ADVERTISEMENT

ಕಚ್ಚಾ ವಸ್ತುಗಳ ಬೆಲೆ ಹೆಚ್ಚಳ: ಮಾರಾಟವಾಗದೇ ಉಳಿದ 10 ಲಕ್ಷ ಸೀರೆ

5 ವರ್ಷದಲ್ಲಿ 51 ನೇಕಾರರ ಆತ್ಮಹತ್ಯೆ

ಬಸವರಾಜ ಹವಾಲ್ದಾರ
Published 9 ಏಪ್ರಿಲ್ 2025, 23:30 IST
Last Updated 9 ಏಪ್ರಿಲ್ 2025, 23:30 IST
ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಸೀರೆ ಅಂಗಡಿಯೊಂದರಲ್ಲಿ ಉಳಿದಿರುವ ಸೀರೆಗಳು
ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಸೀರೆ ಅಂಗಡಿಯೊಂದರಲ್ಲಿ ಉಳಿದಿರುವ ಸೀರೆಗಳು   

ಬಾಗಲಕೋಟೆ: ಜಿಲ್ಲೆಯೂ ಸೇರಿ ರಾಜ್ಯದ ನೇಕಾರರ ಬಳಿ 10 ಲಕ್ಷ ಸೀರೆಗಳು ಮಾರಾಟವಾಗದೇ ಉಳಿದಿವೆ. ಜಿಲ್ಲೆಯ ರಬಕವಿಯಲ್ಲಿ 14 ಮಂದಿ ಸೀರೆ ಉತ್ಪಾದಕರ ಬಳಿ ₹2.90 ಕೋಟಿ ಮೌಲ್ಯದ 65,200 ಸೀರೆಗಳು, ಬನಹಟ್ಟಿಯ 10 ಮಂದಿ ಸೀರೆ ಉತ್ಪಾದಕರ ಬಳಿ ₹3.89 ಕೋಟಿ ಮೌಲ್ಯದ 93 ಸಾವಿರ ಸೀರೆಗಳು ಮಾರಾಟವಾಗಿಲ್ಲ. ಇದರ ಪರಿಣಾಮ ನೇಕಾರರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಕೂಲಿ ನೀಡಲು, ಮಳಿಗೆಗಳ ಬಾಡಿಗೆ ಕಟ್ಟಲು ಆಗುತ್ತಿಲ್ಲ.

‘ಕಚ್ಚಾ ವಸ್ತುಗಳ ಬೆಲೆ ಏರಿಕೆ, ಅನಿಶ್ಚಿತ ಮಾರುಕಟ್ಟೆ, ಆರ್ಥಿಕ ಸಂಕಷ್ಟ ಸೇರಿ ವಿವಿಧ ಕಾರಣಗಳಿಂದ 5 ವರ್ಷಗಳಲ್ಲಿ 51 ನೇಕಾರರು ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾರಾಟಕ್ಕೆ ಸರ್ಕಾರ ವ್ಯವಸ್ಥೆ ಮಾಡದಿದ್ದರೆ, ಆತ್ಮಹತ್ಯೆಗಳ ಸಂಖ್ಯೆ ಇನ್ನೂ ಹೆಚ್ಚಾಗಲಿದೆ’ ಎಂದು ಹೇಳಿದರು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ.

‘ಸಾಲ ಮಾಡಿ ಹೂಡಿಕೆ ಮಾಡಿದ ಬಂಡವಾಳ ಎಲ್ಲವೂ ಸೀರೆ ರೂಪದಲ್ಲಿ ಗೋದಾಮುಗಳಲ್ಲಿದೆ. ಸಾಲದ ಬಡ್ಡಿ ಕಟ್ಟಲು ಆಗುತ್ತಿಲ್ಲ. ರಾಜ್ಯದಲ್ಲಿ ₹50 ಕೋಟಿ ಮೌಲ್ಯದ 10 ಲಕ್ಷಕ್ಕೂ ಹೆಚ್ಚು ಸೀರೆಗಳು ಮಾರಾಟವಾಗದೇ ಉಳಿದಿವೆ. ಸೀರೆಗಳ ಬೆಲೆ ₹300 ರಿಂದ ₹500 ಇದೆ. ರಾಜ್ಯ ಸರ್ಕಾರವು ಪರ್ಯಾಯ ಯೋಜನೆಗಳ ಮೂಲಕ ನೇಕಾರರ ನೆರವಿಗೆ ಬರಬೇಕು’ ಎಂದು ತೇರದಾಳ ಶಾಸಕ ಸಿದ್ದು ಸವದಿ ತಿಳಿಸಿದರು.

