ADVERTISEMENT

ಬೆಳೆ ಮಾಹಿತಿಗೆ ಕ್ಯುಆರ್‌ ಕೋಡ್‌: ಮೊಬೈಲ್‌ ಫೋನ್‌ನಲ್ಲಿ ವಿಡಿಯೊ ಸಹಿತ ವಿವರಣೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2024, 4:59 IST
Last Updated 22 ಡಿಸೆಂಬರ್ 2024, 4:59 IST
ದ್ರಾಕ್ಷಿ ಬೆಳೆಗಳ ಮಾಹಿತಿ ನೀಡುವ ಕ್ಯು ಆರ್ ಕೋಡ್
ದ್ರಾಕ್ಷಿ ಬೆಳೆಗಳ ಮಾಹಿತಿ ನೀಡುವ ಕ್ಯು ಆರ್ ಕೋಡ್   

ಬಾಗಲಕೋಟೆ: ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಶನಿವಾರ ಆರಂಭವಾದ ತೋಟಗಾರಿಕೆ ಮೇಳದಲ್ಲಿನ ವಿವಿಧ ಬೆಳೆಗಳ, ಮೇಳದ ಬಗ್ಗೆ ಮಾಹಿತಿಗೆ ಹೆಚ್ಚು ತಿರುಗಾಡಬೇಕಿಲ್ಲ. ಮುಖ್ಯ ವೇದಿಕೆ ಸೇರಿ ವಿವಿಧೆಡೆ ಪ್ರದರ್ಶಿಸಿರುವ ಕ್ಯುಆರ್‌ ಕೋಡ್ ಸ್ಕ್ಯಾನ್‌ ಮಾಡಿದರೆ, ಎಲ್ಲ ಮಾಹಿತಿ ಮೊಬೈಲ್‌ ಫೋನ್‌ನಲ್ಲಿ ಸಿಗುತ್ತದೆ.

24 ಕ್ಯುಆರ್‌ ಕೋಡ್‌ಗಳನ್ನು ರಚಿಸಿ, ಆಯಾ ಬೆಳೆಗಳ ಮುಂದೆ ಅಳವಡಿಸಲಾಗಿದೆ. ಅವುಗಳನ್ನು ಸ್ಕ್ಯಾನ್‌ ಮಾಡಿದರೆ, ಆ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ವಿಜ್ಞಾನಿಯೊಬ್ಬರು ವಿವರಿಸುವ ವಿಡಿಯೊ ಪ್ರಸಾರವಾಗುತ್ತದೆ. ಜೊತೆಗೆ ಬೆಳೆ ಬಗ್ಗೆ ಮಾಹಿತಿ ನೀಡುವ ಬರವಣಿಗೆ, ಪಿಪಿಟಿ ಮತ್ತು ಲಿಂಕ್‌ ಕೂಡ ನೀಡಲಾಗಿದೆ.

ಮೊಬೈಲ್‌ ಫೋನ್ ಎಲ್ಲರ ಬಳಿ ಇವೆ. ಮೊಬೈಲ್‌ ಫೋನ್ ಮೂಲಕ ಹೆಚ್ಚು ಜನರನ್ನು ತಲುಪಬಹುದು ಎಂಬ ಉದ್ದೇಶದಿಂದ ಕ್ಯುಆರ್ ಕೋಡ್‌ ಮೂಲಕ ಮಾಹಿತಿ ನೀಡಲಾಗಿದೆ.
ವಿಷ್ಣುವರ್ಧನ, ಕುಲಪತಿ, ತೋಟಗಾರಿಕೆ ವಿಶ್ವವಿದ್ಯಾಲಯ

ಚೆಂಡು, ಸೇವಂತಿಗೆ, ಗುಲಾಬಿ, ಕಾರ್ನೆಷನ್‌, ಜರ್ಬೇರಾ, ಆಂಥೋರಿಯಂ, ಆರ್ಕಿಡ್‌, ಪ್ಯಾರಾಡೈಸ್‌, ಸೇವಂತಿ, ಚೈನಾ ಆಸ್ಟರ್, ಗೆಲಾಡಿಯಾ ಹೂಗಳ ಬಗ್ಗೆ ವಿವರವಾದ ಮಾಹಿತಿ ಸಿಗುತ್ತದೆ. ಹೂವು, ತರಕಾರಿ, ಹಣ್ಣಿನ ಬೆಳೆಗಳನ್ನು ಯಾವಾಗ ಬೆಳೆಯಬೇಕು? ಅದರ ಅವಧಿ ಎಷ್ಟು? ಎಷ್ಟು ಪ್ರಮಾಣದಲ್ಲಿ ಬೆಳೆಯುತ್ತದೆ? ಅದಕ್ಕೆ ಬರುವ ರೋಗಗಳು ಯಾವವು? ಅವುಗಳ ನಿವಾರಣೆಗೆ ಏನು ಮಾಡಬೇಕು ಎಂಬ ಮಾಹಿತಿ ಲಭ್ಯವಾಗುತ್ತದೆ.

ADVERTISEMENT

ದ್ರಾಕ್ಷಿ, ದಾಳಿಂಬೆ, ಯಂತ್ರೋಪಕರಣ, ಹೊರ, ಒಳಗಿನ ಯಾವ ಮಳಿಗೆಗಳಲ್ಲಿ ಏನಿದೆ, ಹೈಡ್ರೊಫೋನಿಕ್ ತಂತ್ರಜ್ಞಾನ, ಶ್ವಾನ ಪ್ರದರ್ಶನ, ವಿಸ್ಮಯ ಕೀಟಗಳದ್ದು ಸೇರಿದಂತೆ ಮೇಳದಲ್ಲಿರುವ ಎಲ್ಲ ವಿಭಾಗಗಳ ಕೋಡ್‌ ರಚಿಸಲಾಗಿದೆ.

‘ಬೆಳೆಗಳ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಲು 200 ಎಕರೆಗೂ ಹೆಚ್ಚು ಪ್ರದೇಶ ತಿರುಗಾಡಬೇಕು. ವಯಸ್ಸಾದವರಿಗೆ ಇದು ಕಷ್ಟ. ಮಕ್ಕಳನ್ನು ಕರೆದುಕೊಂಡು ಬಂದವರಿಗೂ ಸಮಸ್ಯೆಯಾಗುತ್ತದೆ. ಅಂತಹವರಿಗೆ ಕ್ಯು ಆರ್ ಕೋಡ್‌ ಮೂಲಕ ಮಾಹಿತಿ ತಲುಪಿಸುವ ಕೆಲಸ ಮಾಡಲಾಗಿದೆ’ ಎಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ವಿಷ್ಣುವರ್ಧನ ಹೇಳಿದರು.

ಹೈಡ್ರೊಫೋನಿಕ್ಸ್ ತಂತ್ರಜ್ಞಾನ ಕುರಿತು ಕ್ಯು ಆರ್‌ ಕೋಡ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.