ADVERTISEMENT

ಎಂ.ಬಿ.ಪಾಟೀಲಗೆ ಸಣ್ಣ ವಯಸ್ಸು, ನಾಲಿಗೆ ಮೇಲೆ ಹಿಡಿತವಿರಲಿ: ವೀರಣ್ಣ ಚರಂತಿಮಠ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 3:30 IST
Last Updated 1 ಅಕ್ಟೋಬರ್ 2021, 3:30 IST
ಎಂ.ಬಿ.ಪಾಟೀಲ ಮತ್ತು ವೀರಣ್ಣ ಚರಂತಿಮಠ
ಎಂ.ಬಿ.ಪಾಟೀಲ ಮತ್ತು ವೀರಣ್ಣ ಚರಂತಿಮಠ    

ಬಾಗಲಕೋಟೆ: ‘ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಪಾಪದ ಮಂತ್ರಿ ಎಂದು ಶಾಸಕ ಎಂ.ಬಿ.ಪಾಟೀಲ ಅಕ್ಷಮ್ಯ ಪದ ಬಳಸಿದ್ದಾರೆ. ಅವರಿಗೆ ಇನ್ನೂ ಸಣ್ಣ ವಯಸ್ಸು. ಹಿರಿಯರ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ’ ಎಂದು ಶಾಸಕ ವೀರಣ್ಣ ಚರಂತಿಮಠ ತಾಕೀತು ಮಾಡಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಅನೈತಿಕ ಬಿಜೆಪಿ ಸರ್ಕಾರದಲ್ಲಿ ಕಾರಜೋಳ ಪಾಪದ ಸಚಿವರಾಗಿದ್ದಾರೆ ಎಂಬ ಎಂ.ಬಿ.ಪಾಟೀಲ ಹೇಳಿಕೆಗೆ ಮೇಲಿನಂತೆ ತಿರುಗೇಟು ನೀಡಿದರು.

ಎಂ.ಬಿ.ಪಾಟೀಲರು ಇಂತಹ ಹೇಳಿಕೆ ಕೊಡುವುದು ನಿಲ್ಲಿಸದಿದ್ದರೆ ಅವರ ರಾಜಕೀಯ ಜೀವನ ತೊಂದರೆಗೆ ಸಿಲುಕಲಿದೆ ಎಂದು ಎಚ್ಚರಿಕೆ ನೀಡಿದ ಚರಂತಿಮಠ, ಪಾಪದ ಸರ್ಕಾರ ಎಂದು ಟೀಕಿಸಲಿ. ಪಾಪದ ಸಚಿವ ಎಂದು ಕರೆದು ಅವಮಾನಿಸುವುದು ಸಲ್ಲ ಎಂದರು.

ADVERTISEMENT

ನೀರಾವರಿ ಇಲಾಖೆ ನಡೆದು ಬಂದ ದಾರಿಯ ಬಗ್ಗೆ ಹೇಳುವಾಗ ಬಿ.ಡಿ.ಜತ್ತಿ ಸರ್ಕಾರ ಈ ಹಿಂದೆ ಮಹಾರಾಷ್ಟ್ರ ಸರ್ಕಾರಕ್ಕೆ ₹32 ಕೋಟಿ ಕೊಟ್ಟಿದ್ದರೆ ಅವಿಭಜಿತ ವಿಜಯಪುರ ಜಿಲ್ಲೆ ಆಗಲೇ ಹಸಿರು ಉಡುತ್ತಿತ್ತು. ಕಾಂಗ್ರೆಸ್‌ನವರು ಆಗ ಮಾಡಿದ ತಪ್ಪಿನಿಂದ ಕೃಷ್ಣಾ ತೀರದ ಜನರು ಈಗಲೂ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದರು. ಅದನ್ನು ಆರೋಗ್ಯಕರವಾಗಿ ಪರಿಗಣಿಸಿ ಎಂ.ಬಿ.ಪಾಟೀಲ ಅದೇ ಧಾಟಿಯಲ್ಲಿ ಉತ್ತರ ಕೊಡಬಹುದಿತ್ತು ಎಂದರು.

ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಕಳೆದ 70 ವರ್ಷಗಳಿಂದ ಸೃಷ್ಟಿಸಿರುವ ಪಾಪದ ಹೊರೆಯ ಫಲವನ್ನು ಸಂತ್ರಸ್ತರು ಈಗಲೂ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಬಬಲೇಶ್ವರದ ಸಚಿವ: ಎಂ.ಬಿ.ಪಾಟೀಲ ಈ ಹಿಂದೆ ರಾಜ್ಯದ ಜಲಸಂಪನ್ಮೂಲ ಸಚಿವ ಆಗಿರಲಿಲ್ಲ. ಬದಲಿಗೆ ಬಬಲೇಶ್ವರ ಕ್ಷೇತ್ರದ ಸಚಿವರಾಗಿದ್ದರು. ಇದಕ್ಕೆ ಗೋದಾವರಿ ಡೈವರ್ಟಸ್ ಅಡಿ ನೀರಾವರಿ ಸೌಲಭ್ಯ ಕಲ್ಪಿಸುವಾಗ ಸಾವಳಗಿ ಹಾಗೂ ಅಥಣಿ ಭಾಗದ ಜನರಿಗೆ ಅನ್ಯಾಯ ಮಾಡಿ ಬಬಲೇಶ್ವರದಲ್ಲಿ 1.08 ಲಕ್ಷ ಎಕರೆ ಪ್ರದೇಶಕ್ಕೆ ನೀರು ಹರಿಸಿದ್ದೇ ಸಾಕ್ಷಿ ಎಂದು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ವ್ಯಂಗ್ಯವಾಡಿದರು.

ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆ ಹತ್ತಿರ ಬಂದಾಗ ಮಾತ್ರ ಕೃಷ್ಣೆಯ ಕಣ್ಣೀರು ನೆನಪಾಗುತ್ತದೆ. ಅಧಿಕಾರದಲ್ಲಿದ್ದಾಗ ಏನೂ ಮಾಡದ ಆ ಪಕ್ಷದವರು ಈಗ ಪಾದಯಾತ್ರೆ ಮಾಡಲು ಹೊರಟಿದ್ದಾರೆ. ಈ ಹಿಂದೆ ನಮ್ಮ ನಡಿಗೆ ಕೃಷ್ಣೆಯ ಕಡೆಗೆ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಮುಖಂಡರು ನಂತರ ಏನೂ ಮಾಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಸತ್ಯನಾರಾಯಣ ಹೇಮಾದ್ರಿ, ಬೆಳಗಾವಿ ವಿಭಾಗದ ಪ್ರಭಾರಿ ಬಸವರಾಜ ಯಂಕಂಚಿ ಹಾಜರಿದ್ದರು.

ಉದ್ಧಟತನದ ಹೇಳಿಕೆ ನಿಲ್ಲಿಸಿ: ಶಾಂತಗೌಡ ಪಾಟೀಲ
’ಬಿಜೆಪಿಯವರು ಹಿಟ್ಲರ್ ಸಂಸ್ಕೃತಿಯವರು, ಆರ್‌ಎಸ್‌ಎಸ್‌ನವರು ತಾಲಿಬಾನಿಗಳು ಎಂದು ಉದ್ಧಟತನದಿಂದ ಮಾತಾಡುವುದನ್ನು ನಿಲ್ಲಿಸಬೇಕು‘ ಎಂದುವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ ತಾಕೀತು ಮಾಡಿದರು.

ದೇಶ ಕಟ್ಟುವಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುವ ಆರ್‌ಎಸ್‌ಎಸ್‌ನವರು ಹೇಗೆ ತಾಲಿಬಾನಿಗಳಾಗುತ್ತಾರೆ ಎಂದು ಪ್ರಶ್ನಿಸಿದ ಶಾಂತಗೌಡ, ’ಬೆಂಗಳೂರಿನ ಪಾದರಾಯನಪುರದಲ್ಲಿ ಬಿನ್‌ಲಾಡೆನ್ ಸಂಸ್ಕೃತಿಯವರನ್ನು ಬೆಂಬಲಿಸುವ ಜಮೀರ್ ಅಹಮದ್ ಅವರನ್ನು ಪಕ್ಕದಲ್ಲಿ ಇಟ್ಟುಕೊಂಡು ಅಡ್ಡಾಡುವ ಸಿದ್ದರಾಮಯ್ಯ ನಿಜವಾದ ತಾಲಿಬಾನಿ‘ ಎಂದರು.

