
ಬಾಗಲಕೋಟೆ: ಜಗತ್ತಿನಲ್ಲಿ ಧರ್ಮವಿಲ್ಲದ ಜಾಗವಿಲ್ಲ. ಧರ್ಮಾಚರಣೆಯಿಲ್ಲದ ದೇಶಗಳಿಲ್ಲ. ಮನುಷ್ಯನ ಅಂತರಂಗದ ವಿಕಾಸಕ್ಕೆ ಧಾರ್ಮಿಕ ಸಂಸ್ಕಾರ ಅಗತ್ಯವಾಗಿದೆ ಎಂದು ಹುಬ್ಬಳ್ಳಿಯ ಮೂರುಸಾವಿರಮಠದ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಚರಂತಿಮಠದ ಶಿವಾನುಭವ ಮಂಟಪದಲ್ಲಿ ಶುಕ್ರವಾರ ಸಂಜೆ ಟೀಕಿನಮಠದ ಮಲ್ಲಿಕಾರ್ಜುನ ದೇಶಿಕರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಹಾನಗಲ್ ಕುಮಾರ ಸ್ವಾಮಿಗಳ ಪುರಾಣ ಪ್ರವಚನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಂಪರೆ ಮುಂದುವರೆಸಿಕೊಂಡು ಹೋಗುವ ಶ್ರೇಷ್ಠ ವಿಧಾನಕ್ಕೆ ಪಟ್ಟಾಭಿಷೇಕ ಎನ್ನುತ್ತಾರೆ. ಇತಿಹಾಸ ಹೇಳುವ ಪರಂಪರೆಗೆ ಮೌಲ್ಯವಿದ್ದು ಇತಿಹಾಸ ಮತ್ತು ನಡವಳಿಕೆಗಳು ವ್ಯಕ್ತಿ, ಸಮಾಜದ, ಸಮುದಾಯದ ವ್ಯಕ್ತಿತ್ವ ರೂಪಿಸುತ್ತವೆ ಎಂದರು.
ಸಂಸ್ಕಾರದಿಂದ ಸಮಾಜ, ಸಮುದಾಯದಲ್ಲಿ ದೊಡ್ಡ ಗೌರವ ಸಿಗುತ್ತದೆ. ಸಂಸ್ಕಾರ ಇಲ್ಲದಿದ್ದರೆ ಮನುಕುಲಕ್ಕೆ ಬೆಲೆಯಿಲ್ಲ. ಧಾರ್ಮಿಕತೆಗೆ ಬಹಳ ಬೆಲೆ ಇದೆ. ಧಾರ್ಮಿಕ ಗ್ರಂಥಗಳಲ್ಲಿ ಧರ್ಮದ ಪರಿಪಾಲನೆ ಮಾಡುವ ತತ್ವಗಳಿವೆ ಎಂದರು.
ವ್ಯಕ್ತಿತ್ವವನ್ನು ಶ್ರೇಷ್ಠ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಗುರುಗಳಿಂದ ದೀಕ್ಷೇಯನ್ನು ನಿಡುವ ಇಂತಹ ಒಂದು ಪಟ್ಟಾಭಿಷೇಕ ಪರಂಪರೆ ಇಲ್ಲಿ ನಡೆದಿದೆ, ಐತಿಹಾಸಿಕ ಟೀಕಿನಮಠದ ಪರಂಪರೆ ಮುಂದುವರೆಯಲಿ ಎಂದು ಹೇಳಿದರು.
‘ಬಾಗಲಕೋಟೆ ಟೀಕಿನಮಠ-ಟೆಂಗಿನಮಠದ ಪರಂಪರೆ’ ಎಂಬ ಕೃತಿ ಬಿಡುಗಡೆ ಮಾಡಿದ ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿನ ನ್ಯಾಯ ಪರಿಹರಿಸಿ ಸೂಕ್ತ ಪರಿಹಾರ ನೀಡುವಂತಹ ನ್ಯಾಯಾಲಯದ ಕಟ್ಟೆ ಟೀಕಿನಮಠದಲ್ಲಿತ್ತು. ಬಿವಿವಿ ಸಂಘವನ್ನು ಸಮಾಜಕ್ಕೆ ನೀಡಿದ ಕೀರ್ತಿಯೂ ಈ ಮಠಕ್ಕೆ ಸಲ್ಲಬೇಕು. ಇಂತಹ ಇತಿಹಾಸವುಳ್ಳ ಮಠಗಳನ್ನು ಬೆಳೆಸುವ ಕಾರ್ಯ ನಡೆಯಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪಟ್ಟಾಧಿಕಾರ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮಾತನಾಡಿ, ಸಮಾಜದ ಏಕತೆಗಾಗಿ ದುಡಿದವರು ಹಾನಗಲ್ ಕುಮಾರ ಸ್ವಾಮಿಗಳು. ಪೂಜೆಯಲ್ಲಿ ಸಮೃದ್ಧಿ ಕಾಣುವುದರ ಜೊತೆಗೆ ಅನುಭಾವಿಗಳಾಗಿ, ಯೋಗಸಾಧಕರು, ತ್ರಿಕಾಲ ಜ್ಞಾನಿಗಳಾಗಿದ್ದರು ಎಂದು ಹೇಳಿದರು.
ಆಚಾರ, ವಿಚಾರ, ಪೂಜೆ, ಶಿವಯೋಗ, ಸಾಧನೆ ಹೇಗೆ ಇರಬೇಕೆಂಬುದನ್ನು ಕುಮಾರ ಸ್ವಾಮಿಗಳು ಜಗತ್ತಿಗೆ ತಿಳಿಸಿದ್ದಾರೆ. ಅವರ ಜೀವನ ದರ್ಶನ ಪುರಾಣ ಕೆಳುವುದರ ಜೊತೆಗೆ ಅವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಚರಂತಿಮಠದ ಪ್ರಭು ಸ್ವಾಮೀಜಿ, ಕಮತಗಿಯ ಹೊಳೆಹುಚ್ಚೇಶ್ವರ ಸ್ವಾಮೀಜಿ, ಟೀಕಿನಮಠದ ಮಲ್ಲಿಕಾರ್ಜುನ ದೇಶಿಕರ ಸಾನ್ನಿಧ್ಯ ವಹಿಸಿದ್ದರು.
ಗ್ರಂಥಕರ್ತ ಎಚ್.ಟಿ. ರಂಗಾಪುರ, ಗ್ರಂಥ ದಾನಿಗಳಾದ ಪಾರ್ವತಮ್ಮ ಬಳೂಲಮಠ ಹಾಗೂ ಚಂದ್ರಕಲಾ ಬಳೂಲಮಠ ಅವರನ್ನು ಸನ್ಮಾನಿಸಲಾಯಿತು.
ಮೌಲ್ಯಗಳನ್ನು ಅಳವಡಿಸಿಕೊಳ್ಳಿ ಬಿವಿವಿ ಸಂಘ ನೀಡಿದ ಕೀರ್ತಿ ಪರಂಪರೆಯಲ್ಲಿ ಮೌಲ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.