
ಬಳ್ಳಾರಿ: ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪ್ರಜಾಪ್ರಭುತ್ವದ ಅಂಗವಾಗಿ ದೇಶಕಟ್ಟುವ ಸಾರ್ಥಕ ಕೆಲಸ ಮಾಡುತ್ತಿದೆ’ ಎಂದು ಬಳ್ಳಾರಿ-ವಿಜಯನಗರ ಸಂಸದ ಇ. ತುಕಾರಾಂ ಹೇಳಿದರು.
ಬಳ್ಳಾರಿ ಜಿಲ್ಲಾಡಳಿತ, ‘ಪ್ರಜಾವಾಣಿ’– ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗ ಮತ್ತು ‘ಸಾಧನಾ ಅಕಾಡೆಮಿ’ ಸಹಯೋಗದಲ್ಲಿ ನಗರದ ರಾಘವ ಕಲಾ ಮಂದಿರದಲ್ಲಿ ಶುಕ್ರವಾರ ನಡೆದ ‘ಸ್ಪರ್ಧಾಮಾರ್ಗ’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
‘ಪ್ರಜಾಪ್ರಭುತ್ವದ ನಾಲ್ಕು ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ಇಲ್ಲಿ ಸೇರಿದ್ದು ಈ ಕಾರ್ಯಕ್ರಮಕ್ಕೆ ಮೆರುಗು ತಂದಿದೆ’ ಎಂದರು.
‘ಗುರುಗಳ ಮಾತು ಕೇಳಿ ಶ್ರದ್ಧೆ ಮತ್ತು ಶಿಸ್ತಿನಿಂದ ಕಲಿತಿದ್ದಕ್ಕೆ ನಾವು ಬೆಳೆಯಲು ಸಾಧ್ಯವಾಯಿತು. ಬಿ.ಕಾಂ ಪದವಿ ನಂತರ ವಿದ್ಯಾಭ್ಯಾಸ ಮುಂದುವರೆಸುವುದು ಕಷ್ಟವಾದ ಸಮಯದಲ್ಲಿ ಸಿಕ್ಕ ಕೇವಲ ₹1,500ನಿಂದ ಬೆಂಗಳೂರಿಗೆ ಹೋಗಿದ್ದೆ. ಶಾಸಕರ ಭವನದಲ್ಲಿ ಉಳಿದುಕೊಂಡಿದ್ದೆ, ಆಗ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಬಂದಿದ್ದ ಕೆಲಸದ ಜಾಹೀರಾತು ನೋಡಿ ಹೋಗಿ ಕೆಲಸ ಪಡೆದುಕೊಂಡೆ. ನನ್ನ ನೌಕರಿಗೆ ಮೊದಲ ಮೆಟ್ಟಿಲಾಗಿದ್ದು ಇದೇ ಪತ್ರಿಕೆ’ ಎಂದು ಸ್ಮರಿಸಿದರು.
ವೇದಿಕೆಯ ಮೇಲೆಯೇ ಪತ್ನಿ ಅನ್ನಪೂರ್ಣ ಅವರಿಗೆ ‘ಸುಧಾ’ ಮತ್ತು ‘ಮಯೂರ’ ಪತ್ರಿಕೆಗಳನ್ನು ಕಾಣಿಕೆಯಾಗಿ ನೀಡಿದ ಸಂಸದ ತುಕಾರಾಂ ‘ಪ್ರಜಾವಾಣಿ’ ಬಳಗದ ಮೇಲೆ ಅಭಿಮಾನದ ಮಳೆಗರೆದರು.
ನನ್ನ ಸ್ಪಷ್ಟತೆಗೆ ‘ಪ್ರಜಾವಾಣಿ’ ಕಾರಣ: ಸಂಡೂರು ಶಾಸಕಿ ಅನ್ನಪೂರ್ಣ ಮಾತನಾಡಿ, ‘ಮನೆಗೆ ಬರುತ್ತಿದ್ದ ‘ಪ್ರಜಾವಾಣಿ’ ಪತ್ರಿಕೆಯನ್ನು 3ನೇ ತರಗತಿಯಿಂದಲೇ ಓದುವ ಹವ್ಯಾಸ ನನಗಿತ್ತು. ನನ್ನ ಬರವಣಿಗೆ, ಮಾತಿನ ಸ್ಪಷ್ಟತೆಗೆ ಈ ಪತ್ರಿಕೆಯೇ ಕಾರಣ’ ಎಂದು ಕೊಂಡಾಡಿದರು.
