ADVERTISEMENT

ವಿಜಯನಗರ ಜಿಲ್ಲೆಗೆ ಆಗ್ರಹಿಸಿ ರಸ್ತೆ ತಡೆ; ಪ್ರತಿಭಾಟನಾಕಾರರ ಬಂಧನ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 6:07 IST
Last Updated 2 ಅಕ್ಟೋಬರ್ 2019, 6:07 IST
   

ಹೊಸಪೇಟೆ: ವಿಜಯನಗರ ಜಿಲ್ಲೆ ರಚಿಸಬೇಕೆಂದು ಆಗ್ರಹಿಸಿ ಜಿಲ್ಲಾ ಹೋರಾಟ ಸಮಿತಿ ಕಾರ್ಯಕರ್ತರು ಬುಧವಾರ ಇಲ್ಲಿನ ಬಳ್ಳಾರಿ-ಅಂಕೋಲ ರಾಷ್ಟ್ರೀಯ ಹೆದ್ದಾರಿ ಮೇಲೆ ರಸ್ತೆತಡೆ ಚಳವಳಿ ನಡೆಸಿದರು.

15-20 ನಿಮಿಷಗಳವರೆಗೆ ಪ್ರತಿಭಟನೆ ನಡೆಸಿ ಘೋಷಣೆ ಕೂಗಿದರು. ರಸ್ತೆಯ ಎರಡೂ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ಸಂಚಾರ ಅಸ್ತವ್ಯಸ್ತ ಆಗುತ್ತಿರುವುದನ್ನು ಗಮನಿಸಿದ ಪೊಲೀಸರು ಎಲ್ಲರನ್ನೂ ವಶಕ್ಕೆ ತೆಗೆದುಕೊಂಡರು.

ಸಮಿತಿಯ ಜಿಲ್ಲಾ ಸಂಚಾಲಕ ವೈ.ಯಮುನೇಶ್, ಮುಖಂಡರಾದ ನಿಂಬಗಲ್ ರಾಮಕೃಷ್ಣ, ಗುಜ್ಜಲ್ ನಾಗರಾಜ್, ತಾರಿಹಳ್ಳಿ ವೆಂಕಟೇಶ್, ಮೊಹಮ್ಮದ್ ಇಮಾಮ್ ನಿಯಾಜಿ ಸೇರಿದಂತೆ ನೂರಕ್ಕೂ ಹೆಚ್ಚು ಜನರಿದ್ದರು.

ಸಾಹಿತಿ ಕುಂ. ವೀರಭದ್ರಪ್ಪ ಪ್ರತಿಕ್ರಿಯೆ

‘ವಿಜಯನಗರ ಜಿಲ್ಲೆ ರಚನೆಯಾಗಬೇಕೆಂದು ಸಮರ್ಥಿಸಿ ಹೇಳಿಕೆ ಕೊಟ್ಟಿರುವುದಕ್ಕೆ ನನ್ನನ್ನು ಅವಿವೇಕಿಯೆಂದು ಮೂದಲಿಸಿರುವ ಜಿ. ಕರುಣಾಕರ ರೆಡ್ಡಿ ಅವರ ಪದ ಬಳಕೆಗೆ ನನಗೆ ಯಾವುದೇ ಬೇಸರವಿಲ್ಲ’ ಎಂದು ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಪ್ರತಿಕ್ರಿಯಿಸಿದ್ದಾರೆ.

ಶತಮೂರ್ಖ ಮುಠ್ಠಾಳ ಎಂಬ ಪದಗಳ ಬಳಕೆ ನನಗೂ ಗೊತ್ತು. ಆದರೆ ಅವರು ನಮ್ಮ ನೆರೆ ತಾಲ್ಲೂಕಿನ ಪ್ರಥಮ ಪ್ರಜೆಯಾಗಿರುವುದರಿಂದ ನಾನು ಅಂತಹ ಯಾವುದೇ ಕಠಿಣ ಶಬ್ಧಗಳನ್ನು ಬಳಸಲಾರೆ. ಮುಖ್ಯವಾಗಿ ಗೆಲ್ಲಿಸಿ ಪ್ರೀತಿಸಿದ ಪ್ರಜೆಗಳ ಋಣ ತೀರಿಸಲಾದರು ಹೊಸಜಿಲ್ಲೆಯ ಪ್ರಸ್ತಾವನೆಯನ್ನು ಬೆಂಬಲಿಸಬೇಕು ಎಂದು ಹೇಳಿದ್ದಾರೆ.

ನಾನೂ ನಲವತ್ತು ವರ್ಷಗಳ ಕಾಲ ಆಂಧ್ರಪ್ರದೇಶದಲ್ಲಿದ್ದವನು, ಆದರೂ ನಾನು ಕರ್ನಾಟಕದವನು, ನಾಡು ನುಡಿಯ ನೋವು ನಲಿವುಗಳಿಗೆ ಲೇಖಕನಾಗಿ ಸ್ಪಂದಿಸುತ್ತಿರುವವನು.

ವಿಜಯನಗರ ಜಿಲ್ಲೆ ಈ ಭಾಗದ ಪ್ರಜೆಗಳ ಬಹುಕಾಲದ ಕನಸು, ಅದು ಈಡೇರುವ ಕ್ಷಣ ಹತ್ತಿರದಲ್ಲಿದ್ದಾಗ ಪುನರ್ವಸತಿ ಪಡೆದ ಶಾಸಕ ಮಹೋದಯರು ಅದಕ್ಕೆ ಅಡ್ಡಗಾಲು ಹಾಕಬಾರದು. ಭಾವನೆಗಳಿಗೆ ತಮ್ಮ ಹತಾಶತ್ವದ ಅಗ್ನಿಸ್ಪರ್ಶ ಮಾಡಬಾರದು. ಈ ತಾಲ್ಲೂಕುಗಳು ಶಾಸಕರ ಜಹಗೀರಲ್ಲ, ಇವು ಇಲ್ಲಿನ ಪ್ರಜಾನಿಕದ ಪಿತ್ರಾರ್ಜಿತ ಆಸ್ತಿ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.