ಬಳ್ಳಾರಿ: ಬಳ್ಳಾರಿಯಲ್ಲಿ ನಡೆದಿದ್ದ ಒಂದೂವರೆ ತಿಂಗಳ ಮಗು ಕಳ್ಳತನ ಪ್ರಕರಣವನ್ನು ಒಂದೇ ದಿನದಲ್ಲಿ ಭೇದಿಸಿರುವ ಬ್ರೂಸಪೇಟೆ ಪೊಲೀಸರು, ಶಿಶುವನ್ನು ಪೋಷಕರ ಮಡಿಲಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಮೀಮ್ (25), ಎಚ್.ಎಂ ಇಸ್ಮಾಯಿಲ್ ಸಾಬ್ (65), ಬಾಷ (55), ಬಸವರಾಜ ಮಹಾಂತಪ್ಪ (43) ಎಂಬುವವರನ್ನು ಬಂಧಿಸಲಾಗಿದೆ.
ಕಳ್ಳತನ ನಡೆದ ಕೇವವ 12 ಗಂಟೆಯ ಒಳಗಾಗಿ ಮಗುವನ್ನು ರಕ್ಷಿಸಲಾಗಿದೆ. ಬ್ರೂಸ್ ಪೇಟೆ ಠಾಣೆ ಪೊಲೀಸರ ಕಾರ್ಯವನ್ನು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ ಶ್ಲಾಘಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಅಪರಿಚಿತ ಮಹಿಳೆಯೊಬ್ಬರು ತನ್ನ ಒಂದೂವರೆ ತಿಂಗಳ ಮಗುವನ್ನು ಶುಕ್ರವಾರ ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಬೆಣಕಲ್ಲು ಗ್ರಾಮದ ಶ್ರೀದೇವಿ ಎಂಬುವವರು ಬ್ರೂಸ್‌ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಪ್ರಕಾರ ಜುಲೈ 28ರಂದು ಮಹಿಳೆಗೆ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಗಂಡು ಮಗು -ಜನಿಸಿತ್ತು. ಮಗುವಿನ ಜನ್ಮ ಪ್ರಮಾಣಪತ್ರ ಪಡೆದುಕೊಳ್ಳಲೆಂದು ಶುಕ್ರವಾರ ಮತ್ತೆ ಆಸ್ಪತ್ರೆಗೆ ಹೋಗಿದ್ದರು. ಈ ವೇಳೆ ಅಲ್ಲಿಗೆ ಬಂದ ಮಹಿಳೆಯೊಬ್ಬರು ಪ್ರಮಾಣಪತ್ರವನ್ನು ಮಹಾನಗರ ಪಾಲಿಕೆ ಕಚೇರಿಯಲ್ಲಿ ಕೊಡುತ್ತಾರೆ ಎಂದು ಹೇಳಿ ನಂಬಿಸಿ ಅಲ್ಲಿಗೆ ಕರೆದೊಯ್ದಿದ್ದಾರೆ. ಪಾಲಿಕೆ ಕಚೇರಿಯಲ್ಲಿ ಬಹುಕಾಲ ಒಂದೇ ಸ್ಥಳದಲ್ಲಿ ಶ್ರೀದೇವಿಯನ್ನು ಕೂರಿಸಿಕೊಂಡಿದ್ದರು. ಶ್ರೀದೇವಿ ಶೌಚಾಲಯಕ್ಕೆ ಹೋಗಲೆಂದು ಮಗುವನ್ನು ಅಪರಿಚಿತ ಮಹಿಳೆ ಬಳಿ ಕೊಟ್ಟು ಹೋಗಿದ್ದಾರೆ. ಶೌಚಾಲಯದಿಂದ ಬಂದು ನೋಡಿದಾಗ ಮಗು ಇರಲಿಲ್ಲ' ಎಂದು ತಾಯಿ ದೂರು ನೀಡಿದ್ದರು ಎಂದು ತಿಳಿಸಿದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬ್ರೂಸ್‌ಪೇಟೆ ಪೊಲೀಸರು, ಶನಿವಾರ ಬೆಳಿಗ್ಗೆ ಹೊತ್ತಿಗೆ ಮಗುವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಮಗು ಪೋಷಕರ ಮಡಿಲು ಸೇರಿದೆ ಎಂದು ಎಸ್‌ಪಿ ಶೋಭಾರಾಣಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.