
ಬಾಗಲಕೋಟೆ: ಜಿಲ್ಲೆಯ ವಿವಿಧೆಡೆ ಕಬ್ಬು ಕಟಾವಿಗೆ ಬಂದ್ ಕೂಲಿ ಕಾರ್ಮಿಕರು ಎರಡು ವಾರಗಳಿಂದ ಕೆಲಸವಿಲ್ಲದೇ ಪರದಾಡುವಂತಾಗಿದೆ.
ಜಿಲ್ಲೆಯಲ್ಲಿರುವ 14 ಸಕ್ಕರೆ ಕಾರ್ಖಾನೆಗಳ ವ್ಯಾಪ್ತಿಯಲ್ಲಿರುವ ಕಬ್ಬು ಕಟಾವಿಗೆ ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಿಂದ ಕಬ್ಬು ಕಟಾವಿನ ‘ಗ್ಯಾಂಗ್’ಗಳನ್ನು ಕರೆಯಿಸಲಾಗುತ್ತದೆ. ಜೊತೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಕಬ್ಬು ಕಟಾವಿಗೆ ಕಾರ್ಮಿಕರು ಬರುತ್ತಾರೆ.
ಅಕ್ಟೋಬರ್ ಅಂತ್ಯಕ್ಕೆ ಕಾರ್ಖಾನೆಗಳು ಆರಂಭವಾಗಲಿವೆ ಎಂದು ಕಾರ್ಖಾನೆಗಳ ಮಾಲೀಕರು, ಕಬ್ಬು ಸಾಗಿಸುವ ಲಾರಿ, ಟ್ರ್ಯಾಕ್ಟರ್ ಹೊಂದಿದ ಮಾಲೀಕರು ಕಬ್ಬು ಕಟಾವಿನ ಗ್ಯಾಂಗ್ ಗಳನ್ನು ಕರೆಯಿಸುತ್ತಾರೆ. ಪ್ರತಿ ಟನ್‌ಗೆ ಇಂತಿಷ್ಟು ಎಂದು ಮಾತುಕತೆಯಾಗಿರುತ್ತದೆ.
ಬೆಳಗಿನ ಜಾವ ಕಬ್ಬು ಕಡಿಯುವಿಕೆ ಆರಂಭಿಸಿದರೆ, ರಾತ್ರಿಯವರೆಗೆ ಕಟಾವು ಕಾರ್ಯದಲ್ಲಿ ಕಾರ್ಮಿಕರು ತೊಡಗಿಸಿಕೊಳ್ಳುತ್ತಾರೆ. ಹೆಚ್ಚಿನ ಕೂಲಿ ಸಿಗುತ್ತದೆ ಎಂದು ಪ್ರತಿ ವರ್ಷ ರಾಜ್ಯಕ್ಕೆ ಕಬ್ಬು ಕಡಿಯಲು ಬರುತ್ತಾರೆ. ಅವರಿಗೆ ಮುಂಗಡ ಹಣ ಕೊಟ್ಟು ಬುಕಿಂಗ್ ಮಾಡಬೇಕಾದ ಸ್ಥಿತಿ ರಾಜ್ಯದವರದ್ದಾಗಿದೆ. ಮುಂಗಡ ಹಣ ತೆಗೆದುಕೊಂಡು ಹಲವು ಗ್ಯಾಂಗ್‌ಗಳು ರಾತ್ರೋರಾತ್ರಿ ಜಾಗ ಖಾಲಿ ಮಾಡಿದ ಉದಾಹರಣೆಗಳೂ ಇವೆ.
ಅಕ್ಟೋಬರ್ 20ರ ವೇಳೆಗೆ ಕಬ್ಬಿನ ಗ್ಯಾಂಗ್‌ಗಳು ಬಂದು ಹೊಲಗಳಲ್ಲಿ ಟೆಂಟ್ ಹೊಡೆದುಕೊಂಡು ಕಟಾವಿನ ಆದೇಶಕ್ಕಾಗಿ ಕಾಯುತ್ತಿದ್ದಾರೆ. ಪ್ರತಿ ಟನ್ ಕಬ್ಬಿಗೆ ₹3,500 ನೀಡುವವರೆಗೆ ಕಾರ್ಖಾನೆ ಆರಂಭಿಸಲು ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಪರಿಣಾಮ ಕಾರ್ಖಾನೆಗಳು ಕಬ್ಬು ನುರಿಸುವಿಕೆ ಆರಂಭಿಸಿಲ್ಲ.
ಹೆಂಡತಿ, ಮಕ್ಕಳೊಂದಿಗೆ ಕುಟುಂಬ ಸಮೇತರಾಗಿ ಕಟಾವಿನ ಕೂಲಿ ಕಾರ್ಮಿಕರು ಬರುತ್ತಾರೆ. ಕಟಾವಿನ ಮೂರು ತಿಂಗಳ ಕಾಲವೂ ಹೊಲಗಳಲ್ಲಿಯೇ ಟೆಂಟ್ ಹಾಕಿಕೊಂಡಿರುತ್ತಾರೆ. ಹೊಲದಿಂದ ಹೊಲಕ್ಕೇ ಟೆಂಟ್ ಬದಲಾಗುತ್ತಲೇ ಇರುತ್ತವೆ.
‘20 ದಿನಗಳ ಹಿಂದೆ ಕಬ್ಬು ಕಡಿಯಲು ಎಂದು ಬಂದಿದ್ದೇವೆ. ಇಲ್ಲಿಯವರೆಗೆ ಕಟಾವು ಆರಂಭವಾಗಿರುವುದಿಲ್ಲ. ಕೆಲಸವೂ ಸಿಕ್ಕಿಲ್ಲ. ಯಾರೂ ಆರ್ಥಿಕ ನೆರವು ನೀಡದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದೇವೆ’ ಎಂದು ಹೊಸಪೇಟೆಯಿಂದ ಬಂದಿರುವ ಕುಮಾರ ಎಂಬ ಕಾರ್ಮಿಕರು ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.