
ಬಳ್ಳಾರಿ: ನಗರಾಭಿವೃದ್ಧಿ ಮತ್ತು ಯೋಜನಾ ಪ್ರಾಧಿಕಾರ ಸಚಿವ ಬೈರತಿ ಸುರೇಶ್ ಅವರ ದಿಢೀರ್ ಬಳ್ಳಾರಿ ಭೇಟಿ ಇಲ್ಲಿನ ರಾಜಕೀಯ ಪಡಸಾಲೆಯಲ್ಲಿ ಹಲವು ಊಹಾಪೋಹಗಳಿಗೆ ಎಡೆ ಮಾಡಿ ಕೊಟ್ಟಿದೆ.
ಸರ್ಕಾರ ಬಂದು ಎರಡೂವರೆ ವರ್ಷಗಳಾದರೂ ಬೈರತಿ ಸುರೇಶ್ ಬಳ್ಳಾರಿಗೆ ಬಂದಿದ್ದು ಒಂದು ಬಾರಿ ಮಾತ್ರವೇ. ಅದೂ ಕುರುಗೋಡಿಗೆ ಭೇಟಿ ನೀಡಿದ್ದ ಅವರು, ಬಂದಷ್ಟೇ ವೇಗದಲ್ಲಿ ಹಿಂದಿರುಗಿದ್ದರು. ತಾವು ಸಚಿವರಾದ ಬಳಿಕ ಒಮ್ಮೆಯಾದರೂ ತಮ್ಮ ಇಲಾಖೆಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸದ ಅವರು ಈಗ ಏಕಾಏಕಿ ಸಭೆ ಆಯೋಜಿಸಲು ಕಾರಣವೇನು, ಜಿಲ್ಲೆಯಲ್ಲೇ ಒಂದು ದಿನ ಉಳಿದುಕೊಂಡಿದ್ದರ ಮರ್ಮವೇನು, ಪ್ರವಾಸವನ್ನು ವಿಸ್ತರಿಸಿ ರಾಯಚೂರು ಜಿಲ್ಲೆಗೆ ಹೋಗಿದ್ದು ಯಾಕೆ ಎಂಬುದರ ಬಗ್ಗೆ ಚರ್ಚೆಗಳು ಜೋರಾಗಿ ನಡೆಯುತ್ತಿವೆ.
ಈ ಪ್ರಶ್ನೆಗಳಿಗೆ ಉತ್ತರ ಹುಡುಕಿದಾಗ ಸಚಿವ ಸುರೇಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೂತನಾಗಿ ಬಳ್ಳಾರಿಗೆ ಸಂದೇಶ ಹೊತ್ತು ತಂದಿದ್ದರು ಎಂಬ ವಿಷಯ ರಾಜಕೀಯ ವಲಯದ ಉನ್ನತ ಹಂತದ ನಾಯಕರು, ಸ್ಥಳೀಯ ರಾಜಕೀಯ ಮುಖಂಡರಿಂದ ಕೇಳಿ ಬಂದಿದೆ.
ಮುಖ್ಯಮಂತ್ರಿ ಬದಲಾವಣೆ, ಡಿ.ಕೆ ಶಿವಕುಮಾರ್‌ಗೆ ಅಧಿಕಾರ ವಹಿಸುವ ಕುರಿತು ಚರ್ಚೆಗಳು ರಾಜ್ಯದಲ್ಲಿ ಜೋರಾಗಿದ್ದ ಹೊತ್ತಲ್ಲೇ, ಸರ್ಕಾರ ಗುಟ್ಟಾಗಿ ರಾಜ್ಯದ ಶಾಸಕರ ಒಲವು ನಿಲುವುಗಳ ಮಾಹಿತಿಯನ್ನು ಗುಪ್ತಚರ ಇಲಾಖೆಯಿಂದ ಸಂಗ್ರಹಿಸಿತ್ತು. ಯಾರು ಯಾರ ಪರ ನಿಲ್ಲಬಲ್ಲರು, ಯಾರು ನಿರ್ಲಿಪ್ತ ಮನೋಭಾವ ತಾಳಿದ್ದಾರೆ, ಯಾರ ಬೇಡಿಕೆಗಳು ಏನಿವೆ ಎಂಬುದರ ಕುರಿತು ಮುಖ್ಯಮಂತ್ರಿಗೆ ವರದಿಗಳು ಹೋಗಿದ್ದವು ಎಂದು ಹೇಳಲಾಗಿದೆ.
ಜಿಲ್ಲೆಯ ಒಬ್ಬೊಬ್ಬ ಶಾಸಕರ ನಿಲುವಿನ ಬಗ್ಗೆಯೂ ವರದಿ ಮುಖ್ಯಮಂತ್ರಿಗೆ ತಲುಪಿದೆ ಎಂದು ಗೊತ್ತಾಗಿದೆ. ಕೆಲ ಶಾಸಕರ ನಿಲುವಿನಲ್ಲಿ ಅನುಮಾನಗಳಿದ್ದವು ಎಂದೂ ಹೇಳಲಾಗುತ್ತಿದೆ. ಇನ್ನೂ ಕೆಲವು ಶಾಸಕರು ತಮ್ಮದೇ ಬೇಡಿಕೆಗಳನ್ನು ಹೊಂದಿದ್ದಾರೆ ಎಂದೂ ತಿಳಿದು ಬಂದಿದೆ. ಇದೆಲ್ಲವನ್ನೂ ಆಲಿಸಿ, ಅದಕ್ಕೆ ಸಮಾಧಾನ ಹೇಳಿ, ಎಲ್ಲರನ್ನೂ ಸಿದ್ದರಾಮಯ್ಯ ಪರವಾಗಿ ನಿಲ್ಲುವಂತೆ ಮನವೊಲಿಸುವ ಪ್ರಯತ್ನದ ಭಾಗವಾಗಿ ಸುರೇಶ್ ಬಂದಿದ್ದರು ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿ ನೀಡಿದ್ದ ಸಂದೇಶವನ್ನೂ ಅವರು ತಲುಪಿಸಿದ್ದಾರೆ ಎಂದು ಖಚಿತ ಮೂಲಗಳು ಹೇಳುತ್ತಿವೆ.
