
ಪೊಲೀಸ್
ಸಾಂದರ್ಭಿಕ ಚಿತ್ರ
ಬಳ್ಳಾರಿ: ಮಟ್ಕಾ, ಜೂಜಾಟದಲ್ಲಿ ತೊಡಗಿ, ಬಡಜನರನ್ನು ಶೋಷಿಸುತ್ತಿದ್ದ ಆರೋಪದ ಮೇಲೆ ಬಳ್ಳಾರಿ ಜಿಲ್ಲೆಯ 13 ಮಂದಿಯನ್ನು ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸ್ ಠಾಣೆಗಳ ವ್ಯಾಪ್ತಿಯ ಪ್ರದೇಶಗಳಿಗೆ ಗಡಿಪಾರು ಮಾಡಲಾಗಿದೆ.
ಗಡಿಪಾರಿಗೆ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ಕಳೆದ ವರ್ಷ ಸಲ್ಲಿಕೆಯಾಗಿದ್ದ ಪ್ರಸ್ತಾವನೆಯನ್ನು ಪುರಸ್ಕರಿಸಿರುವ ಜಿಲ್ಲಾಡಳಿತ ಅದಕ್ಕೆ ಸಮ್ಮತಿ ನೀಡಿದೆ. ಬಳ್ಳಾರಿ ಉಪ ವಿಭಾಗಾಧಿಕಾರಿ ರಾಜೇಶ್ ಎಚ್.ಡಿ ಜ. 2ರಂದು ಗಡಿಪಾರು ಆದೇಶ ಹೊರಡಿಸಿದ್ದಾರೆ.
ಕುರುಗೋಡು ತಾಲ್ಲೂಕಿನ ಗೆಣಿಕೆಹಾಳ್ ಗ್ರಾಮದ ಕೋಟೆಪ್ಪ, ಬಳ್ಳಾರಿಯ ರಾಜ್ಯೋತ್ಸವ ನಗರದ ಸೋಮು, ಶ್ರೀರಾಮಪುರ ಕಾಲೊನಿಯ ಪಾಂಡುರಂಗ, ಮಿಲ್ಲರ್ ಪೇಟೆಯ ದಾದು, ಸಿರುಗುಪ್ಪದ ಹೊನ್ನಾರಳ್ಳಿ ನವಗ್ರಾಮದ ಸಣ್ಣ ಈರಣ್ಣ, ಕೌಲ್‌ಬಜಾರ್‌ನ ಇಮ್ರಾನ್, ಕಂಪ್ಲಿಯ ಜಂಬಣ್ಣ, ಜಿ ಮೌಲಪ್ಪ, ರಾಜವಲಿ, ಎಸ್.ವಿ ನಾರಾಯಣ, ಕುಡುತಿನಿಯ ಡಿ. ಮಲ್ಲಿಕಾರ್ಜುನ, ಕುರುಗೋಡಿನ ಸಂಗಮೇಶ, ಬಳ್ಳಾರಿಯ ಇಂದಿರಾ ನಗರದ ರಾಮಚಂದ್ರ ಅವರನ್ನು ಗಡಿಪಾರು ಮಾಡಲಾಗಿದೆ.
ಎಲ್ಲೆಲ್ಲಿಗೆ ಗಡಿಪಾರು:
ದಕ್ಷಿಣ ಕನ್ನಡ, ಚಿತ್ರದುರ್ಗ, ಉತ್ತರ ಕನ್ನಡ, ಚಾಮರಾಜನಗರ, ಕಲಬುರಗಿ, ಬೆಳಗಾವಿ, ರಾಮನಗರ ಜಿಲ್ಲೆಗಳಿಗೆ ಮಟ್ಕಾ ದಂದೆಕೋರರನ್ನು ಗಡಿಪಾರು ಮಾಡಲಾಗಿದೆ.