‘ನನ್ನ ಸಮಾಜಮುಖಿ ಚಿಂತನೆಗೆ, ಜ್ಞಾನಾರ್ಜನೆಗೆ ಪತ್ರಿಕೆ ಓದುವ ಹವ್ಯಾಸವೇ ಕಾರಣ. ಅಲ್ಲದೆ ಪತ್ರಿಕೆಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಈ ಸಂದರ್ಭದಲ್ಲಿ, ಪ್ರಜಾವಾಣಿಯು 75 ವರ್ಷಗಳಿಂದ ನಿಷ್ಪಕ್ಷಪಾತವಾಗಿ ನಡೆದುಕೊಂಡು ಬರುತ್ತಿರುವುದು’ ಹೆಮ್ಮೆಯ ಸಂಗತಿ ಎಂದರು.
‘ವಿದ್ಯಾರ್ಥಿಗಳು ಕನಸುಗಳನ್ನು ಸಾಯಲು ಬಿಡಬಾರದು. ಕನಸುಗಳ ಈಡೇರಿಕೆಗೆ ಪ್ರಯತ್ನಿಸಿದರೆ ಜೀವನ ಸಾರ್ಥಕವಾಗುತ್ತದೆ. ಮಹನೀಯರೆನಿಸಿಕೊಂಡವರು ಜೀವನದಲ್ಲಿ ಏಳುಬೀಳು ಕಂಡವರೇ. ಅಂಥವರು ನಿಮಗೆ ದಾರಿದೀಪವಾಗಲಿ’ ಎಂದು ಶುಭಹಾರೈಸಿದರು.
ಗ್ರಾಮೀಣ ಭಾಗದ ಮಕ್ಕಳಿಗೆ ಅನ್ನದ ಬೆಲೆ, ಜ್ಞಾನದ ಬೆಲೆ ಗೊತ್ತಿರುತ್ತದೆ. ಇಂಥವರು ಆಡಳಿತ ಸೇವೆಗೆ ಬಂದರೆ ಗ್ರಾಮೀಣ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಆದ್ದರಿಂದ ‘ಪ್ರಜಾವಾಣಿ’ಯ ಈ ಸ್ಪರ್ಧಾಮಾರ್ಗ ನಿಮಗೆ ಸರಿಯಾದ ವೇದಿಕೆ ಕಲ್ಪಿಸುತ್ತದೆ’ ಎಂದು ಅಭಿಪ್ರಾಯಪಟ್ಟರು.
ಚಿಕ್ಕಂದಿನಿಂದಲೂ ಪತ್ರಿಕೆ ನಂಟು: ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಮಾತನಾಡಿ, ‘ಕರ್ನಾಟಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬಹು ಹಿಂದೆ ಇದೆ. ಆದರೆ ಜ್ಞಾನದ ಕೊರತೆ ನಮ್ಮಲ್ಲಿ ಇಲ್ಲ. ಮಾರ್ಗದರ್ಶನದ ಕೊರತೆ ಇದೆ’ ಎಂದು ಬೇಸರಿಸಿದರು.
‘ಚಿಕ್ಕಂದಿನಿಂದಿಲೂ ನಾನು ಪ್ರಜಾವಾಣಿಯ ಓದುಗ. ಇದಕ್ಕೆ ಕಾರಣ ನನ್ನ ತಂದೆ, ತಾಯಿ. ನಮ್ಮ ಊರಿಗೆ ಒಮ್ಮೆ ಜಿಲ್ಲಾಧಿಕಾರಿ ಬಂದಿದ್ದರು. ಐಎಎಸ್ ಪಾಸಾದರೆ, ಡಿ.ಸಿ ಆಗಬಹುದು ಎಂದು ಆಗ ತಿಳಿಸಿಯಿತು. ಅದಕ್ಕೆ ಪ್ರಜಾವಾಣಿಯ ಓದು ನೆರವಾಯಿತು’ ಎಂದರು.
