ತೇರದಾಳ: ‘ಮಹಾತ್ಮರ ನೆನೆಯುವುದೆ ಮುಕ್ತಿಗೆ ದಾರಿ, ಅವರನ್ನು ನೆನೆಯುವ ಸಂದರ್ಭವನ್ನು ಪುಣ್ಯಾರಾಧನೆ ಎಂಬುದಾಗಿ ಭಕ್ತ ಗಣ ಆಚರಿಸುತ್ತೇವೆ’ ಎಂದು ಕೊಣ್ಣುರ ಹೊರಗಿನ ಮಠದ ವಿಶ್ವಪ್ರಭು ಶಿವಾಚಾರ್ಯ ಶ್ರೀ ಹೇಳಿದರು.
ಪಟ್ಟಣದ ವಿರಕ್ತಮಠದ ಶಿವಲಿಂಗೇಶ್ವರ ಶ್ರೀಗಳ 23ನೇ ಪುಣ್ಯಾರಾಧನೆ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಮಾನವ ಸಂಕುಚಿತ ಮನೋಭಾವದಿಂದ ಬದುಕು ನಡೆಸುತ್ತಿದ್ದಾನೆ. ಧರ್ಮದ ದಾರಿಯಲ್ಲಿ ನಡೆಯುವುದನ್ನು ಮರೆತಿದ್ದಾನೆ. ಈ ಭಾವನೆ ತೊರೆದು ಆತ ಹೊರಬರಬೇಕಾದರೆ ಅಧ್ಯಾತ್ಮದ ಬೆನ್ನತ್ತಬೇಕಿದೆ’ ಎಂದರು.
ಕಾರ್ಯಕ್ರಮದ ಸಮ್ಮುಖ ವಹಿಸಿದ್ದ ಚಿಮ್ಮಡ ವಿರಕ್ತ ಮಠದ ಪ್ರಭು ಶ್ರೀ, ‘ಅಪಾರ ಸಂಪತ್ತು, ಆಸ್ತಿ ಗಳಿಸಿದಾಗಲೂ ಸಿಗದ ನೆಮ್ಮದಿ ಅಧ್ಯಾತ್ಮದಿಂದ ದೊರೆಯುವುದು’ ಎಂದರು.
ಸ್ಥಳೀಯ ಹಿರೇಮಠದ ಗಂಗಾಧರ ದೇವರು ಆಶೀರ್ವಚಿಸಿದರು. ಶಾಸಕ ಸಿದ್ದು ಸವದಿ, ವಿರಕ್ತಮಠದ ಟ್ರಸ್ಟ್ ಕಮಿಟಿ ಅಧ್ಯಕ್ಷ ನಿಂಗಪ್ಪ ಮಾಲಗಾಂವಿ, ಮಲ್ಲಪ್ಪ ಜಮಖಂಡಿ, ರಾಮಣ್ಣ ಹಿಡಕಲ್, ಎಂ.ಬಿ.ಮಾಳೇದ, ಈಶ್ವರ ಯಲ್ಲಟ್ಟಿ, ಎಂ.ಸಿ.ಕುಂಚಗನೂರ, ಪ್ರಭುಲಿಂಗೇಶ್ವರ ಅನ್ನಪ್ರಸಾದ ಸಮಿತಿ, ಅಕ್ಕನ ಬಳಗ, ಶಿವಾನುಭವ ಬಳಗದ ಸದಸ್ಯರು ಇದ್ದರು.
ಪುಣ್ಯಾರಾಧನೆ ಅಂಗವಾಗಿ ಪ್ರಾತಃಕಾಲ ಶಿವಲಿಂಗೇಶ್ವರ ಹಾಗೂ ಮುಪ್ಪಿನೇಂದ್ರ ಶ್ರೀಗಳ ಕೃರ್ತ ಗದ್ದುಗೆಗೆ ಅರ್ಚಕರಾದ ಮಗಯ್ಯ ಹಿತ್ತಲಮನಿ, ಬಸವಪ್ರಭು ತೆಳಗಿನಮನಿ, ಮಹಾಂತಯ್ಯ ಮಠಪತಿ ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪಟ್ಟಣ ಸೇರಿದಂತೆ ಸಸಾಲಟ್ಟಿ, ಗೋಲಬಾವಿ, ಕಾಲತಿಪ್ಪಿ ಹಾಗೂ ಬೆಳಗಾವಿ ಜಿಲ್ಲೆಯ ಶೇಗುಣಸಿ, ಸಂಕ್ರಟ್ಟಿಯ ಭಕ್ತರು ಪಾಲ್ಗೊಂಡಿದ್ದರು. ಭಕ್ತರಿಗೆ ಅನ್ನಪ್ರಸಾದ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.