ADVERTISEMENT

ಕಾಂಗ್ರೆಸ್ಸಿನಿಂದ ಬಳ್ಳಾರಿಯಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2018, 15:41 IST
Last Updated 23 ಅಕ್ಟೋಬರ್ 2018, 15:41 IST

ಹೊಸಪೇಟೆ: ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ‘ಬಳ್ಳಾರಿ ರಿಪಬ್ಲಿಕ್‌’ ಆಗಿತ್ತು. ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಆ ಹಣೆಪಟ್ಟಿ ಅಳಿಸಿ ಹಾಕಿ, ಪ್ರಜಾಪ್ರಭುತ್ವ ಮರು ಸ್ಥಾಪನೆ ಮಾಡಿತು’ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ಮಂಗಳವಾರ ಸಂಜೆ ಇಲ್ಲಿ ಹಮ್ಮಿಕೊಂಡಿದ್ದ ಮತದಾರರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಬಿಜೆಪಿ ಅಧಿಕಾರದಲ್ಲಿದ್ದಾಗ ಮೂವರು ಮುಖ್ಯಮಂತ್ರಿಗಳಾಗಿದ್ದರು. ಸ್ವತಃ ಬಿ. ಶ್ರೀರಾಮುಲು ಅವರು ಸಚಿವರಾಗಿದ್ದರು. ಗಣಿ ಸಂಪತ್ತು ಲೂಟಿ ಹೊಡೆದದ್ದು ಬಿಟ್ಟರೆ ಬೇರೇನೂ ಮಾಡಿರಲಿಲ್ಲ. ಅಕ್ರಮ ಗಣಿಗಾರಿಕೆಯಿಂದ ರಾಷ್ಟ್ರಮಟ್ಟದಲ್ಲಿ ಬಳ್ಳಾರಿಗೆ ಕೆಟ್ಟ ಹೆಸರು ಬಂದಿತ್ತು. ನಾನು ಮುಖ್ಯಮಂತ್ರಿ ಆದ ನಂತರ ಜಿಲ್ಲೆಗೆ ಒಳ್ಳೆಯ ಹೆಸರು ತರುವಂತಹ ಕೆಲಸ ಮಾಡಿದೆ’ ಎಂದರು.

‘ಮಾತೆತ್ತಿದ್ದರೆ ವಿ.ಎಸ್‌. ಉಗ್ರಪ್ಪ ಅವರು ಹೊರಗಿನವರು ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಶ್ರೀರಾಮುಲು ಅವರು ಬಾದಾಮಿ, ಮೊಳಕಾಲ್ಮುರಿನಿಂದ ಸ್ಪರ್ಧಿಸಿದ್ದರಲ್ಲ ಅದಕ್ಕೆ ಅವರು ಏನಂತಾರೆ. ಶ್ರೀರಾಮುಲು ಏನು ಉದ್ಭವಮೂರ್ತಿಯೇ? ನಾವಾಡುವ ಮಾತುಗಳು ನಮಗೆ ತಿರುಗು ಬಾಣ ಆಗುತ್ತವೆ ಎಂಬ ಪ್ರಜ್ಞೆ ಇರಬೇಕು. ಬರೀ ಬುರುಡೆ ಬಿಟ್ಟರೆ ಜನ ಒಂದು ಸಲ ಮರಳಾಗುತ್ತಾರೆ ಹೊರತು ಪದೇ ಪದೇ ಆಗುವುದಿಲ್ಲ’ ಎಂದು ತಿಳಿಸಿದರು.

ADVERTISEMENT

ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಮಾತನಾಡಿ, ‘ಜಿಲ್ಲೆಯಲ್ಲಿ ಐದು ಎಸ್ಟಿ ಮೀಸಲು ಕ್ಷೇತ್ರಗಳಿದ್ದವು. ಹೀಗಿದ್ದರೂ ಶ್ರೀರಾಮುಲು ಅವರು ಮೊಳಕಾಲ್ಮುರಿಗೆ ಹೋಗಿ ಚುನಾವಣೆ ಸ್ಪರ್ಧಿಸಿದರು. ಅವರು ಜಿಲ್ಲೆಯ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ನನ್ನ ಜಿಲ್ಲೆ ಎಂದು ಹೇಳಿಕೊಳ್ಳುವ ಹಕ್ಕು ಕಳೆದುಕೊಂಡಿದ್ದಾರೆ. ಸಂಸತ್ತಿನಲ್ಲಿ ಒಂದು ಸಲವಾದರೂ ಜಿಲ್ಲೆಯ ಸಮಸ್ಯೆ ಕುರಿತು ಮಾತನಾಡಿದರೆ ಅದರ ವಿಡಿಯೊ ಬಿಡುಗಡೆ ಮಾಡಬೇಕು’ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.