‘ನೀವು ಪರೀಕ್ಷೆ ಕುರಿತು ಅರ್ಥೈಸಿಕೊಂಡಲ್ಲಿ ಯಶಸ್ಸು ಗಳಿಸಲು ಸಾಧ್ಯ. ಇದಕ್ಕೆ ಜಿಲ್ಲಾಡಳಿತ ಸಹಾಯ ಮಾಡಲು ಸದಾ ಸಿದ್ಧ’ ಎಂದು ಸ್ಪರ್ಧಾರ್ಥಿಗಳಿಗೆ ಧೈರ್ಯ ತುಂಬಿದರು. ‘ದುಡ್ಡಿನಿಂದ ಕೆಲಸ ಸಿಗುತ್ತೆ ಎನ್ನುವ ನಕಾರಾತ್ಮಕ ಯೋಚನೆ ಮನಸ್ಸಿನಿಂದ ತೆಗೆದುಹಾಕಿ. ನಿಮ್ಮ ಪ್ರತಿಭೆ ಮೇಲೆ ನಂಬಿಕೆ ಇಡಿ’ ಎಂದು ಅವರು ಪ್ರೇರೇಪಿಸಿದರು.
ಕಾರಣಗಳನ್ನು ಹುಡುಕಿಕೊಳ್ಳಬೇಡಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ವಿ.ಜೆ. ಮಾತನಾಡಿ, ‘ಫಿನಿಕ್ಸ್ ಪಕ್ಷಿಯಂತೆ ನಾವು ನಮ್ಮ ಜೀವನದಲ್ಲಿ ಘಟಿಸುವ ಘಟನೆಗಳಿಂದ ಮೇಲೆದ್ದು ಬರುವ ಕಿಚ್ಚು ಹೊಂದಬೇಕು. ಸಾಧನೆ ಮಾಡಲು ಇನ್ನೂ ಸಮಯವಿದೆ ಎಂದು ಭಾವಿಸುವುದೇ ದೊಡ್ಡ ತಪ್ಪು. ಸಾಧನೆ ಒಂದೇ ದಿನದಲ್ಲಿ ಆಗುವಂಥದ್ದಲ್ಲ, ವರ್ಷಗಳ ಪರಿಶ್ರಮ ಅದರ ಹಿಂದೆ ಇರುತ್ತದೆ. ನಿಮ್ಮ ಜೀವನ ನೋವುಗಳಿಂದ ಮೇಲೆದ್ದು ಬರಬೇಕು. ಎಸ್‌ಎಸ್‌ಎಲ್‌ಸಿಯಲ್ಲಿ ಫೇಲಾದ ನನ್ನೊಂದಿಗೆ ನನ್ನ ಸ್ನೇಹಿತೆಯೇ ಮಾತನಾಡಿಸಲಿಲ್ಲ. ಯಾವ ಕಾಲೇಜು ನನಗೆ ವಿಜ್ಞಾನ ಸೀಟು ಕೊಡಲಿಲ್ಲವೋ ಅದೇ ಕಾಲೇಜಿಗೆ ಅಥಿತಿಯಾಗಿ ಹೋಗಿದ್ದೆ. ಇದೆಲ್ಲದರ ಹಿಂದೆ ಕಠಿಣ ಪರಿಶ್ರಮವಿದೆ’ ಎಂದರು.
‘ಓದುವಾಗ ಯಾವುದೇ ಕಾರಣಗಳನ್ನು ಹೇಳಬೇಡಿ. ನನಗೆ 3 ತಿಂಗಳ ಮಗುವಿದ್ದಾಗ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡಿದ್ದೆ, ಪರೀಕ್ಷೆಯಲ್ಲಿ ಪಾಸಾಗಿದ್ದೆ’ ಎಂದು ತಿಳಿಸಿದರು.
ಸೇವಾ ಮನೋಭಾವ ಇರಬೇಕು: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹಮದ್ ಹ್ಯಾರಿಸ್ ಸುಮೇರ್ ಮಾತನಾಡಿ, ‘ಸೇವಾ ಮನೋಭಾವ ನಿಮ್ಮಲ್ಲಿ ಇದ್ದರೆ, ನಿಮ್ಮ ಗುರಿ ಬಗ್ಗೆ ಸ್ಪಷ್ಟತೆ ಇದ್ದರೆ ನೀವೂ ಐಎಎಸ್ ಮಾಡಬಹುದು’ ಎಂದು ಹೇಳಿದರು.
