ಸಂಡೂರು (ಬಳ್ಳಾರಿ ಜಿಲ್ಲೆ): ಸಂಡೂರು ತಾಲ್ಲೂಕಿನ ‘ದೇವದಾರಿ ಕಬ್ಬಿಣದ ಅದಿರು ಗಣಿ’ಗೆ ಸಂಪರ್ಕ ಕಲ್ಪಿಸುವ ರಸ್ತೆಯ ಜಂಟಿ ಸರ್ವೆಗೆ ಸಂಘಟನೆಗಳು, ಸ್ಥಳೀಯರ ವಿರೋಧ ವ್ಯಕ್ತವಾಗಿದ್ದು, ಸರ್ವೆ ನಡೆಸಲಾಗದೇ ಅಧಿಕಾರಿಗಳು ಹಿಂದಿರುಗಿದ್ದಾರೆ.
ಸ್ವಾಮಿಮಲೈ ಅರಣ್ಯ ವ್ಯಾಪ್ತಿಯ 401.57 ಹೆಕ್ಟೇರ್ ಪ್ರದೇಶದಲ್ಲಿ ‘ಕುದುರೆಮುಖ ಕಬ್ಬಿಣದ ಅದಿರು ಕಂಪನಿ (ಕೆಐಒಸಿಎಲ್) ‘ದೇವದಾರಿ ಕಬ್ಬಿಣದ ಅದಿರು ಗಣಿ’ ನಡೆಸಲು ಉದ್ದೇಶಿಸಿದೆ. ವಾರ್ಷಿಕ 20 ಲಕ್ಷ ಟನ್ ಕಬ್ಬಿಣ ಅದಿರು ಸಾಗಣೆಯ ಯೋಜನೆ ಇದಾಗಿದ್ದು, ಗಣಿಗೆ ಸಂಪರ್ಕ ಕಲ್ಪಿಸಲು ಸದ್ಯ ರಸ್ತೆಯೇ ಇಲ್ಲ.
ರಸ್ತೆ ಬೇಕಿದ್ದರೆ, ಕಿರ್ಲೋಸ್ಕರ್ ಕಂಪನಿ ಸುಪರ್ದಿಯಲ್ಲಿರುವ ರಸ್ತೆ ಮತ್ತು ಹೊಸದಾಗಿ ಅರಣ್ಯ ಪ್ರದೇಶದ ಸ್ವಲ್ಪ ಭಾಗ ಬೇಕಾಗಿದೆ. ಇದಕ್ಕಾಗಿ ಕೆಐಒಸಿಎಲ್ ಅರಣ್ಯ ಇಲಾಖೆಗೆ ಅರಣ್ಯ ಅನುಮತಿ (ಎಫ್‌ಸಿ) ಕೋರಿದೆ.
ದೇವದಾರಿ ಗಣಿಯ ರಸ್ತೆಗೆಂದು ಕೆಐಒಸಿಎಲ್ ಸೂಚಿಸಿರುವ ಜಾಗದ ಸರ್ವೆಗೆ ಶುಕ್ರವಾರ ಅರಣ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಕೆಐಒಸಿಎಲ್ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದರು. ಆದರೆ, ಜನಸಂಗ್ರಾಮ ಪರಿಷತ್, ರಾಜ್ಯ ರೈತ ಸಂಘ, ಕರ್ನಾಟಕ ರಾಷ್ಟ್ರ ಸಮಿತಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರು. ಹೋರಾಟಗಾರರನ್ನು ಮನವೊಲಿಸಲು ಅಧಿಕಾರಿಗಳು ಪ್ರಯತ್ನಿಸಿದರಾದರೂ, ಅವರು ಯಾವುದಕ್ಕೂ ಜಗ್ಗಲಿಲ್ಲ. ಕೊನೆಗೆ ಸರ್ವೆ ಕೈಬಿಟ್ಟ ಅಧಿಕಾರಿಗಳು ಹಿಂದಿರುಗಿದರು.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಬಳ್ಳಾರಿ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ಬಸವರಾಜ ಅವರು, ‘ ರಸ್ತೆ ನಿರ್ಮಾಣ ಮಾಡಲು ಅರಣ್ಯ ಭೂಮಿ ಕೋರಿ ಕೆಐಒಸಿಎಲ್ ಪ್ರಸ್ತಾವನೆ ಸಲ್ಲಿಸಿದೆ. ಇದರ ಜತೆಗೆ ಕೆಐಒಸಿಎಲ್‌ನ ರಸ್ತೆಯನ್ನು ಬಳಸಿಕೊಳ್ಳಲು ಅನುಮತಿ ಕೇಳಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ರಸ್ತೆ ಜಾಗದ ಸರ್ವೆ ಶುಕ್ರವಾರ ನಡೆಯಲಿಲ್ಲ. ಚರ್ಚೆ ಮಾಡಿ ಮುಂದಿನ ನಡೆ ನಿರ್ಧರಿಸುತ್ತೇವೆ’ ಎಂದು ಹೇಳಿದರು.
ಜನಸಂಗ್ರಾಮ ಪರಿಷತ್ ಮುಖಂಡ ಶ್ರೀಶೈಲ ಆಲದಹಳ್ಳಿ ಮಾತನಾಡಿ, ‘1 ಲಕ್ಷ ಮರಗಳನ್ನು ಕಡಿದು ಇಲ್ಲಿ ಗಣಿಗಾರಿಕೆ ಮಾಡಬೇಕಿಲ್ಲ. ಈಗಾಗಲೇ ಅದಿರನ್ನು ಹೊರಗಿನವರಿಗೆ ಮಾರುತ್ತಿರುವ ಎನ್‌ಎಂಡಿಸಿ ಕೆಐಒಸಿಎಲ್‌ಗೆ ಅದಿರು ಕೊಡಿಸಲು ಕೇಂದ್ರ ಉಕ್ಕು ಸಚಿವಾಲಯ ಕ್ರಮ ಕೈಗೊಳ್ಳಲಿ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.