ADVERTISEMENT

ಕಚ್ಚಾ ವಸ್ತುಗಳ ಬೆಲೆ ಏರಿಕೆ: ಕಚ್ಚಾ ವಸ್ತುಗಳ ನಿರಂತರ ಬೆಲೆ ಏರಿಕೆಯಿಂದ ಸಂಕಷ್ಟ ಹೆಚ್ಚಾಗಿದೆ. ನೂಲಿನ ದರ ₹450 ರಿಂದ 485 ಹೆಚ್ಚಳವಾಗಿದ್ದರೆ, ಚಮಕಾ (ಆರ್ಟ್‌ ಸಿಲ್ಕ್‌) ಬೆಲೆ ಪ್ರತಿ ಕೆಜಿಗೆ ₹585 ರಿಂದ ₹605ಕ್ಕೆ ಹೆಚ್ಚಾಗಿದೆ. ಆದರೆ, ಸೀರೆಗಳ ಬೆಲೆ ಮಾತ್ರ ಏರಿಕೆಯಾಗದೇ ಯಥಾಸ್ಥಿತಿ ಇದೆ.

‘ಮನೆಯಲ್ಲಿ ₹30 ಲಕ್ಷ ಮೌಲ್ಯದ ಸೀರೆ ಉಳಿದಿವೆ. ಇಷ್ಟೇ ಮೊತ್ತ ಉದ್ರಿ ಬಿದ್ದಿದೆ. ವಿದ್ಯುತ್ ಉಚಿತ ನೀಡಿದ್ದಾರೆ. ಆದರೆ, ಮಾರುಕಟ್ಟೆ ವ್ಯವಸ್ಥೆ ಇಲ್ಲ. ಜವಳಿ ಪಾರ್ಕ್‌ ಬೇಕು’ ಎಂದು ಬನಹಟ್ಟಿಯ ನೇಕಾರ ಶಂಕರ ಜುಂಜಪ್ಪನವರ ಹೇಳಿದರು.

‘ನೇಕಾರರ ಕೂಲಿ, ಸೀರೆಗಳ ಬೆಲೆ ಹೊರತುಪಡಿಸಿ ಸೀರೆ ಉತ್ಪಾದನೆಗೆ ಬೇಕಾದ ಎಲ್ಲ ವಸ್ತುಗಳ ಬೆಲೆ ಹೆಚ್ಚಾಗಿದೆ. ಸೂರತ್, ಮುಂಬೈನಿಂದ ಬರುವ ಸೀರೆಗಳಿಂದ ಮಾರುಕಟ್ಟೆಯಲ್ಲಿ ಸ್ಥಳೀಯ ಸೀರೆಗಳ ಬೇಡಿಕೆ ಕುಸಿದಿದೆ’ ಎಂದು ನೇಕಾರ ಶ್ರೀಶೈಲ ಬೀಳಗಿ ಹೇಳಿದರು.

ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಸೀರೆ ಅಂಗಡಿಯೊಂದರಲ್ಲಿ ಉಳಿದಿರುವ ಸೀರೆಗಳು
ರಬಕವಿ–ಬನಹಟ್ಟಿ ನೇಕಾರರ ಸೀರೆ ಉಳಿದಿರುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಸರ್ಕಾರದ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು
-ಬಿ.ಎ. ಪೀರಜಾದೆ, ಉಪನಿರ್ದೇಶಕ ಕೈಮಗ್ಗ ಮತ್ತು ಜವಳಿ ಇಲಾಖೆ
ಸೂರತ್ ಸೀರೆಗಳಿಂದ ಸ್ಥಳೀಯ ನೇಕಾರರ ಸೀರೆಗಳಿಗೆ ಬೇಡಿಕೆ ಕುಸಿದಿದೆ. ಈ ಹಿಂದೆ ಮಹಾರಾಷ್ಟ್ರ ತಮಿಳುನಾಡಿಗೆ ಇಲ್ಲಿನ ಸೀರೆಗಳನ್ನು ಕಳುಹಿಸಲಾಗುತ್ತಿತ್ತು. ಈಗ ಅದೂ ನಿಂತಿದೆ.
-ಸಿದ್ದು ಸವದಿ, ಶಾಸಕ ತೇರದಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.