‘ನಮ್ಮ ಕಡೆ ಶಾಸಕರ ಬಲವಿದೆ. ಕಷ್ಟ ಬಂದಾಗ ಬೆನ್ನಿಗೆ ನಿಲ್ಲಲು ತಂಡವಿದೆ. ಮುಂದಿನ ಚುನಾವಣೆಯಲ್ಲಿಯೂ ಬೆಂಬಲಕ್ಕೆ ನಿಲ್ಲುತ್ತೇವೆ, ನೆರವಾಗುತ್ತೇವೆ. ಎಲ್ಲರೂ ಜೊತೆಯಾಗಿರೋಣ’ ಎಂಬ ಸಂದೇಶವನ್ನು ಸುರೇಶ್ ಅವರು ಶಾಸಕರಿಗೆ ತಲುಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.
‘ಶಾಸಕರ ಬೆಂಬಲ ಇರುವವರು ಮುಖ್ಯಮಂತ್ರಿಯಾಗುತ್ತಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದಾರೆ. ಸದ್ಯ ಮುಖ್ಯಮಂತ್ರಿ ಪದವಿ ಹಸ್ತಾಂತರ ಮಾಡುವ ಸಂದರ್ಭ ಬಂದರೂ, ಶಾಸಕರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ತಮ್ಮ ವಾದ ಮಂಡಿಸುವ ಸಾಧ್ಯತೆಗಳಿವೆ. ಅದಕ್ಕೆ ಪೂರಕವಾಗಿ ಅವರ ಆಪ್ತರು ಶಾಸಕರ ಸಂಘಟನೆ ನಡೆಸುತ್ತಿದ್ದಾರೆ’ ಎಂದು ಗೊತ್ತಾಗಿದೆ.
ಪ್ರಗತಿ ಪರಿಶೀಲನೆ ಸಭೆ ನೆಪ!
ಬೆಂಗಳೂರಿನಲ್ಲೇ ಇಂಥದ್ದೊಂದು ಸಭೆಯನ್ನು ಮಾಡಬಹುದಿತ್ತು. ಆದರೆ ಬೆಂಗಳೂರಿನಲ್ಲಿ ರಾಜಕೀಯ ಕ್ಷೇತ್ರದ ಸಣ್ಣಪುಟ್ಟ ಬೆಳವಣಿಗೆಗಳ ಮೇಲೂ ಮಾಧ್ಯಮಗಳು ಹದ್ದಿನ ಕಣ್ಣಿಟ್ಟಿರುವ ಹೊತ್ತಿನಲ್ಲಿ ಸಿದ್ದರಾಮಯ್ಯ ಆಪ್ತರು ಯಾರನ್ನೇ ಭೇಟಿಯಾದರೂ ಸುದ್ದಿಯಾಗುತ್ತಿದೆ. ಹೀಗಾಗಿಯೇ ಪ್ರಗತಿ ಪರಿಶೀಲನಾ ಸಭೆಗಳ ಹೆಸರಿನಲ್ಲಿ ಮುಖ್ಯಮಂತ್ರಿ ಆಪ್ತರು ಈಗ ಜಿಲ್ಲೆಗಳನ್ನು ಸುತ್ತಲಾರಂಭಿಸುತ್ತಿದ್ದಾರೆ ಎಂದು ರಾಜಕೀಯ ವಲಯದ ಹಿರಿಯ ನಾಯಕರೊಬ್ಬರು ಪ್ರಜಾವಾಣಿಗೆ ಹೇಳಿದರು.
ನಗರಾಭಿವೃದ್ಧಿ ಮತ್ತು ಯೋಜನಾ ಪ್ರಾಧಿಕಾರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸುವ ಮೂಲ ಉದ್ದೇಶದೊಂದಿಗೆ ಬೈರತಿ ಸುರೇಶ್ ಬಳ್ಳಾರಿಗೆ ಬಾರದೇ ಇದ್ದರೂ ಪ್ರಗತಿ ಪರಿಶೀಲನಾ ಸಭೆ ನಡೆಸಿದ ರೀತಿಯ ಬಗ್ಗೆ ಬಳ್ಳಾರಿಯಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಸ್ವತಃ ಕಾರ್ಪೊರೇಟರ್‌ಗಳೇ ಇಂಥದ್ದೊಂದು ಸಭೆ ಆರು ತಿಂಗಳಿಗೆ ಒಮ್ಮೆಯಾದರೂ ನಡೆಯಬೇಕು ಎಂದು ಆಶಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.