಕರ್ನಾಟ ಬಲ’ ಎಂಬ ಸೇನೆಯನ್ನು ಕಟ್ಟಿದ. ಭಾರತೀಯ ನೌಕಾಪಡೆಯ ಪಿತಾಮಹ ’ ಎಂದು ಇತಿಹಾಸಕಾರರು ಉಲ್ಲೇಖಿಸಿದ್ದಾರೆ ಎಂದು ಹೇಳಿದರು.

ಚಾಲುಕ್ಯರ ನಾಡಿನಲ್ಲಿ ಕನ್ನಡ, ಸಂಸ್ಕೃತ ಭಾಷಾ ಶಾಸನ ಸಾಹಿತ್ಯ, ವಾಸ್ತುಶಿಲ್ಪ, ಸಂಗೀತ, ಚಿತ್ರಕಲೆ ಮತ್ತು ಸಮಕಾಲೀನ ಸಾಹಿತ್ಯ ಬೆಳೆದು ಬಂದ ಬಗ್ಗೆ ವಿವರಿಸಿದರು.

‘ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡುವುದರ ಬಗ್ಗೆ ಇಂದು ಗೊಂದಲಲ್ಲಿ ಇದ್ದಾರೆ. ಇಂಗ್ಲಿಷ್ ಶಿಕ್ಷಣ ಕೊಡಿಸಿದರೆ ಮಕ್ಕಳಿಗೆ ನೌಕರಿ ಬೇಗ ಸಿಗುತ್ತದೆ ಎಂಬ ಭಾವನೆ ಇದೆ. ಪೋಷಕರು ಮೊದಲು ಮಾತೃಭಾಷೆಯ ಶಿಕ್ಷಣ ಸರಿಯಾಗಿ ಕೊಡಿಸಿದರೆ ಇಂಗ್ಲಿಷ್ ಭಾಷೆ ಬರುತ್ತದೆ´ ಎಂದು ತಿಳಿಸಿದರು.

‘ಬಾದಾಮಿ, ಪಟ್ಟದಕಲ್ಲು ಮತ್ತು ಐಹೊಳೆ ಪ್ರವಾಸಿ ತಾಣಗಳು ಅಭಿವೃದ್ಧಿಯಾಗಿ ಪ್ರವಾಸೋದ್ಯಮ ಬೆಳೆಯಬೇಕಿದೆ ’ ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

‘ಮೊಬೈಲ್ ಬಂದು ಕನ್ನಡ ಕೃತಿಗಳನ್ನು ಓದುವ ಹವ್ಯಾಸ ಕಡಿಮೆಯಾಗಿದೆ. ಪುಸ್ತಕಗಳು ಜ್ಞಾನವನ್ನು ಕೊಡುತ್ತವೆ. ವಿದ್ಯಾರ್ಥಿಗಳು ಪುಸ್ತಕಗಳ ಅಧ್ಯಯನ ಮಾಡಬೇಕು ’ ಎಂದು ಅಧ್ಯಕ್ಷತೆ ವಹಿಸಿದ್ದ ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

‘ಸಾಹಿತಿಗಳು ಪುಸ್ತಕ ಪ್ರಕಟಣೆ ಮಾಡಿ ಬಿಡುಗಡೆ ಮಾಡುವರು. ಆದರೆ ಕೃತಿಗಳ ಬಗ್ಗೆ ಚರ್ಚೆ ನಡೆಯಬೇಕು. ಚರ್ಚೆ ನಡೆದಾಗ ಮಾತ್ರ ಸಾಹಿತ್ಯ ಕೃತಿಯಲ್ಲಿ ಏನಿದೆ ಎಂಬುದು ಅರ್ಥವಾಗುತ್ತದೆ. ಕೃತಿ ಬರೆದ ಸಾಹಿತಿಗೂ ಗೌರವ ಬರಲು ಸಾಧ್ಯ’ ಎಂದು ತಿಳಿಸಿದರು.

‘ಈಚೆಗೆ ಸಂಶೋಧನೆ ಮತ್ತು ಸೃಜನಶೀಲ ಸಾಹಿತ್ಯದ ಕೃತಿಗಳು ಕೊರತೆ ಕಂಡುಬರುತ್ತಿದೆ. ವೈಚಾರಿಕ ಸಾಹಿತ್ಯ ಕೃತಿಗಳು ಹೊರಬರಲಿ’ ಎಂದು ಆಶಯ ವ್ಯಕ್ತಪಡಿಸಿದರು.

ನಿಕಟಪೂರ್ವ ಅಧ್ಯಕ್ಷ ದಾಜೀಬಾ ಜಗದಾಳೆ ಸಮ್ಮೇಳನದ ಅಧ್ಯಕ್ಷ ಜಿ.ಬಿ. ಶೀಲವಂತರಿಗೆ ಕನ್ನಡ ಸಾಹಿತ್ಯ ಪರಿಷತ್ ಧ್ವಜವನ್ನು ಹಸ್ತಾಂತರಿಸಿದರು.

ಪಿಕಾರ್ಡ್ ಬ್ಯಾಂಕ್ ಆವರಣದಿಂದ ವೀರಪುಲಿಕೇಶಿ ವಿದ್ಯಾಸಂಸ್ಥೆಯವರೆಗೆ ನಾಡದೇವಿ ಭುವನೇಶ್ವರಿ ಭಾವಚಿತ್ರ ಮತ್ತು ಸಮ್ಮೇಳನದ ಅಧ್ಯಕ್ಷ ಜಿ.ಬಿ. ಶೀಲವಂತರ ದಂಪತಿಯ ಮೆರವಣಿಗೆ ನಡೆಯಿತು. ಜಾನಪದ ಕಲಾತಂಡ ಮತ್ತು ಪೂರ್ಣಕುಂಭ ಹೊತ್ತ ಮಹಿಳೆಯರು ಇದ್ದರು.

ಎನ್.ಬಿ. ಬನ್ನೂರ, ಶಿವಕುಮಾರ ಹಿರೇಮಠ, ವೀರನಗೌಡ ಕರಿಗೌಡ್ರ, ಎಫ್.ಆರ್. ಪಾಟೀಲ, ಡಾ. ಕರವೀರಪ್ರಭು ಕ್ಯಾಲಕೊಂಡ ಹೊನ್ನಯ್ಯ ಹಿರೇಮಠ, ಮಹಾಂತೇಶ ಹಟ್ಟಿ ವೇದಿಕೆಯಲ್ಲಿ ಇದ್ದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಫ್. ಹೊರಕೇರಿ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.