‘ಜೀವನದಲ್ಲಿ ದೊಡ್ಡ ಕನಸು ಕಾಣಿ, ಜಡ್ಜ್ ಆಗಬೇಕು, ಹೃದಯ ಶಸ್ತ್ರತಜ್ಞ ಆಗಬೇಕು ಎನ್ನುವ ಕನಸು ಕಾಣಬೇಕು. ನಿಮ್ಮ ಸ್ಫೂರ್ತಿಯ ಸೆಲೆ ನಿಮ್ಮಲ್ಲಿಯೇ ಇದೆ. ಜೀವನದಲ್ಲಿ ಗುರಿ, ನಿರಂತರ ಪರಿಶ್ರಮ ಮತ್ತು ತ್ಯಾಗ ಗುಣ ನಿಮ್ಮಲ್ಲಿದ್ದರೆ ನೀವು ಯಶಸ್ಸುಗೊಳ್ಳಲು ಸಾಧ್ಯ’ ಎಂದು ಯುವಕರಿಗೆ ಸ್ಫೂರ್ತಿ ತುಂಬಿದರು.
‘ಕನ್ನಡ ಸಾಹಿತ್ಯ ವಿಷಯ ಆಯ್ಕೆ ಮಾಡಿ ದೇಶದಲ್ಲಿ ಮೊದಲ ರ‍್ಯಾಂಕ್ ಪಡೆದ ಅಶ್ವಿನಿಯವರ ಸಾಧನೆ ಕನ್ನಡಿಗರಿಗೆ ಪ್ರೇರಣಿಯಾಗಲಿ’ ಎಂದು ಆಶಿಸಿದರು. ಸಾಮಾಜಿಕ ಜಾಲತಾಣ ಉಪಯೋಗಿಸಿ, ಆದರೆ ಅತಿಯಾಗಬಾರದು’ ಎಂದು ಕಿವಿಮಾತು ಹೇಳಿದರು.
ಸಾಧನೆಯ ತಪಸ್ಸು ಮಾಡಬೇಕು: ಹೆಚ್ಚುವರಿ ಜಿಲ್ಲಾಧಿಕಾರಿ ಮುಹಮ್ಮದ್ ಝಬೇರ್ ಮಾತನಾಡಿ, ‘ತಾಯಿಗೆ ಬಳುವಳಿಯಾಗಿ ಸಿಕ್ಕ ಟಿಫನ್ ಬಾಕ್ಸ್‌ನ ಮೂರು ಡಬ್ಬಿಗಳಲ್ಲಿ ಎರಡು ಡಬ್ಬಿಗಳಲ್ಲಿ ಮಾತ್ರ ಊಟ ಇರುತ್ತಿತ್ತು. ಮತ್ತೊಂದು ಖಾಲಿ ಇರುತ್ತಿತ್ತು. ಅಂಥ ಬಡತನದ ನಡುವೆಯೂ ಸ್ಪರ್ಧಾತ್ಮಕ ಪರೀಕ್ಷೆ ಪಾಸು ಮಾಡಿದೆ’ ಎಂದು ಸ್ಮರಿಸಿದರು.
‘ಅವಕಾಶಗಳು ಸೂರ್ಯೋದಯ ಇದ್ದಂತೆ. ಸಮಯ ಸದ್ಬಳಕೆ ಮಾಡಿಕೊಳ್ಳಿ. ಗೌತಮ ಬುದ್ಧ ಅರಮನೆ ಬಿಟ್ಟು ತಪಸ್ಸಿಗೆ ಹೋದಂತೆ ಸಾಧನೆಗಾಗಿ ನೀವೂ ಕೂಡ ತಪಸ್ಸು ಮಾಡಬೇಕು. ಜೀವನದಲ್ಲಿ ಯಶಸ್ಸು ಗಳಿಸಬೇಕು’ ಎಂದು ಸಲಹೆ ನೀಡಿದರು.