ಸಿದ್ದರಾಮಯ್ಯ ಅವರಿಗೆ ಬಹುಶಃ ವಯಸ್ಸಾಗಿದೆ. ರಾಜಕೀಯ ಅಂತ್ಯದಲ್ಲಿರುವುದರಿಂದ ಹುಚ್ಚುಚ್ಚಾಗಿ ಮಾತಾಡುತ್ತಿದ್ದಾರೆ. ಅವರ ಈ ವರ್ತನೆ ನೋಡಿಯೇ ಚಾಮುಂಡೇಶ್ವರಿ ಕ್ಷೇತ್ರದ ಜನರು ಅವರನ್ನು ಸೋಲಿಸಿದ್ದರು ಎಂದು ಕಟುಕಿದರು.

‘ಸಿದ್ದರಾಮಯ್ಯನ್ನ ಹುಚ್ಚಾಸ್ಪತ್ರೆಗೆ ಸೇರಿಸುತ್ತೇವೆ’
ಆರ್‌ಎಸ್‌ಎಸ್ ಬಗ್ಗೆ ಹಗುರವಾಗಿ ಮಾತನಾಡುವುದು ನಿಲ್ಲಿಸದಿದ್ದರೆಸಿದ್ದರಾಮಯ್ಯ ಬಾದಾಮಿಗೆ ಬರಲು ಬಿಜೆಪಿ ಕಾರ್ಯಕರ್ತರು ಬಿಡುವುದಿಲ್ಲ ಎಂದುವಿಧಾನಪರಿಷತ್ ಮಾಜಿ ಸದಸ್ಯ ನಾರಾಯಣ ಸಾ ಭಾಂಡಗೆ ಎಚ್ಚರಿಕೆ ನೀಡಿದರು.

ಬಿಜೆಪಿ ಹಾಗೂ ಸರ್ಕಾರದ ಬಗ್ಗೆ ಟೀಕೆ ಮಾಡಲಿ. ಆದರೆ ಆರ್‌ಎಸ್‌ಎಸ್ ಬಗ್ಗೆ ಮಾತಾಡಲು ಏನು ನೈತಿಕತೆ ಇದೆ. ಸಂಘಟನೆ ಬಗ್ಗೆ ಏನೂ ಗೊತ್ತಿಲ್ಲದ ಸಿದ್ದರಾಮಯ್ಯ ಹುಚ್ಚರ ರೀತಿ ಮಾತಾಡುತ್ತಾರೆ ಎಂದರು.

ಸಿದ್ದರಾಮಯ್ಯ ವಿರೋಧಿಗಳ ಬಗ್ಗೆ ಅತ್ಯಂತ ತಿರಸ್ಕಾರದಲ್ಲಿಯೇ ಮಾತಾಡುತ್ತಾರೆ. ಎಲ್ಲರಿಗೂ ಏಕವಚನ ಬಳಸುತ್ತಾರೆ. ಹೀಗಾಗಿ ನಾನು ಅದೇ ಭಾಷೆಯಲ್ಲಿ ಮಾತಾಡುತ್ತೇನೆ ಎಂದು ಹೇಳಿದ ನಾರಾಯಣ ಸಾ ಭಾಂಡಗೆ. ಇನ್ನೊಮ್ಮೆ ಆರ್‌ಎಸ್‌ಎಸ್‌ ಬಗ್ಗೆ ಸಿದ್ದರಾಮಯ್ಯ ಮಾತಾಡಿದರೆ ಅವರನ್ನು ಹುಚ್ಚರ ಆಸ್ಪತ್ರೆಗೆ ಸೇರಿಸುತ್ತೇವೆ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.