
ಮಹಾಲಿಂಗಪುರ: ಪಟ್ಟಣದ ಗಡಾದಗಲ್ಲಿಯಲ್ಲಿರುವ ಕುಡಿಯುವ ನೀರಿನ ಟ್ಯಾಂಕ್ ಮೇಲ್ಛಾವಣಿ ಕುಸಿದುಬಿದ್ದಿದ್ದು, ಒಂದು ತಿಂಗಳಿನಿಂದ ದುರಸ್ತಿ ಕಾಮಗಾರಿ ವಿಳಂಬವಾಗಿದ್ದರಿಂದ ಸಾರ್ವಜನಿಕರು ನೀರಿಗಾಗಿ ಪರದಾಡುತ್ತಿದ್ದಾರೆ.
ಹಳೆಯದಾದ ಈ ನೀರಿನ ಟ್ಯಾಂಕ್ ಮೂಲಕ ಗಡಾದ ಗಲ್ಲಿ, ಪೆಂಡಾರಿ ಗಲ್ಲಿ, ಕಲ್ಪಡ ಬಡಾವಣೆ, ಕುಬಸದ ಗಲ್ಲಿ, ಮಿರ್ಜಿ ಗಲ್ಲಿ, ನುಚ್ಚಿ ಗಲ್ಲಿ ಸೇರಿದಂತೆ ಹತ್ತಕ್ಕೂ ಹೆಚ್ಚು ಬಡಾವಣೆಗಳಿಗೆ ನೀರು ಸರಬರಾಜು ಆಗುತ್ತದೆ. ಬಸ್ ನಿಲ್ದಾಣ ಬಳಿಯ ಗುಂಡದ ಬಾವಿ ಮೂಲಕ ಈ ನೀರಿನ ಟ್ಯಾಂಕ್‍ಗೆ ನೀರು ಶೇಖರಣೆ ಮಾಡಲಾಗುತ್ತದೆ. ಆದರೆ, ನೀರಿನ ಟ್ಯಾಂಕ್ ಮೇಲ್ಛಾವಣಿ ಕುಸಿದು ಬಿದ್ದಿದ್ದು, ದುರಸ್ತಿಗೆ ಮುಂದಾದ ಪುರಸಭೆ ಸಿಬ್ಬಂದಿ ವಿಳಂಬವಾಗಿ ಕಾಮಗಾರಿ ನಡೆಸಿದ್ದರಿಂದ ಸಾರ್ವಜನಿಕರಿಗೆ ನೀರಿನ ಸಮಸ್ಯೆಯಾಗಿದೆ.
ಕಳೆದ ಏಪ್ರಿಲ್‍ನಲ್ಲಿ ಕುಡಿಯುವ ನೀರಿನ ಟ್ಯಾಂಕ್ ಮೇಲ್ಛಾವಣಿಯ ಕೆಲ ಭಾಗ ಕುಸಿದು ಬಿದ್ದಿದ್ದರಿಂದ ಬಡಾವಣೆ ನಿವಾಸಿಗಳು ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪುರಸಭೆಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ್ದ ಪುರಸಭೆ ಅಧಿಕಾರಿಗಳು ಟ್ಯಾಂಕ್ ಚಾವಣಿಗೆ ಸ್ವಲ್ಪ ಭಾಗ ಶೆಡ್ ಅಳವಡಿಸಿದ್ದರು. ಕಳೆದ ಒಂದು ತಿಂಗಳ ಹಿಂದೆ ಮೇಲ್ಚಾವಣಿಯ ಉಳಿದ ಭಾಗವೂ ಕುಸಿದು ಬಿದ್ದಿದ್ದರಿಂದ ಅರ್ಧ ಶೆಡ್ ತೆರವುಗೊಳಿಸಿ ಪುರಸಭೆ ಸಿಬ್ಬಂದಿ ದುರಸ್ತಿಗೆ ಮುಂದಾಗಿತ್ತು. ಆದರೆ, ಶೆಡ್ ತೆರವುಗೊಳಿಸಿದ ನಂತರ ಪುರಸಭೆ ಸಿಬ್ಬಂದಿ ಇತ್ತ ಕಡೆ ಬಂದಿಲ್ಲ ಎಂಬುದು ಬಡಾವಣೆ ನಿವಾಸಿಗಳ ಆರೋಪ.
ಸದ್ಯ ನೀರಿನ ಟ್ಯಾಂಕ್‍ಗೆ ನೀರು ಶೇಖರಣೆ ಆಗುತ್ತದೆ. ಆದರೆ, ಕಳೆದ ಒಂದು ತಿಂಗಳಿನಿಂದ ಈ ಟ್ಯಾಂಕ್ ಮೂಲಕ ಬಡಾವಣೆಗಳಿಗೆ ನೀರು ಸರಬರಾಜು ಆಗುತ್ತಿಲ್ಲ. ಹೀಗಾಗಿ, ಶೇಖರಣೆಗೊಂಡ ನೀರಿಗಾಗಿ ಸಾರ್ವಜನಿಕರು ಟ್ಯಾಂಕ್ ಹತ್ತಿ ಕೊಡದಿಂದ ನೀರನ್ನು ತುಂಬಿಕೊಳ್ಳುತ್ತಿದ್ದಾರೆ. ಅಪಾಯದ ಮಟ್ಟದಲ್ಲಿ ಜನರು ನೀರು ತುಂಬಿಕೊಳ್ಳುತ್ತಿದ್ದು, ಅನಾಹುತ ಆಗುವ ಮುನ್ನವೇ ಪುರಸಭೆ ಎಚ್ಚೆತ್ತುಕೊಳ್ಳಬೇಕಿದೆ.
ನೀರಿನ ಟ್ಯಾಂಕ್ ದುರಸ್ತಿ ಕಾಮಗಾರಿ ಶೀಘ್ರ ಮುಗಿಯಲಿದೆ. ಮೇಲ್ಛಾವಣಿ ಸಂಪೂರ್ಣ ತೆರವುಗೊಳಿಸಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.-ಎನ್.ಎ.ಲಮಾಣಿ, ಮುಖ್ಯಾಧಿಕಾರಿ ಪುರಸಭೆ ಮಹಾಲಿಂಗಪುರ
ನೀರಿನ ಟ್ಯಾಂಕ್ ಕುಸಿದು ಬಿದ್ದು ಜನರಿಗೆ ನೀರಿನ ಸಮಸ್ಯೆ ಆಗಿರುವ ಕುರಿತು ಪುರಸಭೆ ಮುಖ್ಯಾಧಿಕಾರಿ ಜತೆ ಮಾತನಾಡಿದ್ದೇನೆ. ಟ್ಯಾಂಕ್ ಪರಿಶೀಲಿಸಿ ಜನರಿಗೆ ಸಮರ್ಪಕವಾಗಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು.- ಶ್ವೇತಾ ಬೀಡಿಕರ, ಆಡಳಿತಾಧಿಕಾರಿ, ಪುರಸಭೆ, ಮಹಾಲಿಂಗಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.