ಒಂದು ತಾಸಿನವರೆಗೆ ನಡೆದ ಸಾಧನಾ ಅಕಾಡೆಮಿಯ ನಿರ್ದೇಶಕ ಮಂಜುನಾಥ ಬಿ. ಅವರ ಉಪನ್ಯಾಸದಲ್ಲಿ ಸೂಜಿ ಮೊನೆ ಬಿದ್ದರೂ ಸದ್ದು ಕೇಳುವಷ್ಟು ನಿಶ್ಯಬ್ದತೆ ಕಂಡುಬಂತು. ‘ನಾವು ಪ್ರಳಯಾಂತಕ ಬದಲಾವಣೆಯ ಕಾಲದಲ್ಲಿ ಇದ್ದೇವೆ’ ಎಂಬ ಬುದ್ಧನ ಮಾತಿನಂತೆ ಬದುಕಿಗೆ ಹೇಗೆ ಸಿದ್ದಗೊಳ್ಳಬೇಕು ಪರೀಕ್ಷೆಗೆ ಹೇಗೆ ಸಿದ್ದರಾಗಬೇಕು ಎಂಬುದನ್ನು ಪ್ರೊಜೆಕ್ಟರ್ ಮೂಲಕ ಅಚ್ಚುಕಟ್ಟಾಗಿ ವಿವರಿಸಿದರು.
‘ಸಾಯುವ ಮೊದಲು ಸಮಾಜಕ್ಕೆ ಹಾಗೂ ನಿಮಗೆ ನೀವೇ ಕಾಣಿಕೆ ನೀಡುವಂತೆ ಬದಲಾವಣೆ ಆಗಬೇಕು. ಜಗತ್ತಿನಲ್ಲಿರುವುದನ್ನು ನೋಡಬೇಕು ಅನುಭವಿಸಬೇಕು ಅದಕ್ಕಾಗಿ ಸದೃಢ ದೇಹ ಜ್ಞಾನ ಇದ್ದರೆ ಮಾತ್ರ ಸಾಧ್ಯವಿಲ್ಲ ಜತೆಗೆ ಬದಲಾವಣೆಗೆ ಹೊಂದಿಕೊಳ್ಳುವ ಗುಣ ನಿಮ್ಮಲ್ಲಿರಬೇಕು’ ಎಂದರು.
‘ನೀವೇನು ಅಂದುಕೊಳ್ಳುತ್ತೀರೋ ಅದು ಮನಸ್ಥಿತಿಯಾಗುತ್ತದೆ ನಂತರ ಅದೇ ಹವ್ಯಾಸವಾಗುತ್ತದೆ ಅದರಿಂದ ನೈಪುಣ್ಯತೆ ಸಿಗುತ್ತದೆ ಇದು ಸಾಧನೆಗೆ ಪ್ರೇರಣೆಯಾಗುತ್ತದೆ’ ಎಂದು ತಿಳಿಸಿದರು. ‘ನಿದ್ದೆ ಭೋಜನ ವ್ಯಾಯಾಮ ಹಾಗೂ ನಂಬಿಕೆ ಹೊಣೆಗಾರಿಕೆಯಿಂದ ಸಮಾಜಕ್ಕೆ ಕಾಣಿಕೆ ನೀಡುವ ಧ್ಯೇಯ ಕೈಗೊಳ್ಳಿ ಎನ್ನುವ (ಸೀಲ್) ಪ್ರಯೋಗ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.