ಆರೋಪ ಏನು?:
ಇವರೆಲ್ಲರೂ ಮಟ್ಕಾ ಎಂಬ ಜೂಜಾಟವನ್ನು ನಡೆಸುತ್ತಾ, ಹೆಚ್ಚಿನ ಲಾಭಾಂಶವನ್ನು ನೀಡುವುದಾಗಿ ಜನರಿಗೆ ನಂಬಿಸಿ ವಂಚನೆ ಮಾಡುತ್ತಿದ್ದಾರೆ. ಕೃಷಿ ಕಾರ್ಮಿಕರು, ಕೂಲಿ ಕಾರ್ಮಿಕರು, ಹಮಾಲರು, ಅಟೋಚಾಲಕರು, ದಿನಗೂಲಿಗಳು ಹಾಗೂ ಇತರೆ ವಾಹನ ಚಾಲಕರನ್ನು ಜೂಜಾಟದಲ್ಲಿ ತೊಡಗಿಸುತ್ತಿದ್ದಾರೆ. ಅವರು ಪ್ರತಿ ದಿನ ದುಡಿದ ಹಣವನ್ನು ಮಟಕಾ ಜೂಜಾಟ ಆಡಿ ಹಣ ಕಳೆದುಕೊಂಡಿದ್ದಾರೆ. ಅವರ ಕುಟುಂಬಗಳು ದಿನನಿತ್ಯದ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲಾಗದೇ ಸಂಸಾರ, ಮಕ್ಕಳು ಬೀದಿಗೆ ಬೀಳುತ್ತಿದ್ದಾರೆ. ಮಕ್ಕಳು ಶಾಲೆಗಳಿಗೆ ಹೋಗದೇ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅವರ ಬದುಕನ್ನು ಹಾಳು ಮಾಡುತ್ತಿದ್ದಾರೆ. ಅವರ ರಕ್ತ ಹೀರುತ್ತಿದ್ದಾರೆ. ಜನರನ್ನು ಸುಲಿಗೆ ಮಾಡಿದ ಹಣದಲ್ಲಿ ಇವರು ಅಭಿವೃದ್ಧಿ ಹೊಂದುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಇವರೆಲ್ಲರ ವಿರುದ್ಧ ಮಟ್ಕಾ, ಜೂಜಾಟಕ್ಕೆ ಸಂಬಂಧಿಸಿದಂತೆ ಹಲವು ಪ್ರಕರಣಗಳು ಇದ್ದು, ಆರೋಪ ಸಾಬೀತಾಗಿ ದಂಡವನ್ನೂ ಕಟ್ಟಿದ್ದಾರೆ. ತಮ್ಮ ನಡವಳಿಕೆಯನ್ನು ಬದಲಿಸಿಕೊಳ್ಳುವಂತೆ ಅವರಿಗೆ ಸೂಚನೆ ನೀಡಿದ್ದರೂ, ತಿದ್ದಿಕೊಂಡಿಲ್ಲ. ಇವರನ್ನು ಕರ್ನಾಟಕ ಪೊಲೀಸ್ ಕಾಯ್ದೆಯ–1963ರ ಕಲಂ 56 (ಜಿ)ರ ಅಡಿಯಲ್ಲಿ ಗಡಿಪಾರು ಮಾಡುವ ಅಗತ್ಯವಿದೆ ಎಂದು ಪೊಲೀಸ್ ಇಲಾಖೆ ಜಿಲ್ಲಾಡಳಿತಕ್ಕೆ ಮನವಿ ಮಾಡಿತ್ತು.
ಗಡಿಪಾರು ಕುರಿತು ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆಯನ್ನೂ ನಡೆಸಲಾಗಿದೆ. ಅಂತಿಮವಾಗಿ ಗಡಿಪಾರು ಆದೇಶ ಮಾಡಲಾಗಿದೆ.
ಇವರೆಲ್ಲರನ್ನೂ ಹೀಗೇ ಬಿಟ್ಟಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮೂಲಕ ಸಾರ್ವಜನಿಕರ ನೆಮ್ಮದಿಗೆ ಧಕ್ಕೆ ತರುವ ಸಂಭವ ಇರುತ್ತದೆ. ಆದ್ದರಿಂದ ಕೆಲ ತಿಂಗಳ ಕಾಲ ಗಡಿಪಾರು ಮಾಡಿ ಆದೇಶಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿ ತಮ್ಮ ಆದೇಶದಲ್ಲಿ ಹೇಳಿದ್ದಾರೆ.
ಗಡಿಪಾರು ಅವಧಿಯಲ್ಲಿ ನ್ಯಾಯಾಲಯದಿಂದ ವಿಚಾರಣೆಗೆ ನೋಟಿಸ್ ಬಂದಲ್ಲಿ ಅಥವಾ ಠಾಣೆಯಿಂದ ತನಿಖೆಗೆ ಕರೆ ಬಂದಲ್ಲಿ ಗಡಿಪಾರು ಮಾಡಿರುವ ವ್ಯಾಪ್ತಿಯ ಪೊಲೀಸ್ ಠಾಣೆಯ ಮೇಲುಸ್ತುವಾರಿಯಲ್ಲಿ ವಿಚಾರಣೆಗೆ ಹಾಜರಾಗಬೇಕು ಎಂದು ತಿಳಿಸಲಾಗಿದೆ.
ಜ. 2ರಂದು 13 ಮಂದಿಯ ಗಡಿಪಾರು ಮಾಡಲಾಗಿದೆ. ಪೊಲೀಸ್ ಇಲಾಖೆಯಿಂದ ಕಳೆದ ವರ್ಷ ಬಂದಿದ್ದ ಪ್ರಸ್ತಾವ ಪರಿಶೀಲಿಸಿ, ಡಿಸೆಂಬರ್‌ನಲ್ಲಿಯೇ ಅದೇಶ ಕಾದಿರಿಸಲಾಗಿತ್ತು. ಬಳ್ಳಾರಿಯಲ್ಲಿ ನಡೆದ ಇತ್ತೀಚಿನ ಘರ್ಷಣೆಗಳಿಗೂ ಸದ್ಯದ ಗಡಿಪಾರು ಆದೇಶಕ್ಕೂ ಸಂಬಂಧವಿಲ್ಲರಾಜೇಶ ಎಚ್.ಡಿ, ಬಳ್ಳಾರಿ ಉಪವಿಭಾಗಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.