‘ಸ್ಪರ್ಧಾತ್ಮಕ ಪರೀಕ್ಷೆಗಳ ಬ್ರಹ್ಮ ಎಂದರೆ ‘ಪ್ರಜಾವಾಣಿ’ ಇದನ್ನು ಜೀವನಾಡಿಯಾಗಿ ಮಾಡಿಕೊಳ್ಳಿ’ ಎಂದರು. ಇದೇ ಸಂದರ್ಭದಲ್ಲಿ ಸಹಾಯಕ ಅಕೌಂಟೆಂಟ್ ಆಗಿ ನೇಮಕಗೊಂಡ ಬಳ್ಳಾರಿಯ ನಂದಿನಿ ವೇದಿಕೆಯ ಮೇಲೆ ತಮ್ಮ ಐಡಿ ಕಾರ್ಡ್ ತೋರಿಸಿ ‘ಕಳೆದ ವರ್ಷದ ಸ್ಪರ್ಧಾ ಮಾರ್ಗ ಈ ಸಾಧನೆ ಮಾಡಲು ಪ್ರೇರಣೆ ನೀಡಿತು’ ಎಂದು ಹೆಮ್ಮೆಯಿಂದ ಹೇಳಿಕೊಂಡರು. ಪರೀಕ್ಷೆಗೆ ಹೇಗೆ ಅಭ್ಯಾಸ ಮಾಡಬೇಕು ಪ್ರಶ್ನೆಗಳನ್ನು ಯಾವ ರೀತಿ ಕೇಳಲಾಗುತ್ತದೆ? ಓದುವ ಸಂದರ್ಭದಲ್ಲಿ ಭೂಪಟಗಳನ್ನು ಹೇಗೆ ಅಭ್ಯಸಿಸಬೇಕು ಎಂಬ ಬಗ್ಗೆ ಸ್ಲೈಡ್‌ಗಳ ಮೂಲಕ ವಿವರಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಸ್ಪರ್ಧಾರ್ಥಿ ಯೋಗಿಶ್ ಹೇಗೆ ಸಮಯವನ್ನು ಹೊಂದಿಸಿಕೊಳ್ಳುವುದು ವೇಳಾಪಟ್ಟಿ ಅನ್ವಯ ಹೇಗೆ ಕೆಲಸ ಮಾಡುವುದು ಯಾವ ಪುಸ್ತಕಗಳನ್ನು ಹೆಚ್ಚು ಓದುವುದು ಎಂಬ ಗೊಂದಲಗಳನ್ನು ಪರಿಹರಿಸಿಕೊಂಡರು.
ನನ್ನ ಮನೆಗೆ ಮೊದಲು ಬಂದ ಪತ್ರಿಕೆ ‘ಪ್ರಜಾವಾಣಿ’. ಇದರ ಓದು ಜ್ಞಾನದ ಮೆಟ್ಟಿಲಾಗುತ್ತದೆ ಎಂದು ನನ್ನ ಪತ್ನಿ ಅನ್ನಪೂರ್ಣ ಹೇಳಿದ್ದರು. ನಾನೂ ಪತ್ರಿಕೆ ಓದಲು ಆರಂಭಿಸಿದೆ. ನಾಲ್ಕು ಬಾರಿ ಸೋಲಿಲ್ಲದ ಸರದಾರನಾಗಲು ಪತ್ರಿಕೆ ಓದುವಂತೆ ಪತ್ನಿ ಅನ್ನಪೂರ್ಣ ನೀಡಿದ ಸಲಹೆಯೂ ಒಂದು ಕಾರಣವಾಗಿತ್ತು.-ಇ. ತುಕಾರಾಂ, ಬಳ್ಳಾರಿ ಸಂಸದ
ಪತ್ರಿಕೆಯಲ್ಲಿನ ಪ್ರಕಟಣೆಯಿಂದ ಕಾರ್ಯಕ್ರಮದ ಬಗ್ಗೆ ತಿಳಿಯಿತು. ಪರೀಕ್ಷೆಗೆ ತಮ್ಮ ತಯಾರಿ ಹೇಗಿತ್ತು ಎಂದು ವಿವರಿಸುವ ಮೂಲಕ ಅಧಿಕಾರಿಗಳು ನಮಗೆ ಪ್ರೇರಣೆ ಒದಗಿಸಿದ್ದಾರೆ.-ವಿಶ್ವನಾಥ್, ಕಲಬುರಗಿ
ಅಧಿಕಾರಿಗಳು ತಮ್ಮ ಸಾಧನೆಯ ಹಿಂದಿನ ಪರಿಶ್ರಮ ವಿವರಿಸಿದ್ದು, ಸ್ಪರ್ಧಾತ್ಮಕ ಪರೀಕ್ಷೆಗೆ ಸಮಯವನ್ನು ಹೇಗೆ ಹೊಂದಿಸಿಕೊಳ್ಳಬೇಕು ಎಂದು ಮಂಜುನಾಥ್ ಅವರು ಹೇಳಿಕೊಟ್ಟದ್ದು ಇಷ್ಟವಾಯಿತು.-ಸುಷ್ಮಿತಾ, ಬಳ್ಳಾರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.